39 ವಾರ್ಡ್‍ಗಳಿಗೆ 187 ಜನ ಅಭ್ಯರ್ಥಿಗಳು ಕಣದಲ್ಲಿ,338 ಮತಗಟ್ಟೆಗಳ ಸ್ಥಾಪನೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಏ.27ರಂದು

0
83

ಬಳ್ಳಾರಿ,ಏ.26 :ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಗೆ ಏ.27ರಂದು ಮತದಾನ ನಡೆಯಲಿದೆ. ಒಟ್ಟು 39 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ 187 ಜನರು ಕಣದಲ್ಲಿಳಿದುಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮತದಾನಕ್ಕಾಗಿ 39 ವಾರ್ಡ್‍ಗಳಲ್ಲಿ 338 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಸೌಕರ್ಯಗಳನ್ನು ಚುನಾವಣಾ ಆಯೋಗದ ನಿಯಮಾನುಸಾರ ಜಿಲ್ಲಾಡಳಿತ ಕೈಗೊಂಡಿದೆ. 1,66,298 ಪುರುಷರು,1,74,538 ಮಹಿಳೆಯರು ಹಾಗೂ 36 ಇತರೇ ಸೇರಿದಂತೆ ಒಟ್ಟು 340882 ಮತದಾರರು ಕಣದಲ್ಲಿರುವವರ ಹಣೆಬರಹವನ್ನ ತಮ್ಮ ಮತದ ಮೂಲಕ ಬರೆಯಲಿದ್ದಾರೆ.

ಪ್ರತಿ ಮತಗಟ್ಟೆಗೆ 6 ಜನ ಚುನಾವಣಾ ಸಿಬ್ಬಂದಿ ಹಾಗೂ ಮತದಾನ ಮಾಡಲು ಆಗಮಿಸುವ ಮತದಾರರಿಗೆ ಥರ್ಮಲ್‍ಸ್ಕ್ಯಾನಿಂಗ್ ಮತ್ತು ಪಲ್ಸ್ ಆಕ್ಸಿಮಿಟರ್ ಪರಿಶೀಲಿಸಿ ಓರ್ವ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಒಟ್ಟು 2228 ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸುವುದರ ಜೊತೆಗೆ 200 ಜನ ಸಿಬ್ಬಂದಿಯನ್ನು ರಿಸರ್ವ್ ಮಾಡಿಟ್ಟುಕೊಳ್ಳಲಾಗಿದೆ. ಮಹಾನಗರ ಪಾಲಿಕೆಯ 500 ಸಿಬ್ಬಂದಿ ಸುಸೂತ್ರ ಚುನಾವಣಾ ಕಾರ್ಯದಲ್ಲಿ ಸಹಕರಿಸಲಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.

ಪ್ರತಿ ಮತಗಟ್ಟೆಗೂ 20 ಮಾಸ್ಕ್,6 ಸಣ್ಣ ಸ್ಯಾನಿಟೈಸರ್ ಬಾಟಲ್,ಮತದಾರರಿಗೂ ಸ್ಯಾನಿಟೈಸರ್ ಬಾಟಲ್, 6 ಫೆಸ್‍ಶಿಲ್ಡ್ ಹಾಗೂ 6 ಜೊತೆ ಗ್ಲೋಸ್‍ಗಳನ್ನು ಮಸ್ಟರಿಂಗ್ ಆಗಮಿಸಿದ ಚುನಾವಣಾ ಸಿಬ್ಬಂದಿಯ ಕೈಯಲ್ಲಿ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಚುನಾವಣೆಗೆ ನಿಯೋಜಿತರಾದ ಸಿಬ್ಬಂದಿ ಸ್ಥಳದಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಂಡು ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ತಮಗೆ ನಿಯೋಜಿಸಿದ ಮತಗಟ್ಟೆಗಳತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿತು.

ಕೋವಿಡ್ 19 ನಿಯಂತ್ರಣಕ್ಕೆ ಅಗತ್ಯ ಕ್ರಮ:

ಬಳ್ಳಾರಿ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಎಲ್ಲಾ ಮತಗಟ್ಟೆ ಕೇಂದ್ರಗಳು, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನು ಸೋಂಕು ನಿವಾರಕ ರಾಸಾಯನದಿಂದ ಸಿಂಪಡಿಸಿ ಸೋಂಕು ಮುಕ್ತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾನಗದ ಪಾಲಿಕೆಯ ಚುನಾವಣೆಯ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವ ಮೂಲಕ ಎಲ್ಲಾ ಅಧಿಕಾರಿ/ಸಿಬ್ಬಂದಿಯವರಿಗೆ ಹ್ಯಾಂಡ್ ಸ್ಯಾನಿಟೈಸರ್ ವಿತರಿಸಿ ತಿಳಿವಳಿಕೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಗೆ ಚುನಾವಣಾ ಕಿಟ್ ಜೊತೆಗೆ ಕೋವಿಡ್-19ರ ನಿಯಂತ್ರಣ ಕಿಟ್ (ಹ್ಯಾಂಡ್ ಸ್ಯಾನಿಟೇಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್‍ಶೀಲ್ಡ್) ಸಹ ವಿತರಿಸಲಾಗಿದೆ. ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನು ಪ್ರತಿದಿನ ಮೂರು ಬಾರಿ ಸ್ಯಾನಿಟೇಸ್ ಮಾಡಲಾಗುತ್ತಿದೆ. ಸಿಬ್ಬಂದಿಯವರು ಮತಗಟ್ಟೆ ಕೇಂದ್ರಗಳಿಗೆ ತೆರಳುವ ಎಲ್ಲಾ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳ ಹೊರ ಮತ್ತು ಒಳ ಹೋಗುವ ದ್ವಾರಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸಿಂಗ್ ಹಾಗೂ ಟ್ರಿಪಲ್‍ಲೆಯರ್ ಮಾಸ್ಕ್ ವಿತರಿಸಿ ಥರ್ಮಲ್‍ಸ್ಕ್ಯಾನಿಂಗ್ ಹಾಗೂ ಪಲ್ಸ್ ಆಕ್ಸಿಮಿಟರ್‍ನಿಂದ ತಪಾಸಣೆ ಮಾಡುವುದರ ಜೊತೆಗೆ ರೋಗಲಕ್ಷಣಗಳು ಕಂಡು ಬಂದ ಸಿಬ್ಬಂದಿಗೆ ಆವರಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದ ಸಿಬ್ಬಂದಿಗೆ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದರು.
ಆಯ್ದಾ 20 ಸ್ಥಳಗಳಲ್ಲಿ ಕೈತೊಳೆದುಕೊಳ್ಳಲು ಲಿಕ್ವಿಡ್‍ಸೋಪ್ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರೀತಿ ಗೆಹ್ಲೋಟ್ ಅವರು ಚುನಾವಣೆಯ ಸಮಯದಲ್ಲಿ ಕೋವಿಡ್ ನಿಯಂತ್ರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸಿದ್ದಾರೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲು ಪ್ರತ್ಯೇಕ ಪೊಲೀಸ್ ಮತ್ತು ಹೋಂಗಾರ್ಡಗಳನ್ನು ನಿಯೋಜಿಸಿ ಧ್ವನಿವರ್ಧಕ ಮೂಲಕ ತಿಳಿವಳಿಕೆ ನೀಡಲಾಗುತ್ತದೆ. ಎಲ್ಲಾ ಶೌಚಾಲಯಗಳನ್ನು ಪ್ರತಿ 2 ಗಂಟೆಗೆ ಒಮ್ಮೆ ಸ್ಯಾನಿಟೈಸ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಚುನಾವಣಾ ದಿನಾಂಕ ಪ್ರಕಟವಾದ ದಿನದಿಂದ ಪಾಲಿಕೆಯ ಎಲ್ಲಾ ಕಸ ಸಂಗ್ರಹಣ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೋವಿಡ್ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here