ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನ ಆಚರಣೆ 10 ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ; ನಾವೆಲ್ಲರೂ ಸಮಗ್ರತೆಯಿಂದ ಕೆಲಸ ಮಾಡಬೇಕು: ಎಸ್‍ಪಿ ಸೈದುಲು ಅಡಾವತ್

0
141

ಬಳ್ಳಾರಿ,ಏ.21: ಜನರ ಸೇವೆಯೇ ಸರಕಾರಿ ನೌಕರರ ಆದ್ಯ ಕರ್ತವ್ಯವಾಗಿದ್ದು, ಎಲ್ಲರೂ ಒಂದುಗೂಡಿ ಜನರಿಗೆ ಸರಕಾರದ ಯೋಜನೆಗಳು ಹಾಗೂ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಕೆಲಸ ಮಾಡಬೇಕು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಥಮ ವರ್ಷದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಾವೆಲ್ಲರೂ ಸರ್ಕಾರಿ ನೌಕರರಾಗಿದ್ದು,ವಿಶೇಷ ವರ್ಗಕ್ಕೆ ಸೇರಿದವರಾಗಿದ್ದೇವೆ. ಆದ್ದರಿಂದ ನಾವೆಲ್ಲರೂ ಕಾನೂನುಬದ್ಧವಾಗಿ ಮತ್ತು ಒಂದುಗೂಡಿ ಸೇವೆ ಒದಗಿಸುವ ಕೆಲಸ ಮಾಡಬೇಕು;ಇದರಿಂದ ಜನರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಜನರು ಯಾವುದೇ ಒಂದು ಯೋಜನೆಯ ಕುರಿತಾಗಿ ಅದರ ಸೌಲಭ್ಯ ಪಡೆಯಲು ಬಂದಾಗ ಅವರೊಂದಿಗೆ ಸಂಯಮದಿಂದ ವರ್ತಿಸಿ ಅವರ ಅಹವಾಲುಗಳನ್ನು ಆಲಿಸಬೇಕು ಮತ್ತು ಅವರಿಗೆ ಉತ್ತಮ ಸೇವೆ ಒದಗಿಸಬೇಕು;ಇದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು. ಜನರ ಸೇವೆ ಮಾಡುವುದು ಒಂದು ಉತ್ತಮ ಕೆಲಸ ಎಂದು ಹೇಳಿದರು.
ಖಾಸಗಿ ನೌಕರರಿಗೆ ಹೋಲಿಸಿದರೆ ನಮ್ಮ ಸೇವೆಯು ಅತ್ಯಂತ ಉತ್ತಮವಾದ ಸೇವೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕರ್ನಾಟಕ ಭಾಗದಲ್ಲಿ ನೋಡುವುದಾದರೆ ಅಲ್ಲಿನ ನೌಕರರು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿನ ಆಡಳಿತವು ಮುಂಚೂಣಿಯಲ್ಲಿದೆ. ಆದ್ದರಿಂದ ನಾವು ಕೂಡ ಅದೇ ರೀತಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದ ಅವರು, ತಿಂಗಳಿಗೊಮ್ಮೆ ಕಾನೂನು, ಸಮಾಜ ಕಲ್ಯಾಣ ಚಟುವಟಿಕೆಗಳು ಸೇರಿದಂತೆ ಒಂದು ಬಾರಿಯಾದರೂ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಇದರಿಂದಾಗಿ ನೌಕರರು ಹೆಚ್ಚು ಕ್ರೀಯಾಶಿಲವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊರೋನಾ ಸಮಯದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ನೌಕರರಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಖಜಾನೆ ಇಲಾಖೆಯ ಉಪ ನಿರ್ದೇಶಕರಾದ ಜಿ.ಸುರೇಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ ಹೆಚ್.ದಾನಪ್ಪನವರ್, ಕಾರೇಕಲ್ಲು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲೀಲಾವತಿ, ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣನಾಯ್ಕ, ಸಿರುಗುಪ್ಪದ ಭೂಮಾಪನಾ ಇಲಾಖೆಯ ಭೂ ಮಾಪಕರಾದ ಯಂಜಾರಪ್ಪ.ಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಸಾಯಿಪ್ರಭ, ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ನಟರಾಜ, ಜಿಲ್ಲಾ ಪೊಲೀಸ್ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಸುನಂದಾ, ಸಹಾಯಕ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಶಾಂತಕುಮಾರ್, ತೋರಣಗಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ಡಿ ನೌಕರರಾದ ಶಿವರಾಜ ಸೇರಿದಂತೆ 10 ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ.ಶಿವಾಜಿರಾವ್, ಪ್ರಧಾನ ಕಾರ್ಯದರ್ಶಿ ಜಿ.ಕೆ.ರಾಮಕೃಷ್ಣ, ಖಜಾಂಚಿ ಎಸ್.ಎಂ.ಭದ್ರಯ್ಯ, ಗೌರವಾಧ್ಯಕ್ಷರಾದ ಪಿ.ನಾಗರಾಜ, ಕಾರ್ಯಾಧ್ಯಕ್ಷರಾದ ಎಂ.ಎ.ಆಸೀಫ್, ಹಿರಿಯ ಉಪಾಧ್ಯಕ್ಷರಾದ ಶರಣಬಸಪ್ಪ ಸೇರಿದಂತೆ ತಾಲೂಕು ಮಟ್ಟದ ಅಧ್ಯಕ್ಷರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ನೌಕರರು ಹಾಗೂ ನೌಕರರ ಸಂಘದ ಪ್ರಮುಖರು ಮತ್ತು ಸಾರ್ವಜನಿಕರು ಇದ್ದರು

LEAVE A REPLY

Please enter your comment!
Please enter your name here