ಗಜಲ್ ಅನುರಣಿಸಿದ ನಾದ

0
167

ಬಿಜಾಪುರದ ಹಿರಿಯ ಲೇಖಕಿ
ಅಮ್ಮ ,”ಪ್ರಭಾವತಿ ದೇಸಾಯಿ” ಅವರ ಒಂದು ಗಜಲ್ ಅವಲೋಕನ ಇವರು ಈಗಾಗಲೇ ಆಧುನಿಕ ವಚನಗಳು,ಗಜಲ್ ಸಂಕಲನ,ಕವನ ಸಂಕಲನ ಹೀಗೆ ಹತ್ತಾರು ಕೃತಿ ರಚಿಸಿದ ಹಿರಿಯ ಲೇಖಕರು ಇವರ ಒಂದು ಗಜಲ್ ಕುರಿತು ಅವಲೋಕನ.

(೧)
ಬಾನಲಿ ಹಾರುವ ಪತಂಗದ
ನೂಲು ಕೆಳಗಿಟ್ಟಿರುವೆ ಶಿವಾ
ತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ

ಆಗಸದಲ್ಲಿ ಹಾರುವ ಗಾಳಿಪಟದ ಸೂತ್ರ, ಅದನ್ನು ನಿಯಂತ್ರಿಸುವ ದಾರ ಕೆಳಗೆ ನೆಲದ ಮೇಲಿರುತ್ತದೆ ಅದು ಗಾಳಿಪಟ ಕಂಡಷ್ಟು ಸುಲಭವಾಗಿ ಗೋಚರಿಸದು ಆದರೆ ಅದು ಇರುವುದಂತೂ ದಿಟ ಹಾಗೆ ತೊಗಲುಗೊಂಬೆಯ ಆಟದಲಿ ಬಳಸುವ ಗೊಂಬೆಗಳು ಚಲಿಸುವಂತೆ, ಅಭಿನಯಿಸುವಂತೆ ನಿರ್ದೇಶಿಸುವ ಸೂತ್ರವೂ ನಿರ್ದೇಶಕ ಕೈಯಲ್ಲಿ ಇರುತ್ತದೆ ಇದು ಭಾಗಶಃ ಅಗೋಚರ ಆದರೂ ಇರುವುದಂತೂ ಸತ್ಯ ಅದು ದಾರಗಳನ್ನು ಬಳಸಿ ಮೇಲಿನಿಂದ ಕೈ ಬೆಳಕುಗಳ ಚಾಕಚಕ್ಕತೆ ಯಿಂದ ಗೊಂಬೆಗಳೇ ಅಭಿನಯಿಸಿದಂತೆ ಕಾಣಿಸುವ ಒಂದು ಕಲಾ ಪ್ರಕಾರ ಹೀಗೆ ಕಾಣುವ ರೂಪಕಗಳನು ಬಳಸಿ ಇನ್ನೊಂದು ವಿಚಾರ ಹೇಳುವ ಈ ಗಜಲ್ ಸಾಲುಗಳು ಗೂಡಾರ್ಥಗಳ ಕಣಜ ಎಂದರೆ ತಪ್ಪಾಗದು ಜೀವಾತ್ಮ ಮತ್ತು ಪರಮಾತ್ಮನಿಗೆ ಇರುವ ಅಗೋಚರ ಸಂಬಂಧಗಳನ್ನು ಈ ನೂಲುಗಳ ರೂಪಕದಿಂದ ನಮಗೆ ಕಾಣಿಸಿದ್ದಾರೆ.

ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆ
ಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ

ಇಂದಿನ ದುರಿತ ಕಾಲಕ್ಕೆ ಅಕ್ಷರಶಃ ಹೊಂದುವ ನುರಿತ ನುಡಿಯಿದು ಎಣಿಸಲಾರದಷ್ಟು ಗಳಿಸಿದವರೂ ಒಂದುಕ್ಷಣ ದಷ್ಟು ಆಯುಷ್ಯ ಖರೀದಿಸಲು ಅಸಾಧ್ಯವಾದುದನ್ನು ನಾವೆಲ್ಲ ಇಂದು ಪ್ರತ್ಯಕ್ಷವಾಗಿ ಕಂಡಿದ್ದೇವೆ ಹಣದ ರಾಶಿ ಹಸಿವನ್ನು ನೀಗಿಸಲಾರದು ಅದು ಹಿಡಿ ಅನ್ನದಿಂದ ಮಾತ್ರ ಸಾಧ್ಯ ಅದನ್ನು ನೇಗಿಲಿನ ಶಕ್ತಿಯಲ್ಲಿ ಅಡಗಿಸಿ ಇಟ್ಟಿದ್ದಾನೆ ದೇವರು ಎನ್ನುವ ಈ ದ್ವಿಪದಿ ರಸ ಋಷಿ ಕುವೆಂಪು ಅವರ ನೇಗಿಲ ಯೋಗಿಯ ಕುರಿತು ಬರೆದ ಕವಿತೆಯ ಸಾಲುಗಳನ್ನು ಜ್ಞಾಪಿಸುತ್ತದೆ.

ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೆ ಇಲ್ಲ
ಉಳುವಾ ಯೋಗಿಯ ನೋಡಲ್ಲಿ

ನೇಗಿಲಲ್ಲಿ ಇಟ್ಟಿರುವೆ ಎನ್ನುವ ಸತ್ವದ ಸಾಲುಗಳನ್ನು ಹುಟ್ಟಿಸಲು ಅಭೂತಪೂರ್ವ ಒಳನೋಟದ ತಾತ್ವಿಕ ಚಿಂತನಾ ಪ್ರಜ್ಞೆ ಮಡುಗಟ್ಟಿರಬೇಕು ಒಂದೊಂದು ಶತಮಾನಗಳು,ದಶಕಗಳು ಯುದ್ಧ,ಬರಗಾಲ,ಪ್ರವಾಹಗಳನ್ನು ಕಂಡಂತೆ ನಾವು ಕರೋನಾ ಎಂಬ ಸಾಂಕ್ರಾಮಿಕ ರೋಗದ ರಣ ಭೀಕರತೆ ಮತ್ತು ಜೀವಗಳ ಆಪೋಶನ ಕಂಡಿದ್ದೇವೆ ಎಲ್ಲ ಕಾಲದಲ್ಲೂ ಜೀವಕ್ಕೆ ,ಜೀವನಕ್ಕೆ ಆಧಾರವಾಗಿ ನಿಂತದ್ದು ಈ ನೇಗಿಲು ಅದನ್ನು ಸಮರ್ಥವಾಗಿ ಮತ್ತೆ ಜ್ಞಾಪಿಸಿದ್ದು ಇಲ್ಲಿ ಕಂಡೆ,

ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆ
ಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ

ಎಲ್ಲೆಲ್ಲೂ ಯತೇಚ್ಛವಾಗಿ ಸಿಗುತ್ತಿದ್ದ ಜೀವಾನಿಲವನ್ನು ಹಣದಿಂದ ಕೊಳ್ಳಬೇಕಾದ ದುರಂತ ಕಾಲ, ಹಣವಿಲ್ಲದ ಬಡವನಿಗೆ ಎಟುಕದ ದ್ರಾಕ್ಷಿ,
ಮರದೊಳಗೆ ಮಂದಾಗ್ನಿ, ನೊರೆಹಾಲೊಳಗೆತುಪ್ಪದ ಕಂಪು ಹೇಗೆ ಅಗೋಚರವಾಗಿ ದೇವರಿಟ್ಟಿದ್ದಾನೆ ಎಂದು ಹೇಳುವ ನಮ್ಮ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ವಚನದ ಸಾಲುಗಳನ್ನು ಈ ದ್ವಿಪದಿ ಎರಡನೇ ಸಾಲು ಅನುರಣಿಸುತ್ತಿದೆ.

ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆ
ಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ

ಈ ಭೂಮಿಯ ಹುಳು ಮನುಷ್ಯ ಚಂದ್ರಲೋಕವನ್ನು ತಲುಪಿ ವಿಹರಿಸಿ ಬಂದಿದ್ದಾನೆ ಆದರೆ ತನ್ನ ಸ್ವರ್ಗವನ್ನೇ ನರಕವನ್ನಾಗಿ ಮಾಡಿಕೊಂಡು ಅದೊಂದು ಸ್ಮಶಾನವನ್ನಾಗಿಸಿದ ಮನುಷ್ಯನ ಮೂರ್ಖತನಕೆ ವಿಷಾದವನ್ನು ಈ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ

ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆ
ಮುಗ್ಧ ಜೀವಿಗಳ ಬದುಕಿಗೆ ಕಿಚ್ಚನ್ನು ಇಟ್ಟಿರುವೆ ಶಿವಾ

ಸೃಷ್ಟಿಯ ಸೊಬಗನ್ನು ವೈವಿಧ್ಯತೆಯನ್ನು ಅರಿಯದೆ ಅದರಲ್ಲಿರುವ ನಿಜ ಆನಂದವನ್ನು ಅನುಭವಿಸದೆ ಇರುವದನ್ನು ಬಿಟ್ಟು ಮತ್ತೊಂದು ಅರಸಿ “ಕೊಟ್ಟ ಕುದುರೆಯನೆರದೆ” ಎನ್ನುವ “ಅಲ್ಲಮನ” ಮಾತಿನಂತೆ ಮತ್ತೊಂದು ಬಯಸಿ ಅದನ್ನು ಹರಸುವಲ್ಲಿ ಬದುಕಿನ ಆನಂದವನ್ನು ಕಳೆದುಕೊಂಡು ಭುವಿಯಲ್ಲಿ ಜೀವಿಗಳು ಬದುಕಲು ಅಸಾಧ್ಯವಾಗುವಂತೆ ಕಲುಷಿತಗೊಳಿಸಿ ಮುಗ್ಧ ಜೀವಿಗಳ ಬದುಕಿಗೆ ಬೆಂಕಿ ಹಚ್ಚಿರುವೆ ಎಂದು ಜೀವಸಂಕುಲದ ಸಂಕಟಕೆ ನೋಯುತ್ತಾರೆ.

ಇದೊಂದು ಅನುಭವ ಮತ್ತು ಅನುಭಾವದ ನೆಲೆಯಲ್ಲಿ ಸಮ್ಮಿಳಿತಗೊಂಡ ಚಂದದ ಗಜಲ್ ಅಮ್ಮ ಹೀಗೆ ನಿಮ್ಮ ಅನುಭವದ ಬುತ್ತಿ ಬಿಚ್ಚಿ ಹೊಸ ಹೊಸ ಹೊಳವಿನೊಂದಿಗೆ ಮೂಡುವ ಬರಹಗಳ ಸವಿಯನ್ನು ಮತ್ತು ಬದುಕಿನ ಸೌಂದರ್ಯವನ್ನು ನೋಡುವ ಬಗೆ ಇನ್ನೂ ಹೆಚ್ಚು ಗಜಲ್ ಗಳಿಂದ ಕಾಣಿಸಲಿ ಎಂದು ವಿನಂತಿಸುವೆ

ಪ್ರೀತಿ,ಪ್ರೇಮ,ವಿರಹ ಇಂತಿಷ್ಟೇ ವಿಷಯಕ್ಕೆ ಗಜಲ್ ಗಳು ಸೀಮಿತಗೊಳ್ಳದೆ ತುಂಬಾ ವಿಭಿನ್ನತೆ, ವಿಶೇಷತೆ, ಆಳ ,ಅರಿವು,ರೂಪಕ,ಸಾಮಾಜಿಕ ಪ್ರಜ್ಞೆ ,ಭಾಷಾನುವಾದ ,ಭಾವಾನುವಾದ,ಹೀಗೆ ಅನೇಕ ತರಹದ ಗಜಲ್ ಬರೆಯುವ ಎಲ್ಲ ರೀತಿಯ ಗಜಲ್ಗಳು ಇತ್ತೀಚಿಗೆ ಮೂಡಿಬರುತ್ತಿವೆ. ಇದೊಂದು ಗಜಲ್ ಪರಂಪರೆಯಲ್ಲಿ ಮತ್ತೊಂದು ಮಜಲು ಎಂದು ಹೇಳಲು ಇಚ್ಛಿಸುತ್ತೇನೆ.
ಧನ್ಯವಾದ

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here