ಅವಳಿ ಜಿಲ್ಲೆಗಳಾದ್ಯಂತ ಬೃಹತ್ ಲಸಿಕಾ ಮೇಳ ನ.17 ರಂದು ಕೋವಿಡ್‍ನಿಂದ ಸುರಕ್ಷಿತವಾಗಿರಲು ಲಸಿಕೆ ಪಡೆದುಕೊಳ್ಳಿ: ಡಿಸಿ ಮಾಲಪಾಟಿ

0
148

ಬಳ್ಳಾರಿ,ನ.15 : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಾದ್ಯಂತ ಬೃಹತ್ ಲಸಿಕಾ ಮೇಳ ಇದೇ ನ.17ರಂದು ನಡೆಯಲಿದೆ. ಕೋವಿಡ್‍ನಿಂದ ಸುರಕ್ಷಿತವಾಗಿರಲು ಮತ್ತು ಮುಂದೆ ಬರುವ ಕೋವಿಡ್ ಅಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಲಸಿಕೆಯೊಂದೆ ಪರಿಹಾರವಾಗಿದ್ದು,ಇದುವರೆಗೆ ಲಸಿಕೆ ಪಡೆಯದವರು ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಸೋಮವಾರ ಮಾತನಾಡಿದರು.
ಕೋವಿಡ್ ಲಸಿಕೆ ಪಡೆಯುವುದಕ್ಕೆ ಅವಳಿ ಜಿಲ್ಲೆಗಳಾದ್ಯಂತ 20.68ಲಕ್ಷ ಅರ್ಹರ ಗುರಿ ಇದ್ದು,ಇದುವರೆಗೆ 1794972 ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 9.40ಲಕ್ಷ ಜನರು 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯುವುದಕ್ಕಿರುವ ಅವಧಿ ಮುಗಿದಿರುವ 1.64ಲಕ್ಷ ಜನರಿದ್ದಾರೆ ಎಂದು ವಿವರಿಸಿದ ಡಿಸಿ ಮಾಲಪಾಟಿ ಅವರು ಎರಡನೇ ಡೋಸ್ ಡ್ಯೂ ಇರುವವರು ಇದೇ ನ.17ರಂದು ಜರುಗುವ ಬೃಹತ್ ಲಸಿಕಾಮೇಳಕ್ಕೆ ಆಗಮಿಸಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಯುರೋಪ್ ಖಂಡದ ವಿವಿಧ ದೇಶಗಳಲ್ಲಿ ಮತ್ತೇ ಮೂರನೇ ಅಲೆ ಅಪ್ಪಳಿಸಿದ್ದು,ಲಾಕ್‍ಡೌನ್ ಮಾಡಲಾಗುತ್ತಿದೆ;ನಮ್ಮಲ್ಲೇನಾದರೂ ಆದರೇ ಲಸಿಕೆ ಪಡೆಯದವರೇ ಅಪಾಯಕ್ಕೊಳಗಾಗುವುದು ಗ್ಯಾರಂಟಿ ಈ ಹಿನ್ನೆಲೆಯಲ್ಲಿ ಭಯ ಸೇರಿದಂತೆ ನಾನಾಕಾರಣಗಳಿಂದ ಲಸಿಕೆ ಪಡೆಯದವರು ಸಹ ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡವರು ಸಹ ತಮ್ಮ ಸುತ್ತಮುತ್ತಲು ಲಸಿಕೆ ಹಾಕಿಸಿಕೊಳ್ಳದವರಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಮನೆ ಮನೆ ಸಮೀಕ್ಷೆ ಮಾಡಿ ಲಸಿಕೆ ನೀಡುವುದಕ್ಕೆ ಭಾರತ ಸರಕಾರ ನಿರ್ದೇಶನ ನೀಡಿದ್ದು,ನ.30ರೊಳಗೆ ಗುರಿ ನಿಗದಿಪಡಿಸಿ ಕಾರ್ಯನಿರ್ವಹಿಸಲು ತಿಳಿಸಿದ್ದು,ಅದರಂತೆ ಕ್ರಮವಹಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here