ಎಸ್‍ಸಿ/ಎಸ್‍ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಸೌಲಭ್ಯ ವಿತರಣೆ, ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಶ್ಲಾಘನೀಯ : ಎಂಪಿ.

0
121

ಶಿವಮೊಗ್ಗ, ಆಗಸ್ಟ್ 17 : ಮಹಿಳೆಯರು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳು, ಒಲಂಪಿಕ್ ಕ್ರೀಡೆಗಳು, ಶಿಕ್ಷಣ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಕೆನರಾ ಜ್ಯೋತಿ ಯೋಜನೆಯಡಿ ಶಿಷ್ಯವೇತನ ಪಡೆದ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮದೇ ಆದ ಸಾಧನೆ ಮೂಲಕ ಹೊರಹೊಮ್ಮಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ವಿದ್ಯಾರ್ಥಿನಿಯರಿಗೆ ಹಾರೈಸಿದರು.
ಇಂದು ಕೆನರಾ ಬ್ಯಾಂಕ್ ಕಟ್ಟಡದಲ್ಲಿರುವ ಲೀಡ್ ಬ್ಯಾಂಕ್ ಕಾನ್ಫರೆನ್ಸ್ ಹಾಲ್‍ನಲ್ಲಿ ಕೆನರಾ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ(ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ-ಸಿಎಸ್‍ಆರ್) ಅಂಗವಾದ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಎಸ್‍ಸಿ/ಎಸ್‍ಟಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಸೌಲಭ್ಯ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಸೌಲಭ್ಯ ವಿತರಣೆ ಮಾಡಿ ಮಾತನಾಡಿದರು.
ಬ್ಯಾಂಕಿನ ಲಾಭದಲ್ಲಿ ಸಿಎಸ್‍ಆರ್ ನಿಧಿ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಿಷ್ಯವೇತನ ಯೋಜನೆ ಮೂಲಕ ಹಿಂದುಳಿದ ವರ್ಗದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಶಿಷ್ಯವೇತನ ನೀಡುವ ಮೂಲಕ ಕೆನರಾ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದೆ. ಪ್ರಸ್ತುತ ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಖರ್ಚು ಮಾಡುತ್ತಿದೆ. ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಅನೇಕ ವಸತಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.
ನಾವೆಲ್ಲಾ ನಮ್ಮ ಹಿರಿಯರು ಓದಿದ ಪಠ್ಯವನ್ನೇ ಓದಿದೆವು. ಆದರೆ ಈಗ ಹೊಸ ಶಿಕ್ಷಣ ನೀತಿಯನ್ವಯ ಪಠ್ಯ ಬದಲಾವಣೆ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಹೊಸ ಶಿಕ್ಷಣ ನೀತಿಯ ಅಗತ್ಯತೆ ಇದ್ದು, ಎಲ್ಲರೂ ಈ ಕಡೆ ಗಮನ ಹರಿಸಬೇಕು ಎಂದರು.
ಮಹಿಳೆಯರು ಪ್ರಸ್ತುತದಲ್ಲಿ ಎಲ್ಲ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿದ್ದಾರೆ. ಉದಾಹರಣೆಗೆ 2019 ರ ಯುಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಟಾಪ್ 10 ರ್ಯಾಂಕುಗಳು ಹೆಣ್ಣುಮಕ್ಕಳೇ ಪಡೆದಿರುವುದು ಹಾಗೂ ಒಲಂಪಿಕ್ಸ್ ಕ್ರೀಡೆಗಳಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳು ಮಾಡಿರುವ ಸಾಧನೆ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದ ಅವರು ಎಲ್ಲೆಡೆ ನಾವು ಪುರುಷ ಸಾಧಕರ ಪ್ರತಿಮೆಯನ್ನೇ ಕಾಣುತ್ತೇವೆ, ಆದರೆ ಶಿಕಾರಿಪುರ ತಾಲ್ಲೂಕಿನ ಉಡುಗಣಿಯಲ್ಲಿ ಪ್ರಥಮ ಕವಿಯತ್ರಿ, ವಚನಗಾರ್ತಿ ಅಕ್ಕಮಹಾದೇವಿಯವರ 75 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, 12 ನೇ ಶತಮಾನದ ಇತಿಹಾಸ ಸಾರುವ ಯೋಜನೆಯು ಪ್ರಗತಿಯಲ್ಲಿದೆ. ಇನ್ನು ವರ್ಷದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.
ಕೆನರಾ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ಯೋಜನೆಗಳು, ಎಂಎಸ್‍ಎಂಇ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾ ಉತ್ತಮ ಸೇವೆ ನೀಡುತ್ತಿವೆ. ಆದರೆ ಬ್ಯಾಂಕಿಗೆ ದಾಖಲಾತಿಗಳನ್ನು ಸಲ್ಲಿಸುವುದು ಸ್ವಲ್ಪ ಕಷ್ಟವೇ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೇವೆ ಸಲ್ಲಿಸಬೇಕೆಂದರು.
ಕೆನರಾ ಬ್ಯಾಂಕ್‍ನ ಶಿವಮೊಗ್ಗ ಪ್ರಾದೇಶಿಕ ಮುಖ್ಯಸ್ಥರಾದ ಸಂದೀಪ್ ರಾವ್ ಪಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶದ ಒಟ್ಟು 450 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಇಂದು ಇಲ್ಲಿ 75 ವಿದ್ಯಾರ್ಥಿನಿಯರಿಗೆ ಒಟ್ಟು ರೂ. 2.67 ಲಕ್ಷ ಮೊತ್ತದ ವಿದ್ಯಾರ್ಥಿವೇತನ ಸೌಲಭ್ಯ ವಿತರಣೆ ಮಾಡಲಾಗಿದೆ. ಸಿಎಸ್‍ಆರ್ ನಿಧಿಯಲ್ಲಿ ವಿಶೇಷವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಉತ್ತೇಜಿಸಲು ಕೆನರಾ ವಿದ್ಯಾಜ್ಯೋತಿ ಯೋಜನೆಯನ್ನು ಜಾರಿಗೆ ತಂದು ಈವರೆಗೆ ದೇಶಾದ್ಯಂತ 50,514 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. 5ನೇ ತರಗತಿಯಿಂದ 7ನೇ ತರಗತಿವರೆಗೆ ರೂ.2500 ಮತ್ತು 8 ರಿಂದ 10 ತರಗತಿವರೆಗೆ ರೂ.5000 ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಕೆನರಾ ಬ್ಯಾಂಕ್ ಆರಂಭವಾಗಿ 115 ವರ್ಷಗಳಾಗಿದ್ದು, ದೇಶದಲ್ಲೇ 3 ನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ 9 ಸಾವಿರ ಕೋಟಿ ವ್ಯವಹಾರ ಹೊಂದಿದ್ದು, 82 ಬ್ರಾಂಚ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು ಪೋಷಕರು ಮತ್ತು ಶಿಕ್ಷಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಉತ್ತೇಜಿಸಿದಲ್ಲಿ ಮಕ್ಕಳಿಗೆ ಮಾತ್ರವಲ್ಲ ಇಡೀ ಊರಿಗೆ ಒಳಿತಾಗಲಿದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಮಾತನಾಡಿ, ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ಆಗಿ ಹತ್ತು ಹಲವು ಸರ್ಕಾರದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಕೃಷಿ ಕ್ಷೇತ್ರದ ಸಾಲ ವಿತರಣೆಯಲ್ಲಿ ಶೇ.115, ಶಿಕ್ಷಣ ಕ್ಷೇತ್ರದಲ್ಲಿ ಶೇ.100 ಪ್ರಗತಿ ಸಾಧಿಸಿದ್ದು, ವಸತಿ ಸಾಲ ನೀಡುವಲ್ಲಿ ಸಹ ಮುಂಚೂಣಿಯಲ್ಲಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸುಮಾರು 1700 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಬ್ಯಾಂಕ್ ನೀಡಿದ್ದು ಜಿಲ್ಲೆಯ ನಿಗದಿತ ಗುರಿಯಲ್ಲಿ ಶೇ.50 ರಷ್ಟು ಸಾಲವನ್ನು ಕೆನರಾ ಬ್ಯಾಂಕ್ ಒಂದೇ ನೀಡಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಮತ್ತು ಇತರೆ ಸರ್ಕಾರಿ ಯೋಜನೆಗಳನ್ನು ಬ್ಯಾಂಕ್ ಅನುಷ್ಟಾನಗೊಳಿಸುತ್ತಿದ್ದು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದರು.
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಪೂರ್ಣಿಮಾ ಎನ್.ರಾವ್, ಇತರೆ ಅಧಿಕಾರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು. ಬ್ಯಾಂಕ್ ಸಿಬ್ಬಂದಿ ಮೋಹನ್ ಪ್ರಾರ್ಥಿಸಿಸಿದರು. ಧನಪಾಲ್ ನಾಯಕ್ ಸ್ವಾಗತಿಸಿದರು, ಶ್ರೀಕಾಂತ್ ನಿರೂಪಿಸಿದರು.

LEAVE A REPLY

Please enter your comment!
Please enter your name here