ಪೌರಕಾರ್ಮಿಕರ ರಕ್ಷಣೆಗೆ ಆಯೋಗ ಬದ್ಧ: ಎಂ.ಶಿವಣ್ಣ

0
93

ಮಂಡ್ಯ :- ರಾಷ್ಟ ಮತ್ತು ರಾಜ್ಯದಲ್ಲಿ ಸಫಾಯಿ ಕರ್ಮಚಾರಿ ಆಯೋಗ ಇರುವುದೇ ಪೌರಕಾರ್ಮಿಕ ರಕ್ಷಣೆಗಾಗಿ, ಅವರ ರಕ್ಷಣೆಯೇ ಆಯೋಗದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಹೇಳಿದರು.
ನಗರ ಸಭೆಯಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೈಗೊಂಡಿರುವ ಕ್ರಮದ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಆಯೋಗವು ನಗರಸಭೆ,ಮದ್ದೂರು, ಶ್ರೀರಂಗಪಟ್ಟಣ ಹಲವು ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಲಾಗಿರುತ್ತದೆ ಎಂದರು.
ಕೋವಿಡ್ ಸಮಯದಲ್ಲಿ ಅತಿ ಹೆಚ್ಚು ಜಾಗರೂಕರಾಗಿ ಕಾರ್ಯನಿರ್ವಹಿಸಲು ಪೌರಕಾರ್ಮಿಕರಿಗೆ ತರಬೇತಿ ನೀಡಿ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಲಾಕ್ ಡೌನ್ ಆಗಿರುವ ಹಿನ್ನಲೆ ಪೌರಕಾರ್ಮಿಕರಿಗೆ ಬಸ್, ಆಟೋ, ಸ್ಕೂಟರ್ ವ್ಯವಸ್ಥೆ ಇರುವುದಿಲ್ಲ. ಇದರಿಂದಾಗಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಈ ಕೂಡಲೇ ಪೌರಕಾರ್ಮಿಕರಿಗೆ ಅಗತ್ಯಕ್ಕೆ ತಕ್ಕಂತೆ ವಾಹನ ಸೌಲಭ್ಯಗಳನ್ನು ಕಲ್ಪಿಸಲು ತಿಳಿಸಿದರು. ಪೌರಕಾರ್ಮಿಕರಿಗೆ ಕೆಲಸದ ಸಂದರ್ಭದಲ್ಲಿ ಮಾಸ್ಕ್ , ಗ್ಲೌಸು, ಗಂಬೂಟು ಅಥವಾ ಶೂ ಧರಿಸುವಂತೆ ಕಡ್ಡಾಯವಾಗಿ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.
ಜಿಲ್ಲೆಯಲ್ಲಿ ಶೇ.90 ರಷ್ಟು ಪೌರಕಾರ್ಮಿಕರಿಗೆ ಲಸಿಕೆ ಕಾರ್ಯ ನಡೆದಿದೆ ಎಂದರು.
ಹೋಂ ಕ್ವಾರಂಟೈನ್, ಐಶೋಲೇಷನ್, ಮನೆಗಳಿಂದ ಕಸ ಸಂಗ್ರಹಣೆ ಮಾಡಲು ನಿಯೋಜಿಸಿರುವವರಿಗೆ ಸೋಂಕು ಹರಡುವ ಸಂಭವವಿರುವುದರಿಂದ ಅವರಿಗೆ ಪಿಪಿಇ ಕಿಟ್ ಗಳನ್ನು ನೀಡಿ ಕಡ್ಡಾಯವಾಗಿ ಧರಿಸುವಂತೆ ಕ್ರಮತೆಗೆದುಕೊಳ್ಳಬೇಕು ಎಂದರು.
ಪೌರಕಾರ್ಮಿಕರಿಗೆ 15 ದಿನಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು, ಕೋವಿಡ್ ಸಂದರ್ಭ ಇರುವುದರಿಂದ ಪ್ರತಿ ದಿನ ಕೆಲಸಕ್ಕೆ ತೆರಳುವ ಪೌರಕಾರ್ಮಿಕರಿಗೆ ಥರ್ಮಲ್ ಸ್ಕಾನಿಂಗ್ ಮಾಡಬೇಕು ಎಂದರು.
ಕಾರ್ಮಿಕರ ಕೆಲಸದ ಅವಧಿ 6 ಗಂಟೆಯಿಂದ 11 ಗಂಟೆವರೆಗೆ ಮಾತ್ರ ಇರಬೇಕು, ಯಾವುದೇ ಕಾರಣಕ್ಕೂ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು ವೇತನವನ್ನು ವಿಳಂಬ ಮಾಡದೇ ಸಕಾಲಕ್ಕೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಪೌರಕಾರ್ಮಿಕರಿಗೆ 20 ರೂಪಾಯಿ ಉಪಾಹಾರವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ 50 ಕ್ಕೆ ಇದ್ದನ್ನು ಹೆಚ್ಚಿಸಿ ಪೌರಕಾರ್ಮಿಕರಿಗೆ ರಕ್ಷಣೆಗೆ ಸಹಕರಿಸಬೇಕು ಎಂದು ನಗರಸಭೆಯ ಅಧ್ಯಕ್ಷರಿಗೆ ತಿಳಿಸಿದರು.
ಪೌರಕಾರ್ಮಿಕರು ಮೃತಪಟ್ಟರೇ 30 ಲಕ್ಷ ಪರಿಹಾರಧನವನ್ನು ನೀಡಬೇಕೆಂದು, ಹಾಗೂ ರಾಜ್ಯದಲ್ಲಿ ಗುರುತಿಸಲಾಗಿರುವ 5080 ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕುಟುಂಬದ ಅವಲಂಬಿತರಿಗೆ ರೂ. 5000/-ಗಳಂತೆ ಪ್ಯಾಕೇಜ್ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಸಭೆಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್ , ಆಯೋಗದ ಕಾರ್ಯದರ್ಶಿ ಆರ್. ರಮಾ, ನಗರಸಭಾ ಅಧ್ಯಕ್ಷ ಮಂಜುನಾಥ್, ನಗರಸಭಾ ಆಯುಕ್ತ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here