ಯಡಿಯೂರಪ್ಪ ಗೇಮ್ ಪ್ಲಾನು ಬದಲಾಗಿದ್ದೇಕೆ?

0
215

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೇಮ್ ಪ್ಲಾನು ಬದಲಾಗಿದೆ.
ಮೊನ್ನೆ ಮೊನ್ನೆಯ ತನಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾಕರಂದ್ಲಾಜೆ ಬರಲಿ,ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಬರಲಿ ಎನ್ನುತ್ತಿದ್ದ ಅವರು ಈಗ ಉಲ್ಟಾ ಹೊಡೆದಿದ್ದಾರೆ.
ಅವರ ಗೇಮ್ ಪ್ಲಾನು ಇದ್ದಕ್ಕಿದ್ದಂತೆ ಬದಲಾಗಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂಬುದು ರಹಸ್ಯವೇನಲ್ಲ.
ಅಂದ ಹಾಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎದುರಿಸಲು,ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ ಅಂತ ಮೋದಿ-ಷಾ ಜೋಡಿ ಯೋಚಿಸಿರುವುದು ನಿಜ.
ಅಷ್ಟೇ ಅಲ್ಲ,ಈ ರೀತಿಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಅದು ಒಂದು ಸೂತ್ರವನ್ನು ರಚಿಸಿ ಕುಮಾರಸ್ವಾಮಿ ಅವರಿಗೆ ವಿವರಿಸಿ ಹಲವು ದಿನಗಳೇ ಆಗಿವೆ.
ಅರ್ಥಾತ್,ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.
ಆದರೆ ವಿಲೀನದ ವಿಷಯದಲ್ಲಿ ಕುಮಾರಸ್ವಾಮಿ ಅವರಿಗಾಗಲೀ, ದೇವೇಗೌಡರಿಗಾಗಲೀ ಆಸಕ್ತಿ ಇಲ್ಲ.
ಪಕ್ಷಕ್ಕೆ ಎಲ್ಲಿಯವರೆಗೆ ಐಡೆಂಟಿಟಿ ಇರುತ್ತದೋ?ಅಲ್ಲಿಯವರೆಗೆ ಓಕೆ.ಆದರೆ ಒಂದು ಸಲ ವಿಲೀನವಾದರೆ ಅಲ್ಲಿಗೆ ಕತೆ ಕ್ಲೋಸು ಎಂಬುದು ಅವರ ಯೋಚನೆ.
ವಸ್ತುಸ್ಥಿತಿ ಎಂದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮಾತುಕತೆ ಇಲ್ಲಿಗೆ ನಿಂತಿದೆ.ಈ ವಾರ ಲೋಕಸಭೆ ಅಧಿವೇಶನಕ್ಕೆ ದಿಲ್ಲಿಗೆ ಹೋಗುತ್ತಿರುವ ದೇವೇಗೌಡರಿಗೆ ಪ್ರಧಾನಿ ಮೋದಿಯವರ ಜತೆ ಮಾತನಾಡುವ ನಿರೀಕ್ಷೆ ಏನೋ ಇದೆ.ಆದರೆ ಅದು ಯಾವ ಸ್ವರೂಪ ಪಡೆಯಬಹುದು ಎಂಬ ಬಗ್ಗೆ ಅವರಿಗೂ ಸ್ಪಷ್ಟತೆ ಇಲ್ಲ.
ಅದೇನೇ ಇರಲಿ,ಆದರೆ ಈ ಬಾರಿಯ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಜತೆ ಬಿಜೆಪಿಗೂ ಟಾನಿಕ್ ಕೊಟ್ಟಿದ್ದಾರೆ. ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಉಭಯ ಪಕ್ಷಗಳು ಖಾಡಾಖಾಡಿ ಕದನಕ್ಕೆ ಸಜ್ಜಾಗುವ ಸುಳಿವು ಕೊಟ್ಟಿದ್ದಾರೆ.
ಯಾವಾಗ ಇದು ಕಟ್ ಅಂಡ್ ಕ್ಲಿಯರ್ ಆಯಿತೋ?ಯಡಿಯೂರಪ್ಪ ಹೊಸ ಪ್ರಪೋಸಲ್ಲಿನೊಂದಿಗೆ ಆಟಕ್ಕಿಳಿದಿದ್ದಾರೆ.
ಕರ್ನಾಟಕದಲ್ಲಿ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವರು ಒಂದು ಸೂತ್ರವನ್ನು ಈ ಹಿಂದೆ ಹೈಕಮಾಂಡ್ ವರಿಷ್ಟರಿಗೆ ವಿವರಿಸಿ ಬಂದಿದ್ದರು.
ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತರಬೇಕು,ಮಾಜಿ‌ ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರಬೇಕು ಎಂಬುದು ಈ ಪ್ರಪೋಸಲ್ಲು.
ಆದರೆ ಯಾವಾಗ ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುವ ಸುಳಿವು ಸ್ಪಷ್ಟವಾಗಿ ಗೋಚರವಾಗತೊಡಗಿತೋ?ಆಗ ಯಡಿಯೂರಪ್ಪ ಧಿಡೀರನೇ ತಮ್ಮ ಗೇಮ್ ಪ್ಲಾನು ಬದಲಿಸಿದ್ದಾರೆ. ಹೀಗಾಗಿ,ಕರ್ನಾಟಕದಲ್ಲಿ ಪಕ್ಷ ಮರಳಿ ಮೇಲೇಳಲು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವತ: ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಬರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಯಾವಾಗ ಈ ನಿರ್ಧಾರ ಪಕ್ಕಾ ಆಯಿತೋ?ಇದಾದ ನಂತರ ಡಾಲರ್ ಕಾಲೋನಿಯ ಅವರ ನಿವಾಸ ಧವಳಗಿರಿಯಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ,ಯಡಿಯೂರಪ್ಪ ಅವರ ಈ ಗೇಮ್ ಪ್ಲಾನು ಸ್ಪಷ್ಟವಾಗುತ್ತಿದ್ದಂತೆಯೇ ಅವರ ಪುತ್ರ ವಿಜಯೇಂದ್ರ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೆಯಲ್ಲಿ ಒಂದು ಹೋಮ ನಡೆಸಿದ್ದಾರೆ. ನಂತರ ದಿಲ್ಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಒಂದು ಪತ್ರ ಕೊಟ್ಟು ಬಂದಿದ್ದಾರೆ.
ಅದರ ಪ್ರಕಾರ,ಕರ್ನಾಟಕದಲ್ಲಿ ಪಕ್ಷದ ಅರವತ್ತಾರು ಶಾಸಕರ ಪೈಕಿ ನಲವತ್ತಾರು ಮಂದಿ ಈಗಲೂ ಯಡಿಯೂರಪ್ಪ ಅವರ ಜತೆಗಿದ್ದಾರೆ.
ಹಾಗೆಂಬ ವಿವರದ ಪತ್ರವನ್ನು ಅಮಿತ್ ಷಾ ಅವರಿಗೆ ಕೊಟ್ಟ ವಿಜಯೇಂದ್ರ:ನಿಮ್ಮ ಆಶೀರ್ವಾದವಿದ್ದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸುತ್ತೇವೆ ಎಂದರಂತೆ.
ಆದರೆ ಇದಕ್ಕೆ ಅಮಿತ್ ಷಾ ಏನು ಹೇಳಿದರು ಅಂತ ಗೊತ್ತಾಗದೆ ಇದ್ದರೂ ಪಾರ್ಲಿಮೆಂಟ್ ಚುನಾವಣೆಯ ದೃಷ್ಟಿಯಿಂದ ಯಡಿಯೂರಪ್ಪ ಕ್ಯಾಂಪಿಗೆ ಒಂದು ಮಟ್ಟದ ಪವರ್ ತುಂಬುವ ಯೋಚನೆಗೆ ಅವರು ಬಂದಂತಿದೆ.

ಮೋದಿ-ಷಾ ಲೆಕ್ಕಾಚಾರ ಏನು?

ಅಂದ ಹಾಗೆ ಮೋದಿ ಮತ್ತು ಅಮಿತ್ ಷಾ ಜೋಡಿಗೆ ಯಡಿಯೂರಪ್ಪ ಅವರ ವಿಷಯದಲ್ಲಿ ವಿಶ್ವಾಸ ಕುಸಿದು ಹೋಗಿತ್ತು ಎಂಬುದು ನಿಜ.
ಆದರೆ ಹೀಗೆ ವಿಶ್ವಾಸ ಕುಸಿದ ಕಾಲದಲ್ಲಿ ಅವರು ಯಾರನ್ನು ನಂಬಿದರೋ?ಅವರು ದೊಡ್ಡ ಮಟ್ಟದಲ್ಲಿ ವಿಫಲರಾಗಿರುವುದು ಮೋದಿ-ಷಾ ಜೋಡಿಗೆ ಭ್ರಮನಿರಸನ ಉಂಟು ಮಾಡಿದೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತವರ ಮಗನ ಹಾವಳಿ ತಡೆಗಟ್ಟಿ,ಪ್ರಧಾನಿ ಮತ್ತು ಗೃಹ ಸಚಿವರು ದಾಂಗುಡಿ ಇಟ್ಟರೆ ನಿರಾಯಾಸವಾಗಿ ನೂರಾ ನಲವತ್ತು ಸೀಟು ಗೆಲ್ಲಬಹುದು ಅಂತ ಯಡಿಯೂರಪ್ಪ ವಿರೋಧಿಗಳು ಹೇಳಿದ್ದನ್ನು ಮೋದಿ-ಷಾ ಜೋಡಿ ಅಕ್ಷರಶ: ನಂಬಿತ್ತು.
ಆದರೆ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಕಾಂಗ್ರೆಸ್ ಅದ್ಧೂರಿ ಗೆಲುವು ಗಳಿಸಿದ ನಂತರ ಮೋದಿ-ಷಾ ಜೋಡಿಗೆ ಒಂದು ವಿಷಯ ಕನ್ ಫರ್ಮ್ ಆಗಿದೆ.
ಅದೆಂದರೆ,ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಧರ್ಮಾಧಾರಿತ ರಾಜಕಾರಣ ವರ್ಕ್ ಔಟ್ ಆಗುವುದಿಲ್ಲ.ಬದಲಿಗೆ ಜಾತಿ ಆಧರಿತ ರಾಜಕಾರಣವಷ್ಟೇ ಅಲ್ಲಿ ಸಕ್ಸಸ್ ಆಗುತ್ತದೆ ಎಂಬುದು.
ಯಾವಾಗ ಇದು ಸ್ಪಷ್ಟವಾಗುತ್ತಾ ಹೋಯಿತೋ?ಅಷ್ಟಾದ ನಂತರ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಅವರ ಸಂದೇಶಗಳಿಗೆ ಬೆಲೆ ಸಿಗತೊಡಗಿದೆ.ಮತ್ತು ಇದನ್ನರ್ಥ ಮಾಡಿಕೊಂಡ ಯಡಿಯೂರಪ್ಪ ಕೂಡಾ ವರಿಷ್ಟರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ,ಅಶೋಕ್ ಪ್ರತಿಪಕ್ಷ ನಾಯಕರಾಗಲಿ ಎಂಬ ಪ್ರಪೋಸಲ್ಲನ್ನು ಅವರು ಆತ್ಮವಿಶ್ವಾಸದಿಂದ ವರಿಷ್ಟರಿಗೆ ರವಾನಿಸಲು ಇದೇ ಮುಖ್ಯ ಕಾರಣ.

ವಿಜಣ್ಣ-ಕುಮಾರಣ್ಣ ಕ್ಲೋಸಾಗಿದ್ದಾರೆ

ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರ ಗೇಮ್ ಪ್ಲಾನು ಬದಲಾಗಿದ್ದೇಕೆ ಎಂಬ ವಿಷಯದಲ್ಲಿ ಹಲವು ಅನುಮಾನಗಳಿವೆಯಾದರೂ,ಜೆಡಿಎಸ್-ಬಿಜೆಪಿ ಮೈತ್ರಿ ಏರ್ಪಟ್ಟರೆ ತಮ್ಮ ಬಣದ ಹಲವರು ಸೈಡ್ ಲೈನಿಗೆ ಹೋಗಬಹುದು ಎಂಬ ಆತಂಕ ಯಡಿಯೂರಪ್ಪ ಅವರಲ್ಲಿರುವುದು ಮುಖ್ಯ ಕಾರಣ.
ಅದೇ ರೀತಿ ಇಂತಹ ಸಂದರ್ಭದಲ್ಲಿ ಬಿಜೆಪಿಯ ರಥಕ್ಕೆ ಬೊಮ್ಮಾಯಿ-ಶೋಭಾ ಎಂಬ ಚಕ್ರಗಳಿದ್ದರೆ ಅದು ಪರಿಪೂರ್ಣ ಶಕ್ತಿಯೊಂದಿಗೆ ರಥ ಎಳೆಯುವುದು ಕಷ್ಟ ಎಂಬುದು ಯಡಿಯೂರಪ್ಪ ಅವರ ಯೋಚನೆ.
ಹೀಗಾಗಿ ವಿಜಯೇಂದ್ರ-ಅಶೋಕ್ ಜೋಡಿ ಲೈಮ್ ಲೈಟಿಗೆ ಬಂದರೆ ಮುಂದೆ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದು ಯಡಿಯೂರಪ್ಪ ಅವರ ಯೋಚನೆ.
ಅಂದ ಹಾಗೆ ಇದೆಲ್ಲ ಏನೇ ಇದ್ದರೂ ಕುಮಾರಸ್ವಾಮಿ ಜತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕ್ಲೋಸಾಗಿಯೇ ಇದ್ದಾರೆ.
2019 ರಲ್ಲಿ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದರಲ್ಲ?ಇದಾದ ನಂತರ ಬಿಜೆಪಿ ವರಿಷ್ಟರ ಮೇಲೆ ಸಿಟ್ಟಾಗಿದ್ದ ಅವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಲು ಬಯಸಿದ್ದರು.
ಇಂತಹ ಬಯಕೆಗೆ ಪೂರಕವಾಗಿ ದೇಶದ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ವಿಜಯೇಂದ್ರ ಭೇಟಿ ಮಾಡಿ ಚರ್ಚಿಸಿದ್ದರಂತೆ.
ಆ ಸಂದರ್ಭದಲ್ಲಿ ತಮ್ಮ ರಣನೀತಿಯನ್ನು ರೂಪಿಸಲು ಆಗುವ ವೆಚ್ಚ,ಪಕ್ಷ ಕಟ್ಟಲು ಆಗುವ ವೆಚ್ಚದ ವಿವರ ಕೊಟ್ಟ ಪ್ರಶಾಂತ್ ಕಿಶೋರ್,ಇಷ್ಟೆಲ್ಲ ಆದರೂ ನೀವು ಒಂದು ಕೆಲಸ ಮಾಡಲೇಬೇಕು ಎಂದರಂತೆ.
ಅದೇನು ಅಂತ ಕೇಳಿದರೆ,ಈ ಪ್ರಾದೇಶಿಕ ಪಕ್ಷ ಅಧಿಕಾರದ ಆಸೆ ಇಟ್ಟುಕೊಳ್ಳಬೇಕೆಂದರೆ ಜೆಡಿಎಸ್ ಪಕ್ಷದ ಜತೆ ಕೈ ಜೋಡಿಸಬೇಕು.ಇಲ್ಲದಿದ್ದರೆ ಈ ಪ್ರಯತ್ನ ಕೆಜೆಪಿ-2 ಆಗುತ್ತದೆ.
ಹಾಗಾಗಬಾರದು ಎಂದರೆ ನಿಮ್ಮ ಪಕ್ಷ ಜೆಡಿಎಸ್ ಜತೆ ಕೈ ಜೋಡಿಸಬೇಕು.ಅಧಿಕಾರ ಹಂಚಿಕೆಯ ಪ್ರಶ್ನೆ ಬಂದರೆ ಮೊದಲ ಕಂತಿನಲ್ಲಿ ಕುಮಾರಸ್ವಾಮಿಯವರಿಗೆ ಅಧಿಕಾರ ಬಿಟ್ಟುಕೊಡಲು ರೆಡಿ ಆಗಬೇಕು
ಎಂದಾಗ ವಿಜಯೇಂದ್ರ ಒಪ್ಪಿ ವಾಪಸ್ಸಾಗಿದ್ದರು.
ಅಷ್ಟೇ ಅಲ್ಲ,ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಶಾಂತ್ ಕಿಶೋರ್ ಹೇಳಿದ್ದನ್ನು ಅವರಿಗೆ ವಿವರಿಸಿದ್ದರು.
ಆದರೆ ಇತ್ತೀಚಿನವರೆಗೆ‌ ಕಿತ್ತಾಡಿ,ಈಗ ಹೊಂದಾಣಿಕೆ ಎಂದರೆ‌ ಜನ ಒಪ್ಪುವುದಿಲ್ಲ.ಹೀಗಾಗಿ ಸ್ವಲ್ಪ ದಿನದ ನಂತರ ಈ ಕುರಿತು ಮಾತನಾಡೋಣ ಎಂದು ವಿಜಯೇಂದ್ರ ಅವರಿಗೆ ಹೇಳಿದ್ದ‌ ಕುಮಾರಸ್ವಾಮಿ ಈ ವಿಷಯದಲ್ಲಿ ಪಾಸಿಟಿವ್ ಆಗಿಯೇ ಇದ್ದರು.
ಆದರೆ ಮುಂದಿನ ಕೆಲವೇ ದಿನಗಳಲ್ಲಿ ಇಂತಹ ಪ್ರಾದೇಶಿಕ ಪಕ್ಷ ತಲೆ ಎತ್ತುವ ಮತ್ತು ಯಾರ್ಯಾರ ಜತೆ ಅದು ಹೊಂದಾಣಿಕೆಗೆ ತವಕಿಸುತ್ತಿದೆ ಎಂಬ ವಿವರ ಪಡೆದ ಬಿಜೆಪಿ ವರಿಷ್ಟರು ಯಡಿಯೂರಪ್ಪ ಟೀಮಿನ ಮೇಲೆ ಮುರಕೊಂಡು ಬಿದ್ದರು.
ಪರಿಣಾಮ?ಕರ್ನಾಟಕದ ನೆಲೆಯಲ್ಲಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಯಡಿಯೂರಪ್ಪ-ವಿಜಯೇಂದ್ರ ಅವರ ಕನಸು ಕರಗಿ ಕಣ್ಮರೆಯಾಯಿತು.
ಆದರೆ ಇಷ್ಟೆಲ್ಲದರ ನಡುವೆಯೂ ಕುಮಾರಸ್ವಾಮಿ ಜತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕ್ಲೋಸಾಗಿಯೇ ಇದ್ದಾರೆ.
ಆದರೆ ಕ್ಲೋಸಾಗಿದ್ದೇವೆ ಅಂತ ಪಕ್ಷವನ್ನು ಅವರ ಹಿಡಿತಕ್ಕೆ ಬಿಟ್ಟುಕೊಡಬಾರದಲ್ಲ?ಅದನ್ನೇ ಈಗ ಯಡಿಯೂರಪ್ಪ ಮಾಡುತ್ತಿದ್ದಾರೆ.

ಅಶೋಕ್ ಫಾರ್ ನಾರ್ಥ್

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಅಶೋಕ್ ಅವರಿಗೆ ಪ್ರಾಮಿನೆನ್ಸು ಸಿಗುವುದು ಯಡಿಯೂರಪ್ಪ ವಿರೋಧಿಗಳಿಗೆ ಇಷ್ಟವಿಲ್ಲ.
ಹೀಗಾಗಿ,ಇವರು ಇಲ್ಲಿದ್ದರೆ ತಾನೇ ಆಟ ಅಂತ ಈ ವಿರೋಧಿಗಳು ಹೊಸ ಕ್ಯಾಂಪೇನು ಶುರು ಮಾಡಿದ್ದಾರೆ.
ಅಶೋಕ್ ಫಾರ್ ನಾರ್ಥ್ ಅಂತ ಹುಯಿಲೆಬ್ಬಿಸುವುದು ಈ ಕ್ಯಾಂಪೇನು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿ.ವಿ.ಸದಾನಂದಗೌಡರಿಗೆ ವಯಸ್ಸಾಗಿದೆ.ಈ ಮಧ್ಯೆ ಕ್ಷೇತ್ರದ ಒಕ್ಕಲಿಗ ಮತದಾರರ ಪೈಕಿ ಶೇಕಡಾ ತೊಂಬತ್ತರಷ್ಟು ಜನ ಮರಸು ಒಕ್ಕಲಿಗರಾದ್ದರಿಂದ ಅದೇ ಪಂಗಡದ ಆರ್.ಅಶೋಕ್ ಅವರನ್ನು ಅಲ್ಲಿಂದ ಕಣಕ್ಕಿಳಿಸಬೇಕು ಎಂಬುದು ಅಲ್ಲಿನ ಕೂಗು.
ಅಂದ ಹಾಗೆ ಅಶೋಕ್ ಅವರಿಗೆ ಇದು ಇಷ್ಟವಿಲ್ಲ.ಹೇಗಾದರೂ ಮಾಡಿ ಇಲ್ಲೇ ಉಳಿದು ಒಂದು ಸಲ ಸಿಎಂ ಆಗುವುದು ಅವರ ಯೋಚನೆ.
ಆದರೆ ಯಡಿಯೂರಪ್ಪ ವಿರೋಧಿ ಗ್ಯಾಂಗು ಈಗಾಗಲೇ ಅಶೋಕ್ ಅವರು ಪಾರ್ಲಿಮೆಂಟಿಗೆ ನಿಂತರೆ ಪಕ್ಷ ಗೆಲ್ಲುತ್ತದೆ. ಇಲ್ಲದಿದ್ದರೆ ಸೋಲುತ್ತದೆ ಅಂತ ಹುಯಿಲೆಬ್ಬಿಸಲು ನಿರ್ಧರಿಸಿದೆ.
ಮುಂದೇನಾಗುತ್ತದೋ ಗೊತ್ತಿಲ್ಲ.ಆದರೆ ರಾಜ್ಯ ಬಿಜೆಪಿಯನ್ನು ವಶಕ್ಕೆ ಪಡೆಯುವ ಭರಾಟೆಯಲ್ಲಿ ಪಕ್ಷದ ಎರಡು ಬಣಗಳು ಪರಸ್ಪರ ಕಲ್ಲು ತೂರಾಟ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here