ರಾಜಕಾರಣದ ಗೀತೋಪದೇಶ ಮಾಡಿದ್ದರು ಬಂಗಾರಪ್ಪ!

0
148

ಗುದ್ದಾಡಿದರೆ ಗಂಧದ ಜತೆ ಗುದ್ದಾಡಿ.ಆದರೆ ಸೆಗಣಿಯ ಜತೆ ಗುದ್ದಾಡಬೇಡಿ ಎಂಬ ಗಾದೆ ಮಾತಿದೆ.
ಆ ಗಾದೆ ಮಾತನ್ನು ಅಕ್ಷರಶ: ನನಗೆ ನೆನಪು ಮಾಡಿಕೊಟ್ಟವರು ಬಂಗಾರಪ್ಪ.ಕರ್ನಾಟಕದ ರಾಜಕಾರಣ ಕಂಡ ವರ್ಣರಂಜಿತ ಮುಖ್ಯಮಂತ್ರಿಗಳ ಪೈಕಿ ಬಂಗಾರಪ್ಪ ಒಬ್ಬರು.ವರ್ಣರಂಜಿತ ಎಂದರೆ ಕಲರ್ ಫುಲ್ ಆಗಿರುವುದು.ಕಲರ್ ಫುಲ್ ಆಗಿರುವುದು ಎಂದರೆ ಬಟ್ಟೆ-ಬರೆ ತೊಡುವುದರಲ್ಲಲ್ಲ.ವ್ಯಕ್ತಿತ್ವದಲ್ಲೂ ದಿಲ್ ದಾರ್ ಆಗಿರುವುದು.
ಈ ರೀತಿ ದಿಲ್ ದಾರ್ ಆಗಿದ್ದ ಮುಖ್ಯಮಂತ್ರಿಗಳ ಪೈಕಿ ಗುಂಡೂರಾವ್,ರಾಮಕೃಷ್ಣ ಹೆಗಡೆ ಅವರಂತೆ ಬಂಗಾರಪ್ಪ ಕೂಡಾ ಒಬ್ಬರು.ಕೃಷ್ಣ ಕಲರ್ ಫುಲ್ ಆಗಿದ್ದರು.ಆದರೆ ಅವರು ಕ್ಲಾಸ್ ಲವ್ಲಿ ಮುಖ್ಯಮಂತ್ರಿಯಾಗಿದ್ದರು.ಆದರೆ ಅವರನ್ನು ಮಾಸ್ ಲವ್ಲಿ ಮುಖ್ಯಮಂತ್ರಿ ಅಂತ ಕರೆಯಲು ಸಾಧ್ಯವಿರಲಿಲ್ಲ.
ಒಂದು ಸಲ ಹೀಗೇ ಆಯಿತು.ಸದಾಶಿವನಗರದ ಬಂಗಲೆಯಲ್ಲಿ ನಾನು ಬಂಗಾರಪ್ಪ ಅವರ ಇಂಟರ್ ವ್ಯೂ ಮಾಡಬೇಕು ಅಂತ ತೀರ್ಮಾನವಾಗಿತ್ತು.ಆಗಿನ್ನೂ ಅವರ ಕುಟುಂಬ ಕಲಹದ ಕುರುಹು ಸಿಕ್ಕಿರಲಿಲ್ಲ.ಯಾಕೆಂದರೆ ಅವರು ಇನ್ನೂ ಮನೆ ಬಿಟ್ಟು ಹೊಸ ಮನೆಗೆ ಹೋಗಿರಲಿಲ್ಲ.
ಮುಂದೆ ಕುಟುಂಬ ಕಲಹದ ಪರಿಣಾಮವಾಗಿ ಬಂಗಾರಪ್ಪ ಬಾಡಿಗೆ ಮನೆಯಲ್ಲಿದ್ದರು.ಆನಂತರ ಸ್ವಂತ ಮನೆಗೆ ಹೋದರು.ಆದರೆ ಅದಕ್ಕೂ ಮುನ್ನ ಅವರದೊಂದು ಇಂಟರ್ ವ್ಯೂ ಮಾಡುವ ಅವಕಾಶ ನನ್ನೆದುರು ಬಂತು.
ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಅಪಾರ ನೆನಪಿನ ಶಕ್ತಿ ಇದ್ದ ಕೆಲವೇ ಮುಖ್ಯಮಂತ್ರಿಗಳಲ್ಲಿ ಬಂಗಾರಪ್ಪ ಒಬ್ಬರು.ಇಂತಹದೇ ನೆನಪಿನ ಶಕ್ತಿ ಇದ್ದ ಮತ್ತೋರ್ವ ಮುಖ್ಯಮಂತ್ರಿ ಎಂದರೆ ಧರ್ಮಸಿಂಗ್.ಅವರಿಗೆ ಸ್ವಾಮಿ ಎಂಬ ಆಪ್ತ ಸಹಾಯಕರೊಬ್ಬರಿದ್ದರು.
ಇದ್ದಕ್ಕಿದ್ದಂತೆ ಧರ್ಮಸಿಂಗ್ ಮಧ್ಯಪ್ರದೇಶದ ರಾಜಕಾರಣಿಯೊಬ್ಬರ ಹೆಸರು ಹೇಳಿ ಅವರ ಫೋನು ತೆಗೆದುಕೋ ಎನ್ನುತ್ತಿದ್ದರು.ಇವರು ನಂಬರು ಹುಡುಕಲು ತಡಕಾಡುತ್ತಿರುವಷ್ಟರಲ್ಲೇ ಧರ್ಮಸಿಂಗ್ ಅವರಿಗೆ ಸಿಟ್ಟು ಬಂದು ಬಿಡುತ್ತಿತ್ತು.ಹೀಗಾಗಿ ಆ ಊರಿನ ಕೋಡ್ ನಂಬರ್ ಸಮೇತ ಫೋನ್ ನಂಬರು ಹೇಳಿ,ಈ ನಂಬರು ತಗೋಳಿ ಎಂದು ಹೇಳುತ್ತಿದ್ದರು.
ಹಲವಾರು ಬಾರಿ ಈ ರೀತಿಯ ಉದಾಹರಣೆಗಳನ್ನು ಕಣ್ಣಾರೆ ಕಂಡ ನಾನು,ಒಂದು ಸಲ:ಇದೇನ್ರೀ?ಎಲ್ಲ ಊರುಗಳ ಕೋಡ್ ನಂಬರು.ಬೇಕಿದ್ದವರ ನಂಬರುಗಳನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡಿದ್ದಾರಲ್ಲ?ಇವರೇನು ರಾಜಕಾರಣಿಯಾ?ಟೆಲಿಫೋನ್ ಡೈರೆಕ್ಟರಿಯಾ?ಅಂತ ಅವರ ಆಪ್ತ ಸಹಾಯಕರೊಬ್ಬರನ್ನು ಕೇಳಿದ್ದೆ.
ಅದಕ್ಕವರು,ಸಾರ್,ಒಂದೆರಡಲ್ಲ ಎರಡು ಸಾವಿರಕ್ಕಿಂತ ಹೆಚ್ಚು ಫೋನ್ ನಂಬರುಗಳು ಅವರ ಜ್ಞಾಪಕದಲ್ಲಿವೆ.ನಾವೇನಾದರೂ ಅವರು ಹೇಳಿದ ನಂಬರು ಹುಡುಕಲು ತಡಕಾಡುತ್ತಿದ್ದರೆ ತಕ್ಷಣ ಸಾಹೇಬರೇ ಕೋಡ್ ನಂಬರು ಹೇಳಿ ಟೆಲಿಫೋನ್ ನಂಬರು ಹೇಳಿಬಿಡುತ್ತಾರೆ ಎಂದರು.ಆಗ ನಾನು,ಅಯ್ಯೋ,ಇಂತಹ ನಾಯಕರಿಗೆ ಆಪ್ತ ಸಹಾಯಕರು ಯಾಕೆ ಬೇಕು?ಅಂತ ತಮಾಷೆ ಮಾಡಿದ್ದೆ.
ಬಂಗಾರಪ್ಪ ಅವರಿಗೂ ಇಂತಹದೊಂದು ವಿಶೇಶ ಜ್ಞಾಪಕ ಶಕ್ತಿ ಇತ್ತು.ಅವತ್ತು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ,ನಿಮ್ಮೂರು ಯಾವುದು?ಅಂತ ಅವರೇ ಇಂಟರ್ ವ್ಯೂ ಶುರು ಮಾಡಿದರು.ಅವರದು ಸೊರಬ.ನಮ್ಮದು ಪಕ್ಕದೂರು ಸಾಗರ.ಹಾಗಂತ ಅವರಿಗೆ ಹೇಳಿದೆ.ಇದ್ದಕ್ಕಿದ್ದಂತೆ ಅವರು ಕುತೂಹಲ ತೋರಿಸಿ:ಅಲ್ಲಿ ಯಾರ ಮನೆಯವರು ನೀವು?ಎಂದು ಕೇಳಿದರು.
ಅಶೋಕಾ ರಸ್ತೆಯಲ್ಲಿ ತಾರಾನಾಥ್ ಅಂತ ಇದ್ದಾರೆ.ಅವರ ಮಗ ನಾನು ಎಂದೆ.ಅದಕ್ಕವರು,ಓ,ನಮ್ಮ ರಿಪೋರ್ಟರ್ ತಾರಾನಾಥ್ ಅವರ ಮಗನಾ ನೀವು?ಬಹಳ ವರ್ಷಗಳ ಹಿಂದೆ ಅವರು ಲೋಕಲ್ ಪೇಪರಿನಲ್ಲಿ ಒಂದು ಆರ್ಟಿಕಲ್ ಬರೆದಿದ್ದರು.ನಿಷ್ಟಾವಂತರೂ ಭಿನ್ನಮತೀಯರೇ?ಅಂತ.ಬಹಳ ಚೆನ್ನಾಗಿ ಬರೆದಿದ್ದರು.ಆಗ ನನಗೆ ಸಿಎಂ ಪೋಸ್ಟು ತಪ್ಪಿ ಗುಂಡೂರಾಯರ ಪಾಲಾಗಿ ಗೊಂದಲ ಶುರುವಾಗಿತ್ತು.ಅದೇನೇ ಇರಲಿ,ನನ್ನ ಅಭಿಮಾನಿ ಕಣ್ರೀ ಅವರು.ಅವರ ಮಗನಾ ನೀವು?ಖುಷಿಯಾಯಿತು ಕಣ್ರೀ ಎಂದರು.
ನಾನು ಮೂಕವಿಸ್ಮಿತನಾದೆ.ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ಲೇಖನ ಅದು.ಆ ಲೇಖನವನ್ನೂ ನೆನಪಿಟ್ಟುಕೊಂಡಿದ್ದರು ಬಂಗಾರಪ್ಪ.ಕೆಲ ತಿಂಗಳ ಹಿಂದೆ ನಾವು ಬರೆದಿದ್ದ ಲೇಖನ ನಮಗೇ ನೆನಪಿರುವುದಿಲ್ಲ.ಅಂತದರಲ್ಲಿ ಇಪ್ಪತ್ತು ವರ್ಷಗಳಷ್ಟು ಹಿಂದಿನ ಲೇಖನವನ್ನು ಬಂಗಾರಪ್ಪ ನೆನಪಿನಲ್ಲಿಟ್ಟುಕೊಂಡಿದ್ದರು.
ಆದರೆ ನಾನು ಹೋಗಿದ್ದು ಸಂದರ್ಶನಕ್ಕೆ.ರೆಡಿ ಮಾಡಿಟ್ಟುಕೊಂಡಿದ್ದ ಪ್ರಶ್ನೆಗಳನ್ನು ಕೇಳದೆ ಸುಮ್ಮನಿರುವಂತಿರಲಿಲ್ಲ.ಹೀಗಾಗಿ ನಾನು ವಿಷಯ ಬದಲಿಸಿ,ಸಾರ್,ನೀವು ಆಶ್ರಯದಂತಹ ಸ್ಕೀಮು ಜಾರಿಗೆ ತಂದಿರಿ,ಆರಾಧನಾ ಯೋಜನೆಯನ್ನು ಜಾರಿಗೆ ತಂದಿರಿ.ಆದರೆ ಈ ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಸಿಲುಕಿ ಸಿಎಂ ಹುದ್ದೆಯನ್ನು ಕಳೆದುಕೊಂಡಿರಲ್ಲ?ನಿಮಗೆ ಖೇದವೆನ್ನಿಸುವುದಿಲ್ಲವೇ?
ನೋ,ನೋ,ನಾನೇನೂ ಹುಟ್ಟುತ್ತಾ ಸಿಎಂ ಆಗಿರಲಿಲ್ಲವಲ್ಲ?ಹೀಗಾಗಿ ಅದು ನನ್ನ ಖಾಯಂ ಜಾಗವಲ್ಲ.ಎಲ್ಲಕ್ಕಿಂತ ಮಿಗಿಲಾಗಿ ಸಿಎಂ ಹುದ್ದೆಯಿಂದ ನನ್ನನ್ನು ಇಳಿಸಬೇಕೆಂಬುದು ಆರು ತಿಂಗಳ ಹಿಂದೆಯೇ ತೀರ್ಮಾನವಾಗಿತ್ತು.ಹೀಗಾಗಿ ಕ್ಲಾಸಿಕ್ ಕಂಪ್ಯೂಟರ್ ಹಗರಣವಲ್ಲದಿದ್ದರೆ ಇನ್ನೇನೋ ನೆಪ ಮುಂದಿಟ್ಟು ನನ್ನನ್ನು ಇಳಿಸುತ್ತಿದ್ದರು ಎಂದು ಒಂದೇ ಗುಕ್ಕಿಗೆ ಹೇಳಿದರು ಬಂಗಾರಪ್ಪ.
ಸಾರ್,ಕ್ಲಾಸಿಕ್ ಕಂಪ್ಯೂಟರ್ ಹಗರಣ ಒಂದು ಕೋಟಿ ತೊಂಭತ್ತೇಳು ಲಕ್ಷ ರೂಪಾಯಿ ಮೌಲ್ಯದ್ದು.ನಿಜಕ್ಕೂ ಆಗ ತೊಂಭತ್ತೆರಡರ ಹೊತ್ತಿನಲ್ಲಿ ಅದು ದೊಡ್ಡ ಮೊತ್ತವಲ್ಲವೇ?ಎಂದೆ.ಅದಕ್ಕವರು,ಅರೇ,ನಾನು ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕು.ಮೊಯ್ಲಿ ಸಿಎಂ ಆಗಬೇಕು ಎಂಬ ನೀಲನಕ್ಷೆ ಯಾವಾಗಲೋ ರೆಡಿ ಆಗಿತ್ತು ಕಣ್ರೀ.ನಿಜ ಹೇಳಬೇಕೆಂದರೆ ಕ್ಲಾಸಿಕ್ ಕಂಪ್ಯೂಟರ್ ಖರೀದಿ ಎಂಬುದು ಹಗರಣವೇ ಅಲ್ಲ.ನೀವು ನಿದ್ದೆಯಲ್ಲಿದ್ದವರನ್ನು ಎಬ್ಬಿಸಬಹುದು.ಆದರೆ ನಿದ್ದೆಯಲ್ಲಿದ್ದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ.ಹಾಗೊಂದು ವೇಳೆ ಅದು ಹಗರಣ ಎನ್ನುವುದಾಗಿದ್ದರೆ,ಮುಂಚಿತವಾಗಿಯೇ ನನಗೆ ಸಿಗ್ನಲ್ ಕೊಡಬಹುದಿತ್ತು.ಇದು ಹಗರಣವಾಗಿ ತಿರುಗುತ್ತದೆ ಎಂದು ಎಚ್ಚರಿಸಬಹುದಿತ್ತು.
ಆದರೆ ಆ ಕೆಲಸ ಯಾಕೆ ಮಾಡಲಿಲ್ಲ ಎಂದರೆ ನನ್ನನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎಂಬುದು ಯಾವತ್ತೋ ನಿರ್ಧಾರವಾಗಿತ್ತು.ಆಗ ಪ್ರಧಾನಮಂತ್ರಿಗಳಿಗೆ ಹತ್ತಿರವಾಗಿದ್ದ ಕೇರಳದ ರಾಜಕಾರಣಿಯೊಬ್ಬರು(ಕರುಣಾಕರನ್!)ತಮ್ಮ ಶಿಷ್ಯನನ್ನು ಕರ್ನಾಟಕದ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತು ಬಿಟ್ಟಿದ್ದರು.
ಹೀಗಾಗಿ ನಾನು ಏನೇ ಮಾಡಿದರೂ ಅವರು ನನ್ನನ್ನು ಕೆಳಗಿಳಿಸುತ್ತಿದ್ದರು.ಇದು ನನಗೆ ಮೊದಲೇ ಗೊತ್ತಿತ್ತು.ಹೀಗಾಗಿ ದಿಲ್ಲಿಗೆ ಹೋದಾಗ ನರಸಿಂಹರಾವ್ ಅವರಿಗೆ ನೇರವಾಗಿ ಹೇಳಿ ಬಂದಿದ್ದೆ.ನನ್ನನ್ನು ಇಳಿಸುತ್ತಿದ್ದೀರಿ?ಆದರೆ ನೆನಪಿಡಿ,ಮುಂದಿನ ಚುನಾವಣೆಯ ನಂತರ ಪಕ್ಷ ಅಧಿಕಾರ ಕಳೆದುಕೊಳ್ಳುತ್ತದೆ ಎಂದಿದ್ದೆ.ಆದರೆ ಅವರಿಗೆ ತಮ್ಮ ಆಪ್ತರ ಮಾತು ಮುಖ್ಯವಾಗಿತ್ತು.
ಅವರು ಈ ಮಾತು ಹೇಳುತ್ತಿದ್ದಂತೆಯೇ ನಾನು ನನ್ನ ಮಹತ್ವಾಕಾಂಕ್ಷೆಯ ಪ್ರಶ್ನೆ ಕೇಳಿದೆ.ಸಾರ್,ನಿಮಗಿಂತ ಮುಂಚೆ ಸಿಎಂ ಆಗಿದ್ದವರು ವೀರೇಂದ್ರಪಾಟೀಲ್.ಆದರೆ ಅವರು ಮದ್ಯದ ಲಾಬಿಯನ್ನು ಬಗ್ಗು ಬಡಿದರು ಎಂಬ ಕಾರಣಕ್ಕಾಗಿ ಕೆಳಗಿಳಿಸಿ,ರಾಜೀವ್ ಗಾಂಧಿ ಅವರು ನಿಮ್ಮನ್ನು ಸಿಎಂ ಮಾಡಿದರಲ್ಲವೇ?ಎಂದು ಕೇಳಿದೆ.
ಬಂಗಾರಪ್ಪ ಮೆಲ್ಲಗೆ ನಕ್ಕರು.ಆನಂತರ ಹೇಳಿದರು:ನೋಡಿ,ಅದರ ಕತೆಯೇ ಬೇರೆ.ಮದ್ಯದ ಲಾಬಿ ವೀರೇಂದ್ರಪಾಟೀಲ್ ಕೆಳಗಿಳಿಯಲು ಕಾರಣವಾಯಿತು ಎಂಬುದು ನನಗೆ ಗೊತ್ತಿದ್ದಂತೆ ನಿಜ.ಆದರೆ ನಾನು ಸಿಎಂ ಆಗಬೇಕು ಎಂಬ ಕಾರಣದಿಂದ ಆ ಕೆಲಸಕ್ಕೆ ಹೈಕಮಾಂಡ್ ಕೈ ಹಾಕಲಿಲ್ಲ.
ಅದು ಮದ್ಯದ ಲಾಬಿ ಮತ್ತು ಸಾರಾಯಿ ಲಾಬಿಯ ನಡುವಣ ಕದನ.ವೀರೇಂದ್ರಪಾಟೀಲರು ಮದ್ಯದ ಲಾಬಿಯನ್ನು ಬಡಿದರು.ಆದರೆ ಅದಕ್ಕಾಗಿ ಅವರ ಆಪ್ತರು ಸಾರಾಯಿ ಲಾಬಿಯ ನೆರವು ಪಡೆದರು.ನೀವು ಒಂದು ಲಾಬಿಯ ನೆರವು ಪಡೆದರೆ ಮತ್ತೊಂದು ಲಾಬಿಯನ್ನು ಬಗ್ಗು ಬಡಿಯಲೇಬೇಕು.
ಅಂದ ಹಾಗೆ ಮದ್ಯದ ಲಾಬಿಯ ಯಾರೂ ನನ್ನ ಪರವಾಗಿರಲಿಲ್ಲ.ಹಲವು ಕಾರಣಗಳಿಗಾಗಿ ಸಾರಾಯಿ ಲಾಬಿಯ ಕೆಲವರು ನನ್ನ ಜತೆಗಿದ್ದರು.ಆದರೆ ವೀರೇಂದ್ರಪಾಟೀಲರಿಗೆ ಆಪ್ತರಾಗಿದ್ದವರು ಸಾರಾಯಿ ಲಾಬಿಯ ಶಕ್ತಿ ಬಳಸಿಕೊಂಡು ಮದ್ಯದ ಲಾಬಿಯನ್ನು ಹೊಡೆದರು.ಯಾವಾಗ ಈ ಬೆಳವಣಿಗೆ ನಡೆಯಿತೋ?ಆಗ ಮದ್ಯದ ಲಾಬಿ,ತಮಗೆ ಬೇಕಾದ ನಾಯಕರನ್ನು ಹಿಡಿದುಕೊಂಡು ರಾಜೀವ್ ಗಾಂಧಿಯವರ ತನಕ ಹೋಯಿತು.ಆಂಧ್ರಪ್ರದೇಶದ ಸಿಎಂ ಜತೆ ಸೇರಿ ವೀರೇಂದ್ರಪಾಟೀಲರು ನ್ಯಾಷನಲ್ ಲೆವೆಲ್ಲಿನಲ್ಲಿ ಪಾರ್ಟಿ ಮೇಲೆ ಕಂಟ್ರೋಲು ತೆಗೆದುಕೊಳ್ಳಲು ಹೊರಟಿದ್ದಾರೆ ಅಂತ ಹೇಳಿಸಿತು.
ತಮ್ಮತಮ್ಮ ಜಾಗಕ್ಕೆ ಅಪಾಯವಿದೆ ಎಂದರೆ ಯಾರೇ ಆದರೂ ಸಿಟ್ಟಿಗೇಳುತ್ತಾರೆ.ಸಹಜವಾಗಿ ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಅಂತ ರಾಜೀವ್ ಗಾಂಧಿ ಸಿಟ್ಟಿಗೆದ್ದರು.ಅವರ ಪ್ಲಾನಿನ ಪ್ರಕಾರ ಎಲ್ಲವೂ ನಡೆಯಿತು.ಆ ಸಂದರ್ಭದಲ್ಲಿ ಯಾರನ್ನು ಸಿಎಂ ಮಾಡಬೇಕು?ಎಂಬ ಪ್ರಶ್ನೆ ಎದ್ದಾಗ ಸಹಜವಾಗಿಯೇ ನನ್ನ ಹೆಸರು ಕೇಳಿ ಬಂತು.ನಾನು ಸಿಎಂ ಆದೆ.
ಹಾಗಂತ ನನ್ನನ್ನು ಸಿಎಂ ಮಾಡುವ ಸಲುವಾಗಿಯೇ ಪಿತೂರಿ ನಡೆಯಿತು ಎಂದು ಭಾವಿಸಬೇಡಿ.ಒಬ್ಬರನ್ನು ಸಿಎಂ ಮಾಡಬೇಕು ಎಂಬ ಕಾರಣಕ್ಕಾಗಿಯೇ ಪಿತೂರಿ ನಡೆಯುವುದಿಲ್ಲ.ತಾವು ಹೇಳಿದಂತೆ ಕೇಳುವವರು ಇರಬೇಕು ಎಂಬ ಕಾರಣಕ್ಕಾಗಿ ಹಾಗೆ ಆಗಲು ಸಾಧ್ಯ.ನಾನು ಸಿಎಂ ಆಗುವಾಗ ಹೈಕಮಾಂಡ್ ಗೂ ಅಂತಹ ಉದ್ದೇಶವಿತ್ತು.ಮೊಯ್ಲಿ ಸಿಎಂ ಆಗುವಾಗಲೂ ಇಂತಹ ಉದ್ದೇಶ ಕೆಲಸ ಮಾಡಿತ್ತು.
ಅದರರ್ಥ ಏನು ಅಂದರೆ ತಮಗೆ ಪ್ರತಿಸ್ಪರ್ಧಿಯಾಗುವವರನ್ನು ಹೈ ಲೆವೆಲ್ಲಿನಲ್ಲಿರುವ ಯಾವುದೇ ನಾಯಕರು ಸಹಿಸುವುದಿಲ್ಲ.ಇದೇ ಕಾರಣಕ್ಕಾಗಿ ರಾಜೀವ್ ಗಾಂಧಿ ಅವರು ವೀರೇಂದ್ರಪಾಟೀಲರನ್ನು ಕೆಳಗಿಳಿಸಿದರು.ನರಸಿಂಹರಾಯರು ಇಂತಹದೇ ಕಾರಣಕ್ಕಾಗಿ ನನ್ನನ್ನು ಕೆಳಗಿಳಿಸಿದರು ಎಂದು ಹೇಳಿದ ಬಂಗಾರಪ್ಪ ಅರೆಕ್ಷಣ ಮೌನವಾದರು.
ಆನಂತರ ಇದ್ದಕ್ಕಿದ್ದಂತೆ ನನ್ನತ್ತ ನೋಡಿ:ಪೊಲಿಟಿಕಲಿ ಏನಾದರೂ ಕ್ವಶ್ಚನ್ ಇದ್ದರೆ ಕೇಳಿ.ಇದುವರೆಗೆ ನಾನೇನು ಹೇಳಿದೆನೋ?ಅದೆಲ್ಲ ಆಫ್ ದಿ ರೆಕಾರ್ಡು.ನೀವು ನಮ್ಮ ತಾರಾನಾಥ್ ಅವರ ಮಗ ಎಂದು ಇದನ್ನೆಲ್ಲ ನಿಮಗೆ ಹೇಳಿದೆ.ಆದರೆ ಇದನ್ನೆಲ್ಲ ಬರೆಯಬೇಡಿ ಎಂದರು.
ನಾನು ಸುಮ್ಮನಿದ್ದೆ.ಅವರೇ ಮಾತು ಮುಂದುವರಿಸಿದರು.ನೋಡಿ,ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ.ಹಾಗಂತ ನಾವು ಸುಮ್ಮನಿರಬಾರದು.ಮಂಚದ ಮೇಲೆ ಸುಮ್ಮನೆ ಮಲಗಿದ್ದ ವ್ಯಕ್ತಿಯೂ ಕೈ ಕಾಲು ಆಡಿಸುತ್ತಾನೆ.ಅರ್ಥಾತ್,ಅವನು ಕ್ರಿಯಾಶೀಲ ಅಂತಲೇ ಅರ್ಥವಲ್ಲವಾ?
ಹಾದು ಸಾರ್ ಎಂದೆ.
ನೀವು ದಿನನಿತ್ಯ ಯಾವುದಾದರೂ ಒಂದು ಚಿಂತೆ ಮಾಡುತ್ತಲೇ ಇರುತ್ತೀರಿ.ಹೀಗಾಗಿ ನೀವು ಚಿಂತಕರಲ್ಲವಾ?ಹೌದು ಅನ್ನದೇ ದಾರಿಯಿರಲಿಲ್ಲ.ನೀವು ಇಲ್ಲಿಂದ ಎದ್ದು ಹೋದ ಮೇಲೆ ಏನು ಮಾಡಬೇಕು ಅಂತ ಯೋಚಿಸಿರುತ್ತೀರಿ.ಅಷ್ಟು ಬುದ್ದಿ ನಿಮಗಿದೆ ಎಂದರೆ ನೀವು ಬುದ್ಧಿಜೀವಿಯಲ್ಲವಾ?ಹೌದು ಸಾರ್ ಎಂದೆ.
ಹೀಗಿರುವಾಗ ಬುದ್ದಿ ಜೀವಿಗಳು ಅಂತಲೋ?ಚಿಂತಕರು ಅಂತಲೋ?ಇನ್ಯಾವುದೋ ವರ್ಗಗಳನ್ನು ಏಕೆ ಸೃಷ್ಟಿಸುತ್ತೀರಿ?
ಆದರೆ ಯಾವ ಲೆವೆಲ್ಲಿನ ಕ್ರಿಯಾಶೀಲರು?ಯಾವ ಲೆವೆಲ್ಲಿನ ಚಿಂತಕರು?ಯಾವ ಲೆವೆಲ್ಲಿನ ಬುದ್ಧಿಜೀವಿ? ಎಂಬುದನ್ನು ಸಂದರ್ಭವೇ ತೀರ್ಮಾನಿಸುತ್ತದೆ.ಗಾಂಧಿಯ ಚಿಂತನೆಗಳನ್ನು ಇಷ್ಟಪಡುವವರಿದ್ದಂತೆ,ಗಾಂಧಿ ಹತ್ಯೆ ಮಾಡಿದ ಗೋಡ್ಸೆಯ ಚಿಂತನೆಗಳನ್ನು ಇಷ್ಟಪಡುವವರೂ ಇರುತ್ತಾರೆ.ಹಾಗಾದರೆ ಗಾಂಧೀ ಚಿಂತಕರೋ?ಗೋಡ್ಸೆ ಚಿಂತಕನೋ?ಹೀಗಾಗಿ ಹೇಳಿದೆ.ಬುದ್ದಿ ಜೀವಿಗಳು,ಚಿಂತಕರು ಎಂಬ ವರ್ಗಗಳನ್ನು ಸೃಷ್ಡಿಸುವುದೇ ಅರ್ಥಹೀನ.ನಾಲ್ಕು ಜನರ ಬದುಕು ಹಸನಾಗುವಂತೆ ಮಾಡಿ.ಆಗದಿದ್ದರೆ ಸುಮ್ಮನಿದ್ದು ಬಿಡಿ.ಬದುಕನ್ನು ಹೆಚ್ಚು ಗೋಜಲು ಮಾಡಿಕೊಳ್ಳಬೇಡಿ.
ಇರಲಿ,ಇದನ್ನೆಲ್ಲ ನಿಮ್ಮ ಬಳಿ ಹೇಳಬೇಕೆನ್ನಿಸಿತು ಹೇಳಿದೆ.
ಅಂದ ಹಾಗೆ ಸಧ್ಯದ ರಾಜಕಾರಣದ ಬಗ್ಗೆ ನನ್ನ ಮನಸ್ಸಿನಲ್ಲಿ ಏನೇ ಇರಬಹುದು. ಆದರೆ ಇದನ್ನು ನಾನು ಬಹಿರಂಗವಾಗಿ ಆಡಿದರೆ ಅಧಿಕಾರ ಹೋದ ಕಾರಣಕ್ಕಾಗಿ ಹತಾಶೆಯಿಂದ ಇಷ್ಟೆಲ್ಲ ಮಾತನಾಡಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ.ನಾನು ಬರೀ ಆಡಿ ತೋರಿಸುವವನಲ್ಲ.ಮಾಡಿ ತೋರಿಸುವವನು.
ಹೀಗಾಗಿ ಈಗ ನಾನು ಹೇಳಿದ್ದನ್ನು ಸಂದರ್ಶನದ ರೂಪದಲ್ಲಿ ಬರೆಯಬೇಡಿ.ಮತ್ತೊಂದು ಸಲ ಸಂದರ್ಶನಕ್ಕಾಗಿಯೇ ಬನ್ನಿ.ಆನ್ ದಿ ರೆಕಾರ್ಡೇ ಮಾತನಾಡುತ್ತೇನೆ.ಈಗ ನೀವು ನಮ್ಮ ತಾರಾನಾಥ್ ಮಗ ಎಂದು ಮಾತನಾಡಿದ್ದೇನೆ.ಇದೆಲ್ಲವನ್ನೂ ಮರೆತು ಬಿಡಿ ಎಂದರು.
ಹೀಗಾಗಿ ಅವತ್ತು,ನಾನು ಸದಾಶಿವನಗರದ ಅವರ ಬಂಗಲೆಯಲ್ಲಿ ಸುಮ್ಮನೆ ಮಜ್ಜಿಗೆ ಕುಡಿದು ಎದ್ದು ಬಂದೆ.ಇಪ್ಪತ್ತೈದು ವರ್ಷಗಳ ಈ ಅವಧಿಯಲ್ಲಿ ಸಂದರ್ಶನಕ್ಕೆಂದು ಹೋಗಿ,ಬರೆಯದೇ ಹೋದ ರಾಜಕೀಯ ನಾಯಕರೊಬ್ಬರ ಸಂದರ್ಶನ ಅಂದರೆ ಬಹುಶ: ಇದೊಂದೇ.
ಆದರೆ ಈಗ ಅಂತಹ ಕಲರ್ ಫುಲ್ ರಾಜಕಾರಣಿಯ ಬದುಕು ಆಫ್ ಆಗಿ ಹಲ ವರ್ಷಗಳೇ ಕಳೆಯುತ್ತಾ ಬಂದಿದೆ.ಹೀಗಾಗಿ ನನಗವರು ಮಾಡಿದ ಗೀತೋಪದೇಶವನ್ನು ನಿಮ್ಮೆದುರು ಆನ್ ಮಾಡಿದ್ದೇನೆ.ಒಬ್ಬ ಪತ್ರಕರ್ತನ ಬರವಣಿಯ ಹಿಂದೆ ಯಾವ್ಯಾವ ಮಾತುಗಳ ಪ್ರೇರಣೆಯಿರುತ್ತದೆ ಎಂಬ ಕಾರಣಕ್ಕಾಗಿ ಇದನ್ನೆಲ್ಲ ನಿಮಗೆ ಹೇಳಿದೆ.

ಆರ್.ಟಿ.ವಿಠ್ಢಲಮೂರ್ತಿ

                                                                                   

LEAVE A REPLY

Please enter your comment!
Please enter your name here