ಸೈಬರ್ ಕ್ರೈಂ ತಡೆ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಅವಶ್ಯ: ಡಾ.ಅನಂತ ಪ್ರಭು

0
119

ಮಡಿಕೇರಿ ಮಾ.19-ಇತ್ತೀಚಿನ ಡಿಜಿಟಲೀಕರಣ ಯುಗದಲ್ಲಿ “ಸೈಬರ್ ಕ್ರೈಂ” ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇ-ಆಡಳಿತ ವ್ಯವಸ್ಥೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಅಗತ್ಯವಾಗಿ ಸೈಬರ್ ಕ್ರೈಂ ತಡೆ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಸೈಬರ್ ಕಾನೂನು ವಿಶೇಷ ತಜ್ಞರಾದ ಡಾ.ಅನಂತ ಪ್ರಭು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸಾಮಥ್ರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಆಡಳಿತ ತರಬೇತಿ ಸಂಸ್ಥೆಯ ಇ-ಆಡಳಿತ ವಿಭಾಗ ಮತ್ತು ಜಿಲ್ಲಾ ತರಬೇತಿ ಸಂಸ್ಥೆ, ಸಹಯೋಗದಲ್ಲಿ ಶುಕ್ರವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆದ “ಸೈಬರ್ ಸೆಕ್ಯುಟಿರಿ ಮತ್ತು ಇ-ಆಡಳಿತ” ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸೈಬರ್ ಅಪರಾಧಗಳಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಎಷ್ಟೇ ಜಾಗೃತಿ ವಹಿಸಿದರೂ ಸಾಲದು ಎಂದು ಅನಂತ ಪ್ರಭು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ತಾಣಗಳಲ್ಲಿ ಎಷ್ಟೇ ಒಳಿತಾಗಿದ್ದರೂ, ಸಹ ಅಷ್ಟೇ ಕೆಡುಕು ಸಹ ಇದೆ ಎಂಬುದನ್ನು ಮರೆಯಬಾರದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಳಿತು ಕೆಡುಕುಗಳ ನಡುವೆ ಹಗ್ಗದ ಮೇಲೆ ನಡೆಯುವಂತಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕ್ಯೂಆರ್ ಕೋಡ್ ನಿರ್ವಹಿಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕು. ನಿಖರ ಸಂಸ್ಥೆಯದೇ ಎಂದು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೋಸಕ್ಕೆ ತುತ್ತಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸೈಬರ್ ಕಾನೂನು ಉಲ್ಲಂಘಿಸಿದಲ್ಲಿ ಮೂರು ವರ್ಷದವರೆಗೆ ಜೈಲು ಶಿಕ್ಷೆ, ಜೊತೆಗೆ 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ ಬಹಳ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
ಜೀಮೇಲ್, ಪೇಸ್‍ಬುಕ್, ಟ್ವಿಟರ್‍ನ್ನು ಕಡ್ಡಾಯವಾಗಿ ಸೈನ್‍ಔಟ್ ಮಾಡಬೇಕು. ಇಲ್ಲದಿದ್ದಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅನಂತ ಪ್ರಭು ನುಡಿದರು.
ಮೊಬೈಲ್ ಮತ್ತು ಲ್ಯಾಪ್‍ಟಾಪ್ ಗಳಲ್ಲಿ ಇಂಟರ್‍ನೆಟ್ ಮುಖಾಂತರ ಮೋಸ ಹಾಗೂ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬುವುದರ ಬಗ್ಗೆ ವಿವಿದ ಅಪ್ಲಿಕೇಷನ್ ಮೂಲಕ ಮಾಹಿತಿ ನೀಡಿದರು. ಇಂಟರ್‍ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಆ್ಯಪ್‍ಗಳ ಸುರಕ್ಷತೆಯ ಕುರಿತು ಯಾವ ರೀತಿ ಮಾನದಂಡ ಅನುಸರಿಸಬೇಕೆಂಬ ಬಗ್ಗೆ ಸುದೀರ್ಘವಾಗಿ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಪೊಲೀಸ್ ಇನ್ಸ್‍ಪೆಕ್ಟರ್ ಹರೀಶ್ ಕುಮಾರ್ ಅವರು ಮಾತನಾಡಿ ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದರು.
ಸೈಬರ್ ಕ್ರೈಂ ತಡೆಯುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಸಂಸ್ಥೆಗಳಲ್ಲೂ ಸಹ ಪ್ರತೀ ಕೆಲಸದಲ್ಲಿಯೂ ಕಂಪ್ಯೂಟರ್, ವಾಟ್ಸ್‍ಆಫ್, ಪೇಸ್‍ಬುಕ್ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಅವರು ನುಡಿದರು.
ಆಡಳಿತ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕೆ.ವಿ.ಶಿವರಾಮಯ್ಯ ಅವರು ಮಾತನಾಡಿ ಸಾಮಾಜಿಕ ಜಾಲ ತಾಣಗಳ ಮೂಲಕ ಹಣವನ್ನು ದೋಚುವುದು ಹೆಚ್ಚಾಗುತ್ತದೆ. ಇದಕ್ಕೆ ವಿದ್ಯಾವಂತರೇ ತುತ್ತಾಗುತ್ತಿದ್ದಾರೆ. ಆದ್ದರಿಂದ ಎಚ್ಚರ ವಹಿಸುವುದು ಅಗತ್ಯ ಎಂದರು.
ಸೈಬರ್ ಅಪರಾಧ ಕುರಿತು ಜ್ಞಾನವಿಲ್ಲದೆ ಅನೇಕ ಸಾರ್ವಜನಿಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಮತ್ತು ಇ-ಆಡಳಿತದ ಬಗ್ಗೆ ಅಧಿಕಾರಿ ಹಾಗೂ ನೌಕರರಲ್ಲಿ ಈ ಬಗ್ಗೆ ಅರಿವನ್ನು ಮೂಡಿಸುವುದು ಅನಿವಾರ್ಯವಾಗಿದೆ ಎಂದರು.
ಕಂಪ್ಯೂಟರ್ ಲ್ಯಾಪ್ ಟಾಪ್, ಮೊಬೈಲ್ ಗಳಿಗೆ ನೆಟ್‍ವರ್ಕ್ ಸಂಪರ್ಕ ಇದ್ದಾಗ ಮಾತ್ರ ಸೈಬರ್ ಕ್ರೈಂ ನಡೆಯುತ್ತದೆ. ಈ ಅಪರಾಧ ಜನರ ಗಮನಕ್ಕೆ ಬರಬಹುದು, ಬರದಂತೆಯೂ ನಡೆಯಬಹುದು. ಡಾಟಾ ಕಳ್ಳತನವು ಹೆಚ್ಚಾಗಿ ನಡೆಯುತ್ತದೆ.
ಸರ್ಕಾರ ಈಗಾಗಲೇ ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಇ-ಆಡಳಿತ ಜಾರಿಗೊಳಿಸಿದೆ. ಇದರಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಜಾಗೃತರಾಗಿರಬೇಕು, ಕಾಗದ ರಹಿತ ಸೇವೆ ನೀಡುವುದರೊಂದಿಗೆ “ಇ-ಆಡಳಿತ ವ್ಯವಸ್ಥೆಯಲ್ಲಿ ವ್ಯವಹಾರ ಮಾಡುವಾಗ ಸೈಬರ್ ಕ್ರೈಂ ಗೆ ಒಳಗಾಗದಂತೆ ಕಟ್ಟೆಚ್ಚರ ವಹಿಸುವ ಅಗತ್ಯವಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರು ಇತರರು ಇದ್ದರು.

LEAVE A REPLY

Please enter your comment!
Please enter your name here