ತೃತೀಯ ಶಕ್ತಿ ಎಂದರೆ ದೇವೇಗೌಡರಿಗೇಕೆ ಸಿಟ್ಟು?

0
254

ಮಾಜಿ ಪ್ರಧಾನಿ ದೇವೇಗೌಡರಿಗೆ ತೃತೀಯ ಶಕ್ತಿ ಎಂದರೆ ಸಿಟ್ಟು ಬರುತ್ತಿದೆ.
ತೀರಾ ಇತ್ತೀಚಿನವರೆಗೂ ತೃತೀಯ ಶಕ್ತಿ ಎಂದರೆ ಅವರಿಗೆ ಗೌರವ ಭಾವನೆ ಇತ್ತು.ತಾವು ಪ್ರಧಾನಿಯಾಗಲು ಕಾರಣವಾದ ಕೂಟ ಎಂಬ ಪ್ರೀತಿ ಇತ್ತು.
ಆದರೆ ಈಗ ಮಹಾಘಟಬಂಧನ್ ರೂಪ ತಳೆದಿರುವ ತೃತೀಯ ಶಕ್ತಿಯ ಬಗ್ಗೆ ದೇವೇಗೌಡರಲ್ಲಿ ಯಾವ ವಿಶ್ವಾಸವೂ ಉಳಿದಿಲ್ಲ.ತಮ್ಮ ಪಕ್ಷ ಅದರೊಂದಿಗೆ ಕೈ ಜೋಡಿಸಿ ಮುಂದಿನ ಹೆಜ್ಜೆ ಇಡಬೇಕು ಎಂಬ ಕಾಂಕ್ಷೆಯೂ ಇಲ್ಲ.
ಒಂದು ಕಾಲದಲ್ಲಿ ತಮ್ಮ ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಕೈಗೂಡಿಸುವ ಮಾತನಾಡಿದರೆ ಅವರು ರೇಗುತ್ತಿದ್ದರು.ಕೋಮುವಾದಿ ಶಕ್ತಿಗಳ ಜತೆ ಕೈಗೂಡಿಸುವುದು ಬೇಡ ಎನ್ನುತ್ತಿದ್ದರು.
ಆದರೆ ಇದೀಗ ಅವರ ಧೋರಣೆ ಬದಲಾಗಿದೆ.ಇವತ್ತು ಬಿಜೆಪಿಯ ಜತೆ ಕೈ ಜೋಡಿಸಿದರೆ ತಮ್ಮ ಪಕ್ಕದಲ್ಲಿರುವ ಕೆಲ ಶಾಸಕರು ಸೇರಿದಂತೆ ಹಲವರು ಸಿಎಂ ಸಿದ್ಧರಾಮಯ್ಯ ಅವರ ಕ್ಯಾಂಪು ಸೇರಲು ಸಜ್ಜಾಗಿ ಕುಳಿತಿದ್ದಾರೆ ಅಂತ ಗೊತ್ತಿದ್ದರೂ ಅದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ಅವರಿಲ್ಲ.
ಬಿಜೆಪಿ ವಿರೋಧಿ ಶಕ್ತಿಗಳು ಅಂತ ತೋರಿಸಿಕೊಳ್ಳುತ್ತಿರುವ ಪಕ್ಷಗಳು ತಮ್ಮ ಪಕ್ಷದ ಬಗ್ಗೆ ನಡೆದುಕೊಂಡಿದ್ದೇ‌ ಇದಕ್ಕೆ ಕಾರಣ.
ಅದು ತಮಿಳುನಾಡಿನ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಇರಬಹುದು, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇರಬಹುದು,ತೆಲಂಗಾಣದ ಕೆ.ಸಿ.ಚಂದ್ರಶೇಖರರಾವ್ ಇರಬಹುದು, ಬಿಹಾರದ ನಿತೀಶ್ ಕುಮಾರ್ ಇರಬಹುದು.
ಈ ಎಲ್ಲ ನಾಯಕರು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಹಕಾರ ನೀಡಿದ್ದರೆ ತಮ್ಮ ಪಕ್ಷ ಅಧಿಕಾರದ ಪಾಲುದಾರನಾಗಿರುತ್ತಿತ್ತು ಎಂಬುದು ದೇವೇಗೌಡರ ಕೊರಗು.
ಈ ಪೈಕಿ ಡಿಎಂಕೆ ಪಕ್ಷದ ಎಂ.ಕೆ.ಸ್ಟಾಲಿನ್ ಅವರು,ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ತಮಿಳು ಮತದಾರರನ್ನು ಕ್ರೋಢಿಕರಿಸಲು ಅಗತ್ಯದ ನೆರವು ನೀಡುತ್ತೇವೆ.ಇದಕ್ಕೇನು ನೆರವಿನ ಅಗತ್ಯವಿದೆಯೋ?ಅದನ್ನು ಕೊಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದರು.
ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸ್ಟಾಲಿನ್ ಅವರ ಲೆಕ್ಕಾಚಾರ ಉಲ್ಟಾ ಆಯಿತು.ದೇಶದಲ್ಲಿ ತೃತೀಯ ಶಕ್ತಿಗೆ ಅಂತಿಮ ಬಲ ಅಂತ ನೀಡಬೇಕಿರುವುದು ಕಾಂಗ್ರೆಸ್ ಪಕ್ಷ.ಹೀಗಿರುವಾಗ ಕರ್ನಾಟಕದಲ್ಲಿ ನಾವು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಪಕ್ಷದ ಕನಸಿಗೆ ಕಲ್ಲು ಹಾಕಿದಂತಾಗುತ್ತದೆ ಅಂತ ಸ್ಟಾಲಿನ್ ಯೋಚಿಸಿದರು.
ಪರಿಣಾಮ? ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆರವು ನೀಡುವ ಗೋಜಿಗೇ ಹೋಗದ ಅವರು,ಕುಮಾರಸ್ವಾಮಿ ಮಾತನಾಡಲು ಯತ್ನಿಸಿದರೆ ತಪ್ಪಿಸಿಕೊಳ್ಳುತ್ತಿದ್ದರು.

ಈ ವಿಷಯದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರು ಕೂಡಾ ದೇವೇಗೌಡರಿಗೆ ಭ್ರಮ ನಿರಸನವಾಗುವಂತೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಬಿಜೆಪಿ,ಕಾಂಗ್ರೆಸ್ ವಿರುದ್ಧ ತೃತೀಯ ಶಕ್ತಿ ನಿಲ್ಲಬೇಕೆಂದು ಕನಸು ಕಾಣುತ್ತಿದ್ದ ಕೆಸಿಆರ್ ಇದೇ ಭರದಲ್ಲಿ ದೇಶದ ಎಲ್ಲ ಕಡೆ ಕೈ ಚಾಚುತ್ತಿದ್ದರು.ಇದರ ಭಾಗವಾಗಿ ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಗುಡುಗುತ್ತಿದ್ದ ಕೆಸಿಆರ್ ಅವರು ಕರ್ನಾಟಕದಲ್ಲಿ ನೀವು ಬಿಜೆಪಿಯನ್ನು ಬಗ್ಗು ಬಡಿಯಬೇಕು ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದರು.
ಈ ಕೆಲಸವಾಗಬೇಕು ಎಂದರೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬೇಕು.ಆದರೆ ಅಧಿಕಾರಕ್ಕೆ ಬರಬೇಕೆಂದರೆ ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಬಳಸಬೇಕಲ್ಲ?
ಇಂತಹ ಶಸ್ತ್ರಾಸ್ತ್ರಗಳನ್ನು ನಾನು ನಿಮಗೆ ಒದಗಿಸುತ್ತೇನೆ ಎಂದು ಕೆಸಿಆರ್ ಭರವಸೆ ನೀಡಿದ್ದರು.
ಇದಕ್ಕೆ ಪೂರಕವಾಗಿ ಜೆಡಿಎಸ್ ಪಕ್ಷದ ಕ್ಯಾಂಡಿಡೇಟುಗಳ ಆಯ್ಕೆಗೆ ಎಲೆಕ್ಷನ್ ಸ್ಪೆಷಲಿಸ್ಟುಗಳನ್ನೂ ಕಳಿಸಿಕೊಟ್ಟಿದ್ದರು.
ಆದರೆ ಇದ್ದಕ್ಕಿದ್ದಂತೆ ಕೆಸಿಆರ್ ತಲೆಗೆ ಹೊಸ ಐಡಿಯಾ ಹೊಳೆಯಿತಲ್ಲದೆ,ತೆಲುಗು ಭಾಷಿಕರಿರುವ ಗಡಿ ಭಾಗದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳೋಣ.ಅಲ್ಲಿ ನಮ್ಮ ಕ್ಯಾಂಡಿಡೇಟುಗಳೂ ಸ್ಪರ್ಧಿಸಲಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದರು.
ಆದರೆ ಕೆಸಿಆರ್ ಅವರ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡರೆ ಭಾಷಾ ವಿವಾದ ತಲೆ ಎತ್ತಬಹುದು ಅಂತ ಯೋಚನೆಗೊಳಗಾದ ಕುಮಾರಸ್ವಾಮಿ, ಇಂತಹ ಹೊಂದಾಣಿಕೆ ಪಾರ್ಲಿಮೆಂಟ್ ಎಲೆಕ್ಷನ್ ಟೈಮಲ್ಲಿ ಮಾಡಿಕೊಳ್ಳೋಣ.ಈಗ ಬೇಡ ಎಂದರು.
ಯಾವಾಗ ಕುಮಾರಸ್ವಾಮಿ ಮೈತ್ರಿ ಕ್ಯಾಂಡಿಡೇಟುಗಳನ್ನು ಕಣಕ್ಕಿಳಿಸಲು ಒಪ್ಪಲಿಲ್ಲವೋ?ಇದಾದ ನಂತರ ತಮ್ಮ ಮೂಲ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳತೊಡಗಿದರು.
ಈ ಮಧ್ಯೆ, ಕರ್ನಾಟಕದಲ್ಲಿ ಜೆಡಿಎಸ್ ಸ್ವಯಂಬಲದ ಮೇಲೆ ಗೆಲ್ಲುವುದು ಕಷ್ಟ.ಹಾಗಾದಾಗ ಅವರು ಬಿಜೆಪಿ ಜತೆಗೂ‌ ಮೈತ್ರಿ ಮಾಡಿಕೊಳ್ಳಬಹುದು ಎಂಬಂತಹ ಮಾತುಗಳು ಅವರ ಪಕ್ಷದ ಕಾಂಪೌಂಡಿನಿಂದ ಸಿಡಿಯತೊಡಗಿದಾಗ ಕುಮಾರಸ್ವಾಮಿ ಬೇಸತ್ತು ದೂರವಾದರು.
ಅಂದ ಹಾಗೆ ಈಗ ಕೆಸಿಆರ್ ಅತಂತ್ರ ಸ್ಥಿತಿಯಲ್ಲಿದ್ದಾರೆ.ಅವರು ಮಹಾಮೈತ್ರಿ ಜತೆ ಹೋಗುತ್ತಾರೋ?ಬಿಜೆಪಿ ಜತೆ ಹೋಗುತ್ತಾರೋ ಎಂಬುದು ಅರ್ಥವಾಗದ ಪರಿಸ್ಥಿತಿ ಇದೆ.ಆದರೂ ಅವರು ಆಳದಲ್ಲಿ ತೃತೀಯ ಶಕ್ತಿಯನ್ಬು ಬಯಸುತ್ತಾರೆ ಎಂಬುದು ಮಾತ್ರ ನಿಜ.

ಈ ಮಧ್ಯೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ನಾಯಕಿ,ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಒಂದು‌ ಹಂತದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕರ್ನಾಟಕಕ್ಕೆ ಬರಲು ಒಪ್ಪಿಕೊಂಡಿದ್ದರು.
ಎಷ್ಟೇ ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ಫೈಟು ಕೊಡುತ್ತಿದ್ದಾರೆ.
ಇದರ ಪರಿಣಾಮವಾಗಿ ಅಲ್ಪಸಂಖ್ಯಾತ ಸಮುದಾಯದ ಪಾಲಿಗೆ ಐಕಾನ್ ಆಗಿ ಮೇಲೆದ್ದು ನಿಂತಿದ್ದಾರೆ.ಅಂತವರು ಕರ್ನಾಟಕಕ್ಕೆ ಬಂದು ತಮ್ಮ ಪಕ್ಷದ ಪರವಾಗಿ ಮಾತನಾಡಿದರೆ ಮುಸ್ಲಿಂ ಮತ ಬ್ಯಾಂಕು ಒಂದು ಮಟ್ಟದಲ್ಲಾದರೂ ತಮ್ಮ ಜತೆ ನಿಲ್ಲಬಹುದು ಎಂಬ ಲೆಕ್ಕಾಚಾರ ದೇವೇಗೌಡ-ಕುಮಾರಸ್ವಾಮಿ ಅವರಿಬ್ಬರಿಗೂ ಇತ್ತು.
ಹಾಗಂತಲೇ ಮಮತಾ ಬ್ಯಾನರ್ಜಿ ಅವರ ಬಳಿ ಕುಮಾರಸ್ವಾಮಿ ವಿಷಯ ವಿವರಿಸಿದಾಗ,ಖಂಡಿತ ಬರುತ್ತೇನೆ ಎಂದು ಭರವಸೆ ನೀಡಿದ್ದರು.
ಆಂದ ಹಾಗೆ ದೇಶದಲ್ಲಿ ಕಾಂಗ್ರೆಸ್ ನೆರವಿಲ್ಲದೆ ತೃತೀಯ ಶಕ್ತಿ ಸ್ವಯಂ ಆಗಿ ಮೇಲೆದ್ದು ನಿಲ್ಲಬೇಕು ಎಂಬ ಲೆಕ್ಕಾಚಾರದಲ್ಲಿದ್ದವರು ಮಮತಾ ಬ್ಯಾನರ್ಜಿ.
ಆದರೆ ಅಂತವರು ಇದ್ದಕ್ಕಿದ್ದಂತೆ ಮೋದಿ ವಿರುದ್ದದ ಹೋರಾಟದಲ್ಲಿ ಕಾಂಗ್ರೆಸ್ ಇರಲಿ ಎಂಬ ತೀರ್ಮಾನಕ್ಕೆ ಬಂದರು.
ಹೀಗಾಗಿ ಜೆಡಿಎಸ್ ಪಕ್ಷದ ಪರವಾಗಿ ಕರ್ನಾಟಕಕ್ಕೆ ಹೊರಡಬೇಕಾದ ಸನ್ನಿವೇಶದಲ್ಲಿ ಯೋಚನೆಗೆ ಬಿದ್ದ ಮಮತಾ,ಈಗ ಹೋಗಿ ಜೆಡಿಎಸ್ ಪರ ಪ್ರಚಾರ ಮಾಡಿದರೆ ಅದು ಕಾಂಗ್ರೆಸ್ಸನ್ನು ವಿರೋಧಿಸಿದಂತಾಗುತ್ತದೆ.ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಯೋಚನೆಗೆ ಬಿದ್ದು ಯೂ ಟರ್ನ್ ಹೊಡೆದುಬಿಟ್ಟರು.

ಅಂದ ಹಾಗೆ ಬಿಹಾರದ ಮುಖ್ಯಮಂತ್ರಿ,ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ವಿಷಯದಲ್ಲೂ ದೇವೇಗೌಡರಿಗೆ ಸಿಟ್ಟಿದೆ.
ಯಾಕೆಂದರೆ ವಿಧಾನಸಭೆ ಚುನಾವಣೆಗೂ ಮುನ್ನವೇ ಕರ್ನಾಟಕಕ್ಕೆ ಬರಲು,ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ನಿತೀಶ್ ಬಯಸಿದ್ದರು.
ಈ ಬಿಜೆಪಿ ವಿರೋಧಿ ಶಕ್ತಿಗಳಲ್ಲಿ ಕಾಂಗ್ರೆಸ್ ಕೂಡಾ ಇತ್ತು.ಹಾಗಂತಲೇ ಚುನಾವಣೆಗಿಂತ ಮುಂಚೆ ನೀವು ಕರ್ನಾಟಕಕ್ಕೆ ಬಂದು ಜೆಡಿಎಸ್ ಲೆಕ್ಕಾಚಾರವನ್ನು ಹಾಳು ಮಾಡಬೇಡಿ ಅಂತ ದೇವೇಗೌಡರು ನಿತೀಶ್ ಕುಮಾರ್ ಅವರಿಗೆ ಹೇಳಿದ್ದರು.
ದೇವೇಗೌಡರ ಮಾತಿನ ಪ್ರಕಾರ ನಿತೀಶ್ ಕರ್ನಾಟಕಕ್ಕೆ ಬರಲಿಲ್ಲ.ಆದರೆ ಅವರ ಒಲವು ಮಾತ್ರ ಸಿದ್ದರಾಮಯ್ಯ ಪರ ಇತ್ತು.
ಅಷ್ಟೇ ಅಲ್ಲ,ಜೆಡಿಎಸ್ ಪರವಾಗಿ ಕರ್ನಾಟಕಕ್ಕೆ ಬರಲು ಸಜ್ಜಾಗಿದ್ದ ನಾಯಕರನ್ನು ನಿತೀಶ್ ಅವರೇ ತಡೆದು ಕಾಂಗ್ರೆಸ್ ಗೆ ಉಪಕಾರ ಮಾಡಿದರು. ಮತ್ತಿದರ ಪರಿಣಾಮವಾಗಿ ಜೆಡಿಎಸ್ ಸಂಕಷ್ಟ ಅನುಭವಿಸಬೇಕಾಯಿತು ಎಂಬುದು ದೇವೇಗೌಡರ ಅನುಮಾನ.
ಸಾಲದೆಂಬಂತೆ ಈಗ ಅದೇ ನಿತೀಶ್ ಕುಮಾರ್ ಮಹಾಮೈತ್ರಿಕೂಟದ ಅರ್ಥಾತ್ ತೃತೀಯ ಶಕ್ತಿಯ ಪ್ರಧಾನಿ ಕ್ಯಾಂಡಿಡೇಟ್ ಅಗಲು ಹೊರಟಿದ್ದಾರೆ.
ಈ ಮಧ್ಯೆ ಜೆಡಿಎಸ್ ಗೆ ಸಹಕಾರದ ಭರವಸೆ ಕೊಟ್ಟು ಹಿಂದೆ ಸರಿದ ಮಮತಾ ಬ್ಯಾನರ್ಜಿ ಕೂಡಾ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ.
ಆದರೆ ತಮಗೆ ಕೈ ಕೊಟ್ಟ ಇಂತವರ ಕನಸು ಪೋಷಿಸಲು ತಮ್ಮ ಪಕ್ಷವೇಕೆ ಬೆಂಬಲ ಕೊಡಬೇಕು ಎಂಬುದು ದೇವೇಗೌಡರ ಹಾಲಿ ಸಿಟ್ಟು.ಹಾಗಂತಲೇ ಅವರು ಕುದಿಯುತ್ತಿದ್ದಾರೆ.ಹಾಗೆ ಕುದಿಯುತ್ತಲೇ ಬಿಜೆಪಿ ಕಡೆ ನೋಡುತ್ತಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here