ಕುಡಿಯುವ ನೀರು ಯೋಜನೆಗೆ ಕೆ.ಜಿ.ಬೋಪಯ್ಯ ಅವರಿಂದ ಗುದ್ದಲಿ ಪೂಜೆ

0
103

ಮಡಿಕೇರಿ ಆ.26 :-ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನ ಆವಂದೂರು ಗ್ರಾಮದಲ್ಲಿ ಕುಡಿಯುವ ನೀರು ಯೋಜನೆಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಆವಂದೂರು ಗ್ರಾಮದಲ್ಲಿ ಸುಮಾರು 1.23 ಕೋಟಿ ರೂ. ವೆಚ್ಚದ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು ಸರ್ಕಾರ ಪ್ರತೀ ಗ್ರಾಮಕ್ಕೂ ಶಾಶ್ವತ ಕುಡಿಯುವ ನೀರು ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆ ದಿಸೆಯಲ್ಲಿ ಈ ಅವಕಾಶವನ್ನು ಪ್ರತಿಯೊಂದು ಗ್ರಾಮದವರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡಗು ಜಿಲ್ಲೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 300 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಒದಗಿಸಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿದೆ. ಬಿಡುಗಡೆಯಾಗದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಸರ್ಕಾರ ಒದಗಿಸಲಿದೆ. ಆ ನಿಟ್ಟಿನಲ್ಲಿ ಸ್ಥಳೀಯರು ಸಹ ಸಹಕರಿಸಬೇಕು ಎಂದು ಶಾಸಕರು ಕೋರಿದರು.
ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದರು.

ಸರ್ಕಾರ ಕೊಡಗು ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿದೆ. ಅದನ್ನು ಬಳಸಿಕೊಳ್ಳಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಾರ್ವಜನಿಕರಲ್ಲಿ ಕೋರಿದರು.
ಮದೆ ಗ್ರಾ.ಪಂ.ಅಧ್ಯಕ್ಷರಾದ ಚಂದ್ರಾವತಿ, ಸದಸ್ಯರಾದ ಮೋಹಿನಿ, ತೇಜಕುಮಾರ್, ಮಡಿಕೇರಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬೆಪ್ಪುರನ ಮೇದಪ್ಪ, ತಾ.ಪಂ.ಮಾಜಿ ಸದಸ್ಯರಾದ ಕೊಡಪಾಲು ಗಣಪತಿ, ತುಂತಜೆ ಕುಮುದಾ, ಪ್ರಮುಖರಾದ ಬೆಳ್ಯನ ರವಿ, ಚೆರಿಯಮನೆ ಆನಂದ, ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ, ಎಇಇ ಅಂಬೇಡ್ಕರ್, ಕಿರಿಯ ಎಂಜಿನಿಯರ್ ಕೃತಿಕ, ಪಿಡಿಒ ನಂಜುಂಡ ಸ್ವಾಮಿ, ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here