ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ,ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ಒದಗಿಸಲು ಬಾಲಚೈತನ್ಯ ಕೇಂದ್ರಗಳ ಆರಂಭ

0
111

ಬಳ್ಳಾರಿ : ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ನೀಡಿದ ವರದಿ ಹಿನ್ನೆಲೆ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲು ಬಾಲಚೈತನ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ಹೆಳಿದರು.
ನಗರದ ತಾಳೂರು ರಸ್ತೆಯ ಗುರುಕುಲ ಶಾಲೆಯ ಹತ್ತಿರವಿರುವ ಬಿಸಿಎಂ ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಬಾಲಚೈತನ್ಯ ಯೋಜನೆಯ ಮಕ್ಕಳ ಆರೈಕೆ ಕೇಂದ್ರದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಜ್ಞರ ಸಲಹೆಯಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ಬಾಲ ಚೈತನ್ಯ ಕೇಂದ್ರಗಳನ್ನು ಶುರು ಮಾಡಲಾಗಿದ್ದು, ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಪೌಷ್ಠಿಕ ಆಹಾರ ಒದಗಿಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ ಎಂದರು.
ಈಗಾಗಲೇ 68 ಮಕ್ಕಳು ಇಲ್ಲಿ ದಾಖಲಾಗಿದ್ದಾರೆ. ಅವರಿಗೆ 14ದಿನಗಳ ಕಾಲ ಪೌಷ್ಠ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ. ಬಳ್ಳಾರಿ ಒಳಗೊಂಡಂತೆ ಕೂಡ್ಲಿಗಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಬಾಲ ಚೈತನ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಉಳಿದ ತಾಲೂಕುಗಳಲ್ಲಿ ಶೀಘ್ರದಲ್ಲಿಯೇ ಶುರು ಮಾಡಲಾಗುತ್ತದೆ ಎಂದರು.
ಜಿಲ್ಲೆಯಾದ್ಯಂತ 827 ಜನ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿಲಾಗಿದ್ದು ಅವರಿಗೆ ಆಯಾ ತಾಲೂಕಿನಲ್ಲಿ ಪ್ರಾರಂಭ ಮಾಡಿರುವ ಬಾಲಚೈತನ್ಯ ಕೇಂದ್ರಗಳ ಮುಖಾಂತರ ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಅವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ ಹೆಚ್ಚಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರನ್ನು ಬಾಲ ಚೈತನ್ಯ ಕೇಂದ್ರಕ್ಕೆ ಕರೆತರಲಾಗುತ್ತದೆ. ಅವರಿಗೆ ದಿನಕ್ಕೆ 5ರಿಂದ 6 ಬಾರಿ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾಡಳಿತ,ಜಿಪಂ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ವಿಶಿಷ್ಟ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನಿಲ್‍ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್‍ದಾಸಪ್ಪನವರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here