ನಾದದ ಮೂಲಕ ನಾಡನ್ನಾಳುವವರುಸಂಗೀತ ಕಲಾವಿದರು : ಪ್ರೊ.ಸಿದ್ದರಾಮಯ್ಯ ಮಠಪತಿ ಗೋರಟಾ

0
40

ಹೊಸಪೇಟೆ (ವಿಜಯನಗರ) ಫೆಬ್ರವರಿ 16: ಸಂಗೀತ ಕಲಾವಿದರು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗುವುದರ ಮೂಲಕ ನಾಡಿನ ಕಲೆ, ಸಂಸ್ಕೃತಿ ಉಳಿವಿನೊಂದಿಗೆ ತಮ್ಮ ಸ್ವರ ಮಾಧುರ್ಯದಿಂದ ನಾಡನ್ನಾಳುವವರಾಗಬೇಕು ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿಂದುಸ್ತಾನಿ ಸಂಗೀತ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸಿದ್ದರಾಮಯ್ಯ ಮಠಪತಿ ಗೋರಟಾ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ಫೆ.16ರಂದು ಆಯೋಜಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ಶಿಬಿರವನ್ನು ತಂಬೂರಿ ಮೀಟುವ ಮೂಲಕ ಉದ್ಘಾಟಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗವು ನಾಡಿನ ಇತರೆ ಸಂಗೀತ ವಿಭಾಗಗಳ ಮಾತೃ ಸಂಸ್ಥೆಯಾಗಬೇಕು. ಅನುಭವಿ ಸಂಗೀತ ವಿದ್ವಾಂಸರು ತಮ್ಮ ಅನುಭವಸಾರವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಅವರ ಸಂಗೀತ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಇಂತಹ ತರಬೇತಿಗಳು ಸಂಗೀತದ ವಿವಿಧ ಮಜಲುಗಳನ್ನು ತಿಳಿಯಲು ಸಹಕರಿಸುತ್ತವೆ. ವಿದ್ಯಾರ್ಥಿಗಳು ತರಬೇತಿ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ. ವಿಜಯ ಪೂಣಚ್ಚ ತಂಬಂಡ ಅವರು ಮಾತನಾಡಿ, ವಿಶ್ವವಿದ್ಯಾಲಯದ ಸಂಗೀತ ವಿಭಾಗವು ಸಂಸ್ಥಾಪಕ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರರ ಕನಸಾಗಿದೆ. ಇದರ ಏಳಿಗೆಗೆ ಹಲವರ ಶ್ರಮವಿದೆ. ಸಂಗೀತವು ಮಾನವನ ಬದುಕಿಗೆ ಸರ್ವವ್ಯಾಪಿಯ ಪ್ರತೀಕ. ಸಂಗೀತ ಹಲವರಿಗೆ ಬದುಕುವುದರ ಜೊತೆಗೆ ಪ್ರತಿಷ್ಠೆ ತಂದುಕೊಡತ್ತದೆ. ಸಂಗೀತವು ಮನಸ್ಸನ್ನು ಮೃದುಗೊಳಿಸುತ್ತದೆ. ಪತ್ರಿಯೊಬ್ಬರು ಅದೃಷ್ಟ ಹಾಗೂ ಪರಿಶ್ರಮದ ಜೊತೆಗೆ ಪ್ರಯತ್ನ ಪಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣನವರ ಮಾತನಾಡಿ, ಸಂಗೀತವು ಒಂದು ದೈತ್ಯ ಶಕ್ತಿ. ಸಂಗೀತಕ್ಕೆ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಯ ಯಾವುದೇ ಕಟ್ಟಳೆಗಳಿಲ್ಲ. ದೇಶದ ಇತಿಹಾಸ ತಿಳಿಯಲು ಪುಟ ತೆರೆಯುವ ಅವಶ್ಯಕತೆ ಇಲ್ಲ, ದೇಶದ ಭವಿಷ್ಯ ನೋಡಲು ಪ್ರಯೋಗ ಮಾಡಬೇಕಿಲ್ಲ, ಬದಲಾಗಿ ದೇಶದ ಸಾಂಸ್ಕೃತಿಕ ಲೋಕವು ಎಲ್ಲವನ್ನು ತಿಳಿಸುತ್ತದೆ. ಮೇಘ ಮಲ್ಹಾರ ರಾಗವನ್ನು ಉಲ್ಲೇಖಿಸುತ್ತ ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿ ಸಂಗೀತಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಪ್ರಾಸ್ತಾವಿಕ ಮಾತನಾಡಿದರು.
ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಜಯದೇವಿ ಜಂಗಮಶೆಟ್ಟಿ ಅವರು ಆಶಯ ನುಡಿಗಳನ್ನಾಡಿದರು. ಲಲಿತಕಲಾ ನಿಕಾಯದ ಡೀನರಾದ ಡಾ.ಶಿವಾನಂದ ವಿರಕ್ತಮಠ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here