ದೈವದತ್ತವಾಗಿ ನನ್ನ ಕೈ ಹಿಡಿದ ಗಂಡನ ಕೈ ಬಿಡುವುದೇ?ನಿಶ್ಚಿತವಾಗಿಯೂ ಇಲ್ಲ…

0
152

ಅವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
ಆದರೂ ಮೊಮ್ಮಗನ ಜತೆ ಕತ್ತಿ ಆಟ ಆಡುತ್ತಿದ್ದರು.ಮಧ್ಯೆ ಮಧ್ಯೆ ಎಡಗೈಯಿಂದ ಯಾರ ಅರಿವಿಗೂ ಬಾರದಂತೆ ಮುಖ ಒರೆಸಿಕೊಳ್ಳುವ ನೆವದಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರು.
ಅದನ್ನು ನೋಡಿದ್ದೇ ತಡ,ಆ ಬಂಗಲೆಯ ಲಾನ್ ನಲ್ಲಿ ನಿಂತಿದ್ದ ನನಗೆ ಸಂಕಟ ಶುರುವಾಯಿತು.ತಿರುಗಿ ಹೋಗಿ ಬಿಡೋಣ ಎಂಬ ಬಾವ.ಆದರೆ ಅದೇಕೋ ಏನೋ ಇದ್ದಕ್ಕಿದ್ದಂತೆ ಅವರು ತಿರುಗಿದರು.
ಅರೇ,ವಿಠ್ಠಲ್ ಮೂರ್ತಿ.ಎಷ್ಟು ಹೊತ್ತಾಯಿತು ಬಂದು?ಸುಮ್ಮನೆ ಮೊಮ್ಮಗನ ಜತೆ ಆಟ ಆಡುತ್ತಾ ಮೈ ಮರೆತು ಬಿಟ್ಟೆ ನೋಡು ಎಂದು ಒಂದೇ ಉಸಿರಿನಲ್ಲಿ ಹೇಳಿದರು.ಆದರೆ ಅವರ ಮನಸ್ಸು ದುಗುಡಕ್ಕೊಳಗಾಗಿದೆ,ಸಂಕಟದಲ್ಲಿದೆ,ತ್ರಾಣ ಕಳೆದುಕೊಂಡಿದೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
ನಾನು ಉಗುಳು ನುಂಗುತ್ತಾ ನಗಲು ಯತ್ನಿಸಿ,ನಮಸ್ಕಾರ ಸಾರ್ ಎಂದೆ.ಅಷ್ಟೊತ್ತಿಗಾಗಲೇ ಅವರು ಆವರೆಗೆ ಕತ್ತಿಯಂತೆ ಬೀಸುತ್ತಿದ್ದ ದೊಣ್ಣೆಯನ್ನು ಬದಿಗೆಸೆದು ನನ್ನ ಬಳಿ ಬಂದು ಬಿಟ್ಟಿದ್ದರು.ಆಗವರು ಕರ್ನಾಟಕದ ಉಪಮುಖ್ಯಮಂತ್ರಿ.ಹೆಸರು_
ಎಂ.ಪಿ.ಪ್ರಕಾಶ್!
ಕರ್ನಾಟಕದ ರಾಜಕಾರಣ ಮತ್ತು ಸಾಂಸ್ಕೃತಿಕ ಜಗತ್ತನ್ನು ಬಲ್ಲ ಎಲ್ಲರಿಗೂ ಎಂ.ಪಿ.ಪ್ರಕಾಶ್ ಗೊತ್ತಿರುತ್ತಾರೆ.ಇಷ್ಟು ವರ್ಷಗಳ ಅವಧಿಯಲ್ಲಿ ನಾನು ಕಂಡ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಪ್ರಕಾಶ್ ನಿಸ್ಸಂದೇಹವಾಗಿ ಮುಂಚೂಣಿಯಲ್ಲಿರುವವರು.
ರಾಜಕಾರಣಿಗಳ ಜತೆ ನಿಮಗೆ ಆತ್ಮೀಯತೆ ಬೆಳೆದರೆ ಆಫ್ ದಿ ರೆಕಾರ್ಡ್ ಸ್ಟೋರಿಗಳು ಸಹಜವಾಗಿಯೇ ದಕ್ಕುತ್ತವೆ.ಆದರೆ ಎಂ.ಪಿ.ಪ್ರಕಾಶ್ ಒಂದರ್ಥದಲ್ಲಿ ಬಯಸಿದ್ದನ್ನು ಕೊಡಬಲ್ಲ ಕಾಮಧೇನುವಿನ ತರ.ರಾಜಕಾರಣದಿಂದ ಹಿಡಿದು ಸಾಹಿತ್ಯ ಲೋಕದ ತನಕ,ಚಳವಳಿಗಳಿಂದ ಹಿಡಿದು ನಾಟಕಗಳ ತನಕ ಯಾರಿಗೆ ಯಾವ ವಿಷಯದ ಬಗ್ಗೆ ಆಸಕ್ತಿಯೋ?ಅದಕ್ಕೆ ತಕ್ಕಂತೆ ಪ್ರಕಾಶ್ ತಮ್ಮ ಮನಸ್ಸನ್ನು ಒಗ್ಗಿಸಿಕೊಂಡು ಮಾತನಾಡುತ್ತಿದ್ದರು.
ತಮ್ಮ ಜತೆ ಮಾತನಾಡಲು ಬಂದವರು ಏಕೆ ಬಂದಿದ್ದಾರೆ?ಎಂಬುದು ಪ್ರಕಾಶ್ ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದವರು ವಿರಳ.ನಾನಂತೂ ಅವರು ಅಧಿಕಾರದಲ್ಲಿರಲಿ,ಬಿಡಲಿ.ಮೇಲಿಂದ ಮೇಲೆ ಅವರನ್ನು ಭೇಟಿ ಮಾಡುತ್ತಲೇ ಇರುತ್ತಿದ್ದೆ.ಪ್ರತಿ ಸಲ ಹೋದಾಗಲೂ ರಾಜಕಾರಣದ ಹಲ ಮಗ್ಗಲುಗಳ ಕುರಿತು ವಿವರಿಸಿ ಅಚ್ಚರಿ ಮೂಡಿಸುತ್ತಿದ್ದರು ಪ್ರಕಾಶ್.
ಕೆಲವು ರಾಜಕಾರಣಿಗಳ ಬಳಿ ಸ್ಟೋರಿಗೆ ಅಂತ ಹೋದರೆ ಹಲಸಿನ ಹಣ್ಣನ್ನು ಕೈಯ್ಯಲ್ಲೇ ಬಗೆದು,ಮೈ ಕೈಯೆಲ್ಲಾ ಅಂಟು ಮಾಡಿಕೊಂಡು ಹಲಸಿನ ತೊಳೆ ತಿನ್ನುವ ಸ್ಥಿತಿ ಬರುತ್ತದೆ.ಆದರೆ ಪ್ರಕಾಶ್ ಅವರ ಬಳಿ ಅಂತಹ ಸಮಸ್ಯೆಯೇ ಇರುತ್ತಿರಲಿಲ್ಲ.ಎಲ್ಲವೂ ಸರಾಗ,ನೆಲದ ಸಂಪರ್ಕ ಕಳೆದುಕೊಂಡ ನೀರು,ಅಗಾಧವಾದ ಪ್ರಪಾತಕ್ಕೆ ನಿರುಮ್ಮಳ ಮನಸ್ಸಿನಿಂದ ಬೀಳುವ ಹಾಗೆ,ಒಂದೇ ಸಮನೆ ಹೇಳುತ್ತಾ ಹೋಗುತ್ತಿದ್ದರು.
ಆದರೆ ಅವತ್ತು ಪ್ರಕಾಶ್ ಮಾತನಾಡುವ ಮೂಡಿನಲ್ಲಿರಲಿಲ್ಲ ಎಂಬುದು ನನಗೆ ಗೊತ್ತಿತ್ತು.ಹೀಗಾಗಿ,ಸಾರ್,ಸುಮ್ಮನೆ ಬಂದೆ.ಆದರೆ ನೀವೇನೋ ನೋವಿನಲ್ಲಿದ್ದಿರಿ.ಹೀಗಾಗಿ ವಾಪಸ್ಸು ಹೋಗೋಣ ಅಂದುಕೊಂಡೆ.ಅಷ್ಟರಲ್ಲಿ ನೀವು ತಿರುಗಿ ನೋಡಿಬಿಟ್ಟಿರಿ.ಬೇಸರ ಮಾಡಿಕೊಳ್ಳಬೇಡಿ.ಮತ್ತೊಮ್ಮೆ ಬರುತ್ತೇನೆ ಎಂದೆ.
ಅದಕ್ಕವರು,ಅರೇ,ಜೀವನದಲ್ಲಿ ಸುಖಕ್ಕಿಂತ ದು:ಖ ಜಾಸ್ತಿ ವಿಠ್ಠಲಮೂರ್ತಿ.ಹಾಗಂತ ನಾವು ಊಟ ಮಾಡುವುದನ್ನು ನಿಲ್ಲಿಸುತ್ತೀವಾ?ಕೆಲಸ ಮಾಡುವುದನ್ನು ನಿಲ್ಲಿಸುತ್ತೀವಾ?ಸ್ವಲ್ಪ ಹೊತ್ತಿನ ಹಿಂದೆ ಒಂದು ಕತೆ ಓದಿದೆ.ನೋವು ತಡೆಯಲಾಗಲಿಲ್ಲ.ನನ್ನ ಬಾಲ್ಯದ ಸಹಪಾಠಿಯೊಬ್ಬಳ ಬದುಕಿನಲ್ಲಿ ಅಂತಹ ಘಟನೆ ನಡೆದಿದ್ದು ನೆನೆಸಿ ಕಣ್ಣೀರಾದೆ ಅಷ್ಟೇ ಎಂದರು.
ಅರೇ,ಕತೆ ಓದಿ ಅಳುವುದಾ?ಅಂತ ನಾನು ಯಕಲ ಮಕಲನಂತಾಗಿ ಹೋದೆ.ಹೀಗಾಗಿ ಅಚ್ಚರಿಯಿಂದ ಅವರ ಕಡೆ ನೋಡಿದೆ.ಒಬ್ಬ ಉಪಮುಖ್ಯಮಂತ್ರಿಯನ್ನೇ ಕಣ್ಣೀರು ಹಾಕುವ ಮಟ್ಟಕ್ಕೆ ಅಲುಗಾಡಿಸಿದ ಕತೆ ಅದ್ಯಾವುದಪ್ಪಾ?ಎಂಬ ಕುತೂಹಲ ಕಾಡತೊಡಗಿತು.
ನನ್ನ ಮನಸ್ಸನ್ನು ಅರಿತುಕೊಂಡವರಂತೆ ಪ್ರಕಾಶ್ ಎತ್ತಿದ ಮಾತಿಗೇ:ವಿಠ್ಠಲ್ ಮೂರ್ತಿ.ನೀವೂ ಆ ಕತೆ ಕೇಳಬೇಕು ಎಂದರು.ಅಷ್ಟೊತ್ತಿಗಾಗಲೇ ಕುಮಾರಕೃಪಾ ಹಿಂಭಾಗದ ಆ ಬಂಗಲೆಯ ಲಾನ್ ಮೇಲೆ ನಾವಿಬ್ಬರೂ ಎದುರಾ ಬದುರು ಖುರ್ಚಿ ಹಾಕಿಕೊಂಡು ಕುಳಿತಿದ್ದೆವು.
ಸಾರ್,ನಿಮ್ಮ ಮನಸ್ಸನ್ನೇ ಕಲಕಿದ ಕತೆ ಎಂದ ಮೇಲೆ ಕೇಳದೆ ಹೋಗಲು ಸಾಧ್ಯವಿಲ್ಲ.ಹೇಳಿ ಸಾರ್.ರಾಜಕಾರಣದ ಕತೆ ಯಾವತ್ತೂ ಇದ್ದಿದ್ದೇ ಅಂತ ನಾನು ಮೈ ಮನಸ್ಸುಗಳನ್ನು ಸಡಿಲಗೊಳಿಸಿಕೊಂಡು ಕುಳಿತೆ.ಪ್ರಕಾಶ್ ಹೇಳುತ್ತಾ ಹೋದರು.
ವಿಠ್ಠಲ್ ಮೂರ್ತಿ.ಈ ಕತೆ ತೆಲುಗಿನದು.ಆದರೆ ಯಾಕೆ ನನ್ನ ಮನಸ್ಸನ್ನು ಅಲುಗಾಡಿಸಿತು ಎಂದರೆ,ನನ್ನ ಬಾಲ್ಯದ ಸಹಪಾಠಿಯೊಬ್ಬಳ ಬದುಕು ಹೀಗೇ ಆಗಿತ್ತು.ಹೀಗಾಗಿ ಆ ಕತೆಯ ತಿರುಳು ನನ್ನ ಮನಸ್ಸಿನ ಒರಳು ಕಲ್ಲಿನಲ್ಲಿ ಸವೆದು,ಸವೆದು ಮತ್ತಷ್ಟು ಸೂಕ್ಷ್ಮವಾಗಿರಬಹುದು.
ಅಂದ ಹಾಗೆ ಕತೆಯ ನಾಯಕ ಶ್ರೀಮಂತ.ಒಂದು ಸಲ ಬಾಣಂತನಕ್ಕೆ ಅಂತ ಆತನ ಪತ್ನಿ ತವರು ಮನೆಗೆ ಹೋಗಿರುತ್ತಾಳೆ.ಬಾಣಂತನಕ್ಕೆ ಹೋಗುವುದು ಅಂದರೆ ಗೊತ್ತಲ್ಲ.ತಿಂಗಳಾನುಗಟ್ಟಲೆ ಕಾಲ.ಹೀಗಾಗಿ ಆ ಕತೆಯ ನಾಯಕ ಚಡಪಡಿಸುತ್ತಾನೆ.
ಆತನ ಚಡಪಡಿಕೆಯನ್ನು ಒಂದಲ್ಲ,ಎರಡು ದಿನ ಮನೆಯ ಕಾವಲುಗಾರ ನೋಡುತ್ತಾನೆ.ಆತ ವಯಸ್ಸಿನಲ್ಲಿ ಈತನಿಗಿಂತ ದೊಡ್ಡವನು.ಸಹಜವಾಗಿಯೇ ಆತನಿಗೆ ಯಜಮಾನನ ಚಡಪಡಿಕೆ ಅರ್ಥವಾಗುತ್ತದೆ.ಹಾಗಂತಲೇ,ಯಜಮಾನ್ರೇ,ನೀವು ತಪ್ಪು ತಿಳಿದುಕೊಳ್ಳದಿದ್ದರೆ ಒಂದು ಮಾತು ಹೇಳಲಾ?ಅಂತ ಕೇಳುತ್ತಾನೆ.
ವಯೋಸಹಜ ತಲ್ಲಣಕ್ಕೆ ಒಳಗಾಗಿರುವ ಯಜಮಾನ,ಆಯಿತು,ಅದೇನು ಹೇಳಪ್ಪಾ ಎನ್ನುತ್ತಾನೆ.ಅದಕ್ಕೀತ,ನಿಮ್ಮ ಪರಿಸ್ಥಿತಿ ನನಗೆ ಗೊತ್ತು.ನಿಮಗೀಗ ಹೆಣ್ಣಿನ ಸಾಂಗತ್ಯ ಬೇಕು ಅಂತ ಅನ್ನಿಸುತ್ತಿದೆ.ನೀವು ಒಪ್ಪಿದರೆ ನಿಮ್ಮ ಹೆಂಡತಿಯ ಜಾಗವನ್ನು ತಾತ್ಕಾಲಿಕವಾಗಿ ತುಂಬಲು ಒಬ್ಬ ಹೆಣ್ಣು ಮಗಳಿದ್ದಾಳೆ.ಬೇಕಿದ್ದರೆ ಹೇಳಿ.ನಾನಾಕೆಗೆ ಹೇಳುತ್ತೇನೆ.ವಿಷಯ ಎಲ್ಲೂ ಬಹಿರಂಗವಾಗುವುದಿಲ್ಲ.ಆಗಲೂ ಬಾರದು ಎನ್ನುತ್ತಾನೆ.
ಅವನ ಮಾತಿನಿಂದ ಕುತೂಹಲಗೊಂಡ ಯಜಮಾನ,ಸರಿ,ಯಾರಾಕೆ ಎಂಬುದನ್ನು ತೋರಿಸು,ಅದಕ್ಕಿಂತ ಮುಖ್ಯವಾಗಿ ಆಕೆ ನನ್ನ ಹೆಂಡತಿಯ ಹಾಗೆ ರೂಪವತಿಯೇ?ಅಂತ ಕೇಳುತ್ತಾನೆ.ಅದಕ್ಕೀತ,ಅಯ್ಯೋ,ಯಜಮಾನರೇ,ಆಕೆ ಬಡತನವನ್ನೇ ಹಾಸಿ ಹೊದ್ದವಳು ಎಂಬುದನ್ನು ಬಿಟ್ಟರೆ ಅದ್ಭುತ ಸುಂದರಿ.ಆದರೆ ಇಷ್ಟು ಅಂತ ದುಡ್ಡು ಕೊಟ್ಟು ಬನ್ನಿ.ಆಕೆಯ ಜೀವನಕ್ಕಾಗುತ್ತದೆ ಎನ್ನುತ್ತಾನೆ.
ಸರಿ,ಆತನ ಮಾತಿಗೆ ಯಜಮಾನ ಒಪ್ಪುತ್ತಾನೆ.ಎಷ್ಟೇ ಆದರೂ ಅದು ಹಳ್ಳಿ.ಹೀಗಾಗಿ ಹೆಚ್ಚು ಗದ್ದಲವಿಲ್ಲದೆ ಇಂತಹ ಸ್ಥಳಕ್ಕೆ ಬನ್ನಿ ಎಂದು ಈತ ಹೇಳುತ್ತಾನೆ.ಸರಿ,ಹೇಳಿದ ಸಮಯಕ್ಕೆ ಸರಿಯಾಗಿ ಯಜಮಾನ ಆ ಜಾಗಕ್ಕೆ ಹೋಗುತ್ತಾನೆ.ನೋಡಿದರೆ ಆಕೆ ಬರೀ ರೂಪವತಿಯಲ್ಲ.ಅನುರೂಪದ ಸೌಂದರ್ಯವನ್ನು ಬ್ರಹ್ಮ ತನ್ನ ನೆಮ್ಮದಿಯ ಘಳಿಗೆಯಲ್ಲಿ ಎರಕ ಹೊಯ್ದಿದ್ದಾನೋ ಎನ್ನುವಂತಹ ಸುರೂಪಿ.ಆಕೆಯನ್ನು ನೋಡುತ್ತಿದ್ದಂತೆಯೇ ಯಜಮಾನನ ಪಂಚೇಂದ್ರಿಯಗಳೇ ದಿಕ್ಕು ತಪ್ಪಿದಂತಾಗಿ ಚಡಪಡಿಸುತ್ತವೆ.
ಅದನ್ನು ನೋಡಿದ ಕೆಲಸಗಾರ,ನೋಡಿದಿರಾ ಯಜಮಾನರೇ?ನೀವು ಒಳಗೆ ಹೋಗಿ.ಎಷ್ಟೇ ಆದರೂ ಹಳ್ಳಿ.ಕೊಂಚ ಎಚ್ಚರ ತಪ್ಪಿದರೂ ಯಾರೋ ಬಂದು ಮನೆಯ ಬಾಗಿಲು ಬಡಿಯುತ್ತಾರೆ.ಹಾಗೆ ಬಡಿಯದಂತೆ ನಾನು ನೋಡಿಕೊಳ್ಳುತ್ತೇನೆ ಅನ್ನುತ್ತಾನೆ.ಯಸ್ ನೀನು ಹೇಳಿದ್ದು ನಿಜ ಎಂದಿದ್ದೇ ಯಜಮಾನ,ಆಕೆಯನ್ನು ಕರೆದುಕೊಂಡು ಮನೆಯ ಒಳಗೆ ಹೋಗುತ್ತಾನೆ.
ಅವತ್ತು ಆಕೆಯ ಜತೆಗಿದ್ದ ಯಜಮಾನನಿಗೆ ಅನ್ನಿಸುತ್ತದೆ.ಇಷ್ಟು ವರ್ಷಗಳಲ್ಲಿ ನನ್ನ ಹೆಂಡತಿ ಏನು ಸಂತೋಷ ನೀಡಿದ್ದಳೋ?ಅದಕ್ಕಿಂತ ಹೆಚ್ಚು ಸಂತೋಷವನ್ನು ಈಕೆ ಕೊಟ್ಟಳು.ಹೀಗಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ದುಡ್ಡು ಕೊಟ್ಟು ಆತ ಸಂತೃಪ್ತಿಯಿಂದ ಹೊರಗೆ ಬರುತ್ತಾನೆ.
ಬಂದವನೇ,ಹೊರಗೆ ಕಾದು ಕುಂತಿದ್ದ ಕೆಲಸಗಾರನಿಗೆ ಹೇಳುತ್ತಾನೆ.ನೀನು ಹೇಳಿದ್ದು ನಿಜ.ಈಕೆ ನನ್ನ ಹೆಂಡತಿಗಿಂತ ಅದ್ಭುತ ಸೌಂದರ್ಯವತಿ ಮಾತ್ರವಲ್ಲ,ನಿಪುಣೆ ಕೂಡಾ.ಯಾವುದೇ ಗಂಡಸಿಗೆ ಸಿಗುವ ಹೆಂಡತಿ ಹೀಗಿರಬೇಕು.ಈಕೆ ಮನಸ್ಸನ್ನೇ ಕಲ್ಲವಿಲಗೊಳಿಸಿದ ಹೆಣ್ಣು.
ಆತ ಹೇಳಿದ ಮಾತು ಕೇಳಿ ಕೆಲಸಗಾರ ತಣ್ಣಗೆ ನಗುತ್ತಾನೆ.ಯಜಮಾನ ಹೊರಟು ಹೋಗುತ್ತಾನೆ.ಅರ್ಧ ದಾರಿ ನಡೆದ ಮೇಲೆ ಆತನಿಗೆ ಅಚಾನಕ್ಕಾಗಿ ನೆನಪಿಗೆ ಬರುತ್ತದೆ.ತಾನು ಬರುವ ಗಡಿಬಿಡಿಯಲ್ಲಿ ಹಾಕಿಕೊಂಡ ಚಪ್ಪಲಿಯನ್ನೇ ಮರೆತು ಬಂದು ಬಿಟ್ಟಿದ್ದೇನೆ ಅಂತ.
ತಕ್ಷಣವೇ ಆತ ಮತ್ತೆ ಆ ಮನೆಯ ಕಡೆ ಹೋಗುತ್ತಾನೆ.ಹೋಗಿ ನೋಡಿದರೆ ಕೆಲಸಗಾರ ಅಲ್ಲಿಲ್ಲ.ಅವಸರದಲ್ಲಿ ಚಪ್ಪಲಿ ಹಾಕಿಕೊಳ್ಳುವಾಗ ಮನೆಯ ಒಳಗಿಂದ ಮಾತು ಕೇಳುತ್ತದೆ.”” ಲೇಯ್,ಆತ ಶ್ರೀಮಂತ.ಆತನನ್ನು ಸಂತೋಷಪಡಿಸಿದೆಯೋ?ಇಲ್ಲ,ಕತೆ ಹೇಳಿದೆಯೋ?ಮಗುವಿಗೆ ನೋಡಿದರೆ ವಿಪರೀತ ಜ್ವರ.ಪೇಟೆಗೆ ಹೋಗಿ ಯಾವುದೇ ಆಸ್ಪತ್ರೆಗೆ ದಾಖಲು ಮಾಡಬೇಕೆಂದರೂ ದೊಡ್ಡ ಪ್ರಮಾಣದ ದುಡ್ಡು ಬೇಕು.ಆ ಪ್ರಮಾಣದ ದುಡ್ಡು ಕೊಡಲು ನಾನು ಶಕ್ತನಲ್ಲ.ಈಗ ಆತ ಕೊಟ್ಟ ದುಡ್ಡಿನಿಂದ ಮಗುವನ್ನು ಆಸ್ಪತ್ರೆಗೆ ಸೇರಿಸಬಹುದು.ಒಳ್ಳೆಯ ಚಿಕಿತ್ಸೆ ಕೊಡಬಹುದು.ನನಗೂ ಈಗ ನಡೆದಿರುವುದು ಇಷ್ಟವಿಲ್ಲದ ಕೆಲಸ.ಆದರೆ ಮಗು ಬದುಕಬೇಕೆಂದರೆ ದುಡ್ಡು ಬೇಕೇ ಬೇಕು.ನೀನು ಅದನ್ನೆಲ್ಲ ಮರೆತು ನಮ್ಮ ವಿಷಯವನ್ನೆಲ್ಲ ಆತನ ಬಳಿ ಹೇಳಿಬಿಟ್ಟಿಲ್ಲ ತಾನೇ?”ಅವನ ಧ್ವನಿ.
ಅಯ್ಯೋ,ಇಲ್ಲಾರೀ,ನಾನು ಇಂತಹ ವಿಷಯಗಳಲ್ಲಿ ನಿಮ್ಮ ಕೈ ಬಿಡುವುದಾ?ದೈವದತ್ತವಾಗಿ ಕೈ ಹಿಡಿದ ನನ್ನ ಗಂಡನದು?ಖಂಡಿತವಾಗಿಯೂ ಇಲ್ಲಾರಿ ಎಂಬುದು ಆಕೆಯ ಧ್ವನಿ.ಅದನ್ನು ಕೇಳಿಸಿಕೊಂಡ ಯಜಮಾನ ಮಂಕಾಗಿ ಹೋಗುತ್ತಾನೆ.
ಇಷ್ಟು ಹೇಳಿದ ಪ್ರಕಾಶ್ ಸುಮ್ಮನೆ ಕುಂತರು.ನನಗೆ ಏನು ಮಾತನಾಡಬೇಕೋ ತೋಚಲಿಲ್ಲ.ಮತ್ತೆ ಪ್ರಕಾಶ್ ಅವರೇ ಮಾತನಾಡುತ್ತಾ ಹೋದರು:ವಿಠ್ಠಲಮೂರ್ತಿ.ಬೆಳಿಗ್ಗೆ ಈ ಕತೆ ಓದಿದಾಗಿನಿಂದ ನನ್ನ ಸಹಪಾಠಿಯದೇ ನೆನಪು.ಆಕೆ ಕೂಡಾ ಇದೇ ಸ್ಥಿತಿಯನ್ನು ಅನುಭವಿಸಿದ್ದಳು.ಒಂದು ಸಲ ಊರಿಗೆ ಹೋದಾಗ ಆಕೆಯ ಈ ದಾರುಣ ಸ್ಥಿತಿಯನ್ನು ಒಬ್ಬ ಗೆಳೆಯ ನನಗೆ ಹೇಳಿದ.
ಯಾಕೋ ನನಗೆ ಈ ಕತೆಯ ಪಾತ್ರಗಳು,ನನ್ನ ಸಹಪಾಠಿಯ ನೆನಪು ಕಾಡತೊಡಗಿತು.ಹೇಗೋ ಇದ್ದ ಬದುಕು ಹೇಗೋ ಆಗಬಹುದು ಅಂತ ಅನ್ನಿಸಿ ಕಣ್ಣೀರು ಬಂತು ಅಷ್ಟೇ.ಅದಕ್ಕಾಗಿ ನಿನ್ನೆದುರು ಇದನ್ನೆಲ್ಲ ಹೇಳಿದೆ.ಆದರೆ ನಾನು ಹೇಳುವ ತನಕ ಇದನ್ನೆಲ್ಲೂ ಬರೆಯಬೇಡ ಎಂದರು.ನಾವು ಆಫ್ ದಿ ರೆಕಾರ್ಡ್ ಸ್ಟೋರಿಗಳನ್ನು ಒಬ್ಬರ ಹೆಸರು ಹಾಕದೆ ಬರೆಯಬಹುದು.ಆದರೆ ಇದು ತೀರಾ ಪರ್ಸನಲ್ ಮೆಮೋರಿ.
ಈ ಮೆಮೋರಿ ಚಿಪ್ಪನ್ನು ಬಿಚ್ಚಿಡುವುದು ಹೇಗೆ?ಹಾಗಂತಲೇ ಈ ಮೆಮೋರಿ ಚಿಪ್ಪು,ಕಪ್ಪೆ ಚಿಪ್ಪಿನಂತೆ ಸುರಕ್ಷಿತವಾಗಿ ಬಾಗಿಲು ಮುಚ್ಚಿಕೊಂಡು ಮನಸ್ಸಿನ ಮೂಲೆಯಲ್ಲೆಲ್ಲೋ ಮಲಗಿತ್ತು.ಸಂಜೆ ಕೆಲಸ ಮುಗಿಸಿ,ಕಬ್ಬನ್ ಪಾರ್ಕಿನಲ್ಲಿರುವ ವರದಿಗಾರರ ಕೂಟದಿಂದ ವಾಪಸ್ಸು ಮನೆಗೆ ಬರುವಾಗ ಫಟಕ್ಕಂತ ನೆನಪಾಯಿತು.ಹಾಗಂತಲೇ ಮೂವತ್ತು ವರ್ಷಗಳಿಂದ ನನ್ನ ಜತೆಗಿರುವ ಗೆಳೆಯ ಶಿವರಾಜುಗೆ ಇದನ್ನೆಲ್ಲ ಹೇಳಿದೆ.ಸಹಜವಾಗಿ ಆತ ಬಾವುಕ.ಕತೆ ಹೇಳಿದ ಕೂಡಲೇ,ಕಣ್ಣೀರಿಟ್ಟು:ಮತ್ತೊಬ್ಬ ಎಂ.ಪಿ.ಪ್ರಕಾಶ್,ಜೆ.ಹೆಚ್.ಪಟೇಲ್ ಅವರಂತಹ ನಾಯಕರನ್ನು ನಾವು ನೋಡಲು ಸಾಧ್ಯವಾ?ಎಂದ.
ಊಹೂಂ ಇಲ್ಲ ಎಂದೆ.ಆನಂತರ ಸೌತ್ ಎಂಡ್ ಸರ್ಕಲ್ಲಿಗೆ ಬರುವ ತನಕ ನಾವಿಬ್ಬರೂ ಮಾತನಾಡಲಿಲ್ಲ.ಬದುಕಿನ ವಿಚಿತ್ರಗಳೇ ಹಾಗೆ.ತುಂಬ ಸಲ ನೀವು ಮಾತಿಗಿಂತ ಹೆಚ್ಚಾಗಿ ಮೌನದ ಮೇಲೆ ಪ್ರೀತಿ ಬೆಳೆಸಿಕೊಂಡು ಬಿಡುವಂತೆ ಮಾಡುತ್ತವೆ.ಅಂದ ಹಾಗೆ ಎಂ.ಪಿ.ಪ್ರಕಾಶ್ ಈಗಿಲ್ಲ.ಹಾಗಂತಲೇ ಈ ಘಟನೆಯನ್ನು ನಿಮ್ಮೆದುರು ಹೇಳಿಕೊಂಡೆ.

ಆರ್.ಟಿ.ವಿಠ್ಠಲ್ ಮೂರ್ತಿ

LEAVE A REPLY

Please enter your comment!
Please enter your name here