ಕೋಗಿಲಗೇರಿ ಗ್ರಾಮದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಹೃದಯಪೂರ್ವಕ ಸ್ವಾಗತ ; ಗ್ರಾಮ ವೀಕ್ಷಣೆ ಅಹವಾಲು ಸ್ವೀಕಾರ

0
96

ಧಾರವಾಡ ಫೆ.20: ಅಳ್ನಾವರ ತಾಲೂಕಿನ ಅರವಟಗಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕೋಗಿಲಗೆರಿ ಗ್ರಾಮಕ್ಕೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಯೋಜನೆಯಡಿ ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರು ಇಂದು ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದರು.

ಕೋಗಿಲಗೇರಿ ಗ್ರಾಮವು ಬಣ್ಣ ಬಣ್ಣದ ರಂಗೋಲಿ, ಮಾವಿನ ತಳಿರು, ತೋರಣಗಳಿಂದ ಸುಂದರವಾಗಿ ಕಂಗೋಳಿಸುತ್ತಿತ್ತು. ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಆರತಿ ಬೆಳಗಿ, ಉತ್ತರ ಕರ್ನಾಟಕ ಶೈಲಿಯ ಪೇಟ ತೊಡಿಸಿದರು. ವಿಶೇಷವಾಗಿ ಅಲಂಕಾರಗೊಂಡ ಎತ್ತಿನಗಾಡಿಯ ಮೂಲಕ ಜಿಲ್ಲಾಧಿಕಾರಿಗಳನ್ನು ಗ್ರಾಮಕ್ಕೆ ಸ್ವಾಗತಿಸಿಕೊಳ್ಳಲಾಯಿತು. ಜಿಲ್ಲೆಯ ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ., ತಹಶೀಲ್ದಾರ ಅಮರೇಶ ಪಮ್ಮಾರ ಅವರೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥ ರುದ್ರಪ್ಪಾ ತೋಟಗಾರ ಜಿಲ್ಲಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿದರು.

ಜಿಲ್ಲಾಧಿಕಾರಿಗಳು ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ತೆರಳಿ, ಪಡಿತರ ವಿತರಣೆ ಪರಿಶೀಲಿಸಿದರು. ಸೀಮೆಎಣ್ಣೆ ಬೇಡಿಕೆ ಕುರಿತು ಗ್ರಾಮಸ್ಥರ ಅಹವಾಲು ಆಲಿಸಿ, ಸರ್ಕಾರದ ಅನುಮತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಅವರು ಎಸ್‍ಸಿ, ಎಸ್‍ಟಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಓಣಿಗಳಿಗೆ ಭೇಟಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಮತ್ತು ರಸ್ತೆ, ಚರಂಡಿ ನಿರ್ಮಾಣ ಕುರಿತು ಜನರ ಮನವಿಗಳನ್ನು ಸ್ವೀಕರಿಸಿದರು. ಪೀರಪ್ಪ ಮರೆಪ್ಪ ಹುಲಸೇರ ಎಂಬ ಭೂ ರಹಿತ ರೈತನ ಮನೆ ಬಾಗಿಲಿಗೆ ತೆರಳಿ ಬಗರ್ ಹುಕುಂ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಕುರಿತು ಅಹವಾಲು ಆಲಿಸಿದರು. ಪಾಶ್ರ್ವವಾಯು ಪೀಡಿತನಾಗಿರುವ ಪೀರಪ್ಪನಿಗೆ ಸೂಕ್ತ ನೆರವು ಹಾಗೂ ಬಗರ್‍ಹುಕುಂ ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಭೂಮಿಯ ಒಡೆತನ ನೀಡುವ ಕುರಿತು ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಗ್ರಾಮದ ಎಸ್‍ಸಿ ಎಸ್‍ಟಿ ಕಾಲೋನಿಯಲ್ಲಿರುವ 2 ಗುಂಟೆ ಖಾಲಿ ಜಾಗೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂ.ಗಳನ್ನು ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹರಿಜನಕೇರಿಯ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಕಾಲೋನಿಯ ಯೋಜನೆಯಡಿ ಸುಮಾರು 20 ಲಕ್ಷದವರೆಗೆ ಅನುದಾನ ಲಭ್ಯವಿದ್ದು, ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಮಂಜೂರು ಮಾಡಿಸುವುದಾಗಿ ಮತ್ತು ಗ್ರಾಮ ಪಂಚಾಯತ್‍ದಿಂದ ಲಭ್ಯವಿರುವ 4 ಲಕ್ಷ ರೂ.ಗಳನ್ನು ಮತ್ತು ರಸ್ತೆ ಕಾಮಗಾರಿಗೆ 5 ಲಕ್ಷ ರೂ.ಗಳನ್ನು ಶೀಘ್ರವೇ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮದ ಅಗತ್ಯ ಬೇಡಿಕೆಗಳಲ್ಲಿ ಒಂದಾಗಿರುವ ಸ್ಮಶಾನ ಭೂಮಿ ಮಂಜೂರಾತಿಗೆ ಕ್ರಮ ಕೈಗೊಂಡು ಸ್ವತ: ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ವೇ ಅಧಿಕಾರಿಗಳಿಂದ ಜಮೀನು ಅಳತೆ ಮಾಡಿಸಿ ಸ್ಮಶಾನಭೂಮಿಗೆ ಗುರುತು ಕಲ್ಲು ಹಾಕಿಸಿದರು.

ಇಡೀ ದಿನ ಕೋಗಿಲಗೇರಿ ಗ್ರಾಮಸ್ಥರು ಹಾಗೂ ಅರವಟಗಿ ಗ್ರಾಮಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಿಂದ ಸಲ್ಲಿಕೆಯಾದ ಅಹವಾಲುಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕೋಗಿಲಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ವಾಸ್ತವ್ಯ ನೆನಪಿಗೆ ಜಿಲ್ಲಾಧಿಕಾರಿಗಳು ಸಸಿಗಳನ್ನು ನೆಟ್ಟರು.

ಅರವಟಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಮೀನಾಬಾಯಿ ಕಾಶಿನಗುಂಟೆ, ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ, ಅಳ್ನಾವರ ತಹಸೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here