ದಿನಸಿ ಸೇರಿ ಅಗತ್ಯ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಮಳಿಗೆಗಳಿಗೆ ನಿರ್ಬಂಧ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

0
109

ಶಿವಮೊಗ್ಗ : ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಂತೆ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಪಡಿತರ ಅಂಗಡಿ, ದಿನಸಿ, ಹಣ್ಣು ತರಕಾರಿ, ಮೀನು ಮಾಂಸ, ಹಾಲಿನ ಅಂಗಡಿ, ಪಶು ಆಹಾರ, ಅಗತ್ಯ ಸರಕು, ಕಟ್ಟಡ ನಿರ್ಮಾಣ ಸಾಮಾಗ್ರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂ ವ್ಯಾಪಾರ ನಡೆಸಲು ಅನುಮತಿ ಇದೆ. ಮುಂಗಾರು ಕೃಷಿ ಪೂರ್ವ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಎಲ್ಲಾ ರೀತಿಯ ಕೈಗಾರಿಕೆ, ಸಂಸ್ಥೆಗಳು ಕಾರ್ಯನಿರ್ವಹಿಸಬಹುದು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಅಧಿಕೃತವಾದ ಐಡಿ ಕಾರ್ಡ್ ನೀಡಿರಬೇಕು. ಮದುವೆ ಸಮಾರಂಭಗಳಿಗೆ ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಗರಿಷ್ಟ 50ಮಂದಿ ಮೀರದಂತೆ ನಿರ್ವಹಿಸಬೇಕು. ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಮುಕ್ತ ಅವಕಾಶವಿದೆ ಎಂದು ಹೇಳಿದರು.

ವಾರಾಂತ್ಯ ಕಫ್ರ್ಯೂ: ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಕಫ್ರ್ಯೂ ಇರಲಿದ್ದು, ಈ ಅವಧಿಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ದಿನಸಿ, ತರಕಾರಿ ಹಾಲು ಅಂಗಡಿಗಳು ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ತೆರೆದಿರುತ್ತದೆ. ಮೇ 4ರವರೆಗೆ ಪ್ರತಿದಿನ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ ಎಂದರು.

ಆಕ್ಸಿಜನ್ ಲಭ್ಯತೆ: ಮೆಗ್ಗಾನ್ ಮಾತ್ರವಲ್ಲದೆ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಮೆಗ್ಗಾನ್‍ನಲ್ಲಿ ಪ್ರಸ್ತುತ 280 ಆಕ್ಸಿಜನ್ ಬೆಡ್ ಲಭ್ಯವಿದ್ದು, 470ರವರೆಗೆ ಇದನ್ನು ಹೆಚ್ಚಿಸಲು ಸೌಲಭ್ಯಗಳಿವೆ. 40 ಐಸಿಯು ಸೌಲಭ್ಯವಿದ್ದು ಹೆಚ್ಚುವರಿಯಾಗಿ 20 ಜಂಬೋ ಸಿಲಿಂಡರ್ ಸಂಗ್ರಹಿಸಿಡಲು ಸೂಚಿಸಲಾಗಿದೆ. ಮೆಗ್ಗಾನ್‍ನಲ್ಲಿ 16ಸಾವಿರ ಲೀಟರ್ ಸಾಮಥ್ರ್ಯದ ಆಕ್ಸಿಜನ್ ಫಿಲ್ಲಿಂಗ್ ಪ್ಲಾಂಟ್ ಇದೆ. ಪ್ರತಿ ತಾಲೂಕಿನಲ್ಲಿ 50 ಆಕ್ಸಿಜನ್ ಬೆಡ್ ಲಭ್ಯವಿದೆ. ತಾಲೂಕಿನಲ್ಲಿ ತಲಾ 3 ಐಸಿಯು ಬೆಡ್ ಮತ್ತು 20 ಆಕ್ಸಿಜನ್ ಜಂಬೋ ಸಿಲಿಂಡರ್ ಇವೆ ಎಂದು ಹೇಳಿದರು.

ರೆಮಡೆಸಿವಿರ್: ರೆಮಡೆಸಿವಿರ್ ಇಂಜೆಕ್ಷನ್ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 307, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 116 ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಟ 18 ಇಂಜೆಕ್ಷನ್ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾಹಿತಿ ನೀಡಿದರು.

ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here