ಕೆನಡಾದಲ್ಲಿ ಕಾಳ್ಗಿಚ್ಚಿನ ಅಬ್ಬರ: ಬೆಂಕಿಯ ರಬಸಕ್ಕೆ ಶೇ 90 ರಷ್ಟು ಸುಟ್ಟುಕರಕಲಾದ ಪಟ್ಟಣ

0
90

ಕೆನಡಾದಲ್ಲಿ ಬಿಸಿ ಗಾಳಿಯಿಂದ ಉಂಟಾದ ಅನಿರೀಕ್ಷಿತ ತಾಪಮಾನ ಏರಿಕೆಯಿಂದ ಸುಮಾರು 500 ಮಂದಿ ಜೀವ ಕಳೆದುಕೊಂಡ ನಡುವೆಯೇ, ಕಾಳ್ಗಿಚ್ಚಿನ ಅನಾಹುತ ಉಂಟಾಗಿದೆ. ಲಿಟ್ಟನ್ ಎಂಬ ಪಟ್ಟಣ ಶೇ 90ರಷ್ಟು ಸುಟ್ಟು ಭಸ್ಮವಾಗಿದೆ. ವ್ಯಾಂಕೋವರ್: ಕೆನಡಾದಲ್ಲಿ ಹಿಂದೆಂದೂ ಕಾಣದ  ಬಿಸಿಗಾಳಿ ತೀವ್ರತೆಯಿಂದ ನೂರಾರು ಜನರು ಜೀವ ಕಳೆದುಕೊಂಡಿರುವ ಬೆನ್ನಲ್ಲೇ, ಬೆಂಕಿ ತನ್ನ ಪ್ರತಾಪ ಪ್ರದರ್ಶಿಸುತ್ತಿದೆ. ಕೆನಡಾದ ಪಶ್ಚಿಮ ಭಾಗದ ಲಿಟ್ಟನ್ ಪಟ್ಟಣ ಕಾಳ್ಗಿಚ್ಚಿನ ಕೆನ್ನಾಲಿಗೆಗೆ ಸುಟ್ಟುಹೋಗಿದೆ. ಸುಡು ಬೆಂಕಿಯಿಂದ ಜನರನ್ನು ರಕ್ಷಿಸಲು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 1,000 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿಯೇ 62 ಹೊಸ ಕಾಳ್ಗಿಚ್ಚು ಹೊತ್ತಿಕೊಂಡಿವೆ. ವ್ಯಾಂಕೋವರ್‌ನ ವಾಯವ್ಯ ಭಾಗದ 250 ಕಿಮೀ ದೂರದಲ್ಲಿರುವ ಲಿಟ್ಟನ್ ಪಟ್ಟಣ ಕೇಂದ್ರ ಭಾಗ ಸೇರಿದಂತೆ ಶೇ 90ರಷ್ಟು ಸುಟ್ಟು ಕರಕಲಾಗಿದೆ. ಬ್ರಿಟಿಷ್ ಕೊಲಂಬಿಯಾ ಪ್ರಧಾನಿ ಜಾನ್ ಹೊರ್ಗಾನ್ ಅವರೊಂದಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾತನಾಡಿದ್ದು, ಲಿಟ್ಟನ್‌ನ ಜನತೆಗೆ ತಮ್ಮ ಸರಕಾರ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಲಿಟ್ಟನ್‌ನಲ್ಲಿ 250 ನಿವಾಸಿಗಳಿದ್ದು, ಅವರನ್ನು ಬುಧವಾರ ಸಂಜೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಇಲ್ಲಿ 49.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಉಂಟಾಗಿತ್ತು. ಲಿಟ್ಟನ್‌ನ ಉತ್ತರ ಭಾಗದಲ್ಲಿನ ನಿವಾಸಿಗಳನ್ನು ಬುಧವಾರ ರಾತ್ರಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಕಾಳ್ಗಿಚ್ಚಿಗೆ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕಳೆದ 5 ದಿನಗಳಲ್ಲಿ ವ್ಯಾಂಕೋವರ್‌ನಲ್ಲಿ ಬಿಸಿ ತಾಪಮಾನಕ್ಕೆ 486 ಹಠಾತ್ ಮತ್ತು ಅನಿರೀಕ್ಷಿತ ಸಾವುಗಳು ಸಂಭವಿಸಿವೆ. ಸಾಮಾನ್ಯವಾಗಿ ಬಿಸಿ ಗಾಳಿಯಿಂದ ಈ ಅವಧಿಯಲ್ಲಿ ಸರಾಸರಿ 165 ಜನರು ಸಾಯುತ್ತಿದ್ದರು. ಕಾಳ್ಗಿಚ್ಚು ವ್ಯಾಪಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅದು ನಿಯಂತ್ರಣ ಮೀರಿದ್ದು, 6,400 ಹೆಕ್ಟೇರ್‌ನಷ್ಟು ಭೂಮಿ ಆಹುತಿಯಾಗಿದೆ. ಅತಿಯಾದ ತಾಪದಿಂದ ಜನರು ನಲುಗಿ ಹೋಗಿದ್ದಾರೆ. ವ್ಯಾಂಕೋವರ್‌ನಲ್ಲಿ ಮನೆಯಲ್ಲಿ ಹವಾ ನಿಯಂತ್ರಕಗಳಿಲ್ಲ ಜನರು ಅಂಗಡಿ ಹಾಗೂ ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಹವಾ ನಿಯಂತ್ರಕ ಯಂತ್ರಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದ ಎಸಿ ಯಂತ್ರಗಳ ಬೆಲೆ ಏಕಾಏಕಿ ಎರಡು ಮೂರು ಪಟ್ಟು ಹೆಚ್ಚಳವಾಗಿದೆ. ಪಶ್ಚಿಮ ಕೆನಡಾದ ಜತೆಗೆ ಅಮೆರಿಕದ ವಾಷಿಂಗ್ಟನ್ ಮತ್ತು ಒರೆಗಾನ್ ಕೂಡ ದಾಖಲೆಯ ಬಿಸಿ ಕಂಡಿದೆ. ಇನ್ನೂ ಕೆಲವು ದಿನಗಳವರೆಗೆ ಈ ಬಿಸಿ ವಾತಾವರಣ ಮುಂದುವರಿಯಲಿದೆ.

LEAVE A REPLY

Please enter your comment!
Please enter your name here