ನೈತಿಕತೆ ಜಾರುತ್ತಿದೆ ಅಂತ ತೋರಿಸಿತು ಜಾರಕಿಹೊಳಿ ಎಪಿಸೋಡು

0
300

ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಹಲ ಸಚಿವರು ಕೂಡಾ ತಮ್ಮ ಸುತ್ತ ಇಂತಹ ವಿವಾದಗಳು ಸುತ್ತಿಕೊಳ್ಳಬಹುದು ಎಂಬ ಆತಂಕದಿಂದ ನ್ಯಾಯಾಲಯದ ಕಟಕಟೆ ಏರಿದ್ದಾರೆ.
ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿವೆ.ಇದು ಬ್ಲಾಕ್‌ ಮೇಲ್‌ ಎಂಬುದರಿಂದ ಹಿಡಿದು ಮಹಿಳೆಯ ಜತೆಗಿನ ಸಂಬಂಧ ಪರಸ್ಪರ ಸಮ್ಮತಿಯದೇ ಹೊರತು ಕಿರುಕುಳ ಅಲ್ಲ ಎಂಬಲ್ಲಿಯವರೆಗೆ ಚರ್ಚೆ ಸಾಗಿದೆ.
ಆದರೆ ಪ್ರಶ್ನೆ ಇರುವುದು ನೈತಿಕತೆಯದು.ಯಾಕೆಂದರೆ ಅವರಿಗೆ ಧರ್ಮಪತ್ನಿ ಇದ್ದಾರೆ.ಧರ್ಮಪತ್ನಿ ಇರುವಾಗ ಈ ರೀತಿಯ ಸಂಬಂಧ ಸಾಧಿತವಾಗುವುದು ಸರಿಯೇ?ಎಂಬುದರಲ್ಲಿ.
ಅದೇನೇ ಇರಲಿ,ಇವತ್ತು ರಮೇಶ್‌ ಜಾರಕಿಹೊಳಿ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳು ಒಂದು ವಿಷಯವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿವೆ.ಅದೆಂದರೆ ನೈತಿಕತೆಯ ಚೌಕಟ್ಟನ್ನು ವ್ಯವಸ್ಥೆಯೇ ಸಡಿಲಿಸುತ್ತಾ ಬಂದಿರುವುದು.
ವಾಸ್ತವವಾಗಿ,ಇಂತಹದೊಂದು ಪ್ರಕರಣ ನಡೆದಿದೆ ಎಂಬುದು ಗೊತ್ತಾದ ಕೂಡಲೇ ನಮ್ಮ ವ್ಯವಸ್ಥೆ ರಮೇಶ್‌ ಜಾರಕಿಹೊಳಿ ಮಾಡಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಿತ್ತು.
ಆದರೆ ರಮೇಶ್‌ ಜಾರಕಿಹೊಳಿ ಅವರು ಮಾಡಿದ್ದು ತಪ್ಪು ಎನ್ನುವ ಕೂಗು ಎದ್ದಾಗಲೇ,ಇದು ಕೆಲವರ ಷಡ್ಯಂತ್ರ ಎಂಬ ಅಪಸ್ವರ ಕೇಳಿ ಬಂತು.ಹಾಗೆಯೇ ಇದು ಪರಸ್ಪರ ಸಮ್ಮತಿಯ ಸಂಬಂಧ ಎಂಬ ಕೂಗು ತೇಲಿ ಬಂತು.
ಅದು ನಿಜವೂ ಇರಬಹುದು.ಆದರೆ ಪ್ರಶ್ನೆ ಇದ್ದುದು ಅಲ್ಲಲ್ಲ,ಜವಾಬ್ದಾರಿಯುತ ಸ್ಥಾನದಲ್ಲಿದ್ದ ರಮೇಶ್‌ ಜಾರಕಿಹೊಳಿ ಮಾಡಿದ್ದು ಸರಿಯೇ?ಎಂಬಲ್ಲಿ.
ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಸಮಾಜದ ನೈತಿಕತೆಯ ಬೇರುಗಳು ಹೇಗೆ ಸಡಿಲವಾಗುತ್ತಾ ನಡೆದಿವೆ?ಎಂಬುದು ಸ್ಪಷ್ಟವಾಗುತ್ತದೆ.
ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಟಿ.ಸಿದ್ಧಲಿಂಗಯ್ಯ ಮಂತ್ರಿಯಾಗಿದ್ದರು.ಒಂದು ಸಂದರ್ಭದಲ್ಲಿ ಅವರ ಸಹೋದರನಿಗೆ ವಿದ್ಯುತ್‌ ಇಲಾಖೆಯ ಗುತ್ತಿಗೆಯೊಂದು ಸಿಕ್ಕಿತು.
ಇದು ಗೊತ್ತಾಗುತ್ತಿದ್ದಂತೆಯೇ ಸಿದ್ಧಲಿಂಗಯ್ಯ ಅವರು ಕೆಂಗಲ್‌ ಹನುಮಂತಯ್ಯ ಅವರನ್ನು ನೋಡಲು ಹೋದರು.ಅವರನ್ನು ನೋಡುತ್ತಲೇ ಕೆಂಗಲ್‌ ಹನುಮಂತಯ್ಯ ಅವರು:ನೀವು ಬಂದೇ ಬರುತ್ತೀರಿ ಎಂದು ನನಗೆ ಗೊತ್ತಿತ್ತು ಎಂದರು.
ಸಿದ್ಧಲಿಂಗಯ್ಯ ಅವರು ಮರುಮಾತನಾಡದೆ ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿದರು.ವಸ್ತುಸ್ಥಿತಿ ಎಂದರೆ ತಮ್ಮ ಸಹೋದರನಿಗೆ ಇಂತಹ ಕಾಂಟ್ರಾಕ್ಟು ಕೊಡಿ ಎಂದು ಸಿದ್ಧಲಿಂಗಯ್ಯನವರು ಹೇಳಿರಲೇ ಇಲ್ಲ.
ಹಾಗಂತ ಹೇಳಿ ಕೆಂಗಲ್‌ ಹನುಮಂತಯ್ಯನವರು:ನಿಮ್ಮ ರಾಜೀನಾಮೆಯ ಅಗತ್ಯವಿಲ್ಲ ಎಂದರಾದರೂ ಸಿದ್ದಲಿಂಗಯ್ಯನವರು ಒಪ್ಪಲಿಲ್ಲ.ಬದಲಿಗೆ:ನಿಮಗೆ ಇದು ಗೊತ್ತಿದೆ.ಆದರೆ ಜನರಿಗೆ ಗೊತ್ತಾಗುವುದು ಹೇಗೆ?ಇದರ ನೈತಿಕ ಹೊಣೆ ಹೊರದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿ ಬಂದರು.
ನಿಜಲಿಂಗಪ್ಪ ಅವರು ಮೊದಲು 1956 ರಲ್ಲಿ ಮುಖ್ಯಮಂತ್ರಿಯಾದರಲ್ಲ?ಆ ಸಂದರ್ಭದಲ್ಲಿ ತಮ್ಮ ಸಚಿವ ಸಂಪುಟಕ್ಕೆ ಸೇರುವಂತೆ ಅವರು ಶ್ರೀಮತಿ ಯಶೋದರಮ್ಮ ತುಳಸೀದಾಸಪ್ಪ ಅವರನ್ನು ಕೋರಿದ್ದರು.ಆಗವರು:ನೀವು ಪಾನ ನಿಷೇಧ ಮಾಡಲು ಒಪ್ಪಿಕೊಂಡರೆ ನಿಮ್ಮ ಸಂಪುಟ ಸೇರುತ್ತೇನೆ ಎಂದರು.
ಪಾನ ನಿಷೇಧ ಮಾಡುವ ವಿಷಯದಲ್ಲಿ ನಿಜಲಿಂಗಪ್ಪನವರಿಗೂ ಒಲವಿತ್ತು.ಹಾಗಂತಲೇ:ಖಂಡಿತ ಮಾಡೋಣ.ನೀವು ಮಂತ್ರಿ ಮಂಡಲಕ್ಕೆ ಸೇರಿ ಎಂದರು.ಆದರೆ ಮುಂದೆ ಪಾನ ನಿಷೇಧದ ಮಾತು ಬಂದಾಗ ನಿಜಲಿಂಗಪ್ಪ ಸಂಪುಟದ ಬಹುತೇಕ ಸಚಿವರು ಅಪಸ್ವರ ತೆಗೆದರು.
ಸರ್ಕಾರದ ಪ್ರಮುಖ ಆದಾಯ ಮೂಲ ಅದು.ಹೀಗಿರುವಾಗಿ ಪಾನನಿಷೇಧ ಮಾಡಿ ಸರ್ಕಾರವನ್ನು ಹೇಗೆ ನಡೆಸುತ್ತೀರಿ?ಏಂದು ಪ್ರಶ್ನಿಸಿದರು.ಆಗ ನಿಜಲಿಂಗಪ್ಪ ಅಸಹಾಯಕರಾಗಬೇಕಾಯಿತು.
ಆದರೆ ಇದನ್ನು ಒಪ್ಪದ ಶ್ರೀಮತಿ ಯಶೋದರಮ್ಮ ದಾಸಪ್ಪ ಅವರು ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹೊರಬಂದರು.
ಇದೇ ರೀತಿ ಮುಂದೆ ನಿಜಲಿಂಗಪ್ಪ ಅವರ ಸಚಿವ ಸಂಪುಟದಲ್ಲಿ ಎಂ.ವಿ.ರಾಮರಾವ್‌ ಅವರು ಗೃಹ ಸಚಿವರಾಗಿದ್ದಾಗ ಒಂದು ಘಟನೆ ನಡೆಯಿತು.
ಅವತ್ತು ಪೋಲೀಸ್‌ ಠಾಣೆಯೊಂದರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದು ಆಕೆ ಅನಾಹುತ ಮಾಡಿಕೊಂಡಿದ್ದಳು.ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು.
ಪ್ರತಿಪಕ್ಷದ ನಾಯಕರೊಬ್ಬರು:ಗೃಹ ಸಚಿವರೇ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ.ಆ ನೊಂದ ಹೆಣ್ಣು ಮಗಳ ಜಾಗದಲ್ಲಿ ನಿಮ್ಮ ಮಗಳು ಇದ್ದಿದ್ದರೆ ನೀವೇನು ಮಾಡುತ್ತಿದ್ದಿರಿ?ಎಂದು ಪ್ರಶ್ನಿಸಿದರು.
ಅವರ ಪ್ರಶ್ನೆ ಕೇಳಿ ಅರೆಕ್ಷಣ ಸ್ತಂಭೀಭೂತರಾದ ರಾಮರಾವ್‌ ಅವರು:ನೀವು ಹೇಳಿದ್ದು ನನ್ನ ಮನಸ್ಸು ಮುಟ್ಟಿದೆ ಎಂದು ಹೇಳಿದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಇದೇ ರೀತಿ ನಿಜಲಿಂಗಪ್ಪ ಅವರ ಕಾಲದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ರಾಮಕೃಷ್ಣ ಹೆಗಡೆ ಅವರು ಪಂಚಾಯ್ತ್‌ ಮಸೂದೆಯೊಂದನ್ನು ತಂದರು.ಅದನ್ನು ವಿಧಾನಮಂಡಲದಲ್ಲಿಟ್ಟು ಅಂಗೀಕಾರ ಪಡೆಯುವ ಮುನ್ನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿದರು.
ಆಗೆಲ್ಲ ಒಂದು ಕಾಯ್ದೆಯನ್ನು ತರುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಂಪ್ರದಾಯವಿತ್ತು.ಅದರನುಸಾರ ಹೆಗಡೆ ಕೂಡಾ ಆ ಮಸೂದೆಯನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಮಂಡಿಸಿದ್ದರು.
ಆದರೆ ಒಂದೇ ಮತದ ಅಂತರದಲ್ಲಿ ಹೆಗಡೆ ಅವರು ಶಾಸಕಾಂಗ ಸಭೆಯಲ್ಲಿ ಮಂಡಿಸಿದ ಮಸೂದೆಗೆ ಸೋಲಾಯಿತು.ಇದರಿಂದ ನೊಂದ ಹೆಗಡೆ:ಇನ್ನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಮುಂದುವರಿಯುವುದು ನೈತಿಕತೆಯಲ್ಲ ಎಂದವರೇ ಮುಖ್ಯಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು.
ಇದೇ ರೀತಿ ದೇವರಾಜ ಅರಸರ ಕಾಲದಲ್ಲಿ ಸಚಿವರಾಗಿದ್ದ ಆರ್.ಡಿ.ಕಿತ್ತೂರು ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ನಾಪತ್ತೆಯಾದರು.ವಿಷಯ ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಆ ಸಂದರ್ಭದಲ್ಲಿ ಹಲವು ರೀತಿಯ ಮಾತುಗಳು ಕೇಳಿ ಬಂದವು.ಪರಿಣಾಮ?ಆರ್.ಡಿ.ಕಿತ್ತೂರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ನಾಯಕರೇ:ಬಾಳೇ ಹಣ್ಣು ತಿಂದವರು ಯಾರೋ?ಆದರೆ ಸಿಪ್ಪೆ ಹಿಡಿದುಕೊಂಡಿದ್ದ ಕಾರಣಕ್ಕಾಗಿ ಅರ್.ಡಿ.ಕಿತ್ತೂರ್‌ ರಾಜೀನಾಮೆ ಕೊಡಬೇಕಾಯಿತು ಎಂದು ಮಾತನಾಡಿಕೊಂಡರು.
ಮುಂದೆ ತಾವೇ ಮುಖ್ಯಮಂತ್ರಿಯಾದ ಕಾಲದಲ್ಲಿ ಬಾಟ್ಲಿಂಗ್‌ ಹಗರಣ ಮತ್ತು ಟೆಲಿಫೋನ್‌ ಟ್ಯಾಪಿಂಗ್‌ ಹಗರಣ ನಡೆದಾಗ ಹೆಗಡೆ ರಾಜೀನಾಮೆ ನೀಡಿದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ತಮ್ಮ ಪುತ್ರ ಮಧ್ಯಾಭಿಷೇಕ ಮಾಡಿದ ಆರೋಪ ಕೇಳಿ ಬಂದಾಗ ಸಚಿವರಾಗಿದ್ದ ಬಿ.ಟಿ.ಲಲಿತಾನಾಯಕ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು.
ಆದರೆ ಇಂತಹ ಸತ್ಸಂಪ್ರದಾಯಗಳು ಕ್ರಮೇಣ ಮರೆಯಾಗುತ್ತಾ ಹೋಗಿ ಈಗ ಯಾವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರೆ ತಪ್ಪು ಮಾಡಿದವರನ್ನೂ ಸಮರ್ಥನೆ ಮಾಡುವ ದೊಡ್ಡ ಜನಸಮೂಹ ಬೆಳೆದುನಿಂತಿದೆ.
ವಿಪರ್ಯಾಸವೆಂದರೆ ಮಾಡಿದ ತಪ್ಪು ಕಣ್ಣೆದುರಿಗಿದ್ದರೂ ತಪ್ಪು ಮಾಡಿದವರೇ ಸ್ವಾತಂತ್ರ್ಯ ಹೋರಾಟಗಾರರ ಫೋಜು ಕೊಡುತ್ತಾ ತಮ್ಮ ಕೈನ ಎರಡೂ ಬೆರಳುಗಳನ್ನು ಎತ್ತಿ ತೋರಿಸುತ್ತಾ,ವಿಜಯೋತ್ಸವ ಆಚರಿಸುತ್ತಾರೆ.
ಅಂದ ಹಾಗೆ ಆರೋಪಗಳಿಗೆ ನಾನಾ ಮುಖಗಳಿರಬಹುದು.ಯಾರದೋ ಷಡ್ಯಂತ್ರವೂ ಇದಕ್ಕೆ ಕಾರಣವಾಗಿರಬಹುದು,ಆದರೆ ನಡೆದಿದ್ದು ತಪ್ಪು ಎಂಬುದು ಸ್ಪಷ್ಟವಾದಾಗ ಶಿಕ್ಷೆಯನ್ನು ಸ್ವೀಕರಿಸುವ ಮತ್ತು ತನಿಖೆಯನ್ನು ಎದುರಿಸುವ ಗುಣ ಇರಬೇಕು.ಇಂತಹ ವಾತಾವರಣ ಸೃಷ್ಟಿಗೆ ವ್ಯವಸ್ಥೆಯೂ ಬಲ ನೀಡಬೇಕು.
ಆದರೆ ರಮೇಶ್‌ ಜಾರಕಿಹೊಳಿ ಪ್ರಕರಣ ಅಂತಹ ವಾತಾವರಣ ಸೃಷ್ಟಿಸಲು ವ್ಯವಸ್ಥೆಯೇ ತಯಾರಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here