ನ್ಯುಮೋನಿಯಾ, ನ್ಯೂಮೊಕಾಕಲ್ ನಂತಹ ಮಾರಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಣೆ ಮಾಡಿ, ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ ಪಿಸಿವಿ ಲಸಿಕೆ ಹಾಕಿಸಿ : ಮಹಾಂತೇಶ್ ಬೀಳಗಿ

0
114

ದಾವಣಗೆರೆ,ನ.18:ಕೊರೊನಾ ಸಂಭಾವ್ಯ 3ನೇ ಅಲೆ ತಡೆಗಟ್ಟಲು ಹಾಗೂ ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯೂಮೊಕಾಕಲ್ ನಂತಹ ಮಾರಕ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು (ಪಿಸಿವಿ) ತಪ್ಪದೆ ಹಾಕಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.
ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನ್ಯುಮೋನಿಯಾ, ನ್ಯುಮೋಕಾಕಲ್ ಮತ್ತು ಮೆನಿಂಟೈಟಸ್ ವಿರುದ್ಧ ರಕ್ಷಣೆ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ) ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಿಸಿವಿ ನೂತನ ಲಸಿಕೆಯನ್ನು ಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಕಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಗುವಿನ ಆರೋಗ್ಯಕರ ಬೆಳವಣಿಗೆಗೆ ರೋಗ ನಿರೋಧಕ ಶಕ್ತಿ ಅಗತ್ಯ. ಹುಟ್ಟಿದ ದಿನದಿಂದ 5 ವರ್ಷಗಳ ತನಕ ಮಕ್ಕಳಿಗೆ ಹಲವು ಲಸಿಕೆಗಳನ್ನು ಹಾಕಲಾಗುತ್ತದೆ. ಈ ಲಸಿಕೆಗಳ ಜೊತೆ ಹೆಚ್ಚುವರಿಯಾಗಿ 1.5 ತಿಂಗಳ ಮಗುವಿಗೆ ಮೊದಲ ಡೋಸ್, 3.5 ತಿಂಗಳಿಗೆ 2ನೇ ಡೋಸ್ ಹಾಗೂ 9 ತಿಂಗಳಿಗೆ ಬೂಸ್ಟರ್ ಡೋಸ್ ನ್ಯೂಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆಯನ್ನು ನೀಡಲಾಗುತ್ತದೆ. ಈ ಲಸಿಕೆಯು ಮಕ್ಕಳ ಶ್ವಾಸಕೋಶ ಹಾಗೂ ಮೆದುಳು ಸುರಕ್ಷಿತವಾಗಿರಲು, ಉಸಿರಾಟದ ತೊಂದರೆಗಳಿಗೆ ಸಹಕಾರಿಯಾಗುತ್ತದೆ.
ಲಸಿಕಾ ಕಾರ್ಯಕ್ರಮ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈ ಲಸಿಕೆ ನೀಡಲು 2256 ಫಲಾನುಭವಿ ಮಕ್ಕಳನ್ನು ಗುರುತಿಸಲಾಗಿದ್ದು, ಎಲ್ಲಾ ತಾಯಂದಿರು ತಮ್ಮ ಮಕ್ಕಳ ರಕ್ಷಣೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಈ ವೇಳೆ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆ ಸಂಬಂಧ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ಶಶಿಧರ್, ಡಾ.ರೇಣುಕಾರಾಧ್ಯ, ಡಾ.ಎಲ್.ಡಿ.ವೆಂಕಟೇಶ್ ಸೇರಿದಂತೆ ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here