ಭೂಮಿ ಹುಣ್ಣುಮೆ/ಸೀಗೆ ಹುಣ್ಣುಮೆ ೧೦-೧೦-೨೦೨೨, ಭಾನುವಾರ

0
101

ಇವತ್ತು ಬೆಳಗ್ಗೆ ಭೂಮಿ ಹುಣ್ಣಿಮೆ ಎಂದು ಶಿಷ್ಟಭಾಷೆಯಲ್ಲಿ ಕರೆಯುವ, ಭೂಮಣ್ಣಿ ಹಬ್ಬ ಎಂದು ನಮ್ಮ ಮಾತಲ್ಲಿ ಹೇಳುವ ಅನ್ನ ಕೊಡುವ ಭೂಮಿಯನ್ನು ಪೂಜಿಸುವ ಹಬ್ಬ ಮುಗಿಸಿ ಕೂತಿರುವೆ.

ಸಂಜೆ ಇಳಿಬಿಸಿಲಿನ ಹೊತ್ತಲ್ಲಿ ಅವ್ವನ ಜೊತೆ ಲೋಕಾಭಿರಾಮ ಮಾತನಾಡುತ್ತಾ ಕುಳಿತವನಿಗೆ ನಿನ್ನೆ ರಾತ್ರಿ ಬೆಳಗಿನ ಜಾವದವರೆಗೆ ಹಬ್ಬದ ಅಡುಗೆ ಮಾಡಿದ ಅವ್ವ, ಬೇಗ ಊಟ ಮಾಡಿ ಮಲಗಾನ.. ಎಂದಾಗ ಭೂಮಣ್ಣಿ ಹಬ್ಬ ಎಂಬ ಮಣ್ಣಿನಮಕ್ಕಳ ಸಂಭ್ರಮದ ಮಜಲುಗಳು ಕಣ್ಣಮುಂದೆ ಬಂದುಹೋದವು.

ಹಾಗೆ ನೋಡಿದರೆ ನಿನ್ನೆಯಿಂದಲೇ ಈ ಹಬ್ಬದ ಕುರಿತು ಮಲೆನಾಡು ಮತ್ತು ಬಯಲುಸೀಮೆ ಕಡೆಯ ಗೆಳೆಯರು ಇಲ್ಲಿ ಸಾಕಷ್ಟು ಬರೆದಿದ್ದಾರೆ. ತಮ್ಮ ತಮ್ಮ ಕಡೆಯ ಹಬ್ಬದ ವೈಶಿಷ್ಟ್ಯಗಳ ಬಗ್ಗೆ ಸಂಭ್ರಮದಿಂದಲೇ ಎಲ್ಲ ಹಂಚಿಕೊಂಡಿದ್ದಾರೆ. ನಮ್ಮ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಕಡೆಯಂತೂ ಬಹುತೇಕರ ವಾಟ್ಸಪ್ ಸ್ಟೇಟಸ್ ಮತ್ತು ಗುಂಪುಗಳಲ್ಲಿ ಭೂಮಣ್ಣಿ ಹಬ್ಬದ ಫೋಟೊ, ವಿಡಿಯೋ, ಶುಭಾಶಯ ಕಾರ್ಡುಗಳ ಹೊಳೆ ಹರಿದಿದೆ

ಹಾಗಾಗಿ ಈ ನೆಲಮೂಲದ ಆಚರಣೆಯ ಕುರಿತ ಸಾಮಾನ್ಯ ಸಂಗತಿಗಳ ಬದಲು, ನಮ್ಮಲ್ಲಿ ನಾವು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಕೆಲವು ನಿರ್ದಿಷ್ಟ ಆಚರಣೆಗಳ ಬಗ್ಗೆ ಹೇಳುವೆ;

ನಮ್ಮ ಮನೆಗಳಲ್ಲಿ ಈ ಹಬ್ಬದ ಅಚರಣೆ ಶುರುವಾಗುವುದು ಮಹಾನವಮಿ ದಿನದಿಂದಲೇ. ಮಹಾನವಮಿಗೆ ಮೂರ್ನಾಲ್ಕು ದಿನ ಇರುವಾಗಲೇ ಭೂಮಣ್ಣಿ ಬುಟ್ಟಿ ಎನ್ನುವ ಒಂದು ದೊಡ್ಡದು ಮತ್ತು ಒಂದು ಚಿಕ್ಕದು ಸೇರಿ ಎರಡು ಬುಟ್ಟಿಗಳಿಗೆ ಮೆಂತೆ ಹಿಟ್ಟು, ನ್ಯೂಸ್ ಪೇಪರ್ ಕಲಸಿಟ್ಟು ತುಸು ಕೊಳೆಸಿದ ಪೇಸ್ಟ್ ಮಾಡಿ ಬಳಿದು, ನಂತರ ಕೆಮ್ಮಣ್ಣು ಬಳಿದು ಒಣಗಿಸಿ ಚಿತ್ರ ಬರೆಯಲು ಸಜ್ಜುಗೊಳಿಸಿಡುತ್ತಾರೆ.

ಮಹಾನವಮಿಯ ದಿನ ಪೂಜೆ ಮಾಡಿದ ಬಳಿಕ ಆ ಜೋಡಿ ಬುಟ್ಟಿಗಳ ಮೇಲೆ ಹಸೆ ಚಿತ್ತಾರ ಮೂಡಿಸುತ್ತಾರೆ. ಸಾಮಾನ್ಯವಾಗಿ ನಮ್ಮಲ್ಲಿ ಎರಡು ಬಗೆಯ ಭೂಮಣ್ಣಿ ಬುಟ್ಟಿ ಬಳಕೆಯಲ್ಲಿದ್ದು, ಅವರವರ ಮನೆತನದ ಸಂಪ್ರದಾಯದಂತೆ ಕೆಮ್ಮಣ್ಣು ಬಳಿದ ಬುಟ್ಟಿಯ ಮೇಲೆ ಅಕ್ಕಿಹಿಟ್ಟಿನ ಬಿಳಿ ಬಣ್ಣದ ಚಿತ್ತಾರ ಬರೆಯುತ್ತಾರೆ. ಮತ್ತೆ ಕೆಲವರು ಕೆಮ್ಮಣ್ಣಿನ ಬುಟ್ಟಿ ಕ್ಯಾನವಾಸ್ ಮೇಲೆ ಗುಡ್ಡೆಗೇರು ಕಾಯಿ ರಸವನ್ನು ಬಳಸಿ ಕಪ್ಪು ಬಣ್ಣದಲ್ಲಿ ಚಿತ್ತಾರ ಮೂಡಿಸುತ್ತಾರೆ.

ಮಹಾನವಮಿಯಿಂದ ಭೂಮಿ ಹುಣ್ಣಿಮೆ ನಡುವಿನ ಐದು ದಿನದಲ್ಲಿ ಬುಟ್ಟಿ ಚಿತ್ತಾರ ಮುಗಿದು, ಹಬ್ಬದ ಹಿಂದಿನ ದಿನ ಬುಟ್ಟಿ ಸಿದ್ಧವಾಗಬೇಕು.

ಹಬ್ಬದ ಅಡುಗೆಗಳದ್ದೇ ಒಂದು ಬಹಳ ಕುತೂಹಕರ ಲೋಕ. ಕಾಡು ಗೆಣಸಿನಿಂದ ಹಿಡಿದು ಊರ ಅಮಟೆಕಾಯಿವರೆಗೆ ಭೂಮಣ್ಣಿ ಹಬ್ಬಕ್ಕೆ ಮಾಡಲೇಬೇಕಾದ ಅಡುಗೆಗಳ ಪಟ್ಟಿ ದೊಡ್ಡದಿದೆ.

ಒಂಥರಾ ಆಧುನಿಕ ಮಂಚೂರಿಯನ್ ಹೋಲುವ ಅಮಟೆಕಾಯಿ ಪಲ್ಯದ ರುಚಿಯೇ ಅದ್ಭುತ. ಬೆಳೆದ ಅಮಟೆಕಾಯನ್ನು ಗೊರಟುಸಹಿತ ಕೊಚ್ಚಿ ಚಿಕ್ಕ ಚೂರು ಮಾಡಿ ಅದಕ್ಕೆ ಬೆಲ್ಲ, ಹಸಿಮೆಣಸು, ಕಾರದಪುಡಿ ಹಾಕಿ ಮಾಡುವ ಅದು ಸಿಹಿ ಹುಳಿ ಕಾರ ಮಿಶ್ರಿತ ಕಟ್ಟಾಮೀಠಾ ರುಚಿ. ಭೂತಾಯಿ ಪೂಜಾ ಎಡೆಗೆ ಹಾಕಿದ ಮೇಲೆ ಸುಮಾರು ಹದಿನೈದು ಇಪ್ಪತ್ತು ದಿನ ಇದರ ರುಚಿ ಸವಿಯುವ ಮಜಾನೇ ಬೇರೆ.

ಹಾಗೇ ಕಾಡಿನಲ್ಲಿ ಸಿಗುವ ನೂರೆ ಗೆಣಸು ಕೂಡ ಎಡೆ ಮಾಡುವುದು ವಾಡಿಕೆ. ಹಾಗಾಗಿ ಮಲೆನಾಡಿನ ಬೇಲಿಸಾಲಲ್ಲಿ ಈ ಗೆಣಸಿನ ಮೊದಲ್ಲೆಲ್ಲ ಅಭಯವಿತ್ತು. ಈಗ ಎಲ್ಲೆಡೆ ತಂತಿ ಮತ್ತು ಐಬೆಕ್ಸ್ ಬೇಲಿ ಬಂದು ಅದೂ ಅಪರೂಪವಾಗಿದೆ.

ಮತ್ತೊಂದು ವಿಶಿಷ್ಟ ಖಾದ್ಯ, ಸೌತೆಕಾಯಿ ಮತ್ತು ಚೀನಿಕಾಯಿ ಕರೆಯುವ ಚಿನ್ನಿಕಾಯಿ ಕಡುಬು. ಅವರೆಡೂ ಈ ಹಬ್ಬಕ್ಕೆ ಬೇಕು. ಸೌತೆ ಕಾಯಿ ಕಡುಬು ಒಂದಕ್ಕೆ ಸಾಕಷ್ಟು ತುಪ್ಪ ಹಾಕಿ, ಬಾಳೆ ಎಲೆಯಲ್ಲಿ ಸುತ್ತಿ, ನೀರು ಒಳಹೋಗದಂತೆ ಭದ್ರಪಡಿಸಿ, ಸಸಿ ಪೂಜೆ(ಭೂಮಿ ಪೂಜೆ) ಬಳಿಕ ಅದನ್ನು ಹಸಿ ಭತ್ತದ ಗದ್ದೆಯ ಕೆಸರಲ್ಲಿ ಹೂತಿಟ್ಟು ಗುರುತು ಮಾಡುತ್ತಾರೆ. ಗದ್ದೆ ಕೊಯ್ಲು ಮುಗಿದ ಬಳಿಕ ಮಾಡುವ ಭೂತನಹಬ್ಬ(ಗೊಣಬೆ-ಬಣವೆ ಪೂಜೆ) ಹಬ್ಬದ ದಿನ ಆ ಹೂತಿಟ್ಟ ಕಡುಬು ತೆಗೆದು ನೈವೇಧ್ಯ ಮಾಡುತ್ತಾರೆ.

ಇನ್ನು ಸೌತೆಕಾಯಿ ಪಚಡಿ ಸೇರಿದಂತೆ ಏಳು ಬಗೆಯ ತರಕಾರಿ ಪಲ್ಯ, ನೂರೆಂಟು ಸೊಪ್ಪು, ಅಮಟೆಕಾಯಿ ಹಾಕಿದ ಹಚ್ಚಂಬ್ಲಿ(ಬೆರೆಕೆಸೊಪ್ಪಿನ ಪಲ್ಯ), ಹೋಳಿಗೆ ಮತ್ತಿತರ ನಾಲ್ಕಾರು ಬಗೆಯ ಸಿಹಿ, ಕೊಟ್ಟೆ ಕಡುಬು ಇವೆಲ್ಲಾ ಮಾಡಲೇಬೇಕಾದ ಭೂತಾಯಿಯ ಬಯಕೆಯ ಪದಾರ್ಥಗಳು.

ಹಾಗಾಗಿ ಭೂಮಿ ಮತ್ರು ಭೂಮಿ ಮಕ್ಕಳಾದ ರೈತರ ನಡುವಿನ ವಿಶೇಷ ಕಕ್ಕುಲತೆಯ, ಕಳ್ಳುಬಳ್ಳಿಯ ಹಬ್ಬಕ್ಕೆ ಭೂಮಿಯ ಒಡಲಲ್ಲಿ ಬೆಳೆಯುವ, ಮನುಷ್ಯ ತಿನ್ನಬಹುದಾದ ಬಹುತೇಕ ಎಲ್ಲಾ ಸೊಪ್ಪು, ತರಕಾರಿ, ಗೆಡ್ಡೆಗೆಣಸುಗಳು ಆಕೆಗೆ ಪೂಜೆಗೆ ಪರಮಾನ್ನ. ಭೂತಾಯಿ ಮಕ್ಕಳ ಕಲಾ ನೈಪುಣ್ಯತೆ, ಅಡುಗೆ ಪರಿಣತಿ, ಭೂಮಿಯೊಂದಿಗಿನ ಅವರ ತಾಯಿಮಕ್ಕಳ ಅನುಬಂಧಕ್ಕೆ ಈ ಹಬ್ಬ ಒಂದು ನಿದರ್ಶನ..

ಲೇಖಕರು : ಶಶಿ ಸಂಪಳ್ಳಿ

LEAVE A REPLY

Please enter your comment!
Please enter your name here