ಆ ಡೆಡ್ಲಿ ವೈರಸ್ ನ ಧಾಳಿಗೆ ರಾಜ್ಯ ರಾಜಕಾರಣ ತತ್ತರಿಸುತ್ತಿದೆ

0
115

ಕರ್ನಾಟಕವನ್ನು ತಲ್ಲಣಗೊಳಿಸುತ್ತಿರುವ ಪಿಎಫ್ ವೈರಸ್ಸಿನ ಮೂರನೇ ಅಲೆ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಪಕ್ಕಾ ವ್ಯಾಪಾರಿ ಸರ್ಕಾರವೊಂದರ ಸೃಷ್ಟಿಗೆ ಕಾರಣವಾಗಲಿದೆ.
ಅಂದ ಹಾಗೆ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುವ ಕೋವಿಡ್ ನಂತಹ ವೈರಸ್ ಕಾಲ ಕ್ರಮೇಣ ಒಮಿಕ್ರಾನ್,ನಿಯೋಕಾನ್ ನಂತಹ ತಳಿಯಾಗಿ ಪರಿವರ್ತನೆಯಾಗುತ್ತಾ ದುರ್ಬಲವಾಗುತ್ತದೆ,ಶಕ್ತಿ ಕಳೆದುಕೊಳ್ಳುತ್ತದೆ.
ಆದರೆ ಮನುಷ್ಯನ ಮನಸ್ಸಿನ ಮೇಲೆ ಕೆಲಸ ಮಾಡುವ ಪಿಎಫ್ ವೈರಸ್ ಶುರುವಿನಲ್ಲಿ ಮೃದು ಪರಿಣಾಮಗಳನ್ನು ತೋರಿದರೂ,ಕಾಲಕ್ರಮೇಣ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ಸಮಸ್ಯೆ ಎಂದರೆ ಕೋವಿಡ್ ನಂತಹ ಸೋಂಕುಗಳಿಗೆ ಪರಿಹಾರವಿದೆ.ಆದರೆ ಪಿಎಫ್ ನಂತಹ ವೈರಸ್ಸಿಗೆ ಪರಿಹಾರವಿಲ್ಲ.
ಈ ಪಿಎಫ್ ವೈರಸ್ ನಮ್ಮ ನೆಲಕ್ಕೆ ಹೊಸತೇನೂ ಅಲ್ಲ,1952 ರಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ಜನಿಸಿದ ಪಿಎಫ್ ವೈರಸ್ ನ ಮೊದಲ ಅಲೆ,1969 ರ ನಂತರ ಎರಡನೇ ಅಲೆಯಾಗಿ ಪರಿವರ್ತನೆಯಾಯಿತು.
ಇದಾದ ಮೂರು ದಶಕಗಳಷ್ಟು ಸುಧೀರ್ಘ ಕಾಲದ ನಂತರ ರೂಪಾಂತರಗೊಂಡ ಪಿಎಫ್ ವೈರಸ್ ನ ಮೂರನೇ ಅಲೆ ಇದೀಗ ತನ್ನೆಲ್ಲ ಪ್ರಳಯಾಂತಕ ಶಕ್ತಿಯೊಂದಿಗೆ ಪ್ರಜಾಪ್ರಭುತ್ವದ ಬುಡವನ್ನು ಅಲುಗಾಡಿಸುತ್ತಿದೆ.
ಅಂದ ಹಾಗೆ ಜನ್ಮ ತಳೆದ ಸಂದರ್ಭದಲ್ಲಿ ಪಿಎಫ್ ವೈರಸ್ ನ ವಿಸ್ತೃತ ಹೆಸರು ಪೀಪಲ್ಸ್ ಫಂಡ್,ಇದರರ್ಥ ಜನತಾ ನಿಧಿ.ಸ್ವಾತಂತ್ರ್ಯಾನಂತರ ಕೆ.ಸಿ.ರೆಡ್ಡಿ ಅವರ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾದರೂ 1952 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತಲ್ಲ?
ಈ ಚುನಾವಣೆಯ ಸಂದರ್ಭದಲ್ಲಿ ಶಾಸನಸಭೆಯ ಚುನಾವಣೆಗೆ ನಿಂತ ಬಹುತೇಕ ಎಲ್ಲ ಕ್ಯಾಂಡಿಡೇಟುಗಳು ಜನತಾನಿಧಿಯನ್ನೇ ಅವಲಂಬಿಸಿದ್ದರು.1952 ರ ಸಂದರ್ಭದಲ್ಲಿ ಚುನಾವಣೆಗೆ ನಿಂತವರಿಗೆ ಹೆಚ್ಚಿನ ವೆಚ್ಚಗಳು ಇರಲಿಲ್ಲವಾದರೂ,ಅಭ್ಯರ್ಥಿಗಳು ಭರಿಸಬೇಕಿದ್ದ ಖರ್ಚುಗಳನ್ನು ಜನಸಾಮಾನ್ಯರೇ ನೋಡಿಕೊಳ್ಳುತ್ತಿದ್ದರು.
ಹೀಗಾಗಿ ಅವತ್ತು ಚುನಾವಣೆಗೆ ನಿಂತ ಯಾರನ್ನೇ ತೆಗೆದುಕೊಂಡರೂ ನೋಟು ಪ್ಲಸ್ ವೋಟು ಎಂಬುದು ಒಂದು ನೀತಿಯೇ ಆಗಿತ್ತು.ಹಣಕಾಸಿನ ದೃಷ್ಟಿಯಿಂದ ಕೆಲವರು ಉತ್ತಮ ಪರಿಸ್ಥಿತಿಯಲ್ಲಿದ್ದರೂ ಚುನಾವಣಾ ವೆಚ್ಚಕ್ಕೆ ಅಂತ ಮತದಾರರೇ ಒಂದಷ್ಟು ಹಣ ನೀಡುವ ಕೆಲಸವಾಗಿತ್ತು.
ಒಟ್ಟಿನಲ್ಲಿ ಈ ಪೀಪಲ್ಸ್ ಫಂಡ್ ಅನ್ನು ಪಡೆದ ನೂರಾರು ಜನರಿದ್ದರೂ, ಅದರಲ್ಲಿ ಉಲ್ಲೇಖಿಸುವ ಪ್ರಮುಖ ಹೆಸರುಗಳಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರು ಒಂದು.ನೋಟು ಕೊಡಿ,ವೋಟು ಕೊಡಿ ಎಂಬ ಸಮಾಜವಾದಿ ಪಕ್ಷದ ಮನವಿಗೆ ಮತದಾರರು ಅಭೂತಪೂರ್ವವಾಗಿ ಸ್ಪಂದಿಸಿದರು.
ಹೀಗೆ ಜನತಾ ನಿಧಿಯ ಬೆಂಬಲ ಪಡೆದು ಗೆದ್ದು ಶಾಸನ ಸಭೆಗೆ ಬಂದ ಶಾಂತವೇರಿ ಗೋಪಾಲಗೌಡರು ಎಷ್ಟು ಅದ್ಭುತವಾಗಿ ಕೆಲಸ ಮಾಡಿದರು ಎಂದರೆ ಅವರ ಪ್ರತಿಯೊಂದು ಮಾತು,ಕೃತಿಗಳು ಜನರಿಗೆ ಉತ್ತರದಾಯಿಯಾಗಿದ್ದವು.ವ್ಯವಸ್ಥೆಯ ಹಿತ ಕಾಯಲು ಜನ ನಮ್ಮನ್ನು ಗೆಲ್ಲಿಸಿ ಕಳಿಸಿದ್ದಾರೆ.ಅವರ ನಿರೀಕ್ಷೆಯನ್ನು ನಾವು ಎಂದೂ ಹುಸಿಗೊಳಿಸಬಾರದು ಎಂಬುದು ಶಾಂತವೇರಿ ಗೋಪಾಲಗೌಡರ ಕಟ್ಟಾ ಬಯಕೆಯಾಗಿತ್ತು.ಹೇಳಲು ಹೋದರೆ ಜನರಿಗೆ ಉತ್ತರದಾಯಿಗಳಾಗಿ ಕೆಲಸ ಮಾಡಿದ ಅಂದಿನ ಪೀಪಲ್ಸ್ ಫಂಡ್ ನಾಯಕರ ಬಗ್ಗೆ ಹಲವು ಉದಾಹರಣೆಗಳನ್ನು ಕೊಡಬಹುದು.
ಮುಂದೆ 1957,1962,1967 ರ ಶಾಸನಸಭೆ ಚುನಾವಣೆಗಳಲ್ಲಿ ಜಾತಿ ಎಂಬುದು ಕೆಲಸ ಮಾಡಿದರೂ ಪೀಪಲ್ಸ್ ಫಂಡ್ ಎಂಬುದು ಚಾಲ್ತಿಯಲ್ಲಿಯೇ ಇತ್ತು.ಮತ್ತು ಗೆದ್ದು ಬಂದವರೂ ತಮ್ಮ ಕ್ಷೇತ್ರದ ಮತದಾರರಿಗೆ ಉತ್ತರದಾಯಿಗಳಾಗಿ ಕೆಲಸ ಮಾಡುತ್ತಿದ್ದರು.
ಆದರೆ 1969 ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಯಿತಲ್ಲ?ಇದಾದ ನಂತರ ಜಾತಿಯ ಕಂದಕ ದೊಡ್ಡದಾಗಿ ಕಾಣತೊಡಗಿತು.ಮತ್ತು ಇಂತಹ ಕಾರಣಗಳು ಪಿಎಫ್ ರೂಪವನ್ನು ಮೆಲ್ಲಗೆ ರೂಪಾಂತರಗೊಳಿಸತೊಡಗಿದವು.
ಆಗ ಶುರುವಾದ ಪಿಎಫ್ ವೈರಸ್ಸಿನ ಎರಡನೇ ಅಲೆಯೇ ಪಾರ್ಟಿ ಫಂಡ್.ಇದು ಶುರುವಾಗಲು ಇದ್ದ ಪ್ರಮುಖ ಕಾರಣವೆಂದರೆ ಜಾತಿಯ ಕಂದಕ ಹೆಚ್ಚುತ್ತಾ ಹೋಗಿದ್ದು.ಮತ್ತು ಏಕಾಏಕಿಯಾಗಿ ವಿರಾಟ್ ರೂಪ ತಾಳಿದ್ದು.
ಹೇಗೆಂದರೆ ಒಡೆದು ಹೋದ ಕಾಂಗ್ರೆಸ್ (ಆರ್) ಬಣಕ್ಕೆ ದೇವರಾಜ ಅರಸರು ನಾಯಕರಾಗಿದ್ದರೆ,ಕಾಂಗ್ರೆಸ್(ಓ) ಬಣಕ್ಕೆ ನಿಜಲಿಂಗಪ್ಪ ಆಧಾರಸ್ತಂಭವಾಗಿದ್ದರು.ಹೀಗಾಗಿ ಅವತ್ತು ಕಾಂಗ್ರೆಸ್ (ಓ)ಪಕ್ಷವನ್ನು ಎದುರಿಸಲು ಹೊರಟ ಕಾಂಗ್ರೆಸ್(ಆರ್) ಬಣದ ದೇವರಾಜ ಅರಸರ ಮುಂದೆ ಹಲವು ಸವಾಲುಗಳಿದ್ದವು.
ಅದೆಂದರೆ ಕಾಂಗ್ರೆಸ್(ಓ)ಬಣಕ್ಕೆ ಜಾತಿಯ ಬೆಂಬಲವಿತ್ತು.ಅದೇ ರೀತಿ ಆ ಪಕ್ಷಕ್ಕೆ ಪೀಪಲ್ಸ್ ಫಂಡ್ ಕೂಡಾ ಗಣನೀಯ ಪ್ರಮಾಣದಲ್ಲಿ ಲಭ್ಯವಾಗುವ ಲಕ್ಷಣಗಳಿದ್ದವು.ಆದರೆ ತಾವು ಬಲಿಷ್ಟ ಜಾತಿಯ ವಿರುದ್ಧ ದುರ್ಬಲ ಜಾತಿಯವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವ ಅನಿವಾರ್ಯತೆ ಹೆಚ್ಚಿದ್ದುದರಿಂದ,ಮತ್ತು ಹಾಗೆ ಮಾಡುವ ಮೂಲಕ ಶೋಷಿತ ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಅನಿವಾರ್ಯತೆ ಇದ್ದುದರಿಂದ ಅರಸರು ಪಿಎಫ್ ಗೆ ಮತ್ತಷ್ಟು ವಿಸ್ತ್ರತ ರೂಪ ನೀಡಿದರು.ಅದರ ಹೆಸರು ಪಾರ್ಟಿ ಫಂಡ್.
1972 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಬಹುತೇಕ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕೆಂದು ದೇವರಾಜ ಅರಸರು ತಲಾ ಎರಡು ಸಾವಿರ ರೂಪಾಯಿ ನಿಧಿ ಒದಗಿಸಿದ್ದು ಅವತ್ತು ಬಹುದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಹೀಗೆ ಪಿಎಫ್ ವೈರಸ್ಸಿನ ರೂಪವನ್ನು ಬದಲಿಸಿದ ಅರಸರು ಜಾತಿ ವ್ಯವಸ್ಥೆಯ ಬಳ್ಳಿಯನ್ನು ಕದಲಿಸಿದರು.ಮುಂದೆ ಇಡೀ ದೇಶ ತುರ್ತು ಸ್ಥಿತಿಯ ಕಾರಣಕ್ಕಾಗಿ ಇಂದಿರಾಗಾಂಧಿ ಅವರನ್ನು ವಿರೋಧಿಸಿದರೂ ಕರ್ನಾಟಕದಲ್ಲಿ ಪಿಎಫ್ ವೈರಸ್ಸಿನ ರೂಪಾಂತರಿ ತಳಿಯನ್ನು ಸರಿಯಾಗಿ ಪ್ರಯೋಗಿಸಿದ ದೇವರಾಜ ಅರಸರು 1978 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರು.
ಅಂದ ಹಾಗೆ 1978 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ಅಭ್ಯರ್ಥಿಗಳು ತಲಾ ಹತ್ತು ಸಾವಿರ ರೂಪಾಯಿಗಳನ್ನು ಪಾರ್ಟಿ ಫಂಡ್ ರೂಪದಲ್ಲಿ ಪಡೆದಿದ್ದರು ಎಂದರೆ ಪಿಎಫ್ ವೈರಸ್ಸಿನ ಎರಡನೇ ಅಲೆ ತೀಕ್ಷ್ಣವಾಗತೊಡಗಿತ್ತು ಎಂದೇ ಅರ್ಥ.
ಆದರೆ 1980 ರಲ್ಲಾದ ರಾಜಕೀಯ ಪಲ್ಲಟಗಳ ನಡುವೆ ದೇವರಾಜ ಅರಸರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಆರ್.ಗುಂಡೂರಾಯರು ಕರ್ನಾಟಕದ ಮುಖ್ಯಮಂತ್ರಿಯಾದರು.
ಇಂದಿರಾಗಾಂಧಿ ಅವರ ಬೆಂಬಲದಿಂದ ಮುಖ್ಯಮಂತ್ರಿಯಾಗುವ ಅವಕಾಶ ಪಡೆದ ಆರ್.ಗುಂಡೂರಾಯರು 1983 ರಲ್ಲಿ ವಿದಾನಸಭೆ ಚುನಾವಣೆಗೆ ಹೋಗಬೇಕಾಯಿತು.ಈ ಸಂದರ್ಭದಲ್ಲಿ ಅವರು ಪಿಎಫ್ ವೈರಸ್ಸಿನ ರೂಪಾಂತರಿ ತಳಿಯನ್ನು ಪ್ರಯೋಗಿಸಿ ಪಕ್ಷದ ಬಹುತೇಕ ಶಾಸಕರಿಗೆ ಪಾರ್ಟಿ ಫಂಡು ಕೂಡಾ ಒದಗಿಸಿದರು.
ಕುತೂಹಲದ ಸಂಗತಿ ಎಂದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರ್.ಗುಂಡೂರಾಯರು ಮಾತ್ರವಲ್ಲ,ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಇನ್ನೂ ಮೂರ್ನಾಲ್ಕು ಮಂದಿ ನಾಯಕರು ಪಕ್ಷದ ಆಯ್ದ ಶಾಸಕರಿಗೆ ಪಾರ್ಟಿ ಫಂಡು ಒದಗಿಸಿದರು.
ಒಂದು ವೇಳೆ ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ,ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತದೆ.ಆ ಪೈಪೋಟಿಯ ಸಂದರ್ಭದಲ್ಲಿ ನೀವು ನಮ್ಮ ಪರವಾಗಿರಬೇಕು ಎಂಬ ಕರಾರಿನೊಂದಿಗೆ ಈ ನಾಯಕರು ಕೆಲವರಿಗೆ ಪಾರ್ಟಿ ಫಂಡು ಕೊಡುವ ಕೆಲಸ ಮಾಡಿದರಾದರೂ,ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಿತ್ತು.
ಮುಂದೆ ಎಂಭತ್ತೈದರ ವಿಧಾನಸಭಾ ಚುನಾವಣೆಯ ವೇಳೆಗೆ ಪಾರ್ಟಿ ಫಂಡು ಎಂಬುದು ಅಧಿಕೃತವೇ ಆಗಿ,ಚುನಾವಣೆಯಲ್ಲಿ ಗೆದ್ದು ಬಂದವರು ಪಕ್ಷಕ್ಕೆ ನಿಷ್ಟರಾಗಿರಬೇಕು ಎಂಬ ತತ್ವದೊಂದಿಗೆ ವಿರಾಜಮಾನವಾಯಿತು.
ಈ ಪಾರ್ಟಿ ಫಂಡಿನ ಬೆಂಬಲದೊಂದಿಗೆ ಗೆದ್ದವರು ಭವಿಷ್ಯದಲ್ಲಿ ಪಕ್ಷ ಹೇಳಿದಂತೆ ಕೇಳುತ್ತಾರೆ ಎಂಬ ನಂಬಿಕೆ ದಶಕಗಳ ಕಾಲ ಉಳಿದುಕೊಂಡೇ ಬಂತು.ಆದರೆ ದೇಶಕ್ಕೆ ಜಾಗತೀಕರಣ ಎಂಟ್ರಿ ಕೊಟ್ಟ ನಂತರ ವಿವಿಧ ಮಾಫಿಯಾಗಳು ತಲೆ ಎತ್ತತೊಡಗಿದವಲ್ಲ?ಹಾಗೆಯೇ 1999 ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದ ನಂತರ ಏಕಾಏಕಿಯಾಗಿ ತಲೆ ಎತ್ತಿದ್ದು ಭೂ ಮಾಫಿಯಾ.
ಯಾವಾಗ ಭೂ ಮಾಫಿಯಾ ತಲೆ ಎತ್ತಿತೋ?ದಿನದಿಂದ ದಿನಕ್ಕೆ ಅದು ಪ್ರಬಲವಾಗುತ್ತಾ ಎರಡನೇ ಹಂತದ ಪಿಎಫ್ ವೈರಸ್ ಅನ್ನು ದುರ್ಬಲಗೊಳಿಸತೊಡಗಿತು.ಪರಿಣಾಮ?2004 ವಿಧಾನಸಭಾ ಚುನಾವಣೆಯ ವೇಳೆಗೆ ಭೂಮಾಫಿಯಾ ಕೈಗಳು ಎಲ್ಲ ರಾಜಕೀಯ ಪಕ್ಷಗಳಲ್ಲೂ ಹರಡಿ ಅತಂತ್ರ ವಿಧಾನಸಭೆ ರಚನೆಯಾಗಲು ಕಾರಣವಾದವು.
ಅರ್ಥಾತ್,ಆ ಚುನಾವಣೆಯಲ್ಲಿ ಪಾರ್ಟಿ ಫಂಡಿನ ಜತೆಗೆ ಪರ್ಸನಲ್ ಫಂಡೂ ಹಲ ಅಭ್ಯರ್ಥಿಗಳ ನೆರವಿಗೆ ಬಂತು.ವಾಸ್ತವವಾಗಿ ಇದು ಪಿಎಫ್ ವೈರಸ್ಸಿನ ಮೂರನೇ ಅಲೆ ಪ್ರಾರಂಭವಾದ ಕಾಲಘಟ್ಟ.
ಹೀಗೆ ಪ್ರಾರಂಭವಾದ ಪಿಎಫ್ ವೈರಸ್ಸಿನ ಮೂರನೇ ಅಲೆಗೆ ಬಲ ತುಂಬಿದ್ದು ಗಣಿ ಮಾಫಿಯಾ.ಅಲ್ಲಿಗೆ ಭೂ ಮಾಫಿಯಾ,ಗಣಿ ಮಾಫಿಯಾ ಸೇರಿದಂತೆ ಹಲವು ಮಾಫಿಯಾಗಳು ಸೇರಿ ಪಿಎಫ್ ವೈರಸ್ಸಿನ ರೂಪವನ್ನು ಡೆಡ್ಲಿಯಾಗಿ ಪರಿವರ್ತಿಸಿದವು.
ಪರಿಣಾಮವಾಗಿ ಪಾರ್ಟಿ ಫಂಡಿನ ರೂಪದ ಪಿಎಫ್ ವೈರಸ್ಸು ದುರ್ಬಲವಾಗುತ್ತಾ ಅದು ಎಷ್ಟು ಮುಖ್ಯವೋ?ಪರ್ಸನಲ್ ಫಂಡು ಅದಕ್ಕಿಂತ ಮುಖ್ಯ ಎಂಬ ಸಂದೇಶವನ್ನು ರವಾನಿಸುತ್ತಾ,ಅಂತಹ ಫಂಡು ಹೂಡುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಚುನಾವಣಾ ಟಿಕೆಟ್ ಸಿಗುವಂತೆ ಮಾಡತೊಡಗಿತು.
2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಕ್ಯಾಂಡಿಡೇಟುಗಳು ಪಾರ್ಟಿ ಫಂಡಿನ ರೂಪದಲ್ಲಿ ಒಂದಷ್ಟು ನಿಧಿ ಒದಗಿಸಿಕೊಟ್ಟರೆ ಉಳಿದಂತೆ ಬಹುತೇಕರು ತಮ್ಮ ತಮ್ಮ ಪರ್ಸನಲ್ ಫಂಡನ್ನು ಹೂಡಿ ಯಶಸ್ಸು ಪಡೆದರು.
2018 ರಲ್ಲಿ ಬಿಜೆಪಿಯ ಯಡಿಯೂರಪ್ಪ,ಕಾಂಗ್ರೆಸ್ ನ ಸಿದ್ಧರಾಮಯ್ಯ ಮತ್ತು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರು ಪಾರ್ಟಿ ಫಂಡು ಒದಗಿಸಿದರಾದರೂ,ಎಲ್ಲ ಪಕ್ಷಗಳಲ್ಲಿ ಪರ್ಸನಲ್ ಫಂಡನ್ನು ಅವಲಂಬಿಸಿದವರೇ ಹೆಚ್ಚಿದ್ದರು.
ಈಗ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಆಯಾ ರಾಜಕೀಯ ಪಕ್ಷಗಳಲ್ಲಿರುವ ಮುಖ್ಯಮಂತ್ರಿ ಕ್ಯಾಂಡಿಡೇಟುಗಳು ಪಾರ್ಟಿ ಫಂಡಿನ ರೂಪದಲ್ಲಿ ಎಷ್ಟು ಹಣ ಕೊಡಬಲ್ಲರೋ?ಅದಕ್ಕೂ ಹೆಚ್ಚಾಗಿ ತಮ್ಮ ಪರ್ಸನಲ್ ಫಂಡು ಬಳಸಿ ಚುನಾವಣಾ ಕಣಕ್ಕಿಳಿಯಲು ರಾಜ್ಯಾದ್ಯಂತ ನೂರಾರು ಮಂದಿ ತಯಾರಾಗಿ ನಿಂತಿದ್ದಾರೆ.
ಹೀಗಾಗಿ ಮುಂದಿನ ಚುನಾವಣೆಯ ವೇಳೆಗೆ ವಿವಿಧ ರಾಜಕೀಯ ಪಕ್ಷಗಳ ಮುಂಚೂಣಿಯಲ್ಲಿ ಸಹಸ್ರ ಕೋಟಿ ನಾರಾಯಣರ ಪಡೆ ಎದ್ದು ನಿಲ್ಲುವುದು ಪಕ್ಕಾ ಆಗಿ ಹೋಗಿದೆ.ಯಾಕೆಂದರೆ ತಮ್ಮ ಎದುರಾಳಿ ಪಕ್ಷದ ಅಭ್ಯರ್ಥಿಗಳನ್ನು ಮಣಿಸಲು ದೊಡ್ಡ ಮಟ್ಟದ ಬಂಡವಾಳ ಹೂಡುವವರು ರಾಜಕೀಯ ಪಕ್ಷಗಳಿಗೆ ಮೆಚ್ಚಿನವರಾಗತೊಡಗಿದ್ದಾರೆ.
ಅಂದ ಹಾಗೆ ಪಿಎಫ್ ವೈರಸ್ಸಿನ ಮೂರನೇ ಅಲೆಯಾದ ಪರ್ಸನಲ್ ಫಂಡನ್ನು ಬಂಡವಾಳವಾಗಿ ಹೂಡಿದವರು ಯಾರಿಗೆ ಉತ್ತರದಾಯಿಗಳಾಗಿರುತ್ತಾರೆ?ತಮ್ಮ ಬೆನ್ನ ಹಿಂದೆ ನಿಂತ ಕೆಲವೇ ಹೂಡಿಕೆದಾರರಿಗೆ ಅವರು ಉತ್ತರದಾಯಿಗಳಾಗಿರುತ್ತಾರೆಯೇ ಹೊರತು ಜನರಿಗಲ್ಲ,
ಬಂಡವಾಳ ಹೂಡಿದ ಮೇಲೆ ಮತದಾರರು ಅವರಿಗೆ ಕಚ್ಚಾ ವಸ್ತುವಿದ್ದಂತೆ.ಹೀಗಾಗಿ ಕಚ್ಚಾ ವಸ್ತುವಿಗೆ ಯಾವ ಉದ್ಯಮಿ ಉತ್ತರದಾಯಿಯಾಗಿರಲು ಸಾಧ್ಯ?ಬದಲಿಗೆ ಮುಂದೆ ಮತ್ತಷ್ಟು ಕಚ್ಚಾ ವಸ್ತು ಪಡೆಯಲು ಬಂಡವಾಳ ಸೃಷ್ಟಿಸಿಕೊಳ್ಳುವುದು ಅವರ ಮೂಲ ಗುರಿಯಾಗಿರುತ್ತದೆ.ಅಂದ ಮೇಲೆ ಮುಂದಿನ ಚುನಾವಣೆಯ ನಂತರ ಬರುವ ಸರ್ಕಾರದ ಸ್ವರೂಪ ಹೇಗಿರಬಹುದು ಊಹಿಸಿ.
ಹೀಗೆ ಪಿಎಫ್ ವೈರಸ್ಸು ಎಂಬುದು ಶುರುವಿನಲ್ಲಿ ಪೀಪಲ್ಸ್ ಫಂಡ್ ರೂಪದಲ್ಲಿದ್ದುದು,ನಂತರ ಪಾರ್ಟಿ ಫಂಡ್ ಆಗಿ,ಮತ್ತೀಗ ಪರ್ಸನಲ್ ಫಂಡ್ ಆಗಿ ಪರಿವರ್ತನೆಯಾಗಿದೆಯಲ್ಲ?ಈ ವೈರಸ್ಸನ್ನು ನಿವಾರಿಸುವುದು ಹೇಗೆ?
ಉತ್ತರ ಯಾರಿಗೂ ಗೊತ್ತಿಲ್ಲ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here