ಸೋಂಕು ಗುಣಮುಖರಾಗಿ ಹಿರೇಹೊನ್ನಳ್ಳಿ ಕಾಳಜಿ ಕೇಂದ್ರದಿಂದ ಹೊರಬಂದವರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಸಿಬ್ಬಂದಿಗಳು

0
96

ಧಾರವಾಡ ಮೇ.27.:ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೆ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಧಾನ ಮಂತ್ರಿಗಳು ಸಭೆಯಲ್ಲಿ ನೀಡಿದ ಸಲಹೆ ಮೇರೆಗೆ ‘ಕೋವಿಡ್ ಮುಕ್ತ ಗ್ರಾಮ ಅಭಿಯಾನ’ಕ್ಕೆ ಕರೆ ನೀಡಿ, ಗ್ರಾಮ ಪಂಚಾಯತಿಗಳಿಗೆ ಕೋವಿಡ್ ನಿಯಂತ್ರಣಕ್ಕಾಗಿ ಸೂಕ್ತ ಹಾಗೂ ಅಗತ್ಯ ಕ್ರಮಕೈಗೊಳ್ಳಲೂ ಅಧಿಕಾರ ನೀಡಿ ಆದೇಶಿಸಿದರು ಮತ್ತು ಸೋಂಕುನಿಯಂತ್ರಣಕ್ಕೆ ಅಗತ್ಯ ನೇರವು ನೀಡುವುದಾಗಿ ತಿಳಿಸಿದರು.
ಇದರಿಂದ ಮತ್ತಷ್ಟು ಜವಾಬ್ದಾರಿ ತೆಗೆದುಕೊಂಡ ಗ್ರಾಮಪಂಚಾಯತಿಗಳು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ. ಅವರ ಸಲಹೆ ಮತ್ತು ನಿರಂತರ ಮಾರ್ಗದರ್ಶನದಲ್ಲಿ ಸಕ್ರೀಯವಾಗಿ ಗ್ರಾಮಮಟ್ಟದ ಕೋವಿಡ್ ಕಾರ್ಯಪಡೆಗಳು ತೊಡಗಿಸಿಕೊಂಡವು.
ಅನೇಕ ಗ್ರಾಮಪಂಚಾಯತಿಗಳು ಕೋವಿಡ್ ಮುಕ್ತ ಗ್ರಾಮಗಳನ್ನಾಗಿ ಮಾಡಲು ಕಂಟೈನ್ಮೆಂಟ್ ಝೋನ್, ಮೈಕ್ರೋ ಕಂಟೈನ್ಮೆಂಟ್ ಝೋನ್, ಸೆಮಿಲಾಕ್‍ಡೌನ್, ಸಂಪೂರ್ಣ ಲಾಕ್‍ಡೌನ್, ಗ್ರಾಮದ ಪ್ರಮುಖ ರಸ್ತೆಗಳಿಗೆ ಬೆಲಿ ಮತ್ತು ಕಟ್ಟಿಗೆಗಳಿಂದ ಸಂಚಾರವನ್ನು ಬಂದ ಮಾಡುವ ಕ್ರಮಗಳನ್ನು ಕೈಗೊಂಡಿವೆ.
ಗ್ರಾಮಗಳಲ್ಲಿ ಕೋವಿಡ್ ಸೋಂಕಿತರು ಹೋಮ್ ಐಸೋಲೆಷನ್ ಆಗುವುದನ್ನು ನಿಲ್ಲಿಸಿ, ಅಧಿಕಾರಿಗಳೊಂದಿಗೆ ಅವರ ಮನ ಒಲಿಸಿ, ಜಿಲ್ಲಾಡಳಿತವು ತಾಲೂಕಾ ಮಟ್ಟದಲ್ಲಿ ತೆರೆದಿರುವ ಕೋವಿಡ್ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಮಾಡಿದ್ದಾರೆ. ಮತ್ತು ಕೆಲವು ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮದ ಶಾಲೆ, ಸಮುದಾಯ ಭವನ, ವಿದ್ಯಾರ್ಥಿವಸತಿನಿಯಲಗಳಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಿ, ಸೋಂಕಿತರಿಗೆ ಉಚಿತ ಊಟ, ಔಷಧಿ, ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿವೆ.
ಇಂದು ಕಲಘಟಗಿ ತಾಲೂಕಿನ ದುಮ್ಮವಾಡ ಹೋಬಳಿಯ ಹಿರೇಹೊನ್ನಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ವಿದ್ಯಾರ್ಥಿನಿಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಕಾಳಜಿ ಕೇಂದ್ರದಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಹೊರಬಂದ ಜಾರ್ಖಂಡ ರಾಜ್ಯದ ಹಾಗೂ ಹಿರೇಹೊನ್ನಳ್ಳಿಯ ಕೂಲಿ ಕಾರ್ಮಿಕರಾಗಿರು 8 ವ್ಯಕ್ತಿಗಳಿಗೆ ಗ್ರಾಮ ಪಂಚಾಯತ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೆಂಪು ಗುಲಾಬಿ ಹೂ ನೀಡಿ, ಚಪ್ಪಾಳೆ ತಟ್ಟಿ, ಹರ್ಷದಿಂದ ಸ್ವಾಗತಿಸಿದರು. ಗುಣಮುಖರಾದವರು ಸಿಬ್ಬಂದಿಗಳಿಗೆ ಕೃತಜ್ಞತೆಯಿಂದ ಕೈ ಮುಗಿದು ಮನೆಗೆ ತೆರಳಿದರು.
ಹಿರೇಹೊನ್ನಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವ ಕೋವಿಡ್ ಕಾಳಜಿ ಕೇಂದ್ರದ ಉಸ್ತುವಾರಿಯನ್ನು ಕಲಘಟಗಿ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಪ್ರೋಬೆಷನರಿ ತಹಶೀಲ್ದಾರ ಕೆ.ಆರ್.ಪಾಟೀಲ, ತಾಲೂಕಾ ಪಂಚಾಯತ ಇ.ಓ. ಎಸ್.ಎಂ.ಮೇಟಿ, ಕಂದಾಯ ನಿರೀಕ್ಷಕ ನಾಶಿರ ಅಮರಗೋಳ, ಪಿ.ಡಿ.ಓ. ಉಮೇಶ ಚಿಕ್ಕಣ್ಣವರ ಮತ್ತು ಗ್ರಾಮ ಲೆಕ್ಕಿಗ ಸಂತೋಷ ಲಮಾಣಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಹಿರೇಹೊನ್ನಳ್ಳಿಯ ಕೋವಿಡ್ ಕಾಳಜಿ ಕೇಂದ್ರದಲ್ಲಿ 100 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, 17 ಜನ ಸೋಂಕಿತರು ಆರೈಕೆ ಪಡೆಯುತ್ತಿದ್ದಾರೆ. ಕಾಳಜಿ ಕೇಂದ್ರಕ್ಕೆ ಆಗಮಿಸುವ ಸೋಂಕಿತರಿಗೆ ಮನೆಯವರಂತೆ ಸ್ವಾಗತಿಸಿ, ಪ್ರೀತಿಯಿಂದ ಕಾಣುವ ಮತ್ತು ಗುಣಮುಖರಾದ ಸೋಂಕಿತರನ್ನು ಖುಷಿಯಿಂದ ಹೊಗುವಂತೆ ನೋಡಿಕೊಳ್ಳುತ್ತಿರುವದರಿಂದ ಇದು ನಿಜ ಅರ್ಥದಲ್ಲಿ ಕಾಳಜಿ ಕೇಂದ್ರವಾಗಿದೆ.

LEAVE A REPLY

Please enter your comment!
Please enter your name here