ಪಟ್ಟಣದಲ್ಲಿ ಎಲ್ಲೆಲ್ಲಿಯೂ ಸಹ ಹೋಳಿಯ ಸಂಭ್ರಮವೋ, ಸಂಭ್ರಮ,

0
12

ಸಂಡೂರು: ಮಾ:27 : ಪಟ್ಟಣದಲ್ಲಿ ಎಲ್ಲೆಲ್ಲಿಯೂ ಸಹ ಹೋಳಿಯ ಸಂಭ್ರಮವೋ, ಸಂಭ್ರಮ, ಮಕ್ಕಳಿಂದ ಪ್ರಾರಂಭವಾಗಿ, ಹಿರಿಯರವರೆಗೂ ಸಹ ಬಹು ಅನಂದದಿಂದ ಬಣ್ಣ ಎರಚುವ ಮೂಲಕ ಹೋಳಿಹಬ್ಬವನ್ನು ಅಚರಿಸಲಾಯಿತು.

ಪಟ್ಟಣ ವಿಜಯ ವೃತ್ತದಲ್ಲಿ ಯುವಕರ ದಂಡು ಬಣ್ಣವನ್ನು ಡಬ್ಬಗಳಲ್ಲಿ ಕಲಿಸಿಕೊಂಡು ಎರಚಿಕೊಂಡು ಹಲಗೆಯ ನಾದಕ್ಕೆ ಕುಣಿದರೆ, ಮತ್ತೊಂದು ಯುವಕರ ದಂಡು ಎನ್.ಫಿಲ್ಡ್ ಬುಲೆಟ್ ಗಾಡಿಗಳಲ್ಲಿ ಬಣ್ಣ ಮೆತ್ತಿಕೊಂಡು ಸ್ನೇಹಿತರು, ಸಂಬಂಧಿಗಳ ಮನೆಗಳಿಗೆ ಹೋಗಿ ಬಣ್ಣ ಹಾಕುತ್ತಿದ್ದರು, ಇನ್ನು ಮಕ್ಕಳು ಪಿಚಕಾರಿಗಳನ್ನು ಹಿಡುಕೊಂಡು ಒಬ್ಬರಿಗೊಬ್ಬರು ಎರಚಿಕೊಂಡು ಸಂತಸದಿಂದ ಕುಣಿದಾಡುವುದು ಕಂಡು ಬಂದಿತು. ಬಿಸಿಲಿನ ತಾಪ ಏರುತ್ತಿದ್ದರೂ ಸಹ ಬಣ್ಣದ ಎರಚಾಟದಲ್ಲಿ ಅದು ಕಾಣದಾಯಿತು, ಅಲ್ಲದೆ ದೊಡ್ಡವರು ಸಹ ಮನೆಗಳಲ್ಲಿ ಸೊಸೆಯಂದಿರನ್ನು, ಅತ್ತೆಯರನ್ನು, ಬೀಗರನ್ನು ಹಿಡಿದು ಹಿಡಿದು ಬಣ್ಣ ಎರಚುವುದು ಕಂಡು ಬಂದಿತು, ಅಲ್ಲದೆ ಕೆಲವರು ಮೊಟ್ಟೆಗಳನ್ನು ಸಹ ತಲೆಗಳಿಗೆ ಹೊಡೆದುಕೊಂಡು ಸಂತಸಪಟ್ಟರು.

ಪ್ರಮುಖವಾಗಿ ವಕೀಲರು ತಮ್ಮ ನಿತ್ಯದ ಕೆಲಸ ಕೆಲಕಾಲ ನಿಲ್ಲಿಸಿಕೊಂಡು ಬಣ್ಣ ಎರಚಾಡಿದರೆ, ಪೋಲಿಸರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು, ಅಂಗಡಿಗಳು ಮುಚ್ಚಿಕೊಂಡು ಬೀದಿಗಳಲ್ಲಿ ಬಣ್ಣ ಎರಚಿಕೊಂಡರು, ಕೆಲ ಯುವಕರು ಟಾಪ್ ಲೆಸ್ ವಾಹನಗಳಲ್ಲಿ ಬಣ್ಣವನ್ನು ಗಾಡಿಯಲ್ಲಿ ಇಟ್ಟುಕೊಂಡು ಎರಚುತ್ತಾ, ಕುಣಿಯುತ್ತಾ ಬೀದಿ ಬೀದಿಗಳಲ್ಲಿ ಸಾಗಿದರು.

ಪಟ್ಟಣದ ಗೌಳೇರು ಓಣಿ, ಹೊಸಬಾವಿಓಣಿ ರೈತರಿಂದ ಕೂಡಿದ ಓಣಿಗಳು, ಇವರು ಪೂರ್ವ ನಿಗದಿಯಂತೆ 4-5 ಡ್ರಮ್ಮುಗಳಲ್ಲಿ ಬಣ್ಣವನ್ನು ಕಲಿಸಿ ತಮ್ಮ ಎತ್ತಿನ ಬಂಡಿಗಳಲ್ಲಿ ಇಟ್ಟುಕೊಂಡು ಸಾಮೂಹಿಕವಾಗಿ ಇಡೀ ಓಣಿಯ ಎಲ್ಲರಿಗೂ ಸಹ ಭಿನ್ನ ಬೇಧವಿಲ್ಲದೆ ಸಾಮೂಹಿಕವಾಗಿ ಬಣ್ಣ ಎರಚುತ್ತಾ ಸಾಗಿದರು, ಬೆಳಗಿನಿಂದ ಸಂಜೆ 3 ಗಂಟೆಯವರೆಗೆ ನಡೆಯಿತು, ನಂತರ ಎಲ್ಲರೂ ತಮ್ಮ ಮನೆಗಳಿಗೆ ಸಾಗಿ ಸ್ವಚ್ಚ ಮಾಡಿಕೊಂಡು ಗಂಡಿ ನರಸಿಂಹಸ್ವಾಮಿ ಜಾತ್ರೆಗೆ ಎತ್ತುಗಳನ್ನು ಕಟ್ಟಿಕೊಂಡು, ಬುತ್ತಿ ಕಟ್ಟಿಕೊಂಡು ಜಾತ್ರೆ ಮಾಡಲು ಹೊರಟರು. ಅಲ್ಲಿ ವಿಶೇಷವಾಗಿ ದೇವರ ಪೂಜೆಯನ್ನು ಸಲ್ಲಿಸಿ ನೈವೇದ್ಯ ಸಮರ್ಪಿಸಿ ತಾವು ತೆಗೆದುಕೊಂಡು ಹೋಗಿದ್ದ ಬುತ್ತಿಯನ್ನು ಮೆದ್ದು ಬಹು ಸಂತಸದಿಂದ ಹಬ್ಬ ಆಚರಿಸಿದರು.

LEAVE A REPLY

Please enter your comment!
Please enter your name here