ಕೋವಿಡ್ 3 ನೇ ಅಲೆ: ಮಕ್ಕಳ ಮೇಲೆ ನಿಗಾ ವಹಿಸಿ: ಶಶಿಕಲಾ ಅ ಜೊಲ್ಲೆ

0
123

ಮಂಡ್ಯ,ಜೂ 17- ಮಕ್ಕಳ ಮೇಲೆ ಕೋವಿಡ್ ಮೂರನೇ ಅಲೆಯ ಸಂಭಾವ್ಯ ಪರಿಣಾಮ ನಿಯಂತ್ರಣದ ನಿಟ್ಟಿನಲ್ಲಿ ಸೋಂಕಿನಿಂದ ಮಕ್ಕಳ ರಕ್ಷಣೆ, ಮುನ್ನೆಚ್ಚರಿಕೆ, ಜಾಗೃತಿ, ಪ್ರತ್ಯೇಕ ಕೋವಿಡ್ ವಾರ್ಡ್ ಗಳ ಸಿದ್ಧತೆ, ಪಾಲಕರಿಗೆ ವ್ಯವಸ್ಥೆ ಕುರಿತಂತೆ ಶಿಶು ಅಭಿವೃದ್ಧಿ ಅಧಿಕಾರಿಗಳು ಕ್ಷೇತ್ರಮಟ್ಟಕ್ಕೀಳಿದು ಕಾರ್ಯನಿರ್ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,
ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಜೊತೆಗೆ ಇತರ ಗಂಭೀರ ಕಾಯಿಲೆ ಪೀಡತ ಮಕ್ಕಳನ್ನು ಹೋಂ ಐಸೋಲೇಷನ್ ಬದಲು ಕೋವಿಡ್ ಮಕ್ಕಳ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
ಮಕ್ಕಳ ಕೋವಿಡ್ ವಾರ್ಡ್ ಹಾಗೂ ಮಕ್ಕಳ ಕೊವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕ್ಕ ಮಕ್ಕಳ ಜೊತೆಗೆ ಪಾಲಕರಿಗೂ ಉಳಿದುಕೊಳ್ಳಲು ವ್ಯವಸ್ಥೆ ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಐಸಿಯು ವಾರ್ಡ್‍ಗಳಲ್ಲಿ ಮಕ್ಕಳ ಜೊತೆಗೆ ಪಾಲಕರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಪಾಲಕರಿಗೆ ಪ್ರತ್ಯೇಕ ವ್ಯವಸ್ಥೆಮಾಡಿ 10 ರಿಂದ 18 ವರ್ಷದೊಳಗಿನ ಸೋಂಕಿತ ಮಕ್ಕಳ ಪೈಕಿ ಬಾಲಕಿಯರಿಗೆ ಹಾಗೂ ಬಾಲಕರಿಗೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳುವಂತೆ ಸಲಹೆ ನೀಡಿದರು.

ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತ ಮಕ್ಕಳು ಪ್ರತ್ಯೇಕತೆ ಹಾಗೂ ಮಾಸ್ಕ್ ಧರಿಸುವ ಅರಿವು ಇರುವುದಿಲ್ಲ. ಕೆಲ ಮನೆಗಳಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಇದರಿಂದ ಪಾಲಕರಿಗೂ ಸೋಂಕು ತಗಲುವ ಅಪಾಯವಾಗಿದೆ. ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತರು, ಶಿಶು ಅಭಿವೃದ್ಧಿ ಅಧಿಕಾರಿಗಳು ಐಸೋಲೇಷನ್‍ನಲ್ಲಿರುವ ಮಕ್ಕಳಿಗೆ ಹಾಗೂ ಪಾಲಕರ ಕೌನ್ಸಲಿಂಗ್ ನಡೆಸಬೇಕು. ನಿರಂತರ ಜಾಗೃತಿ ಹಾಗೂ ಮುನ್ನೆಚ್ಚರಿಕೆಗಳ ಕುರಿತಂತೆ ಅರಿವು ಮೂಡಿಸಬೇಕು. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದ ಸೋಂಕಿತ ಮಕ್ಕಳನ್ನು ಕೊವಿಡ್ ಆರೈಕೆ ಕೇಂದ್ರಗಳಲ್ಲಿರುವ ಪ್ರತ್ಯೇಕ ವಾರ್ಡ್‍ಗಳಲ್ಲಿ ದಾಖಲಿಸಲು ಮನವೊಲಿಸಲು ಸೂಚನೆ ನೀಡಿದರು.

ಅನಾಥ ಮಕ್ಕಳಿಗೆ ಶಿಕ್ಷಣ, ಆರ್ಥಿಕ ನೆರವು, ಉದ್ಯೋಗ, ತರಬೇತಿ ಕುರಿತಂತೆ ಮಾರ್ಗಸೂಚಿಯಂತೆ ಇಲಾಖಾ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ವಲಸೆ ಬಂದ ಮಕ್ಕಳು ಹಾಗೂ ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಹಾಗೂ ಸೋಂಕಿನಿಂದ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ನ್ಯೂಟ್ರಿಷಿಯನ್ ರಿಯಾಬ್ಲೆಷನ್ ಸೆಂಟರ್‍ಗಳನ್ನು ಅಭಿವೃದ್ಧಿ ಪಡಿಸಲು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರು ಕೋವಿಡ್ ಮೂರನೇ ಅಲೇ ಪ್ರಭಾವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ಮಾತನಾಡಿ, ಜಿಲ್ಲೆಗೆ ಕೋವಿಡ್ ನಿಯಂತ್ರಣ ಸಂಬಂಧ ಬೇಕಾಗುವ ಸಕಾಲ ವ್ಯವಸ್ಥೆ ಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು ಎಂದರು.
ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೆಡ್, ವೆಂಟಿಲೇರ್ಟರ್ಸ್, ಎಲ್ಲಾ ವ್ಯವಸ್ಥೆ ಗಳನ್ನು ಮಾಡಿಕೊಡಲಾಗುವುದು ಎಂದರು.
ಮೂರನೇ ಅಲೆ ಆರಂಭವಾಗುವ ಮುನ್ನ ಎಲ್ಲ ಮಕ್ಕಳ ತಪಾಸಣೆಗೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತೀರುವ ಮಕ್ಕಳಿಗೆ ಪೆÇೀಷಕಾಂಶ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು ಹಾಗೂ ಮಂಗಳ ಮುಖಿಯರಿಗೆ ಆಹಾರ ಕಿಟ್ ನ್ನು ವಿತರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ಶಾಸಕರಾದ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಅನುರಾಧ, ಜಿಲ್ಲಾಧಿಕಾರಿ ಎಸ್ .ಅಶ್ವಥಿ, ಜಿ.ಪಂ ಸಿಇಒ ದಿವ್ಯಾಪ್ರಭು, ವಿಕಲಚೇತನರ ಇಲಾಖೆಯ ನಿರ್ದೇಶಕರಾದ ಮುನಿರಾಜು, ಉಪನಿದೇಶಕ ರಾಜುಮೂರ್ತಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ಐಶ್ವರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here