ಸೆ.25 ರ ಪ್ರಥಮ ಜನತಾ ದರ್ಶನದಲ್ಲಿ ಸ್ವೀಕರಿಸಿದ 450 ಅರ್ಜಿಗಳ ಪೈಕಿ 374 ಅರ್ಜಿ ವಿಲೇವಾರಿ, 76 ಅರ್ಜಿಗಳು ನಿಯಮಾನುಸಾರ ಪರಿಹಾರ ಹಂತದಲ್ಲಿವೆ

0
27

ಧಾರವಾಡ: ನ.04: ಸಾರ್ವಜನಿಕರ ದೂರುಗಳಿಗೆ ಸ್ಥಳೀಯವಾಗಿ ತಕ್ಷಣ ಸ್ಪಂಧಿಸಿ ಪರಿಹರಿಸಲು ಅನುವಾಗುವಂತೆ ರಾಜ್ಯಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ಒಂದು ದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ನಡೆಸಲು ನಿರ್ದೇಶಿಸಿದೆ. ಅದರಂತೆ ಧಾರವಾಡ ಜಿಲ್ಲಾಡಳಿತವು ಸೆ.25 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಜನತಾ ದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿತ್ತು.

ಸೆ.25 ರ ಜನತಾ ದರ್ಶನದಲ್ಲಿ ಜಿಲ್ಲೆಯ ಸುಮಾರು 2,000 ಕ್ಕೂ ಅಧಿಕ ಜನ ಸಾರ್ವಜನಿಕರು ಭಾಗವಹಿಸಿ, ಜನತಾ ದರ್ಶನ ಯಶಸ್ವಿಗೊಳಿಸಿದರು. ಜನತಾ ದರ್ಶನದಲ್ಲಿ ಭಾಗವಹಿಸಿದ್ದ ಕೆಲವರು ತಮ್ಮ ವೈಯಕ್ತಿಕ, ಇನ್ನು ಕೆಲವರು ಸಮುದಾಯ, ಗ್ರಾಮದ ಸಮಸ್ಯೆ, ದೂರುಗಳನ್ನು ಸಲ್ಲಿಸಿದ್ದರು. ಒಟ್ಟಾರೆ ವಿವಿಧ ಇಲಾಖೆ, ನಿಗಮ ಮಂಡಳಿಗಳಿಗೆ ಸಂಬಂಧಿಸಿದ 450 ಅರ್ಜಿಗಳನ್ನು ಜನತಾ ದರ್ಶನದಲ್ಲಿ ಸ್ವೀಕರಿಸಲಾಗಿತ್ತು.

ಇವುಗಳ ಪೈಕಿ 374 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಪರಿಹರಿಸಲಾಗಿದೆ. ಮತ್ತು ಈ ಕುರಿತು ದೂರುದಾರರು ನೀಡಿದ್ದ ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು ಕಳುಹಿಸಲಾಗಿದೆ. ಉಳಿದಂತೆ ಪರಿಹಾರಕ್ಕೆ ಬಾಕಿ ಇರುವ 76 ಅರ್ಜಿಗಳು ಪಿಡಬ್ಲ್ಯೂಡಿ, ರೆವಿನ್ಯೂ, ಆರ್‍ಡಿಪಿಆರ್, ಶಿಕ್ಷಣ, ವಸತಿ ಇಲಾಖೆಗಳಲ್ಲಿ ನಿಯಮಾನುಸಾರ ಪರಿಶೀಲಿಸಿ, ಇತ್ಯರ್ಥಗೊಳಿಸಲು ಬಾಕಿ ಇವೆ. ಈ ಅರ್ಜಿಗಳನ್ನು ಸಹ ಮುಂದಿನ ಎರಡು ದಿನಗಳಲ್ಲಿ ನಿಯಮಾನುಸಾರ ಕ್ರಮ ಜರುಗಿಸಿ, ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ದೇಶನ ನೀಡಿದ್ದಾರೆ.

ಅಕ್ಟೋಬರ್ 6 ರಂದು ಜಿಲ್ಲಾಮಟ್ಟದ ಜನತಾ ದರ್ಶನ ಸಿದ್ದತೆ: ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಅಕ್ಟೋಬರ್ 06 ಸೋಮವಾರದಂದು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಕರ್ನಾಟಕ ಕಾಲೆಜು ಆವರಣದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಅಕ್ಟೋಬರ್ 6 ರಂದು ಬೆಳಿಗ್ಗೆ 9 ಗಂಟೆಯಿಂದ ಜನತಾ ದರ್ಶನ ಆರಂಭವಾಗಲಿದೆ. ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೋಂದಾಯಿಸಲು ಆಯಾ ತಾಲೂಕಿನಿಂದ ಒಂದು ಹೆಲ್ಪ್‍ಡೆಸ್ಕ್ ತೆರೆಯಲಾಗುತ್ತದೆ. ಸ್ವೀಕರಿಸಿದ ಅಹವಾಲುಗಳನ್ನು ಮಾನ್ಯ ಸಚಿವರು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಇತ್ಯರ್ಥಪಡಿಸಲು ಸೂಚಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಅಹವಾಲುಗಳ ಪರಿಹಾರಕ್ಕೆ ನೆರವಾಗಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿತಿಂಗಳ ಜನತಾ ದರ್ಶನ ಸೃಜನಾ ರಂಗಮಂದಿರದಲ್ಲಿ ; ಜಿಲ್ಲೆಯ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ಪ್ರತಿತಿಂಗಳ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ.

ಸೃಜನಾ ರಂಗಮಂದಿರದ ಸುತ್ತ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳವಕಾಶ, ಜಿಲ್ಲೆಯ ವಿವಿಧೆಡೆಯಿಂದ ತಮ್ಮ ಅಹವಾಲುಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ, ಅಗತ್ಯ ಮೂಲಸೌಲಭ್ಯಗಳ ಸೌಕರ್ಯವಿದೆ. ಮತ್ತು ವಿವಿಧ ಇಲಾಖೆಗಳ ಜನಮುಖಿ ಹಾಗೂ ಜನಪರ ಯೋಜನೆಗಳ ಕುರಿತು ಮಾಹಿತಿ ಮಳಿಗೆಗಳನ್ನು ಸ್ಥಾಪಿಸಲು ಅಗತ್ಯ ಸ್ಥಳಾವಕಾಶವಿದೆ. ಈ ಎಲ್ಲ ಅನುಕೂಲತೆಗಳ ದೃಷ್ಟಿಯಿಂದ ಜನತಾ ದರ್ಶನ ಕಾರ್ಯಕ್ರಮವನ್ನು ಕೆಸಿಡಿ ಆವರಣದ ಸೃಜನಾ ರಂಗಮಂದಿರಲ್ಲಿ ಆಯೋಜಿಸಲಾಗುತ್ತಿದೆ.

ಅಕ್ಟೋಬರ್ 6 ರ ಜನತಾದರ್ಶನ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಲಿದ್ದು, ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲು, ಸಮಸ್ಯೆ, ದೂರುಗಳನ್ನು ನೇರವಾಗಿ ಜನತಾ ದರ್ಶನದಲ್ಲಿ ಸಲ್ಲಸಬಹುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here