ಗ್ರಾಹಕರು ಕೊಳ್ಳುವ ಮತ್ತು ಬಳಸುವ ದಿನಬಳಕೆ ವಸ್ತುಗಳಲ್ಲಿ ಆಗುವ ಮೋಸದ ಬಗ್ಗೆ ಅರಿವಿರಬೇಕು;ಬಿ.ವಿ. ಗೋಪಾಲಕೃಷ್ಣ

0
89

ಶಿವಮೊಗ್ಗ, ಫೆಬ್ರವರಿ 11 : ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ. ಗ್ರಾಹಕನಿಗೆ ಕೆಲವು ವೇಳೆ ವಸ್ತು ರೂಪದಲ್ಲಿ ಇನ್ನೂ ಕೆಲವು ವೇಳೆ ಸೌಲಭ್ಯ ರೂಪದಲ್ಲಿ ವಸ್ತುಗಳನ್ನು ಮಾರುವ ವ್ಯಾಪಾರಿಯನ್ನೋ ಅಥವಾ ಸೇವೆಯನ್ನು ನೀಡುವ ಸಂಸ್ಥೆಗಳನ್ನೂ ಸಂಪರ್ಕಿಸುವುದು, ವ್ಯವಹರಿಸುವುದು ಅನಿವಾರ್ಯ. ಹಾಗಾಗಿ ಗ್ರಾಹಕರು ಅನೇಕ ರೂಪದಲ್ಲಿ ಮೋಸಕ್ಕೆ ಒಳಗಾಗುತ್ತಾರೆ, ಇದನ್ನು ಸರಿಪಡಿಸಲು ಗ್ರಾಹಕರು ತಾವು ಕೊಳ್ಳುವ ಮತ್ತು ಬಳಸುವ ವಸ್ತುಗಳ ಬಗ್ಗೆ ಅರಿವಿರಬೇಕು ಎಂದು ಜಿಲ್ಲಾ ಬಳಕೆದಾರರ ವೇದಿಕೆಯ ಅಧ್ಯಕ್ಷ ಬಿ.ಬಿ. ಗೋಪಾಲಕೃಷ್ಣ ಹೇಳಿದರು.
ಅವರು ಇಂದು ಡಿ.ವಿ.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2020. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಹೊಸ ವೈಶಿಷ್ಟ್ಯಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವ್ಯಾಪಾರಸ್ಥರು ಹೆಚ್ಚು ಲಾಭ ಗಳಿಸುವ ದೃಷ್ಟಿಯಿಂದ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಾರೆ. ಕಳಪೆ ಗುಣಮಟ್ಟದ ವಸ್ತುಗಳನ್ನು ವ್ಯಾಪಾರ ಮಾಡುವುದು, ಅನುಚಿತ ವ್ಯಾಪಾರ ಪದ್ದತಿಯಿಂದ ಗ್ರಾಹಕನಿಗೆ ವಂಚನೆ ಮಾಡುವುದು, ಇದಲ್ಲದೆ ಕೆಲವು ಉತ್ಪಾದಕರು ಹೆಚ್ಚು ಲಾಭ ಗಳಿಸಲು ಕಲಬೆರಕೆ ಮಾಡುವುದು, ನಕಲಿ ಉತ್ಪನ್ನಗಳನ್ನು ತಯಾರಿ ಮಾಡುವುದು ಇದರ ಜೊತೆಯಲ್ಲಿ ಜಾಹೀರಾತುಗಳಲ್ಲಿ ಸಿನಿಮಾ ತಾರೆಯರನ್ನು ಬಳಸಿ ವಿವಿಧ ಬಹುಮಾನಗಳನ್ನು ಘೋಷಿಸಿ ಆಮಿಷವನ್ನು ತೋರಿಸುವುದರ ಮೂಲಕ ವಸ್ತುವಿನ ಮೂಲ ಗುಣಧರ್ಮವನ್ನು ಮರೆಮಾಡಿ ಗ್ರಾಹಕನಿಗೆ ವಂಚಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಿವಮೊಗ್ಗ ಬಳಕೆದಾರರ ಪತ್ರಿಕೆಯ ಸಂಪಾದಕ ಸಿ.ಎಲ್. ರಮೇಶ್ ಮಾತನಾಡುತ್ತಾ ಭಾರತ ಸರ್ಕಾರವು ಸಹ ದೀರ್ಘ ಸಮಾಲೋಚನೆ ನಂತರ ಗ್ರಾಹಕರ ರಕ್ಷಣೆಗಾಗಿ ಡಿಸೆಂಬರ್ 24, 1986ರಂದು ಗ್ರಾಹಕ ಸಂರಕ್ಷಣಾ ಅಧಿನಿಯಮ 1986ನ್ನು ಜಾರಿಗೆ ತಂದಿತು. ಈ ಅಧಿನಿಯಮ ಗ್ರಾಹಕರಿಗೆ ನಿರ್ದಿಷ್ಟ ಹಕ್ಕುಗಳನ್ನು ನೀಡಿ ಆ ಹಕ್ಕುಗಳ ಉಲ್ಲಂಘನೆಗೆ ಪರಿಹಾರ ಸೂಚಿಸಿ, ಅವರಿಗೆ ಕಡಿಮೆ ವೆಚ್ಚದಲ್ಲಿ ಮತ್ತು ತೀವ್ರವಾಗಿ ನ್ಯಾಯ ದೊರಕಿಸಿಕೊಡುವ ಉದ್ದೇಶವನ್ನು ಹೊಂದಿದೆ. ಗ್ರಾಹಕರು ತಮಗೆ ಆದ ಮೋಸದ ಬಗ್ಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೂಲಕ ನ್ಯಾಯವನ್ನು ದೊರಕಿಸಿಕೊಳ್ಳಲು ಸಂಪರ್ಕಿಸುವಂತೆ ತಿಳಿಸಿದರು.
ಗ್ರಾಹಕರ ಹಕ್ಕುಗಳ ರಕ್ಷಣೆಗೆ ಅಗತ್ಯ ಮಾರ್ಗಗಳನ್ನು ರೂಪಿಸುವುದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಯ ಮುಖ್ಯ ಉದ್ದೇಶವಾಗಿದೆ ಎಂದು ಜಿ.ಗ್ರಾ.ವ್ಯಾ.ಪ.ಆಯೋಗದ ಸದಸ್ಯೆ ಸವಿತಾ ಪಟ್ಟಣಶೆಟ್ಟಿ ತಿಳಿಸಿದರು.
ಕೆ.ಎನ್. ರುದ್ರಪ್ಪ ಕೊಳಲೆ, ಅದ್ಯಕ್ಷರು, ಜಿಲ್ಲಾ ಬಳಕೆದಾರರ ವೇದಿಕೆ , ಬಿ ಎಸ್ ನಾಗರಾಜ್, ಕಾರ್ಯದರ್ಶಿ, ಜಿಲ್ಲಾ ಬಳಕೆದಾರರ ವೇದಿಕೆ, ಡಾ||. ಎಚ್. ಟಿ. ಕೃಷ್ಣಮೂರ್ತಿ, ಪ್ರಾಂಶುಪಾಲರು, ಡಿವಿಎಸ್ ಪದವಿ ಕಾಲೇಜು,. ಎಸ್ ಮಂಜುನಾಥ್, ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ. ಎಂ. ಎಂ. ಜಯಸ್ವಾಮಿ ಸಂಚಾಲಕರು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ. ಡಾ|| ಬಿ. ಟಿ ಮಂಜುನಾಥನ. ಜಂಟಿ ನಿರ್ದೇಶಕರು ಆಹಾರ ನಾಗರೀಕ ಸಂಸ್ಥೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here