ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ; ಜಾಗೃತಿ, ಆರೋಗ್ಯ ತಪಾಸಣಾ ಶಿಬಿರ, ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ: ನ್ಯಾ. ಎಸ್.ಹೆಚ್. ಪುಷ್ಟಾಂಜಲಿದೇವಿ

0
97

ಬಳ್ಳಾರಿ,ಅ.11: ಕೋವಿಡ್ ಸಮಯದಲ್ಲಿ ಸಾಮಾಜಿಕ, ಆರ್ಥಿಕ, ಸಂಕಷ್ಟಗಳಿಂದ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರಿದ್ದು, ಮನಸ್ಸಿನ ಒತ್ತಡ ನಿವಾರಿಸಿಕೊಳ್ಳಲು ಮಾನಸಿಕ ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆಯಿರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್.ಪುಷ್ಟಾಂಜಲಿದೇವಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಮಾನಸಿಕ ಅರೋಗ್ಯ ವಿಭಾಗ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಭಾನುವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಮೋಕಾದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಒತ್ತಡ ಕಡಿಮೆ ಮಾಡುವ ಕುರಿತು ವ್ಯಾಪಕ ಜಾಗೃತಿಯ ಅವಶ್ಯಕತೆಯಿದ್ದು, ಇದಕ್ಕಾಗಿ ಸಾರ್ವಜನಿಕರು ಭಯ ಪಡದೆ ಮಾನಸಿಕ ವೈದ್ಯರ ಬಳಿ ತೆರಳಿ ಸಮಾಲೋಚನೆ ಹಾಗೂ ಅಗತ್ಯವೆನಿಸಿದ ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಪಡೆಯಿರಿ ಎಂದು ಅವರು ತಿಳಿಸಿದರು.
ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ತೊಂದರೆ ಅನುಭವಿಸುವ, ಆರ್ಥಿಕವಾಗಿ ಸದೃಡರಿಲ್ಲದವರ, ಕಡು ಬಡವರ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುವವರ ಆಸ್ತಿ ರಕ್ಷಣೆ ಮುಂತಾದ ಕಾನೂನಾತ್ಮಕ ಸಹಾಯಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ನಿಮ್ಮೊಂದಿಗಿರುತ್ತದೆ. ಇದಕ್ಕಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ಬಂದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಹೆಚ್.ಎಲ್.ಜನಾರ್ಧನ ಅವರು ಮಾತನಾಡಿ ಕೆಲವು ಬಾರಿ ಯಾವುದೋ ಘಟನೆಯಿಂದ ಅಥವಾ ಒತ್ತಡದಿಂದ ಆಘಾತಕ್ಕೆ ಒಳಗಾಗಿ ಮೆದುಳಿನಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅಲ್ಲದೆ ಅವರ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಸಾಂತ್ವನ ಹೇಳುವುದರ ಜೊತೆಗೆ ಧೈರ್ಯ ನೀಡಬೇಕು. ದೆವ್ವ-ಭೂತ, ಮಾಟ-ಮಂತ್ರಗಳೆಂದು ಅಲೆದಾಡಿ ರೋಗಿಯ ಸ್ಥಿತಿ ಗಂಭೀರವಾಗುವಂತೆ ಮಾಡದೆ ತಕ್ಷಣ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅವರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ತಿಳಿಸಿದರು.
ಪ್ರಸ್ತುತ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೆಂದ್ರಗಳಲ್ಲಿ ಪ್ರತಿ ತಿಂಗಳು ಹಲವು ಬಾರಿ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ ಮತ್ತು ಮುಂಬರುವ ಸಂಭಾವ್ಯ ಕೋವಿಡ್ 3ನೇ ಅಲೆಯಿಂದ ಪಾರಾಗಲು ಕೋವಿಡ್ ಲಸಿಕೆ ತಪ್ಪದೆ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಟಿ. ರಾಜಶೇಖರರೆಡ್ಡಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಮ್.ಡಿ.ಪವಿತ್ರಾ, ಗ್ರಾಪಂ ಅಧ್ಯಕ್ಷೆ ಈರಮ್ಮ, ಮಾನಸಿಕ ರೋಗ ತಜ್ಞರಾದ ಡಾ.ಎಸ್.ಕೊಟ್ರೇಶ, ಡಾ.ಭುವನೇಶ್ವರಿ ದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಆಡಳಿತ ವೈದ್ಯಾಧಿಕಾರಿ ಡಾ.ಭಾರತಿ, ಸರಕಾರಿ ಅಭಿಯೋಜಕರಾದ ಎಮ್.ಬಿ.ಸುಂಕಣ್ಣ ಅವರು ಮಾತನಾಡಿದರು.
ಶಿಬಿರಲ್ಲಿ 15 ಜನ ಬುದ್ದಿಮಾಂದ್ಯರು, 10 ಮಾನಸಿಕ ರೋಗಿಗಳು, 27 ಮೂರ್ಛೆ ರೋಗಿಗಳು, 06 ಜನ ಸಾಮಾನ್ಯ ಮಾನಸಿಕ ತೊಂದರೆ, 10 ತೀವ್ರ ಮಾನಸಿಕ ತೊಂದರೆಗೆ ಒಳಪಟ್ಟವರು ಸೇರಿದಂತೆ ಒಟ್ಟು 68 ಜನ ಮಾನಸಿಕ ತಜ್ಞರಿಂದ ಅಗತ್ಯ ಸಲಹೆ ಔಷಧೋಪಚಾರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಬಿಹೆಚ್‍ಇಓ ಖುರ್ಷಿದಾಬೇಗಂ, ಎಸ್‍ಹೆಚ್‍ಐಓ ಬಸವರಾಜ, ಓಎಸ್ ಸಂತೋಷಕುಮಾರ ಹಾಗೂ ಮಹೇಶ, ಶಾಂತಪ್ಪ, ಕೃಷ್ಣ, ರಂಜೀತಾ, ಕಾವ್ಯ, ಅಬ್ದುಲ್ಲಾ, ಗುರುಸಿದ್ದಪ್ಪ, ತ್ರಿಪೂರ್ಣ ಕುಮಾರ ಮತ್ತು ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here