ಸೋನಿಯಾ ಕಿವಿ ತಲುಪಲಿದೆ ‘ಸಿದ್ದು’ ಮಂತ್ರ

0
36

ಗುಜರಾತ್,ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ಸಿನ ಒಂದು ದಂಡು ದಿಲ್ಲಿ ದಂಡ ಯಾತ್ರೆಗೆ ಅಣಿಯಾಗುತ್ತಿದೆ.
ಮಾಜಿ ಸಚಿವರು,ಶಾಸಕರನ್ನು ಒಳಗೊಂಡ ಸುಮಾರು ಇಪ್ಪತ್ತು ಮಂದಿ ನಾಯಕರು ದಿಲ್ಲಿ ದಂಡಯಾತ್ರೆ ಮಾಡುವ ಈ ದಂಡಿನಲ್ಲಿರಲಿದ್ದಾರೆ.
ಹೀಗೆ ದಿಲ್ಲಿಗೆ ಹೋಗಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸುವುದು ಈ ದಂಡಿನ ಉದ್ದೇಶ.
ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಎದುರಿಸುವುದಾಗಿ ಘೋಷಿಸಬೇಕು ಅಂತ ಒತ್ತಾಯಿಸುವುದು ಅದರ ಉದ್ದೇಶ.
ಅಂದ ಹಾಗೆ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯಲು ತವಕಿಸುತ್ತಿರುವ ವರಿಷ್ಟರು,ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಈಗಾಗಲೇ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ನಡುವೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿ ಪಕ್ಷಕ್ಕೆ ಮಾರಕವಾಗಬಹುದು ಎಂಬ ಆತಂಕ ಇದಕ್ಕೆ ಕಾರಣ.
ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಹೇಳಿದರೆ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ.ಇಲ್ಲ,ಇಂತವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರೆ ಬಣ ರಾಜಕೀಯ ತಾರಕಕ್ಕೇರಿ ಕಾಂಗ್ರೆಸ್ ಹಡಗು ಮುಳುತ್ತದೆ ಎಂಬುದು ವರಿಷ್ಟರ ಅತಂಕ.
ಆದರೆ ಈ ಉದ್ದೇಶದಿಂದ ಅದು ತೆಗೆದುಕೊಂಡಿರುವ ತೀರ್ಮಾನ ರಾಜ್ಯದಲ್ಲಿ ಕಾಂಗ್ರೆಸ್ ದು:ಸ್ಥಿತಿಗೆ ಕಾರಣವಾಗಬಹುದು ಎಂಬುದು ದಿಲ್ಲಿಗೆ ತೆರಳುತ್ತಿರುವ ದಂಡಿನ ಆತಂಕ.

ಸಾಮೂಹಿಕ ನಾಯಕತ್ವ ದ ಭ್ರಮೆ

ಅಂದ ಹಾಗೆ ಇವತ್ತು ಭವಿಷ್ಯದ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿಯ ಪರಿಣಾಮ ತಡೆಯಲು ವರಿಷ್ಟರು ಸಾಮೂಹಿಕ ನಾಯಕತ್ವದ ಮಾತುಗಳನ್ನಾಡಿರಬಹುದು.
ಆದರೆ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎಂಬುದು ಇವತ್ತಿನ ಸ್ಥಿತಿಯಲ್ಲಿ ಬರೀ ಭ್ರಮೆ.
ವಾಸ್ತವಿಕವಾಗಿ ಸಾಮೂಹಿಕ ನಾಯಕತ್ವದ ಸೂತ್ರವನ್ನು ಅನುಸರಿಸುವ ಅನಿವಾರ್ಯತೆ ಆಡಳಿತಾರೂಢ ಬಿಜೆಪಿಗಿದೆ.
ಯಾಕೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಗಟ್ಟಿ ಧ್ವನಿಯಲ್ಲಿ ಹೇಳಿದರೆ ಅಲ್ಲಿರುವ ಹಲ ಬಣಗಳು ತಿರುಗಿ ಬೀಳುತ್ತವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಎದುರು ಧ್ವನಿ ಎತ್ತಲು ಈ ಬಣಗಳಿಗೆ ಸಾಧ್ಯವಾಗದೆ ಇರಬಹುದು.
ಆದರೆ ಅವು ಒಳಗಿಂದೊಳಗೆ ತಿರುಗಿ ಬೀಳುವುದು ಖಚಿತ.ಇದು ಗೊತ್ತಿರುವುದರಿಂದ ಖುದ್ದು ಬಸವರಾಜ ಬೊಮ್ಮಾಯಿ ಅವರೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎನ್ನುತ್ತಿದ್ದಾರೆ.
ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರನ್ನು ಸಿಎಂ ಹುದ್ದೆಗೆ ತರಬೇಕು ಅನ್ನುವುದನ್ನು ಮೋದಿ-ಅಮಿತ್ ಶಾ ಜೋಡಿ ತೀರ್ಮಾನಿಸುತ್ತದೆ.
ಆದರೆ ಕಾಂಗ್ರೆಸ್ ಪರಿಸ್ಥಿತಿ ಹಾಗಿಲ್ಲ,ಇಲ್ಲಿ ನಂಬರ್ ಒನ್ ಮಾಸ್ ಲೀಡರ್ ಅಂತಿದ್ದರೆ ಅದು ಸಿದ್ಧರಾಮಯ್ಯ.
ರಾಜ್ಯದ ಯಾವುದೇ ಭಾಗಕ್ಕೆ ಹೋಗಲಿ,ಸಿದ್ಧರಾಮಯ್ಯ ಅವರನ್ನು ಜನಸಮೂಹ ಇಷ್ಟಪಡುತ್ತಿದೆ.ಜಯಘೋಷ ಕೂಗುತ್ತಿದೆ.
ಹೀಗಿರುವಾಗ ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಘೋಷಿಸಿದರೆ ಮತದಾರರ ನಿಲುವು ಪಕ್ಕಾ ಆಗುತ್ತದೆ.
ಅಹಿಂದ ವರ್ಗಗಳ ಗಣನೀಯ ಮತಗಳ ಜತೆಗೆ ಒಂದಷ್ಟು ಪ್ರಮಾಣದ ಲಿಂಗಾಯತ ಮತಗಳು ಕನ್ ಸಾಲಿಡೇಟ್ ಆಗಿ ಮಿನಿಮಮ್ ನೂರಿಪ್ಪತ್ತೈದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ.
ಒಂದು ವೇಳೆ ಇದು ಆಗದೇ ಇದ್ದರೆ ಇವತ್ತು ನೂರಿಪ್ಪತ್ತೈದು ಸೀಟುಗಳ ರೇಂಜಿನಲ್ಲಿರುವ ಕಾಂಗ್ರೆಸ್ ಪಕ್ಷದ ಶಕ್ತಿ ತೊಂಭತ್ತು ಸೀಟುಗಳಿಗೆ ಸ್ಥಗಿತವಾಗುತ್ತದೆ ಅಂತ ಈ ದಂಡು ವರಿಷ್ಟರಿಗೆ ವಿವರಿಸಲಿದೆ.

ಬಿಜೆಪಿ ಪ್ಲಾನ್ ಏನು?

ಅಂದ ಹಾಗೆ ಕಾಂಗ್ರೆಸ್ ಪಕ್ಷವನ್ನು ಹೀಗೆ ತೊಂಭತ್ತರ ಗಡಿಯಲ್ಲಿ ಕಟ್ಟಿ ಹಾಕುವುದೇ ಬಿಜೆಪಿಯ ಮಾಸ್ಟರ್ ಪ್ಲಾನು ಎಂಬುದು ಈ ದಂಡಿನ ಬಳಿ ಇರುವ ವಿವರ.
ಅರ್ಥಾತ್,ಇವತ್ತಿನ ಸ್ಥಿತಿಯಲ್ಲಿ ತಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ ಅಂತ ಬಿಜೆಪಿ ವರಿಷ್ಟರಿಗೂ ಗೊತ್ತು.
ಇದಕ್ಕೆ ಕಾರಣ,ರಾಜ್ಯದ ಲಿಂಗಾಯತ ಮತ ಬ್ಯಾಂಕ್ ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲುವುದಿಲ್ಲ ಎಂಬ ಅನುಮಾನ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಮತಬ್ಯಾಂಕ್ ಏಕತ್ರವಾಗಿ ಬಿಜೆಪಿ ಜತೆ ನಿಲ್ಲುವ ಸಾಧ್ಯತೆ ಕಡಿಮೆ.
ಎಲ್ಲಕ್ಕಿಂತ ಮುಖ್ಯವಾಗಿ ಖುದ್ದು ಯಡಿಯೂರಪ್ಪನವರೇ ಹಿಂದಿನಷ್ಟು ಪರಿಣಾಮಕಾರಿಯಾಗಿ ಲಿಂಗಾಯತ ಮತ ಬ್ಯಾಂಕನ್ನು ಕ್ರೋಢೀಕರಿಸುವ ಆಸಕ್ತಿ ಹೊಂದಿಲ್ಲ ಎಂಬುದು ವರಿಷ್ಟರಿಗೆ ಗೊತ್ತು.
ಹೀಗಾಗಿ ಲಿಂಗಾಯತ ಮತಗಳ ಕೊರತೆಯನ್ನು ಒಂದಷ್ಟು ಪ್ರಮಾಣದಲ್ಲಿ ದಲಿತ ವರ್ಗದ ಬಲಗೈ ಮತಗಳು,ಒಕ್ಕಲಿಗ ಮತಗಳ ಮೂಲಕ ನಿವಾರಿಸಿಕೊಳ್ಳಲು ಅದು ಹವಣಿಸುತ್ತಿದೆ.
ಈ ಪೈಕಿ ದಲಿತ ವರ್ಗದ ಬಲಗೈ ಮತಗಳನ್ನು ಪಡೆಯಲು ಅದು ಅಗ್ರೆಸಿವ್ ಆಗಿ ನುಗ್ಗಬಹುದಾದರೂ,ಒಕ್ಕಲಿಗ ಮತ ಬ್ಯಾಂಕಿನ ಮೇಲೆ ಅದೇ ಅಗ್ರೆಸಿವ್ ಧೋರಣೆಯಿಂದ ನುಗ್ಗಲಾರದು.
ಹೀಗಾಗಿ ಈ ವಿಷಯದಲ್ಲಿ ಅದು ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅನ್ನು ನೆಚ್ಚಿಕೊಳ್ಳುತ್ತದೆ.
ಅರ್ಥಾತ್,ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಎಲ್ಲೆಲ್ಲಿ ನೇರ ಪೈಪೋಟಿ ಇದೆಯೋ?ಅಲ್ಲಿ ಜೆಡಿಎಸ್ ಗೆಲ್ಲಲಿ ಅಂತ ಅದು ಬಯಸುತ್ತದೆ.
ಅಂದರೆ,ಕಾಂಗ್ರೆಸ್ ಪಕ್ಷದ ಆಸು-ಪಾಸಿನಲ್ಲಿ ತಾವು ನಿಂತು,ಜೆಡಿಎಸ್ ಮೂವತ್ತೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬುದು ಅದರ ಲೆಕ್ಕಾಚಾರ.
ಅರ್ಥಾತ್,ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬುದು ಅದರ ಯೋಚನೆ.
ಅಂದ ಹಾಗೆ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲು ಈ ಬಾರಿ ಬಿಜೆಪಿಗೆ ಆತಂಕವಿಲ್ಲ.ಯಾಕೆಂದರೆ ಜೆಡಿಎಸ್ ಜತೆಗಿನ ವ್ಯವಹಾರದಲ್ಲಿ ಅದರ ಕೈ ಮೇಲಿರಲಿದೆ.
ಹೀಗಾಗಿ ಸಮ್ಮಿಶ್ರ ಸರ್ಕಾರ ರಚಿಸುವ ವಿಷಯ ಬಂದಾಗ ಅದು ತನ್ನಲ್ಲೇ ಸಿಎಂ ಪಟ್ಟ ಉಳಿಸಿಕೊಂಡು,ಉಪಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್ ಗೆ ಕೊಡಬಹುದು.
ಹಾಗಂತ ಅದು ಹೇಳಿದರೆ ಜೆಡಿಎಸ್ ಕೂಡಾ ತುಂಬ ವಿರೋಧ ವ್ಯಕ್ತಪಡಿಸುವ ಸ್ಥಿತಿಯಲ್ಲಿರುವುದಿಲ್ಲ.
ಹೀಗಾಗಿ ಅದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು,ಅವರಣ್ಣ ಹೆಚ್.ಡಿ.ರೇವಣ್ಣ ಅವರಿಗೆ ಇಲ್ಲಿ ಉಪಮುಖ್ಯಮಂತ್ರಿ ಹುದ್ದೆ ಕೊಡಬಹುದು.
ಇಲ್ಲ,ನಮಗೆ ಸಿಎಂ ಹುದ್ದೆಯೇ ಬೇಕು.ಇಲ್ಲದಿದ್ದರೆ ನಮ್ಮ ದಾರಿ ನಮಗೆ ಅಂತ ಹೇಳುವ ಸ್ಥಿತಿಯಲ್ಲಿ ಕುಮಾರಸ್ವಾಮಿ ಇರುವುದಿಲ್ಲ.
ಯಾಕೆಂದರೆ ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆಯುವಾಗ ಸಂಖ್ಯೆ ಎಂಬುದು ಬಿಜೆಪಿಯ ಲೆಕ್ಕಕ್ಕೇ ಬರಲಿಲ್ಲ.
ಹೀಗಾಗಿ ನಾಳೆ ತಾವು ತಕರಾರು ಮಾಡಿದರೆ ಜೆಡಿಎಸ್ ನ ಇಪ್ಪತ್ತೈದೋ ಮೂವತ್ತು ಶಾಸಕರನ್ನು ಸೆಳೆದುಕೊಳ್ಳಲು ಮೋದಿ-ಅಮಿತ್ ಷಾ ಹಿಂಜರಿಯುವುದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಕಡೆ ನೋಡುವ ಸ್ಥಿತಿಯಲ್ಲಿ ಕುಮಾರಸ್ವಾಮಿ ಇಲ್ಲ.
ಹೀಗೆ ಒಂದು ಸಲ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು ಅಂತಿಟ್ಟುಕೊಳ್ಳಿ,ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಕತೆಯೇ ಮುಗಿದು ಹೋಗುತ್ತದೆ ಎಂಬುದು ಈ ದಂಡಿನ ಎಚ್ಚರಿಕೆ.

ಕಾಂಗ್ರೆಸ್ ಹೇಗೆ ನಾಶವಾಗುತ್ತದೆ?

ಈ ಸಮಾನ ಮನಸ್ಕ ನಾಯಕರ ಪ್ರಕಾರ,ಈ ಸಲ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರದೆ ಹೋದರೆ ಸಹಜವಾಗಿಯೇ ಪಕ್ಷದ ಬಹುತೇಕ ನಾಯಕರ ಅಂತ:ಸ್ಸತ್ವವೇ ಕುಸಿದು ಹೋಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಮರಳಿ ಅಧಿಕಾರಕ್ಕೆ ಬಂದರೆ ತಮ್ಮ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಬಯಸುವ ಮೋದಿ-ಅಮಿತ್ ಶಾ ರಾಜ್ಯ ಕಾಂಗ್ರೆಸ್ಸಿಗರ ಸಾಮೂಹಿಕ ವಲಸೆಯನ್ನು ಬಯಸುತ್ತಾರೆ.
ನಾಳೆ ಇದಕ್ಕಾಗಿ ಅವರು ತಮ್ಮ ಕೈಲಿರುವ ಅಸ್ತ್ರಗಳನ್ನು ಬಳಸಿದರೆ ಬಹುತೇಕ ಕಾಂಗ್ರೆಸ್ ನಾಯಕರಿಗೆ ಬೇರೆ ದಾರಿಯೇ ಇಲ್ಲದಂತಾಗುತ್ತದೆ.
ಎಷ್ಟೇ ಅದರೂ ಅವರಿಗೆ ಭವಿಷ್ಯ ಮುಖ್ಯ ತಾನೇ?ಈಗಾಗಲೇ ಐದು ವರ್ಷದ ಅಧಿಕಾರ ಹೀನ ಸ್ಥಿತಿ.ಪುನ: ಐದು ವರ್ಷ ಇಂತಹದೇ ಸ್ಥಿತಿ ಎದುರಾದರೆ ಅವರೇನು ಮಾಡಬೇಕು?ಯಾರೋ ಕೆಲವರಿಗೆ ಪಕ್ಷ ನಿಷ್ಟೆ ಮುಖ್ಯವಾಗಿ ಅವರು ಇಲ್ಲೇ ಉಳಿದುಕೊಳ್ಳಬಹುದು.ಆದರೆ ಬಹುತೇಕರಿಗೆ ಪಕ್ಷ ನಿಷ್ಟೆಗಿಂತ ಅಸ್ತಿತ್ವದ ಪ್ರಶ್ನೆ ಮುಖ್ಯವಾಗುತ್ತದೆ.
ಹಾಗಾದಾಗ ಇವತ್ತು ಉತ್ತರ ಪ್ರದೇಶ,ತೆಲಂಗಾಣ,ಸೀಮಾಂಧ್ರ,ಕಾಶ್ಮೀರದಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆಯೋ?ಅದೇ ಸ್ಥಿತಿ ಕರ್ನಾಟಕದಲ್ಲೂ ಎದುರಾಗುತ್ತದೆ.
ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಶಕ್ತಿ ಕುಸಿದರೆ 2024 ರ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ.
ಅದಾಗಬಾರದು ಎಂದರೆ ನಾವು ಕರ್ನಾಟಕದಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕು.ಹಾಗೆ ಅಧಿಕಾರ ಹಿಡಿಯಬೇಕೆಂದರೆ ಸಾಮೂಹಿಕ ನಾಯಕತ್ವದ ಮಾತು ಬಿಟ್ಟು ಸಿದ್ಧರಾಮಯ್ಯ ಅವರ ನಾಯಕತ್ವಕ್ಕೆ ಮಣೆ ಹಾಕಬೇಕು ಎಂಬುದು ಈ ದಂಡಿನ ವಾದ.
ಅದರ ಈ ವಾದವನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪುತ್ತದೋ ಇಲ್ಲವೋ ಗೊತ್ತಿಲ್ಲ.ಆದರೆ ತನ್ನೆದುರು ಅದು ಮಂಡಿಸಲಿರುವ ಈ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕುವುದೂ ಅದಕ್ಕೆ ಕಷ್ಟ.

ಕೊನೆಯ ಮಾತು

ಕುತೂಹಲದ ಸಂಗತಿ ಎಂದರೆ ರಾಜ್ಯ ಕಾಂಗ್ರೆಸ್ ನಾಯಕರ ಒಂದು ದಂಡು ದಿಲ್ಲಿಗೆ ದೌಡಾಯಿಸುವ ತಯಾರಿಯಲ್ಲಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಬಾಣ ಪ್ರಯೋಗಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ದಲಿತರೂ ಮುಖ್ಯಮಂತ್ರಿಯಾಗಬಹುದು ಎಂಬುದು ಈ ಬಾಣ.
ಅವರ ಈ ಬಾಣ ಸರಿಯಾಗಿ ಕಚ್ಚಿಕೊಂಡರೆ ಸಿಎಂ ಹುದ್ದೆಯ ರೇಸಿನಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಹೆಸರುಗಳು ಮುಂಚೂಣಿಗೆ ಬರುತ್ತವೆ.
ಇದು,ನನಗೂ ಬೇಡ,ನಿಮಗೂ ಬೇಡ,ಮೂರನೆಯವರಿಗೆ ಹೋಗಲಿ ಎಂಬ ತಂತ್ರ ಇರಬಹುದೇ?ಅನ್ನುವುದು ಈಗ ಕೈ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here