ಮೈಲಾರ:ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ;5 ಕಡೆ ಚೆಕ್‍ಪೋಸ್ಟ್ ಸ್ಥಾಪನೆ ಮೈಲಾರ ಕಾರ್ಣಿಕೋತ್ಸವ,ಕುರವತ್ತಿ ಜಾತ್ರೆಗೆ ಸಾರ್ವಜನಿಕರು ಭಾಗವಹಿಸುವಿಕೆ ಸಂಪೂರ್ಣ ನಿಷೇಧ: ಡಿಸಿ ಮಾಲಪಾಟಿ

0
163

ಬಳ್ಳಾರಿ,ಫೆ.16 : ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗ ಸ್ವಾಮಿಯ ವಾರ್ಷಿಕ ಜಾತ್ರಾ ಕಾರ್ಣಿಕೋತ್ಸವ ಹಾಗೂ ಕುರವತ್ತಿಯ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು,ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯೇ ಸಂಹಿತೆ 1973ರ ಕಲಂ 144 ಸೆಕ್ಷನ್ ಜಾರಿ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಮೈಲಾರಲಿಂಗ ಸ್ವಾಮಿಯ ವಾರ್ಷಿಕ ಜಾತ್ರೆಯು ಫೆ.19ರಿಂದ ಮಾ.2ರವರೆಗೆ ಜರುಗಲಿದ್ದು,ಮಾ.1ರಂದು ಕಾರ್ಣಿಕೋತ್ಸವ ನಡೆಯಲಿದೆ. ಈ ಜಾತ್ರೆಯ ಕಾರ್ಣಿಕೋತ್ಸವವನ್ನು ವಿಕ್ಷಿಸಲು ರಾಜ್ಯದ ನಾನಾ ಕಡೆಯಿಂದ ಸುಮಾರು 09 ರಿಂದ 10 ಲಕ್ಷ ಜನರು ಸೇರುತ್ತಾರೆ ಮತ್ತು ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವವು ಮಾ.7ರಿಂದ 15ರವರೆಗೆ ಜರುಗಲಿದೆ. ಈ ಸದರಿ ದಿನಗಳಂದು 144 ಸೆಕ್ಷನ್ ಜಾರಿಗೊಳಿಸುವುದರ ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ. ಆದರೆ ರೂಢಿ ಸಂಪ್ರದಾಯದ ಪೂಜಾ ಕೈಂಕರ್ಯಗಳನ್ನು, ಕಾರ್ಣಿಕೋತ್ಸವ, ರಥೋತ್ಸವ ಧಾರ್ಮಿಕ ಆಚರಣೆಗಳನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲು ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.
ಸಾರ್ವಜನಿಕರು ಈ ವರ್ಷ ಮೈಲಾರ ಶ್ರೀ ಮೈಲಾರಲಿಂಗ ಸ್ವಾಮಿ ಕಾರ್ಣಿಕೋತ್ಸವ ಕಾರ್ಯಕ್ರಮದಲ್ಲಿ ಮತ್ತು ಕುರುವತ್ತಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಭಾಗವಹಿಸದಂತೆ ಮನವಿ ಮಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಈ ಬಾರಿ ಭಕ್ತಾದಿಗಳು ತಮ್ಮ ತಮ್ಮ ಮನೆಯಲ್ಲಿಯೇ ಮೈಲಾರಲಿಂಗರನ್ನು ಪೂಜಿಸಿ ಎಂದರು.
ಜಾತ್ರಾ ಮಹೋತ್ಸವ ಪ್ರಯುಕ್ತ ಮೈಲಾರ ಮತ್ತು ಕುರುವತ್ತಿ ಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ, ಜಾತ್ರಾ ಪ್ರದೇಶದಲ್ಲಿ ವಾಣಿಜ್ಯ ವಹಿವಾಟುಗಳನ್ನು ನಡೆಸಲು ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಫೆ.15ರಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೊರಡಿಸಿದ ಕೋವಿಡ್ ನಿಯಮಾವಳಿಗಳ ಅನುಸಾರ ಕಾರ್ಣಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ ಡಿಸಿ ಮಾಲಪಾಟಿ ಅವರು ಈ ಅಂಶಗಳನ್ನು ವಿವಿಧ ಮಾಧ್ಯಮಗಳ ಮೂಲಕ ಫ್ಲೇಕ್ಸ್, ಬ್ಯಾನರ್, ಪೋಸ್ಟ್‍ರ್ಸ್ ಹಾಕಿ ಸಾಕಷ್ಟು ಪ್ರಚುರಪಡಿಸಲಾಗುವುದು. ಹರಪನಹಳ್ಳಿ, ಹೂವಿನಹಡಗಲಿ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಹಾಕುವ ಮೂಲಕವಾಗಿ ಪ್ರಚಾರ ಪಡಿಸಲು ಕ್ರಮ ಜರುಗಿಸಲಾಗುವುದು ಎಂದರು.
ಹಾವೇರಿ,ಗದಗ,ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಸಹ ಈ ವಿಷಯವನ್ನು ಪ್ರಸ್ತಾಪಿಸಿ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ವಿವರಿಸಿದರು.
ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವ ಹಾಗೆ ದ್ವನಿ ವರ್ಧಕ ವ್ಯವಸ್ಥೆ ಮತ್ತು ಕಾರ್ಣಿಕ ನುಡಿಯನ್ನು ಸೆರೆಯಿಡಿಯಲು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ರೇಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ನಿರ್ವಹಿಸಲಾಗುವುದು ಮತ್ತು ಕಾರ್ಣಿಕ ನುಡಿಯನ್ನು ಮಾಧ್ಯಮಗಳ ಮೂಲಕ ಪ್ರಚಾರಪಡಿಸಲು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಭಕ್ತಾಧಿಗಳಿಗೆ ಮೈಲಾರ ಗ್ರಾಮದಲ್ಲಿ ಫೆ.19ರಿಂದ ಮಾ.2ರವರೆಗೆ ವಾಸ್ತವ್ಯ ಮಾಡಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.
ಮೈಲಾರ,ಕುರುವತ್ತಿ ಗ್ರಾಮದ ಜಮೀನುಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲು ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಪ್ರತಿ ವರ್ಷದಂತೆ ವೈದ್ಯರ ಸಿಬ್ಬಂದಿಗಳನ್ನು ನಿಯೋಜಿಸಿ ಅಗತ್ಯ ಕ್ರಮ ಜರುಗಿಸಲು ಮತ್ತು ಮೋಬೈಲ್ ವೈದ್ಯಾಧಿಕಾರಿಗಳ ತಂಡ ಕಾರ್ಣಿಕೋತ್ಸವ ನಡೆಯುವ ವೈದಾನದಲ್ಲಿ ಕಾರ್ಯನಿರ್ವಹಿಸಲು ಕ್ರಮ ಜರುಗಿಸಲಾಗಿದೆ.
ಪ್ರತಿ ವರ್ಷದಂತೆ ಭದ್ರ ಜಲಾಶಯದಿಂದ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರನ್ನು ತುಂಗ ಭದ್ರ ನದಿಗೆ ನೀರನ್ನು ಹರಿಸಲು ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ನೀರನ್ನು ಹರಿಸಲು ಅಗತ್ಯ ಕ್ರಮ ಜರುಗಿಸಲಾಗಿದೆ ಎಂದರು.

5 ಕಡೆ ಚೆಕ್‍ಪೋಸ್ಟ್ ಕಾರ್ಯಾರಂಭ: ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಕಾರ್ಣಿಕೋತ್ಸವಕ್ಕೆ ಮೈಲಾರ ಗ್ರಾಮದ ಭಕ್ತಾದಿಗಳನ್ನು ಹೊರತುಪಡಿಸಿ ಹೊರಗಡೆಯಿಂದ ಭಕ್ತರು ಮತ್ತು ಸಾರ್ವಜನಿಕರು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ 5 ಕಡೆ ಚೆಕ್‍ಪೋಸ್ಟ್‍ಗಳನ್ನು ಹಾಕಲು ಉದ್ದೇಶಿಸಲಾಗಿದ್ದು,ಅವುಗಳು ಫೆ.19ರ ಮಧ್ಯಾಹ್ನದಿಂದಲೇ ಕಾರ್ಯಾರಂಭವಾಗಲಿದ್ದು,ಮಾ.2ರ ಸಂಜೆಯವರೆಗೆ ಇರಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ವಿವರಿಸಿದರು.
ಪೂಜಾರ ಪೆಟ್ರೋಲ್ ಬಂಕ್,ಕುರವತ್ತಿ ಕ್ರಾಸ್,ಗುತ್ತಲ್ ಕ್ರಾಸ್,ಡೊಂಗರಹಳ್ಳಿ,ಕುರವತ್ತಿ ಗಣೇಶ ಮಂದಿರದ ಹತ್ತಿರ ಚೆಕ್‍ಪೋಸ್ಟ್‍ಗಳನ್ನು ಪೊಲೀಸ್ ಇಲಾಖೆ ವತಿಯಿಂದ ಹಾಕಲಾಗುತ್ತಿದ್ದು,ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ವಿವರಿಸಿದ ಎಸ್ಪಿ ಸೈದುಲು ಅಡಾವತ್ ಅವರು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಈ ಕುರಿತು ಜನರಿಗೆ ನಮ್ಮ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.

ತಿಮ್ಮಲಾಪುರದಲ್ಲಿ ಫೆ.20ರಂದು ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ತಿಮ್ಮಲಾಪುರ ಗ್ರಾಮದಲ್ಲಿ ಫೆ.20ರಂದು ಗ್ರಾಮವಾಸ್ತವ್ಯವನ್ನು ಮಾಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಳಿಸಿದರು.
ಅಂದು ಗ್ರಾಮದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗ್ರಾಮದ ಜನರಿಂದ ಪಿಂಚಣಿ ಸಂಬಂಧಿತ ಸಮಸ್ಯೆಗಳು,ಕಂದಾಯ ಹಾಗೂ ಭೂ ಸಂಬಂಧಿತ ಸಮಸ್ಯೆಗಳು,ರೇಷನ್ ಕಾರ್ಡ್ ಸಮಸ್ಯೆಗಳನ್ನು ಆಲಿಸಲಾಗುವುದು.ಸ್ಥಳದಲ್ಲಿಯೇ ಪರಿಹಾರ ದೊರಕುವಂತಿದ್ದರೇ ಅವುಗಳನ್ನು ಅಲ್ಲಿಯೇ ಬಗೆಹರಿಸಲಾಗುವುದು.ಉಳಿದವುಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮದಲ್ಲಿರುವ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು; ಗ್ರಾಮದ ಸೌಕರ್ಯಗಳನ್ನು ಪರಿಶೀಲಿಸಲಾಗುವುದು;ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು. ಈ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here