67ನೇ ವನ್ಯಜೀವಿ ಸಪ್ತಾಹ ದಿನ ಆಚರಣೆ, ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆ ಸಂರಕ್ಷಣೆಗೆ ಇಲಾಖೆ ಜೊತೆ ಕೈಜೋಡಿಸಿ: ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ

0
100

ವಿಜಯನಗರ(ಹೊಸಪೇಟೆ),ಅ.04: ಜಿಲ್ಲೆಯಲ್ಲಿ ವಿವಿಧ ರೀತಿಯ ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆ ತಾಣಗಳಿದ್ದು,ಅವುಗಳ ಮಹತ್ವವನ್ನು ಅರಿತುಕೊಂಡು ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ ಅವರು ಹೇಳಿದರು.
67ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಕಮಲಾಪುರ ಸಮೀಪದ ದರೋಜಿ ಪ್ರಾಕೃತಿಕ ನಿರೂಪಣಾ ಕೇಂದ್ರ(ನಿಸರ್ಗದಾಮ)ದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಳ್ಳಾರಿ/ವಿಜಯನಗರ ಜಿಲ್ಲೆ ಎಂದರೆ ಬರೀ ಉರಿ ಬಿಸಿಲು,ಬರಡು ಭೂಮಿಯಷ್ಟೇ ಅಲ್ಲ ಸಂಡೂರಿನ ದಟ್ಟವಾದ ಕಾಡು, ವಿವಿಧ ರೀತಿಯ ಜೈವಿಕ ವೈವಿಧ್ಯತಾ ತಾಣಗಳಿರುವ ನಾಡಾಗಿದೆ. ಜಿಲ್ಲೆಗಳಲ್ಲಿ 5 ಜೈವಿಕ ವೈವಿಧ್ಯತಾ ತಾಣಗಳಾದ ವಿಶ್ವವಿಖ್ಯಾತ ದರೋಜಿ ಕರಡಿದಾಮ,ಗುಡೇಕೋಟೆ ಕರಡಿದಾನ, ಅಂಕಸಮುದ್ರ ಪಕ್ಷಿದಾಮ ಸಂರಕ್ಷಿತ ಪ್ರದೇಶ, ತುಂಗಾಭದ್ರಾ ನೀರುನಾಯಿ ಸಂರಕ್ಷಿತ ಪ್ರದೇಶ, ಸಿರಗುಪ್ಪ ತಾಲೂಕಿನಲ್ಲಿ ಅತಿವಿರಳವಾಗಿ ಕಂಡುಬಂದ ಪಕ್ಷಿಪ್ರಬೇಧಗಳಿವೆ. ಅವುಗಳ ಮಹತ್ವವನ್ನು ಜನರು ಅರಿತುಕೊಂಡು ಮತ್ತು ವನ್ಯಜೀವಿಗಳು,ಜೈವಿಕ ವೈವಿಧ್ಯತಾ ತಾಣಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡಬೇಕಿದೆ ಎಂದರು.
ವನ್ಯಜೀವಿ ಮತ್ತು ಪ್ರಾಕೃತಿಕ ಸಂರಕ್ಷಣೆಗಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಸಂದೇಶ ನೀಡಿದ್ದಾರೆ;ಅವರ ಜನ್ಮದಿನದ ನೆನಪಿಗಾಗಿ ಅರಣ್ಯ ಇಲಾಖೆಯು ಅ.2ರಿಂದ ಒಂದು ವಾರಗಳ ಕಾಲ ಸಪ್ತಾಹದ ರೂಪದಲ್ಲಿ ಆಚರಿಸುವ ಮೂಲಕ ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಅ.2ರಂದು ಬಳ್ಳಾರಿಯಿಂದ ಪಿಸ್ಟನ್ ಬುಲ್ ರೈಡರ್ ತಂಡದಿಂದ ಬೈಕ್ ರ್ಯಾಲಿ ಆರಂಭವಾಗಿ ದರೋಜಿ ಕರಡಿದಾಮ,ಕಮಲಾಪುರ ಪ್ರಾಕೃತಿಕ ನಿರೂಪಣಾ ಕೇಂದ್ರದ ಮೂಲಕ ಗುಡೇಕೋಟೆ ಕರಡಿದಾಮದವರೆಗೆ ನಡೆಯಿತು;ದಾರಿಯುದ್ದಕ್ಕೂ ತಂಡದ ಸದಸ್ಯರು ವನ್ಯಜೀವಿಗಳು,ಜೈವಿಕ ವೈವಿಧ್ಯಮಯ ತಾಣಗಳ ಕುರಿತು ಅರಿವು ಮೂಡಿಸಿದ್ದಾರೆ. ಶಾಲಾ-ಕಾಲೇಜುಗಳಲ್ಲಿ,ಅಧ್ಯಾಪಕರು,ಪೋಷಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಡೂರಿನಲ್ಲಿ ದಟ್ಟವಾದ ಕಾಡುಗಳಿವೆ;ಅವಳಿ ಜಿಲ್ಲೆಗಳಲ್ಲಿ ಶೇ.20ರಷ್ಟು ಅರಣ್ಯ ಪ್ರದೇಶ ಇದೆ ಎಂದರು.
1970ರವರೆಗೆ ವನ್ಯಜೀವಿ ಸಂರಕ್ಷಣೆಗೆ ಯಾವುದೇ ಕಾನೂನು ಇರಲಿಲ್ಲ. ಸ್ವಾತಂತ್ರ್ಯದ ಪ್ರಾರಂಭದಲ್ಲಿ ಕಾಡು ಕಡಿದು ರೈತರಿಗೆ ಬದುಕು ಕಟ್ಟಿಕೊಳ್ಳಲು ಭೂಮಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಕಾಡನ್ನು ಸಂರಕ್ಷಿಸುವ ದೃಷ್ಟಿಯಿಂದ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ಪರಿಸ ಸಂರಕ್ಷಣೆಗೆ ಮುಂದಾದರು. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನ್ ಹೋರಾಟಗಾರರರು ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ವನ್ಯಜೀವಿಗಳು ಹಾಗೂ ಪರಿಸರ ಬಗ್ಗೆ ವಿಶೇಷವಾದ ಒಲವು ಹೊಂದಿದ್ದರು. ಅವರ ನೆನೆಪಿಗಾಗಿ ಅವರ ಜನ್ಮದಿಂದ ಒಂದು ವಾರದ ವರಗೆ ವನ್ಯಜೀವಿ ಸಪ್ತಾಹ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೂ ಮುಖ್ಯಸ್ಥರು ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎನ್.ಕಿರಣ್, ವಲಯ ಅರಣ್ಯಾಧಿಕಾರಿ(ಆರ್ ಎಫ್‍ಒ)ಗಳಾದ ಉಷಾ, ಹೊಸಪೇಟೆಯ ಪ.ಪೂ.ಕಾಲೇಜು ಉಪನ್ಯಾಸಕರಾದ ಸಮದ್ ಕೊಟ್ಟೂರು, ಕಮಲಾಪುರ ವನ್ಯಜೀವಿ ಛಾಯಾಗ್ರಾಹಕರಾದ ಪಂಪಯ್ಯಸ್ವಾಮಿ ಮಳಿಮಠ,ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ದೇವರಾಜ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
67ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ, ಚಿತ್ರಕಲೆ, ಮತ್ತು ರಸ ಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ 24 ಜನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದಕ್ಕೂ ಮುಂಚೆ ಕಮಲಾಪುರದ ಹಳೆ ಬಸ್ ನಿಲ್ದಾಣದಿಂದ ಪ್ರಾಕೃತಿಕ ನಿರೂಪಣಾ ಕೇಂದ್ರವರೆಗೆ ಏರ್ಪಡಿಸಿದ್ದ ವನ್ಯಜೀವಿಗಳು ಮತ್ತು ಜೈವಿಕ ವೈವಿಧ್ಯತಾ ಜಾಗೃತಿ ಜಾಥಾ ನಡೆಯಿತು. ಜಾಥಾಗೆ ಡಿಎಫ್‍ಒ ಸಿದ್ರಾಮಪ್ಪ ಚಳಕಾಪುರೆ ಅವರು ಚಾಲನೆ ನೀಡಿದರು.

LEAVE A REPLY

Please enter your comment!
Please enter your name here