ಬಳ್ಳಾರಿಯಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಪ್ರಯುಕ್ತ ಸೈಕ್ಲಿಂಗ್ ಜಾಥಾ
ಯಾವುದೇ ಜ್ವರವಿರಲಿ ಮೊದಲು ರಕ್ತಪರೀಕ್ಷೆ ಮಾಡಿಸಿಕೊಳ್ಳಿ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ

0
97

ಬಳ್ಳಾರಿ,ಏ.25 : ಸಾರ್ವಜನಿಕರು ಯಾವುದೇ ಜ್ವರವಿರಲಿ ಮೊದಲು ರಕ್ತಲೇಪನ ಪರೀಕ್ಷೆ ಮಾಡಿಸುವ ಮೂಲಕ ರೋಗ ತಡೆಗಟ್ಟಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ವಿಭಾಗ, ಭಾರತೀಯ ವೈದ್ಯಕೀಯ ಸಂಘ, ಸೈಕ್ಲಿಂಗ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆರೋಗ್ಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಸೈಕ್ಲಿಂಗ್ ಜಾಥಾ ಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ರೋಗ-ರುಜಿನಗಳು ಸುಳಿಯದಂತೆ ಮನೆಯ ಸುತ್ತಲೂ ವಿಶೇಷವಾಗಿ ನಿಂತ ನೀರಿನ ತಾಣಗಳು ಇದ್ದಲ್ಲಿ ಮಣ್ಣಿನಿಂದ ಮುಚ್ಚುವುದು ಹಾಗೂ ನೀರು ಸಂಗ್ರಹಣೆ ಮಾಡುವ ಸಿಮೆಂಟ್ ತೊಟ್ಟಿ, ಡ್ರಮ್ಮು, ಕಲ್ಲಿನ ಡೋಣಿ, ಗಚ್ಚು, ಹಾಗೂ ಇತರೆ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ, ಕನಿಷ್ಟ 2 ಗಂಟೆಗಳ ಕಾಲ ಒಣಗಿಸಿ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳವನ್ನು ಮುಚ್ಚುವುದಕ್ಕೆ ಆದ್ಯತೆ ನೀಡಬೇಕು ಹಾಗೂ ಮುಂಜಾಗ್ರತೆ ವಹಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, ಈ ವರ್ಷದ ಘೋಷಣೆಯಾದ “ಮಲೇರಿಯಾ ರೋಗದ ಹೊರೆಯನ್ನು ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ನಾವೀನ್ಯತೆಯನ್ನು ಬಳಸಿಕೊಳ್ಳಿ” ಎಂಬ ಹಿನ್ನಲೆಯಲ್ಲಿ ಮಲೇರಿಯಾ ಪ್ರಕರಣಗಳನ್ನು ಶೂನ್ಯಕ್ಕೆ ತರಲು ತುಂಬಾ ಅಗತ್ಯವಿದ್ದು, ಈ ರೋಗವು ಹೆಣ್ಣು ಅನಾಫಿಲೀಸ್ ಸೊಳ್ಳೆಯ ಕಚ್ಚುವಿಕೆಯಿಂದ ರೋಗ ಹರಡುತ್ತದೆ ಮತ್ತು ಮುಖ್ಯವಾಗಿ ಚಳಿ, ನಡುಕ, ಜ್ವರ ಬರುವುದು, ಜ್ವರ ಕಡಿಮೆಯಾಗಿ ಬೆವರುವುದು ಈ ತರಹದ ಲಕ್ಷಣಗಳು ಇದ್ದಲ್ಲಿ ಮಲೇರಿಯಾ ಜ್ವರ ಇರಬಹುದು ಎಂದು ಭಾವಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಜ್ವರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಸೈಕ್ಲಿಂಗ್ ಜಾಗೃತಿ ಜಾಥವು ನಗರದ ರಾಯಲ್ ವೃತ್ತ, ಬೆಂಗಳೂರು ರಸ್ತೆ, ತೇರುಬೀದಿ, ಮೋತಿ ವೃತ್ತ, ರೈಲು ನಿಲ್ದಾಣದ ಮೂಲಕ ನಿರಂತರವಾಗಿ ಚಲಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಗುರುನಾಥ ಬಿ.ಚೌಹಾಣ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ.ವೀರೇಂದ್ರಕುಮಾರ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಬಿ.ಕೆ.ಸುಂದರ್, ಬಳ್ಳಾರಿ ಸೈಕಲ್ ಕ್ಲಬ್‍ನ ಟೀಂ ಲೀಡರ್ ಪ್ರಶಾಂತ್, ತಜ್ಞ ವೈದ್ಯರುಗಳಾದ ಡಾ.ಬಿ.ಕೆ.ಶ್ರೀಕಾಂತ್, ಡಾ.ಸೋಮನಾಥ, ಡಾ.ದಿನೇಶ್‍ಗುಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ದಾಸಪ್ಪನವರ್ ಸೇರಿದಂತೆ ಐ.ಎಂ.ಎ ಸದಸ್ಯರು ಮತ್ತು ಬಳ್ಳಾರಿ ಸೈಕಲ್‍ಕ್ಲಬ್‍ನ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here