ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಪ್ರಸಾರಂಗದ ಉದ್ಘಾಟನೆ ಪ್ರಾಧ್ಯಾಪಕರು ಗ್ರಾಮವಾಸ್ತವ್ಯ ಮಾಡಿ;ಜನಸಾಮಾನ್ಯರ ಕಷ್ಟಕಾರ್ಪಣ್ಯ ಅರಿಯಿರಿ: ಪ್ರೊ.ಸ.ಚಿ.ರಮೇಶ್

0
145

ಬಳ್ಳಾರಿ,ಮಾ.23 ಸರ್ಕಾರಿ ಅಧಿಕಾರಿಗಳಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ಕನಿಷ್ಠ 4 ದಿನಗಳು ಗ್ರಾಮ ವಾಸ್ತವ್ಯ ಮಾಡಬೇಕು; ಆಗ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ಕಿರುಹೊತ್ತಿಗೆಗಳ ಮೂಲಕ ಬರೆದು ಹೊರತರಲು ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸ.ಚಿ.ರಮೇಶ ಹೇಳಿದರು.

ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗದ ಉದ್ಘಾಟನೆ ಮತ್ತು ಪ್ರಚಾರೋತ್ಸವ ಮಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜೋದ್ಧಾರಕ ಕೆಲಸ ಮಾಡುವ ಉಪನ್ಯಾಸಕರುಗಳು ಗ್ರಾಮವಾಸ್ತವ್ಯ ಮಾಡುವುದರಿಂದ ಪ್ರಗತಿಶೀಲ ಚಿಂತನೆಯು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ನೈಜ ಸಮಸ್ಯೆಗಳೆಡೆಗೆ ಬೆಳಕು ಚೆಲ್ಲಬಹುದು. ಪ್ರಸಾರಾಂಗವು ಯಾವುದೇ ವಿಶ್ವವಿದ್ಯಾಲಯದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತದೆ. ಹತ್ತು ವರ್ಷದ ಯುವ ವಿಶ್ವವಿದ್ಯಾಲಯಕ್ಕೆ ಇಂದು ಚಾರಿತ್ರಿಕ ದಿನವಾಗಿದೆ ಎಂದರು.

ಪ್ರಸಾರಾಂಗ ಎಂಬ ಪರಿಕಲ್ಪನೆಯನ್ನು ರಾಷ್ಟ್ರಕವಿ ಕುವೆಂಪುರವರು ತಮ್ಮ ಸಮಗ್ರ ಸಂಪುಟದಲ್ಲಿ ಉಲ್ಲೇಖಿಸಿದ್ದರು. ಅದರಂತೆಯೇ ಜ್ಞಾನ ಪ್ರಸಾರ ಮಾಡುವ ಕೈಂಕರ್ಯವನ್ನು ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಪ್ರಸಾರಾಂಗದ ಮೂಲಕ ಕಿರುಹೊತ್ತಿಗೆ, ನಿಘಂಟು, ಪ್ರಚಾರೋಪನ್ಯಾಸ ಮತ್ತು ಪುಸ್ತಕಗಳ ರೂಪದಲ್ಲಿ ಮಾಡುತ್ತಿವೆ ಎಂದರು. ಪೂರ್ಣತೆ ಮತ್ತು ಧನ್ಯತೆ ಪಡೆಯಲು ಪ್ರತಿ ವಿಶ್ವವಿದ್ಯಾಲಯವು ಪ್ರಸಾರಾಂಗವನ್ನು ಚಲನಶೀಲತೆಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಆಲಗೂರ ಮಾತನಾಡಿ, 2019ರಿಂದ ವಿಶ್ವವಿದ್ಯಾಲಯವು ಅನೇಕ ಯೋಜನೆಗಳಿಗೆ ಚಾಲನೆ ನೀಡಿದೆ. ಪ್ರಸಾರಾಂಗವನ್ನು ಅಧಿಕೃತವಾಗಿ ಮುಖ್ಯವಾಹಿನಿಗೆ ಕರೆತಂದು ಸಕ್ರೀಯವಾಗಿ ಕಾರ್ಯಚಟುವಟಿಕೆ ನಡೆಸುವುದು ನಮ್ಮ ಉದ್ದೇಶವಾಗಿದೆ. ಪುಸ್ತಕ ಪ್ರಕಟಣೆ ಜೊತೆಗೆ ಇಂದಿನ ಡಿಜಿಟಲ್ ಯುಗಕ್ಕೆ ಪೂರಕವಾಗಿ ಇ-ಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಹೊರತರುವ ಯೋಜನೆಯನ್ನು ವಿಶ್ವವಿದ್ಯಾಲಯ ಹೊಂದಿದೆ. ಮುಂಬರುವ ದಿನಗಳಲ್ಲಿ ವಿವಿ ವತಿಯಿಂದ ತಾಲೂಕಿಗೊಂದರಂತೆ ಉಪನ್ಯಾಸ ಶಿಬಿರ ಆಯೋಜಿಸಿ ಪ್ರಸಾರಾಂಗದ ಮೂಲಕ ಪುಸ್ತಕ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ವೃತ್ತಿ ಮತ್ತು ಪ್ರವೃತ್ತಿ ಬೇರೆಯಾದರೂ, ಬರವಣಿಗೆಯಲ್ಲಿ ಹಿಡಿತವಿದ್ದರೆ ಪ್ರಬುದ್ಧತೆ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಆಳವಾದ ಜ್ಞಾನ ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.
ವಿವಿಯ ಸಿಂಡಿಕೆಟ್ ಸದಸ್ಯರಾದ ಪ್ರೊ.ಬಸವರಾಜ ಪೂಜಾರ್ ಅವರು ಮಾತನಾಡಿ, ಪ್ರಸಾರಾಂಗ ಎಂಬುದು ವಿಶ್ವವಿದ್ಯಾಲಯ ಎಂಬ ತೇರಿಗೆ ಕಳಶವಿದ್ದಂತೆ. ವಿವಿಯ ಸಿಂಡಿಕೇಟ್ ಮಂಡಳಿ ಪ್ರಸಾರಾಂಗದ ಚಾಲನೆಗೆ ಹೆಗಲುಕೊಟ್ಟಿದೆ ಎಂದರು.
ಪ್ರಸಾರಾಂಗದ ನಿರ್ದೇಶಕರಾದ ಡಾ. ಅನಂತ ಝೆಂಡೇಕರ್, ಸಿಂಡಿಕೇಟ್ ಸದಸ್ಯರುಗಳಾದ ಪದ್ಮಾ ವಿಠ್ಠಲ್, ಡಾ.ಕನಕೇಶಮೂರ್ತಿ , ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here