ಕೈಗಾರಿಕಾ ನಿವೇಶನ ಹಂಚಿಕೆ ಅರ್ಜಿಗಳ ಅನುಮೋದನೆ ಪಡೆದುಕೊಳ್ಳವಂತೆ ಸೂಚನೆ:ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

0
112

ಯಾದಗಿರಿ.ಫೆ.:- ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಹಂಚಿಕೆಯಾಗಿರುವ ಘಟಕಗಳಿಗೆ ಕೈಗಾರಿಕೆ ಸ್ಥಾಪಿಸುವ ಕುರಿತು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಕೆ.ಐ.ಎ.ಡಿ.ಬಿ ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ವಿದ್ಯುತ್ ಸಂಪರ್ಕ ಕಲ್ಪಿಸಲು ಕೈಗೆತ್ತಿಕೊಳ್ಳಲಾಗಿರುವ ವಿದ್ಯುತ್ ಉಪ ಕೇಂದ್ರದ ಕಾಮಗಾರಿಗಳನ್ನು ನಿಗತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಕಡೆಚೂರ ಹಾಗೂ ಮುಂಡರಗಿ ಸೇರಿದಂತೆ ವಿವಿಧ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಉದ್ದಿಮೆ ಸ್ಥಾಪನೆಗೆ ನಿವೇಶನ ಪಡೆದಿದ್ದು, ಕೆಲ ಕೈಗಾರಿಕೋದ್ಯಮಿಗಳು ಉದ್ದಿಮೆ ಸ್ಥಾಪನೆ ಮಾಡದಿರುವುದರಿಂದ ಹಂಚಿಕೆ ಮಾಡಲಾದ ನಿವೇಶನವನ್ನು ನಿಯಮಾನುಸಾರ ರದ್ದತಿಗೆ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ನಿವೇಶನ ಪಡೆದ ಕೈಗಾರಿಕೋದ್ಯಮಿಗಳು ಘಟಕ ಸ್ಥಾಪಿಸಿ ಉದ್ಯೋಗ ನೀಡುವಂತಾಗಬೇಕು. ಆದರೆ ಕೆಲವು ನಿವೇಶನಗಳು ಇಲ್ಲಿ ಖಾಲಿ ಉಳಿದಿದ್ದು ನಮ್ಮ ಗಮನಕ್ಕೆ ಬಂದಿದ್ದು ತೀವ್ರ ಬೇಸರದ ಸಂಗತಿಯಾಗಿದ್ದು, ಇಂತಹ ನಿವೇಶನಗಳು ರದ್ದುಗೊಳಿಸಿ ಅರ್ಹರಿಗೆ ಮರು ಹಂಚಿಕೆ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದಿನ ದಿನಮಾನದಲ್ಲಿ ಕೈಗಾರಿಕೆ ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಹೀಗಾಗಿ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ನೀಡಲು ಮುಂದೆ ಬರುವ ಉದ್ಯಮಿಗಳಿಗೆ ಅನಗತ್ಯ ತೊಂದರೆ ನೀಡದೆ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಅಗತ್ಯವಿದೆ. ಹೀಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಕೆ.ಐ.ಎ.ಡಿ.ಬಿ., ಕೆ.ಎಸ್.ಎಸ್.ಐ.ಡಿ.ಸಿ. ಅಧಿಕಾರಿಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಉದ್ಯಮಿದಾರರಿಗೆ ಸೂಕ್ತ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಮಾಣಿಕ ವಿ.ರಘೋಜಿ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಪರಿಸರ ಮಾಲಿನ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿಯಾದ ವೆಂಕಟೇಶ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಅಧಿಕಾರಿಯಾದ ಪ್ರಕಾಶ, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿಯಾದ ರೇಖಾ ಮ್ಯಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here