ಅಲುಗಾಡುತ್ತಿರುವ ಗದ್ದುಗೆಯನ್ನು ಅರುಣ್ ಸಿಂಗ್ ರಕ್ಷಿಸುತ್ತಾರಾ?

0
199

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಇತ್ತೀಚೆಗೆ ದೆಹಲಿಗೆ ಹೋದರು.
ಅವರ ಈ ಭೇಟಿ ಖಾಸಗಿ ವಿಷಯಕ್ಕೆ ಸಂಬಂಧಿಸಿದ್ದಾದರೂ ರಾಜಕೀಯ ವಲಯಗಳಲ್ಲಿ ಅದು ರೆಕ್ಕೆ,ಪುಕ್ಕ ಸೇರಿಸಿಕೊಂಡು ವಿಜೃಂಭಿಸಿತು.
ವಿಜಯೇಂದ್ರ ತಮ್ಮ ಖಾಸಗಿ ಕಾರ್ಯಕ್ರಮವನ್ನು ಮುಗಿಸಿದ ನಂತರ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಹೊಚ್ಚಹೊಸ ಸುದ್ದಿಗಳ‌ ಮಹಾಪೂರದಿಂದ ಕಂಗೊಳಿಸಿತು.
ಈ ಭೇಟಿಯ ಸಂದರ್ಭದಲ್ಲಿ ಅರುಣ್ ಸಿಂಗ್ ಹೇಳಿದ್ದಾರೆನ್ನಲಾದ ಮಾತುಗಳ ಸತ್ಯಾಸತ್ಯತೆ ಅನುಮಾನಾಸ್ಪದವಾದರೂ ಯಡಿಯೂರಪ್ಪ ಅವರ ಕ್ಯಾಂಪಿನಲ್ಲಿ ಅದು ಟಾನಿಕ್ ತರ ಚೆಲ್ಲಾಡಿತು.
ಅಂದ ಹಾಗೆ ಅವತ್ತು ಅರುಣ್ ಸಿಂಗ್ ಅವರು ವಿಜಯೇಂದ್ರ ಅವರ ಮುಂದೆ,ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ,ಬದಲಿಗೆ ಹಾಲಿ ಸಚಿವ ಸಂಪುಟವನ್ನು ಪುನರ್ರಚಿಸಲು ವರಿಷ್ಟರು ಚಿಂತನೆ ನಡೆಸಿದ್ದಾರೆ ಎಂದರಂತೆ.
ಪಕ್ಷದ ವರಿಷ್ಟರು ಒಬ್ಬ ಉಸ್ತುವಾರಿಯ ಮೂಲಕ,ಅದೂ ರಾಜ್ಯ ಬಿಜೆಪಿಯ ಒಬ್ಬ ಉಪಾಧ್ಯಕ್ಷರಿಗೆ ಇಂತಹ ಸಂದೇಶ ರವಾನಿಸುತ್ತಾರೆ ಎಂದರೆ ಬಿಜೆಪಿಯಲ್ಲಿ ಸಾಂಸ್ಥಿಕ ಚೌಕಟ್ಟಿಗೆ ಬೆಲೆಯೇ ಇಲ್ಲ ಅಂತರ್ಥ.
ಸರ್ಕಾರದ ಆಗು,ಹೋಗುಗಳ ಬಗ್ಗೆ ಒಬ್ಬ ಉಪಾಧ್ಯಕ್ಷರ ಬಳಿ ಚರ್ಚಿಸುವುದಾದರೆ ಆ ಪಕ್ಷಕ್ಕೆ ರಾಜ್ಯಾಧ್ಯಕ್ಷರು ಯಾಕೆ ಬೇಕು?
ಈ ವಿಷಯದಲ್ಲಿ ಸ್ಪಷ್ಟ ಸಂದೇಶ ನೀಡಬೇಕಾದವರು ಪ್ರಧಾನಿ ನರೇಂದ್ರ ಮೋದಿ,ಅಮಿತ್ ಷಾ ಇಲ್ಲವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ.
ಅಂದ ಹಾಗೆ ರಾಜ್ಯದಲ್ಲಿ ಉಸ್ತುವಾರಿ ಹೊಣೆ ಹೊತ್ತವರ ಜವಾಬ್ದಾರಿ ಏನು?ರಾಜ್ಯದಲ್ಲಿ ತಮ್ಮ ಪಕ್ಷ ಮತ್ತು ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಿ ವರಿಷ್ಟರಿಗೆ ಈ ಕುರಿತು ವರದಿ ಒಪ್ಪಿಸುವುದು.
ಇದಕ್ಕೆ ಪ್ರತಿಯಾಗಿ ಅವರು ನೀಡುವ ಸೂಚನೆಗಳ ಆಧಾರದ ಮೇಲೆ ಆಗುತ್ತಿರುವ ಲೋಪ,ದೋಷಗಳನ್ನು ಸರಿಪಡಿಸುವುದು.ವಾಸ್ತವವಾಗಿ ಉಸ್ತುವಾರಿಯ ಹೊಣೆ ಕೇಂದ್ರೀಕೃತವಾಗಿರುವುದು ಈ ವಿಷಯದ ಮೇಲೆ.
ಆದರೆ ಅರುಣ್ ಸಿಂಗ್ ಶುರುವಿನಿಂದಲೂ ಪಕ್ಷ ಮತ್ತು ಸರ್ಕಾರದಲ್ಲಿರುವ ಅಸಮಾಧಾನದ ಮೂಲವನ್ನು ಗುರುತಿಸುವ ಬದಲು ಯಡಿಯೂರಪ್ಪ ಅವರನ್ನು ರಕ್ಷಿಸುವ ಗುರಾಣಿಯಂತಾಗಿ ಹೋಗಿದ್ದಾರೆ.
ಇರಲಿ,ಈಗ ಅವರು ಹೇಳಿ ಕಳಿಸಿದ್ದಾರೆನ್ನಲಾದ ಮಾತುಗಳನ್ನೇ ನೋಡೋಣ.ಯಾವ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ ಎಂಬುದು ಅವರ ಮೊದಲ ಮಾತು.
ಆದರೆ ನಾಯಕತ್ವ ಬದಲಾವಣೆಯ ಮಾತು ಪದೇ ಪದೇ ಕೇಳಲು ಏನು ಕಾರಣ?ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದಲ್ಲ,ಹಲವು ಬಾರಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆ.
ಶುರುವಿನಲ್ಲಿ ಯತ್ನಾಳ್ ಅವರಿಗೆ ಷೋಕಾಸ್ ನೋಟೀಸ್ ಕೊಟ್ಟಿದ್ದೇನೋ ಸರಿ,ಆದರೆ ಅದಕ್ಕೆ ಅವರೇನಾದರೂ‌ ಉತ್ತರ ಕೊಟ್ಟಿದ್ದಾರಾ?ಕೊಟ್ಟಿದ್ದರೆ ಆ ಉತ್ತರ ಏನು?ಅನ್ನುವುದು ಬಹಿರಂಗವಾಗಬೇಕಿತ್ತು.
ಆದರೆ ಇದುವರೆಗೆ ಆ ಕುರಿತು ಯಾವ ಮಾಹಿತಿಯೂ ಇಲ್ಲ ಸಾಲದೆಂಬಂತೆ ಮೊನ್ನೆಯೂ ಯತ್ನಾಳ್ ಅವರು ನಾಯಕತ್ವದ ವಿರುದ್ಧ ಗುಡುಗಿದ್ದಾರೆ.ಹಾಗಿದ್ದರೆ ಯತ್ನಾಳ್ ವಿರುದ್ದ ಈ ಕ್ಷಣದವರೆಗೆ ಯಾವ ಕ್ರಮವೂ ಜರುಗದಿರುವುದು ಏಕೆ?
ಅದೇ ರೀತಿ ಸಚಿವ ಸಿ.ಪಿ.ಯೋಗೀಶ್ವರ್ ತಮ್ಮ ಅಸಮಾಧಾನವನ್ನು ದೆಹಲಿಯ ಮಟ್ಟಕ್ಕೆ ಕೊಂಡೊಯ್ದರಲ್ಲ?ಅದರ ವಿರುದ್ದ ಯಡಿಯೂರಪ್ಪ‌ ಕ್ಯಾಂಪಿನ ಕಲಿಗಳು ಆರ್ಭಟಿಸಿದರು.ಮಂತ್ರಿ ಮಂಡಲದಿಂದ ಯೋಗೀಶ್ವರ್ ವಜಾ ಆಗ್ಲೇಬೇಕ್ ಎಂದರು.
ಆದರೆ ಯೋಗೀಶ್ವರ್ ಮಾತ್ರ ಮುಂದೇನಾಗುತ್ತದೋ ನೋಡೋಣ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ ಮೌನವಾದರು.
ಆದರೆ ಇದುವರೆಗೆ ಯೋಗೀಶ್ವರ್ ವಿರುದ್ದ ಯಾವುದೇ ಕ್ರಮವಾಗಿಲ್ಲ ಏಕೆ?
ಹೀಗೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಯಾರೇನೇ ಅಪಸ್ವರ ಎತ್ತಿದರೂ ಅದನ್ನು ಅಡಗಿಸುವ ಕೆಲಸವಾಗಿಲ್ಲ.
ಹಾಗೊಂದು ವೇಳೆ ಇಂತಹ ಬೆಳವಣಿಗೆಗಳ ಬಗ್ಗೆ ಅಸಮಾಧಾನವಾಗಿದ್ದಿದ್ದರೆ ಮೋದಿ-ಅಮಿತ್ ಷಾ ಸುಮ್ಮನಿರುತ್ತಿದ್ದರೇ?ಒಂದು ವೇಳೆ ಅವರೇನಾದರೂ ಭಿನ್ನಮತದ ವಿರುದ್ಧ ಎಚ್ಚರಿಕೆ ನೀಡಿದ್ದರೆ ಅದನ್ನು ಧಿಕ್ಕರಿಸಬಲ್ಲ ಗುಡ್ ದಾ ಯಾರಿಗಾದರೂ ಇತ್ತೇ?
ಅಂದ ಮೇಲೆ ಮೋದಿ-ಸಮಿತ್ ಷಾ ಯಾಕೆ ಮಾತನಾಡುತ್ತಿಲ್ಲ?ಅಂದರೆ ಏಕಕಾಲಕ್ಕೆ ಯಡಿಯೂರಪ್ಪ ಅವರನ್ನು ಚಿವುಟುವ ಕೆಲಸವೂ ನಡೆಯುತ್ತದೆ,ಮತ್ತೊಂದೆಡೆಯಿಂದ ಅವರನ್ನು ಸಮಾಧಾನಿಸುವ ಆಟವೂ ನಡೆಯುತ್ತಿದೆ.
ರಾಜಕಾರಣದಲ್ಲಿ ಇದಕ್ಕೆ ಕಪ್ಪ ಸಂಸ್ಕೃತಿಯ ಆಟ ಎನ್ನುತ್ತಾರೆ.ಈ ಆಟದಲ್ಲಿ ಎಲ್ಲರೂ ಉಣ್ಣುವವರೇ ಎಂದಲ್ಲ,ಆದರೆ ತುಂಬ ಜನ ಉಣ್ಣುವುದು ಮಾತ್ರ ನಿಜ.
ಈ‌ ಕಪ್ಪ ಸಂಸ್ಕೃತಿಯ ಆಟ. ಕರ್ನಾಟಕದಲ್ಲಿ ತನ್ನ‌ ವಿರಾಟ್ ಸ್ವರೂಪದ ಕುರುಹು ತೋರಿಸಿದ್ದು 1990 ರಲ್ಲಿ.
ಅದಕ್ಕೂ ಮುಂಚೆ ದೆಹಲಿಯ ಸಣ್ಣ,ಪುಟ್ಟ ಇಚ್ಚೆಗಳನ್ನು ಪೂರೈಸುವ ಕೆಲಸ ನಡೆಯುತ್ತಿತ್ತು.
ಅದರೆ 1989 ರಲ್ಲಿ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಿತಲ್ಲ?ಆನಂತರ ಶುರುವಾಯಿತು ದಿಲ್ಲಿಯ ಕರಾಮತ್ತು.
ಅಷ್ಟೊತ್ತಿಗಾಗಲೇ ಕೇಂದ್ರದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿತ್ತಲ್ಲ?ಹೀಗಾಗಿ ಅದಕ್ಕೆ ಆದಾಯದ ಕೊರತೆ ಎದುರಾಯಿತು.ಹೀಗಾಗಿ ಪಕ್ಷದ ರಾಷ್ಟ್ರೀಯ ಅಧಿವೇಶನ ನಡೆಸಲು ಹಣಕಾಸು ನೆರವು ನೀಡಬೇಕು ಎಂಬ ಸಂದೇಶ ವೀರೇಂದ್ರ ಪಾಟೀಲರಿಗೆ ತಲುಪಿತು.ಆದರೆ ಅವರು ನಿರಾಕರಿಸಿಬಿಟ್ಟರು.
ಮುಂದೆ ಅವರನ್ನು ಕೆಳಗಿಳಿಸಲು ನಡೆದ ಪ್ರಯತ್ನಗಳ ಹಿಂದೆ ಕೆಲಸ ಮಾಡಿದ್ದು ಇದೇ ಅಸಮಾಧಾನ.
ಬಂಗಾರಪ್ಪ,ಮೊಯ್ಲಿ ಕಾಲದಲ್ಲಿ ಪರಿಸ್ಥಿತಿ ತೂಗಿಕೊಂಡು ಹೋಯಿತು.
ಕೇಂದ್ರದಲ್ಲಿ ಪಿ.ವಿ.ನರಸಿಂಹರಾಯರ ಅಲ್ಪ ಮತದ ಸರ್ಕಾರವನ್ನು ಉಳಿಸಿಕೊಳ್ಳುವ ಕಸರತ್ತು ನಡೆಯುತ್ತಿತ್ತಲ್ಲ?ಆ ಸಂದರ್ಭದಲ್ಲಿ ನಡೆದ ಜೆಎಂಎಂ ಹಗರಣದಲ್ಲಿ ಕರ್ನಾಟಕದಿಂದಲೂ ಹಣ ರವಾನೆಯಾಗುತ್ತಿತ್ತು ಅಂತ ಕೋಲಾಹಲ ಎದ್ದಿತ್ತು.
ನರಸಿಂಹರಾಯರ ಸರ್ಕಾರ ಉಳಿಸಿಕೊಳ್ಳುವ ಭಾಗವಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸದಸ್ಯರಿಗೆ ಹಣ ನೀಡಲಾಯಿತು ಎಂಬ ಆರೋಪ‌ದ ಬಗ್ಗೆ ಸಿಬಿಐ ತನಿಖೆಯೂ ನಡೆಯಿತು.
ಇದಾದ ನಂತರ 99 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರಲ್ಲ?ಆ ಸಂದರ್ಭದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿತ್ತು.
ಇಂತಹ ಸಂಕಷ್ಟ ಕಾಲದಲ್ಲಿ ಕೃಷ್ಣ ಅವರ ದಾಸೋಹದ ಬೆಂಬಲದಿಂದ ಕಾಂಗ್ರೆಸ್ ಚೇತರಿಸಿಕೊಂಡಿತು.2004 ರಲ್ಲಿ ಅದು ಮರಳಿ ದಿಲ್ಲಿ‌ ಗದ್ದುಗೆಯನ್ನು ವಶಪಡಿಸಿಕೊಳ್ಳುವಲ್ಲಿ ಕೃಷ್ಣ ಅವರ ನಿಸ್ವಾರ್ಥ ಸೇವೆಯ ಪಾತ್ರ ದೊಡ್ಡದು.
ಇದೇ ಕಾರಣಕ್ಕಾಗಿ 2004 ರಲ್ಲಿ ಇಲ್ಲಿ ಪಕ್ಷಕ್ಕೆ ಅಧಿಕಾರ ಹೋದರೂ‌‌ ಕೃಷ್ಣ ಅವರ ಸೇವಾ ಹಿರಿತನವನ್ನು ಗುರುತಿಸಿ ರಾಜ್ಯಪಾಲ ಹುದ್ದೆ ನೀಡಲಾಯಿತು.ವಿದೇಶಾಂಗ ಸಚಿವ ಸ್ಥಾನ ನೀಡಲಾಯಿತು.
2006 ರ ವೇಳೆಗೆ ಚಿತ್ರ ಬದಲಾಯಿತು.ಇಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಅವರು ಸೋಫಾಸೆಟ್ ಮೇಲೆ ಕುಳಿತಿದ್ದರು.ಅಲ್ಲಿಂದ ಶುರುವಾದ ಅವರ ಸೇವೆ ಕೆಲ‌ಕಾಲ ಬಿಟ್ಟರೆ ಉಳಿದಂತೆ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ.
ಈ ಸೇವೆ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಅವರ ವಿರುದ್ಧ ಬಂಡಾಯದ ಧ್ವನಿಗಳನ್ನು ಜೀವಂತವಾಗಿ ಇಡಲಾಗುತ್ತಿದೆ.
ಬಂಡಾಯದ ಧ್ವನಿ ಕೇಳಿದ ಕೂಡಲೆ ಯಡಿಯೂರಪ್ಪ ಅಪ್ ಸೆಟ್ ಆಗುತ್ತಾರೆ.ಅವರು ಅಪ್ ಸೆಟ್ ಆದರೆ ದಿಲ್ಲಿಯ ಹಲ ಮಿಡ್ಲ್ ಮನ್ನುಗಳಿಗೆ ಹಬ್ಬ.
ಈ ಹಬ್ಬ ಎಷ್ಟು ದಿನ ಸಾಧ್ಯವೋ?ಅಷ್ಟು ದಿನ‌ ಮುಂದುವರಿಯಲಿ ಅಂತ ಅವರು ಬಯಸುತ್ತಾರೆ.
ಆದರೆ ಅದರ ಬಿಸಿ ತಾಗುವುದು ಯಾರಿಗೆ?ಕರ್ನಾಟಕಕ್ಕೆ.ಈಗ ಆಗುತ್ತಿರುವುದು ಅದೇ.ಹಾಗಂತ ಯಾರೂ ಖಾಯಂ ಪಾತ್ರಧಾರಿಗಳಲ್ಲ.ಒಂದಲ್ಲ ಒಂದು ದಿನ ಅವರು ಬಣ್ಣ ಕಳಚಿಡುತ್ತಾರೆ.ಬೇರೋಬ್ಬರು ಬಣ್ಣದ ಡಬ್ಬ ಹಿಡಿದುಕೊಂಡು ರೆಡಿ ಇರುತ್ತಾರೆ.
ಈಗ ನಡೆಯುತ್ತಿರುವುದು ಅದೇ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here