ಇಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10 ಸಾವಿರದವರೆಗು ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ.

0
103

ವರದಿ:-ಮಹೇಶ್
ಬಳ್ಳಾರಿ:ಡಿ:04:- ನಗರದಲ್ಲಿಇಂದು AIDSO ವತಿಯಿಂದ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸರ್ಕಾರಿ ಸೀಟುಗಳ ಏಕಾಏಕಿ 10,000/- ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ AIDSO ಜಿಲ್ಲಾ ಅಧ್ಯಕ್ಷರಾದ ಗುರಳ್ಳಿ ರಾಜ ಅವರು ಮಾತನಾಡುತ್ತಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ರಚನೆ 21-22 (ದಿನಾಂಕ : 14-11-2021) ರ ಸುತ್ತೋಲೆ ಪ್ರಕಾರ, ಈ ವರ್ಷದ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರದವರೆಗೂ ಶುಲ್ಕ ಏರಿಕೆ ಮಾಡಿರುವುದು ರಾಜ್ಯದ ವಿದ್ಯಾರ್ಥಿಗಳನ್ನು ಅತ್ಯಂತ ಆತಂಕಕ್ಕೆ ತಳ್ಳಿದೆ. ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು, ಮೊದಲ ಸುತ್ತಿನ ಸೀಟು ಹಂಚಿಕೆ ಆಗಿದೆ. ಈಗ ಧಿಡೀರನೆ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ ಕಾನೂನು ಬಾಹಿರ ನಡೆಯಾಗುತ್ತದೆ ಎಂಬುದು ಜನಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ.

ಈಗಾಗಲೇ ರಾಜ್ಯದ ಜನತೆ ಹಾಗು ವಿದ್ಯಾರ್ಥಿ ಸಮೂಹವು ಕೋವಿಡ್ ಸಾಂಕ್ರಾಮಿಕ ಹಾಗು ನಂತರದ ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಸಂಕಷ್ಟವನ್ನು ಎದುರಿಸಿದ್ದಾರೆ. ಸಂಸಾರವನ್ನು ತೂಗಿಸಲು ಹಲವರು ಉದ್ಯೋಗ ಅರಸಿದ್ದರೆ, ಹಲವರು ತಮ್ಮ ಪೋಷಕರು- ಸಂಬಂಧಿಕರನ್ನು ಕಳೆದುಕೊಂಡು ಈಗಲೂ ಆ ಆಘಾತದಿಂದ ಹೊರ ಬರಲು ಸಾಧ್ಯವಾಗಿಲ್ಲ. ಜನಸಾಮಾನ್ಯರ ಆದಾಯ ಕುಂಠಿತವಾಗಿದೆ. ಇದರೊಂದಿಗೆ, ಈ ಬಾರಿ ಅತ್ಯಂತ ಭೀಕರ ಮಳೆಯಿಂದಾಗಿ, ರಾಜ್ಯದಲ್ಲಿ ಕಾಫಿ ತೋಟಗಳು ಸೇರಿದಂತೆ ಹೊಲಗಳಲ್ಲಿ ಶೇ. 70 ರಷ್ಟು ಬೆಳೆ ನಷ್ಟ ಸಂಭವಿಸಿದೆ. ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿ ಇರುವ ರೈತ ಸಮುದಾಯದ ವಿದ್ಯಾರ್ಥಿಗಳಿಗೆ ಈ ಹಾನಿಯು ಅತ್ಯಂತ ಭೀಕರ ಪರಿಸ್ಥಿತಿಯನ್ನು ತಂದೊಡ್ಡಿದೆ.

ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹಲವು ಏರುಪೇರುಗಳು ಸಂಭವಿಸಿವೆ. ಒಂದೆಡೆ, ಈ ಎಲ್ಲ ಸವಾಲುಗಳ ನಡುವೆ ಸಿಲುಕಿರುವ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕನಸನ್ನು ಸಂಪೂರ್ಣ ಕೈಬಿಡುವಂತಾಗಿದೆ. ಹೀಗಿರುವಾಗ, ಏಕಾಏಕಿ ಶುಲ್ಕ ಏರಿಕೆಯ ನಿರ್ಧಾರವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಅತಿ ದೊಡ್ಡ ಪ್ರಹಾರ ಮಾಡಿದಂತೆ ಆಗುತ್ತದೆ. ಇದರೊಂದಿಗೆ ಮತ್ತೊಂದು ವಿದ್ಯಾಮಾನದ ಬಗ್ಗೆ ಹೇಳುವುದಾದರೆ, ಈ ವರ್ಷ ಪದವಿ ಕೋರ್ಸಿಗೆ ಪ್ರತಿ ವರ್ಷಕ್ಕಿಂತ ೫೦ ಸಾವಿರ ಹೆಚ್ಚಿಗೆ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಪಿಯುಸಿ ದಾಖಲಾತಿ ಸಹ ಗಣನೀಯವಾಗಿ ಏರಿಕೆ ಆಗಿದೆ. ಅಂದರೆ, ಈ ಪರಿಸ್ಥಿತಿಯು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಗೆ ಮಾಡುವ ತಕ್ಷಣದ ಅವಶ್ಯಕತೆಯನ್ನು ಬಿಂಬಿಸುತ್ತದೆ. ಸರ್ಕಾರವು ಹೆಚ್ಚುವರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಬೇಕಿತ್ತು, ಹೆಚ್ಚುವರಿ ಬೋಧಕರನ್ನು ನೇಮಕಾತಿ ಮಾಡಬೇಕಿತ್ತು, ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸುವ ಯೋಚನೆ ನಡೆಸಬೇಕಿತ್ತು, ಹೆಚ್ಚುವರಿ ಗ್ರಂಥಾಲಯಗಳು- ಪ್ರಯೋಗಾಲಯಗಳನ್ನು ನಿರ್ಮಿಸಬೇಕಿತ್ತು ಎಂಬುದು ನಮ್ಮೆಲ್ಲರ ಅಪೇಕ್ಷೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶುಲ್ಕ ಏರಿಕೆಯ ನಿರ್ಧಾರವನ್ನು ವಾಪಸ್ ಪಡೆದು, ಮೊದಲು ಇದ್ದ ಶುಲ್ಕವನ್ನು ಮಾತ್ರ ಪಡೆಯಬೇಕು ಹಾಗೂ ಇತರೆ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದನ್ನು ಈ ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು. ಇದರೊಂದಿಗೆ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹತ್ತು ಘಂಟೆ ಅವಧಿಯಷ್ಟು ಪಾಠ ಮಾಡಬೇಕು ಎಂಬ ನಿರ್ಧಾರ, ಈಗಾಗಲೇ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಮತ್ತಷ್ಟು ಒತ್ತಡಕ್ಕೆ ಎಂದು ಹೇಳಿದರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು AIDSO ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಕೆ. ಈರಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ AIDSO ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ, ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಎಮ್. ಶಾಂತಿ, ನಿಂಗರಾಜ್, ಅನುಪಮಾ ಮತ್ತು ವಿದ್ಯಾರ್ಥಿಗಳಾದ ಸ್ನೇಹ, ಸ್ಪೂರ್ತಿ, ಕಾರ್ತಿಕ್, ಮೊಷನ್, ಸಂಜನ ಮತ್ತಿತರರು ಭಾಗವಹಿಸಿದ್ದರು.

ಬೇಡಿಕೆಗಳು:

  1. ಈ ಕೂಡಲೇ ಶುಲ್ಕ ಹೆಚ್ಚಳದ ಆದೇಶವನ್ನು ಹಿಂಪಡೆಯಿರಿ..!
  2. ಪ್ರಥಮ ವರ್ಷದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಿನಕ್ಕೆ 10 ಗಂಟೆ ಪಾಠ ಮಾಡುತ್ತೇವೆ ಎಂಬ ವಿದ್ಯಾರ್ಥಿಗಳ, ಶಿಕ್ಷಕರ ವಿರೋಧಿ‌ ನಿರ್ಧಾರವನ್ನು ಹಿಂಪಡೆಯಬೇಕು.!
  3. ಇಂಜಿನಿಯರಿಂಗ್ ವಿದ್ಯಾರ್ಥಿಗಳು SSP ಮೂಲಕ ವಿದ್ಯಾರ್ಥಿ ವೇತನ ಪಡೆದುಕೊಳ್ಳುವಲ್ಲಿ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಿ ಮತ್ತು ತ್ವರಿತವಾಗಿ ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ಕೈ ಸೇರುವಂತೆ ಕ್ರಮ ಕೈಗೊಳ್ಳಿ.

ಕೆ.ಈರಣ್ಣ,ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರು.ಬಳ್ಳಾರಿ

LEAVE A REPLY

Please enter your comment!
Please enter your name here