ಚಿತ್ರರಂಗದ ಸುಂದರ ಪ್ರತಿಬಾವಂತ ನಟ ನೀರ್ನಳ್ಳಿ ರಾಮಕೃಷ್ಣ

0
250

ನೀರ್ನಳ್ಳಿ ರಾಮಕೃಷ್ಣ ಕನ್ನಡ ಚಿತ್ರರಂಗದ ಸುಂದರ ಪ್ರತಿಭಾವಂತ ನಟ. ಸೌಂದರ್ಯ, ಪ್ರತಿಭೆ ಎರಡೂ ಇದ್ದು ಮೇರುನಟರಾಗಬಹುದಾದ ಅದೃಷ್ಟ ಅವರಿಗೆ ಯಾಕೋ ಒಲಿಯಲಿಲ್ಲ. ಇಂದು ರಾಮಕೃಷ್ಣ ಹುಟ್ಟಿದ ದಿನ ಅಂತ ಗೆಳೆಯರು ಹೇಳಿದರು.

ರಾಮಕೃಷ್ಣ ಅವರು 1954ರ ವರ್ಷದಲ್ಲಿ ಜನಿಸಿದರು. ಅವರದ್ದು ಮಲೆನಾಡಿನ ಸಿರಸಿ ಸಮೀಪದ ಪುಟ್ಟ ಊರು. ಕೃಷಿಕರ ಹಾಗೂ ಕಲಾವಿದರ ನೆಲೆವೀಡು. ಈ ಊರಿನ ರಾಮಕೃಷ್ಣ, ಇಡೀ ರಾಜ್ಯಕ್ಕೆ ನೀರ್ನಳ್ಳಿ ರಾಮಕೃಷ್ಣಎಂದೇ ಪರಿಚಿತರು.

ರಾಮಕೃಷ್ಣರು ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಕಲಿತರು. ಗದಾಯುದ್ಧದ ಭೀಮನಾಗಿ, ದುರ್ಯೋದನನ ತೊಡೆ ಮುರಿದಿದ್ದರು. ಮೀಸೆ ಮೂಡುವ ಮುನ್ನವೇ ನಾಟಕ ಆಡುವ ಖಯಾಲಿ ಅವರಲ್ಲಿ ಬೆಳೆದಿತ್ತು. ಇವರಿಗೆ ಮಾಪಾರಿ, ಎಸ್‌.ಜಿ. ಪ್ರಾಥಃಕಾಲರು ಬಣ್ಣ ಹಚ್ಚಿಸಿದರು. ಗುಬ್ಬಿ ವೀರಣ್ಣ ಕಂಪನಿಯ ನಾಟಕ ಬಂದಾಗ ಅದರಲ್ಲಿದ್ದ ಕಲಾವಿದರನ್ನು ಪರಿಚಯ ಮಾಡಿಕೊಂಡರು. ಎಸ್ಸೆಸ್ಸೆಲ್ಸಿ ಮುಗಿಸು, ಪಿಯುಸಿ ಮುಗಿಸು, ಬಿಎ ಮುಗಿಸಿ ಬಾ ಎಂದು ವೀರಣ್ಣನವರ ಹಿರೇ ಮಗಳು ಸುವರ್ಣಮ್ಮ ಹೇಳುತ್ತಿದ್ದರು. ಅವರಿಗೆ ರಾಮಕೃಷ್ಣ ಅವರನ್ನು ಕಂಡರೆ ಅಕ್ಕರೆ, “ಇವನು ನನ್ನ ಸಾಕು ಮಗ” ಎಂದು ಆಗಾಗ ಹೇಳುತ್ತಿದ್ದರಂತೆ. ರಾಮಕೃಷ್ಣ ಅವರು ತಮ್ಮ ಊರಿನ ಮೊದಲ ಬಿ.ಎ. ಪದವೀಧರ ಎನಿಸಿದರು.

ಮುಂದೆ ಸುವರ್ಣಮ್ಮನವರೇ ರಾಮಕೃಷ್ಣರನ್ನು ಡಾ. ರಾಜಕುಮಾರ್‌ ಅವರಿಗೂ ಪರಿಚಯ ಮಾಡಿಕೊಟ್ಟರು. ಅಣ್ಣಾವ್ರು ರಾಮಕೃಷ್ಣರಿಂದ ಬಬ್ರುವಾಹನ ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿಸಿದರು. ಬಬ್ರುವಾಹನ ಚಿತ್ರದಲ್ಲಿ ಇವರಿಗೆ ಸಿಕ್ಕಿದ್ದು 5 ಸಾವಿರ ರೂಪಾಯಿ. ನಂತರ ಅವರು ಮಾಡಿದ್ದು ಸುಮಾರು 200 ಚಿತ್ರ. ಪುಟ್ಟಣ್ಣ ಕಣಗಾಲರ ನಿರ್ದೇಶನದ
ಪಡುವಾರಳ್ಳಿ ಪಾಂಡವರು, ಅಮೃತ ಘಳಿಗೆ, ರಂಗನಾಯಕಿ, ಮಾನಸ ಸರೋವರ ಅಂತಹ ಚಿತ್ರಗಳಲ್ಲಿ ಅಭಿನಯಿಸಿದರು. ಕೆ. ಬಾಲಚಂದರ್ ನಿರ್ದೇಶನದಲ್ಲಿ ತಮಿಳು ಚಿತ್ರದ ನಾಯಕನಾಗಿದ್ದರು. ಅವರದೇ ನಿರ್ದೇಶನದ ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರದಲ್ಲೂ ಮನಸೆಳೆಯುವ ಅಭಿನಯ ನೀಡಿದ್ದರು. ನಾಗಾಭರಣರ ಪ್ರಾಯ ಪ್ರಾಯ ಪ್ರಾಯ ಅವರ ಮತ್ತೊಂದು ಚಿತ್ರ. ಅಂದಿನ ಯುಗದ ‘ಒಂದೇಗುರಿ’ ಅಂತಹ ಚಿತ್ರಗಳಿಂದ ಇತ್ತೀಚಿನ ಯುಗದ ಸುದೀಪ್ ಅವರ ‘ಬಚ್ಚನ್’ ಅಂತಹ ಅನೇಕ ಚಿತ್ರಗಳಲ್ಲಿ ಇಂದೂ ಅವರು ಆಗಾಗ ಪಾತ್ರ ಮಾಡುತ್ತಾ ಬಂದಿದ್ದಾರೆ.

ರಾಮಕೃಷ್ಣ ಇತ್ತೀಚಿನ ವರ್ಷಗಳಲ್ಲಿ ಸಿರಸಿಯ ನೀರ್ನಳ್ಳಿಯಲ್ಲಿ ಕೃಷಿಕರಾಗಿದ್ದಾರೆ. ತಮ್ಮ ಊರಿನ ಮೂಲ ಕೃಷಿಯಾದ ಅಡಿಕೆ ಬೆಳೆ ಬೆಳೆಯುವಲ್ಲಿ ತೊಡಗಿಕೊಂಡಿರುವ ರಾಮಕೃಷ್ಣ, ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿನ ಕಡೆ ಬರುತ್ತಾರೆ. ನಾಲ್ಕೈದು ದಿನ ನಿಯತ್ತಾಗಿ ನಟಿಸಿ, ತಮ್ಮ ಸಂಭಾವನೆ ಪಡೆದು ಮತ್ತೆ ಸಿರಸಿ ಕಡೆ ಹೊರಡುತ್ತಾರೆ. ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಆರಾಮದಿಂದ ಶುಭ್ರ ವಾತಾವರಣದಲ್ಲಿದ್ದಾರೆ. ಜೊತೆಗೆ ತಮ್ಮೂರಿನ ಕಡೆಯ ಹುಡುಗರಿಗಾಗಿ ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ಹಾಸ್ಟೆಲ್ ಒಂದನ್ನು ಕಟ್ಟಿದ್ದಾರೆ. ಬಡ ಹುಡುಗರು ಅಲ್ಲಿ ಇದ್ದು ವಿದ್ಯಾಭ್ಯಾಸ ಮಾಡಲಿ ಎನ್ನುವ ವಿಶಾಲ ಹೃದಯಿ ಅವರು.

ನೀರ್ನಳ್ಳಿ ರಾಮಕೃಷ್ಣರು ಚಲನಚಿತ್ರರಂಗದಲ್ಲಿ ಹೆಚ್ಚಿನ ರೀತಿಯಲ್ಲಿ ಸಾಧಿಸಬಹುದಾದ ಸಾಧ್ಯತೆ ಇದ್ದವರು ಎಂಬುದು ಕಲಾಭಿಮಾನಿಗಳ ಒಮ್ಮತದ ಅಭಿಪ್ರಾಯ. ಬದುಕು ಎಂಬುದು ಒಂದೇ ರೀತಿಯ ಸಾಧನೆ ಇಂದಲೇ ಆಗಬೇಕಿಂದಿಲ್ಲ. ಅವರು ಕೃಷಿ ಮತ್ತು ಕಲೆ ಎರಡನ್ನೂ ಸಂತಸದಿಂದ ಜೊತೆಗೂಡಿಸಿಕೊಂಡು ಹೋಗುತ್ತಿದ್ದಾರೆ ಎಂಬುದು ಸಂತಸದ ವಿಷಯ. ಅವರಿಗೆ ಶುಭ ಹಾರೈಸೋಣ.

LEAVE A REPLY

Please enter your comment!
Please enter your name here