ನಕಲಿ ಸ್ಟ್ಯಾಂಪ್ ಪೇಪರ್ ಆರೋಪಿ ಕರೀಂಲಾಲಾ ಕಂಟಕವಾಗಿ ಕಾಡಿದ್ದ!

0
127

ಇವತ್ತು ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ,ಅವತ್ತು ತುಂಬಿದ ವಿಧಾನಸಭೆಗೆ ಲಿಟರಲಿ ನನ್ನನ್ನು ದರದರನೆ ಎಳೆತಂದಿದ್ದರು.
ಅದಕ್ಕೆ ಕಾರಣವಾಗಿದ್ದು

ಕರೀಂಲಾಲಾ!

ನಕಲಿ ಛಾಪಾ ಕಾಗದ ಹಗರಣದಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಹೆಸರು ಅದು.ವೈಯಕ್ತಿಕವಾಗಿ ನಾನು ಆತನನ್ನು ಈತನಕ ಎದುರಾ ಎದುರು ನಿಂತು ನೋಡಿರಲ್ಲ.ಮಾತನಾಡಿರಲಿಲ್ಲ.

ಆದರೆ ನನ್ನ ಕಛೇರಿಯ ಸೂಚನೆ ಮೇರೆಗೆ ಅವತ್ತು ಒಬ್ಬ ಪೋಲೀಸ್ ಅಧಿಕಾರಿಯನ್ನು ಕರೆದುಕೊಂಡು ಬೆಂಗಳೂರಿನ ಡಾಲರ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದೆ.

ಆ ಅಧಿಕಾರಿಯ ಹೆಸರು ಜಿ.ಜಿ.ಬಾವಾ,
ಇಪ್ಪತ್ತು ಸಾವಿರ ಕೋಟಿ ರೂಗಳಿಗಿಂತ ದೊಡ್ಡ ನಕಲಿ ಸ್ಟ್ಯಾಂಪ್ ಪೇಪರ್ ಹಗರಣ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ಕರೀಂಲಾಲಾನನ್ನು ಇದೇ ಜಿ.ಎ.ಬಾವಾ ಬಂಧಿಸಿದ್ದರು.

ಆದರೆ ತಮ್ಮ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಅವರಿಗೆ ಯಾರೋ ಕಿವಿ ಕಚ್ಚಿ ಸುಳ್ಳು ಹೇಳಿದ್ದಾರೆ ಎಂಬುದು ಬಾವಾ ಅನುಮಾನ.

ಅದನ್ನವರು ನಮ್ಮ ಆಫೀಸಿನಲ್ಲಿ ಕುಳಿತು ಹೇಳಿಕೊಂಡಾಗ,ಆಫೀಸಿನಿಂದ ಸಂಪಾದಕರಾದ ರವಿ ಬೆಳಗೆರೆ ನನಗೆ ಫೋನು ಮಾಡಿ.ನಿನ್ನ ಪಾಡಿಗೆ ಯಡಿಯೂರಪ್ಪ ಅವರನ್ನು ಒಂದು ಸಲ ಭೇಟಿ ಮಾಡಿಸು.ಉಳಿದಂತೆ ಏನು ನಡೆದಿದೆ?ಅಂತ ಬಾವಾ ಅವರೇ ಯಡಿಯೂರಪ್ಪ ಅವರಿಗೆ ವಿವರಿಸುತ್ತಾರೆ ಎಂದರು.

ನಾನು ನಿರುಮ್ಮಳವಾಗಿ ಭಾವಾ ಅವರನ್ನು ಕರೆದುಕೊಂಡು ಯಡಿಯೂರಪ್ಪ ಅವರ ನಿವಾಸಕ್ಕೆ ಹೋದೆ.ಯಡಿಯೂರಪ್ಪ ಕೂಡಾ ಕೂತು ನಗುತ್ತಾ ಮಾತನಾಡಿದರು.ಬಾವಾ ಹೇಳಿದ್ದು ಅವರ ಮನಸ್ಸಿಗೆ ನಾಟಿದಂತಿತ್ತು.ಅಯ್ಯೋ,ಬಿಡಿ,ನಿಮ್ಮ ಬಗ್ಗೆ ನಾನೇನೂ ತಪ್ಪು ತಿಳಿದುಕೊಂಡಿಲ್ಲ ಎಂದೂ ಹೇಳಿದ್ದರು.

ಇದಾದ ಸ್ವಲ್ಪ ದಿನಗಳಲ್ಲೇ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ.ಆಗ ಜಿಲ್ಲಾ ಪತ್ರಿಕೆಯೊಂದರಲ್ಲಿ ತಮ್ಮ ಬಗ್ಗೆ ಬಂದ ವರದಿಯನ್ನು ನೋಡಿ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ.ಯಾರ್ರೀ ಈ ಪೇಪರಿಗೆ ವಿಧಾನಸೌಧದಿಂದ ರಿಪೋರ್ಟು ಮಾಡೋದು ಎಂದು ಕೇಳಿದ್ದಾರೆ.

ವಿಧಾನಸೌಧದಿಂದ ಇನ್ಯಾರು ಕಳಿಸಲು ಸಾಧ್ಯ?ವಿಠ್ಢಲಮೂರ್ತಿ ಕೂಡಾ ಆ ಪೇಪರಿಗೆ ಕರೆಸ್ಪಾಂಡೆಂಟ್.ಹೀಗಾಗಿ ಅವರೇ ಕಳಿಸಿರಬೇಕು ಅಂತ ಯಾರೋ ಹೇಳಿದ್ದಾರೆ.
ಯಡಿಯೂರಪ್ಪ ಅವರದು ಮೊದಲೇ ಸಿಟ್ಟಿನ ಸ್ವಭಾವ.ಆ ಸಿಟ್ಟನ್ನು ಸೀದಾ ವಿಧಾನಸಭೆಯ ಅಧಿವೇಶನದಲ್ಲೇ ಕಾರಿದ್ದಾರೆ.

ನಕಲಿ ಛಾಪಾ ಕಾಗದ ಹಗರಣದ ಆರೋಪಿ ಕರೀಂಲಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪೋಲೀಸ್ ಅಧಿಕಾರಿಯನ್ನು ಹಿರಿಯ ಪತ್ರಕರ್ತರೊಬ್ಬರು ನನ್ನ ಮನೆಗೆ ಕರೆದುಕೊಂಡು ಬಂದಿದ್ದರು.ಯಾವ ಕಾರಣಕ್ಕಾಗಿ ಅವರು ಕರೆದುಕೊಂಡು ಬಂದರು?ಆ ಕುರಿತು ತನಿಖೆ ನಡೆಯಲಿ ಎಂದು ಪಟ್ಟು ಹಿಡಿದುಬಿಟ್ಟರು.

ಧಿಗ್ ಅಂತ ಹೊತ್ತಿಕೊಂಡಿತಲ್ಲ ಬೆಂಕಿ?ನಿಜ ಹೇಳಬೇಕೆಂದರೆ ಜಿ.ಎ.ಬಾವಾ ಈ ನಾಡು ಕಂಡ ದಕ್ಷ ಪೋಲೀಸ್ ಅಧಿಕಾರಿ.ಕರೀಂಲಾಲಾನ ಹೆಜ್ಜೆ ಜಾಡು ಹಿಡಿದು ಜೈಲಿಗಟ್ಟಿದ ಸಾಹಸಿ.ಎಲ್ಲವೂ ಸರಿಯೇ.( ಈಗ ಅವರು ಕಾಂಗ್ರೆಸ್ ನಾಯಕರು )ಆದರೆ ಅವರನ್ನು ಕರೆದುಕೊಂಡು ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದವನು ನಾನಲ್ಲವೇ?

ಈ ಸುದ್ದಿ ಜ್ವಾಲಾಮುಖಿಯಂತೆ ಹರಡಿಬಿಟ್ಟಿತು.ಪೋಲೀಸ್ ಅಧಿಕಾರಿಯನ್ನು ಕರೆದುಕೊಂಡು ಹೋಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪತ್ರಕರ್ತ ಯಾರು?ನಡು ಬೀದಿಯಲ್ಲಿ ಪೆಟ್ರೋಲು ಸುರಿದು ಬೆಂಕಿಕಡ್ಡಿ ಗೀರಿದರೆ ಯಾವ ರೀತಿ ಬೆಂಕಿ ಹೊತ್ತಿಕೊಳ್ಳುತ್ತದೋ?ಆ ರೀತಿ ಈ ಪ್ರಶ್ನೆಗೆ ಬೆಂಕಿ ಹತ್ತಿಕೊಂಡು ಬಿಟ್ಟಿತು.

ಅರೇ ಎಲ್ಲಿಯ ಯಡಿಯೂರಪ್ಪ?ಎಲ್ಲಿಯ ಬಾವಾ?ಎಲ್ಲಿಯ ಕರೀಂಲಾಲಾ?ಇಂತಹ ಗಾಣಗಳ ಮಧ್ಯೆ ಕಬ್ಬಿನಂತೆ ಸಿಲುಕಿದ ನಾನೆಲ್ಲಿ?ಅವತ್ತು ಯಡಿಯೂರಪ್ಪ ಮಾತನಾಡಿದ ರಭಸಕ್ಕೆ ನಾನು ಮಂಕಾಗಿ ಕುಳಿತುಬಿಟ್ಟೆ.

ವೈಯಕ್ತಿಕವಾಗಿ ನಾನು ಬದುಕಿನಲ್ಲಿ ಹಲವು ಕಂಟಕಗಳನ್ನು ಎದುರಿಸಿದವನು.ಆದರೆ ಯಾವ ಕಂಟಕಗಳಿಗೂ ನಾನಾಗಿಯೇ ಆಹ್ವಾನ ನೀಡಿದವನಲ್ಲ.
ತುಂಬ ಚಿಕ್ಕವನಿದ್ದಾಗ ನಿದ್ರೆ ಬಂತು ಅಂದರೆ ಎಲ್ಲೆಂದರೆ ಅಲ್ಲಿ ಮಲಗಿಬಿಡುವ ಅಭ್ಯಾಸವಿತ್ತು.

ನಮ್ಮೂರು ಸಾಗರದಲ್ಲಿ ಅಶೋಕಾ ರಸ್ತೆಯಿಂದ ತಿಲಕ್ ರಸ್ತೆಗೆ ತಿರುಗುವ ದಾರಿಯಲ್ಲಿ ಸರ್ಕಲ್ ಲಾಡ್ಜ್ ಇದೆ.ಆಗ ಅದರ ಎದುರಿಗಿನ ಚರಂಡಿಯ ಪಕ್ಕ ಒಂದು ಕಟ್ಟೆ ಇತ್ತು.ದೇವರ ಭಜನೆಯೆಂದರೆ ಅಪಾರ ಪ್ರೀತಿ ಹೊಂದಿದ್ದ ನನ್ನ ತಾಯಿ ಪ್ರಭಾವತಿ ಬಾಯಿ, ತಿಲಕ್ ರಸ್ತೆಗೆ ಹೊಂದಿಕೊಂಡಂತಿರುವ ವಿಠ್ಢಲ ದೇವಸ್ಥಾನಕ್ಕೆ ಭಜನೆಗೆ ಅಂತ ಹೋದರೆ,ರಾತ್ರಿ ಹೊತ್ತು ನಿದ್ದೆ ತಡೆಯಲಾಗದೆ ಆ ಕಟ್ಟೆಯ ಮೇಲೆ ಮಲಗಿ ಬಿಡುತ್ತಿದ್ದೆ.

ಒಂದು ವೇಳೆ ಅಪ್ಪಿ ತಪ್ಪಿ ಚರಂಡಿಯೊಳಕ್ಕೆ ಬಿದ್ದಿದ್ದರೆ ಮೈ ಕೈ ಮೂಳೆಗಳೆಲ್ಲ ಮುರಿದು ಹೋಗಿಬಿಡುತ್ತಿದ್ದವು.ಇದಕ್ಕಿಂತ ಭಯಂಕರವೆಂದರೆ ನನಗೆ ರಾತ್ರಿ ಹೊತ್ತು ನಿದ್ರೆಗಣ್ಣಿನಲ್ಲೇ ತಿರುಗಾಡುವ ಅಭ್ಯಾಸವಿತ್ತು.ಆಗ ನಮ್ಮ ಮನೆ ಬಿ.ಹೆಚ್.ರಸ್ತೆಯಿಂದ ಅಶೋಕ ರಸ್ತೆಗೆ ತಿರುಗುತ್ತಿದ್ದಂತೆ ಬಲಭಾಗದಲ್ಲಿತ್ತು(ಈಗ ಅದು ಹೋಟೆಲ್ ಆಗಿದೆ)
ಎಷ್ಟೋ ಸಲ ನಾನು ನಡು ರಾತ್ರಿ ಎದ್ದು ಬಸ್ ಸ್ಟ್ಯಾಂಡ್ ಸಮೀಪ ಇದ್ದ ಹಿಮಾಲಯ ಕೂಲ್ ಡ್ರಿಂಕ್ಸ್ ಎದುರಿನ ಬಾವಿ ಕಟ್ಟೆಯ ಮೇಲೆ ಮಲಗಿ ಬಿಡುತ್ತಿದ್ದೆ.

ಅಪ್ಪಿ ತಪ್ಪಿ ಬಿದ್ದರೆ ಹರೋ ಹರ.ಹಿಮಾಲಯ ಕೂಲ್ ಡ್ರಿಂಕ್ಸ್ ಈಗಲೂ ಇದೆ.ಆದರೆ ಬಾವಿ ಹಿಂದಕ್ಕೆ ಹೋಗಿ ಷಾಪು ಮುಂದಕ್ಕೆ ಬಂದಿದೆ.

ಆಗೆಲ್ಲ ನನ್ನ ತಂದೆ ತಾರಾನಾಥ್,ಗಾಬರಿಯಿಂದ ಬಂದು ನನ್ನನ್ನೆತ್ತಿಕೊಂಡು ಹೋಗಿ ಮನೆಯಲ್ಲಿ ಮಲಗಿಸುತ್ತಿದ್ದರು.ಇವೆಲ್ಲ ನಮಗರಿವಾಗದಂತೆ ಎದುರಿಸುವ ಕಂಟಕಗಳು.

ಇದೇ ಕಾಲಘಟ್ಟದಲ್ಲಿ,ಅಂದರೆ ನನಗೆ ಆರೋ,ಏಳೋ ವರ್ಷವಿರಬೇಕು.ಆ ಸಂದರ್ಭದಲ್ಲಿ ಒಮ್ಮೆ ಊರಲ್ಲಿ ಮಳೆ ಎಂದರೆ ಮಳೆ,ಮಲೆನಾಡಿನ ಮಳೆ ಎಂದರೆ ಕೇಳಬೇಕೇ?ಮಳೆಯ ನೀರು ಚರಂಡಿಯನ್ನು ತುಂಬಿ ರಸ್ತೆಯ ಮೇಲೆ ಉಕ್ಕುತ್ತಿತ್ತು.
ನಾನು ಸಣ್ಣವನು,ಆ ಅಪಾರ ಪ್ರಮಾಣದ ನೀರಿನ ಹೊಡೆತ ಹೇಗಿರುತ್ತದೆ ಎಂಬುದನ್ನು ಅಂದಾಜು ಮಾಡಲಾಗದೆ ಮನೆಯಿಂದ ಹೊರಗೆ ಬಂದು ಸುಸ್ಸು ಮಾಡಲು ಹೋಗಿ ಮಗುಚಿ ಬಿದ್ದು ಬಿಟ್ಟೆ.

ನನಗೆ ಮರಣ ಭೀತಿ ಎದುರಾಗಿದ್ದು ಜೀವನದಲ್ಲಿ ಅದು ಮೊದಲ ಬಾರಿ.ಆ ನೀರಿನ ಹೊಡೆತಕ್ಕೆ ನಾನು ಐವತ್ತರಿಂದ ಅರವತ್ತು ಅಡಿ ದೂರ ಕೊಚ್ಚಿಕೊಂಡು ಹೋಗಿರಬೇಕು.
ನಾನು ಕೊಚ್ಚಿ ಹೋಗುತ್ತಿರುವುದನ್ನು ನನ್ನ ಎರಡನೇ ದೊಡ್ಡಪ್ಪ ರಾಣೋಜಿರಾವ್ ಅವರ ಮಗಳು ಗಾಯಿತ್ರಕ್ಕ ನೋಡಿದ್ದಾಳೆ.ನನಗಿಂತ ಆರೇಳು ವರ್ಷ ದೊಡ್ಡವಳು.ಅಂದರೆ ಆಕೆಗಿನ್ನೂ ಹದಿಮೂರು,ಹದಿನಾಲ್ಕು ವರ್ಷ.ನಾನು ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಾಗಿ ಆಕೆ ಹಿಂದೆ ಮುಂದೆ ನೋಡದೆ ನೀರಿಗೆ ಹಾರಿದ್ದಾಳೆ.

ಅಲ್ಲಿಂದ ಸ್ವಲ್ಪ ಮುಂದೆ ಕೊಚ್ಚಿ ಹೋಗಿದ್ದರೆ ಗಟಾರಕ್ಕೆ ಸೇರಿಕೊಂಡು ಬಿಡುತ್ತಿದ್ದೆ.ಹಾಗೇನಾದರೂ ಆಗಿದ್ದರೆ ಅವತ್ತು ನನ್ನ ಕತೆ ಮುಗಿದೇ ಹೋಗುತ್ತಿತ್ತು.ಆದರೆ ಗಾಯಿತ್ರಕ್ಕ ಹೆಣಗಾಡಿ ನನ್ನನ್ನು ಮೇಲೆತ್ತಿಕೊಂಡು ಬಂದಿದ್ದಾಳೆ.ಬಂದವಳು ಕಂಗಾಲಾಗಿದ್ದ ನನ್ನನ್ನು ಮಂಚದ ಮೇಲೆ ನಿಲ್ಲಿಸಿ ಮೈ ಒರೆಸಿ,ಜೋರಾಗಿ ಅತ್ತಿದ್ದಾಳೆ.ಯಾಕಕ್ಕ?ಅಂತ ಕೇಳಿದರೆ,ನಿನಗೇನಾದರೂ ಹೆಚ್ಚು ಕಡಿಮೆಯಾಗಿದ್ದರೆ ಏನು ಗತಿ?ಅಂತ ಹೇಳಿ ಬಿಕ್ಕಿದ್ದಾಳೆ.

ಇದಾದ ನಂತರ ನಾನು ಕಂಟಕ ಅಂತ ಎದುರಿಸಿದ್ದು ಬಸವಾಪಟ್ಟಣದ (ಚನ್ನಗಿರಿ ತಾಲ್ಲೂಕಿನಲ್ಲಿದೆ) ನಾಲೆಗೆ ಈಜಲು ಹೋದಾಗ.ಬೆಂಗಳೂರಿನಲ್ಲಿ ನನಗೆ ಕೆಲಸ ಸಿಕ್ಕ ಮೇಲೆ ಒಮ್ಮೆ ದುರ್ಗಮ್ಮನ ಜಾತ್ರೆಗೆಂದು ನಮ್ಮ ಸಂಬಂಧಿ ಪ್ರೇಮಾ ಕಾಕಿ ಅವರ ಬಸವಾಪಟ್ಟಣದ ಮನೆಗೆ ನಮ್ಮಮ್ಮ,ಅಣ್ಣನ ಜತೆ ಹೋಗಿದ್ದೆ.ಆ ಸಂದರ್ಭದಲ್ಲಿ ನಮ್ಮಣ್ಣ ಮಹೇಂದ್ರನಾಥ್ ಮತ್ತು ನಾನು ಸೇರಿ ಮಕ್ಕಳನ್ನೆಲ್ಲ ಕರೆದುಕೊಂಡು ನಾಲೆಯ ಕಡೆ ಹೋಗಿದ್ದೇವೆ.

ಹೆಚ್ಚು ಕಡಿಮೆ ಹದಿನೈದು ಅಡಿಗಳಿಗಿಂತಲೂ ಅಗಲದ ನಾಲೆ ಅದು.ನಾನು ಬಾಲ್ಯದಿಂದಲೇ ತುಂಗಭದ್ರಾ ನದಿಯಲ್ಲಿ ಬಿದ್ದು ಈಜು ಕಲಿತವನು.ಹೀಗಾಗಿ ನಾಲೆಯಲ್ಲಿ ಇಳಿದು ಈಜತೊಡಗಿದೆ.ನಾಲೆಯಲ್ಲಿ ಹತ್ತಡಿಗಿಂತ ಹೆಚ್ಚಿನ ನೀರು.ಹೀಗೇ ಈಜುತ್ತಾ,ಅದರ ಸೆಳವಿಗೆ ಸುಖಿಸುತ್ತಿದ್ದೇನೆ.ಅಷ್ಟರಲ್ಲಿ ನಮ್ಮ ಸಂಬಂಧಿ ವಿಠ್ಢಲ,ನಾನು ನಿನ್ನ ಜತೆ ಈಜಲು ಬರುತ್ತಿದ್ದೇನೆ ಅಣ್ಣಾ ಎಂದವನೇ ದೊಪ್ಪಂತ ನೀರಿಗೆ ಬಿದ್ದು ಬಿಟ್ಟ.ಬಿದ್ದವನು ನೀರಿನ ಹೊಡೆತ ತಾಳಲಾಗದೆ ರಪಕ್ಕಂತ ನನ್ನ ಕೈ ಹಿಡಿದುಕೊಂಡು ಬಿಟ್ಟ.
ಪ್ರಾಣಭಯವಿರುವ ವ್ಯಕ್ತಿ ನೀರಿನಲ್ಲಿ ನಿಮ್ಮನ್ನು ಹಿಡಿದುಕೊಂಡರೆ ಕಬ್ಬಿಣ ಹಿಡಿದುಕೊಂಡಂತಾಗುತ್ತದೆ.

ನನಗೇನೋ ಈಜು ಬರುತ್ತಿತ್ತು.ಸಾವರಿಸಿಕೊಂಡು ಆ ಹುಡುಗನನ್ನು ಇನ್ನೇನು ದಡಕ್ಕೆ ತರಬೇಕು.ಅಷ್ಟರಲ್ಲೇ ದಡದ ಮೇಲಿದ್ದ ಗುತ್ತಲದ ರೂಪಾ ಕೂಡಾ,ಅಣ್ಣಾ ನಾನೂ ಈಜಿಗೆ ಬರುತ್ತೇನೆ ಅಂತ ನೀರಿಗೆ ಬಿದ್ದು ಬಿಟ್ಟಳು.ಈ ಮಕ್ಕಳಿಗಾದರೂ ಎಷ್ಟು ವಯಸ್ಸು ಆರೋ,ಏಳು ವರ್ಷ.ಸರಿ ವಿಠ್ಢಲ ನನ್ನ ಬಲಗೈ ಹಿಡಿದುಕೊಂಡ,ಅವನನ್ನು ಹೇಗೋ ಮಾಡಿ ದಂಡೆಯತ್ತ ತಳ್ಳಿದ್ದಾಯಿತು.ಮೇಲಿದ್ದ ನನ್ನಣ್ಣ ಮಹೇಂದ್ರ ಗಪ್ಪಂತ ಅವನನ್ನು ಮೇಲೆಳೆದುಕೊಂಡ.

ಆದರೆ ನೀರಿನ ಹೊಡೆತಕ್ಕೆ ಹೆದರಿದ ರೂಪಾ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಳು.ಆಕೆಯನ್ನು ಹಿಡಿದುಕೊಂಡು ದಡಕ್ಕೆ ತಳ್ಳಿಕೊಂಡು ಬರಲು ಯತ್ನಿಸುತ್ತೇನೆ.ಆದರೆ ಶಕ್ತಿ ಸಾಲುತ್ತಿಲ್ಲ.ಹೀಗಾಗಿ ನಾನೂ ಮುಳುಗಿ ಏಳತೊಡಗಿದೆ.
ಮೇಲೆ ನಿಂತಿದ್ದ ನನ್ನಣ್ಣನಿಂದ ಹಿಡಿದು ಎಲ್ಲರಿಗೂ ಗಾಬರಿ.ನಾನೇನೋ ಆಕೆಯನ್ನು ತಳ್ಳಿ ಸಾವರಿಸಿಕೊಂಡು ಬಂದು ಬಿಡಬಹುದು.ಆದರೆ ಬಿಟ್ಟು ಬರುವುದು ಹೇಗೆ?ಹಾಗಂತ ಹಟಕ್ಕೆ ಬಿದ್ದು ಬಿಟ್ಟೆ.ನಾನು ಬದುಕಿದರೆ ಆ ಮಗುವೂ ಬದುಕಬೇಕು.ಹೆಚ್ಚು ಕಡಿಮೆಯಾದರೆ ನನ್ನ ಪ್ರಾಣ ಹೋದರೂ ಪರವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದುಬಿಟ್ಟೆ.ಅದೇ ಭರದಲ್ಲಿ ಅವುಡುಗಚ್ಚಿ ಈಜುತ್ತಾ ಆಕೆಯನ್ನು ದಡಕ್ಕೆ ತಳ್ಳಿಕೊಂಡು ಬರುತ್ತಿದ್ದಂತೆಯೇ ಮೇಲಿದ್ದ ನನ್ನಣ್ಣ ಮಹೇಂದ್ರ ರಪ್ಪಂತ ಆಕೆಯನ್ನು ಮೇಲೆತ್ತಿಕೊಂಡುಬಿಟ್ಟ.

ನಾನು ಸಾವರಿಸಿಕೊಂಡು ಇನ್ನೂ ಇಪ್ಪತ್ತು ಅಡಿ ಮುಂದಕ್ಕೆ ಹೋಗಿ ದಡ ಏರಿದೆ.ಅವತ್ತು ನಮ್ಮಣ್ಣ ಗಳ ಗಳನೆ ಅತ್ತು ಬಿಟ್ಟ.ನೀನೇನಾದರೂ ಹೋಗಿ ಬಿಟ್ಟಿದ್ದರೆ,ಅಪ್ಪ-ಅಮ್ಮನಿಗೆ ಏನು ಹೇಳಬೇಕಿತ್ತು?ಅಂತ.ಅದೂ ನಿಜ.ಆದರೆ ಈ ಮಕ್ಕಳಿಬ್ಬರಿಗೆ ಹೆಚ್ಚು ಕಡಿಮೆಯಾಗಿದ್ದರೆ ಮನೆಗೆ ಹೋಗಿ ನಾವಾದರೂ ಏನಂತ ಉತ್ತರ ಹೇಳಬೇಕಿತ್ತು?ಇಬ್ಬರೂ ಮುದ್ದು ಮಕ್ಕಳು.

ಹೀಗೆ
ಅವತ್ತು ಎದುರಿಸಿದ ಕಂಟಕದ ನಂತರ ಎದುರಾದ ತಲ್ಲಣಗಳ ಪೈಕಿ,ವಿಧಾನಸಭೆಯಲ್ಲಿ ಯಡಿಯೂರಪ್ಪ ನನ್ನನ್ನು ಎಳೆ ತಂದಿದ್ದು ನಿಜಕ್ಕೂ ಆಘಾತಕಾರಿಯಾಗಿತ್ತು.ಯಾಕೆಂದರೆ ಸಂಬಂಧವಿಲ್ಲದಿದ್ದರೂ ನನ್ನ ಹೆಸರು ಕರೀಂಲಾಲಾ ಜತೆ ತಗಲಿಕೊಂಡಿತ್ತು.

ಹೀಗಾಗಿ ಸ್ವಲ್ಪ ಹೊತ್ತು ಮಂಕಾಗಿ ಕೂತವನು,ಇದ್ದಕ್ಕಿದ್ದಂತೆ ಬದುಕಿನಲ್ಲಿ ತಾನೇ ತಾನಾಗಿ ಎದುರಾದ ಎಲ್ಲ ಕಂಟಕಗಳನ್ನು ನೆನಪಿಸಿಕೊಂಡು ಎದ್ದು ಬಿಟ್ಟೆ.

ಅಷ್ಟೊತ್ತಿಗಾಗಲೇ,ಯಾರಪ್ಪಾ ಇವನು ಪತ್ರಕರ್ತ?ಕರೀಂಲಾಲಾ ಜತೆ ಅವನಿಗೆ ಸಂಬಂಧವಿತ್ತಾ?ಎಷ್ಟು ಲಕ್ಷ ಇಸಕೊಂಡಿರಬಹುದು?ಅಂತ ಚರ್ಚೆಗಳು ಶುರುವಾಗಿಬಿಟ್ಟಿದ್ದವು.
ಹೀಗೆ ಸುದ್ದಿ ಹರಡುತ್ತಿದ್ದಂತೆಯೇ ರವಿ ಬೆಳಗೆರೆ ಫೋನು ಮಾಡಿದರು.ವಿಠ್ಢಲ್,ಈ ಪ್ರಕರಣಕ್ಕೂ ನಿನಗೂ ಸಂಬಂಧವಿಲ್ಲ.ಮುಲಾಜಿಲ್ಲದೇ ಹೇಳು.ನಮ್ಮ ಸಂಪಾದಕರು ಕಳಿಸಿದ್ದರು.ನಾನು ಹೋಗಿದ್ದೆ ಅನ್ನು.ಫೇಸ್ ಮಾಡಲು ನಿನ್ನ ಜತೆ ನಾನಿದ್ದೇನೆ ಅಂದರು.

ನಾನು ಮೇಲೆದ್ದವನೇ ನಮ್ಮ ಗೆಳೆಯರಾದ ಈ ನಾಡು ಪತ್ರಿಕೆಯ ಆದಿನಾರಾಯಣ ಹಾಗೂ ವಿನಯ್ ಮಾಧವ್ ಸೇರಿದಂತೆ ಹಲವರನ್ನು ವಿಧಾನಸಭೆಯ ಮೊಗಸಾಲೆಯಲ್ಲೇ ಕರೆದು:ಪೋಲೀಸ್ ಅಧಿಕಾರಿ ಬಾವಾ ಅವರನ್ನು ಕರೆದುಕೊಂಡು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದು ನಾನೇ.ಆಫೀಸಿನಿಂದ ಬಂದ ಸೂಚನೆ ಮೇರೆಗೆ ಕರೆದುಕೊಂಡು ಹೋಗಿದ್ದೆ ಎಂದೆ.ಆದಿನಾರಾಯಣ ಎತ್ತಿದ ಮಾತಿಗೇ,ನೀನು ಹೋಗಿದ್ದಿಯಾ?ಹಾಗಿದ್ದರೆ ತಲೆ ಕೆಡಿಸಿಕೊಳ್ಳಬೇಡ ಬಿಡು.ಆಫೀಸಿನಿಂದಲೇ ಸೂಚನೆ ಬಂದರೆ ವರದಿಗಾರ ಹೋಗಲೇಬೇಕು.ಯೋಚಿಸಬೇಡ ಅಂದುಬಿಟ್ಟರು.

ನೋಡನೋಡುತ್ತಿದ್ದಂತೆಯೇ ವಿಷಯ ಮಂಜಿನಂತೆ ಕರಗತೊಡಗಿತು.ಅಯ್ಯೋ,ಕರೆದುಕೊಂಡು ಹೋಗಿದ್ದು ವಿಠ್ಠಲಮೂರ್ತಿಯಂತೆ.ಒಂದು ದಿನ ಪೋಲೀಸ್ ಕಮೀಷ್ನರ್ ಆಫೀಸಿನಲ್ಲಿ ಕಂಡವನಲ್ಲ.ಯಾವತ್ತಿದ್ದರೂ ರಾಜಕಾರಣಿಗಳ ಜತೆ ಇರುವವನು ಎಂಬ ಚರ್ಚೆಯಾಗಿ ಬೆಟ್ಟದಂತೆ ಮೇಲೆದ್ದ ವಿಷಯ ಹಾಗೇ ಮಲಗಿಕೊಂಡಿತು.

ಇದಾದ ನಂತರ ಯಡಿಯೂರಪ್ಪ ಅವರನ್ನು ನಾನು ಹಲ ಬಾರಿ ಭೇಟಿ ಮಾಡಿದ್ದೇನೆ.ಪತ್ರಿಕೆಗಳಿಗೆ ಸಂದರ್ಶನ ಮಾಡಿದ್ದೇನೆ.ಆದರೆ ಈ ಬೆಳವಣಿಗೆಯ ಕುರಿತು ನಾನ್ಯಾವತ್ತೂ ಅವರ ಮುಂದೆ ಪ್ರಸ್ತಾಪಿಸಿಲ್ಲ.ಹಾಗೆಯೇ ಅವರ ಜ್ಞಾಪಕ ಚಿತ್ರ ಶಾಲೆಯಲ್ಲಿ ಈ ಮಾಡರ್ನ್ ಆರ್ಟ್ ಉಳಿದುಕೊಂಡಿಲ್ಲ.

ಆರ್.ಟಿ. ವಿಠ್ಠಲಮೂರ್ತಿ

                                                                                             

LEAVE A REPLY

Please enter your comment!
Please enter your name here