ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟಾಸ್‌ “ಪೆಗಾಸಸ್‌” ಪ್ರಕರಣ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

0
548

ಪೆಗಾಸಸ್ ಕಣ್ಗಾವಲು ತಂತ್ರಾಂಶವನ್ನು ಬಳಸಿ ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸಿದ ವರದಿಗಳ ಬಗ್ಗೆ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟಾಸ್‌ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.
‘ಪೆಗಾಸಸ್‌ ಕಣ್ಗಾವಲು ತಂತ್ರಾಂಶವನ್ನು ಬಳಸಿ ರಾಜಕೀಯ ನಾಯಕರು, ಸಚಿವರು, ಸರ್ಕಾರಿ ಸಿಬ್ಬಂದಿ ಸೇರಿದಂತೆ ಸುಮಾರು 300 ಭಾರತೀಯರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.ಈ ಸಂಬಂಧ ಜಾನ್‌ ಬ್ರಿಟಾಸ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದು ಭಾರತೀಯರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಈ ರೀತಿಯ ನಡೆಯಿಂದ ಜನರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಬಹುದು. ಹಾಗಾಗಿ ಈ ಬಗ್ಗೆ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು’ ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

‘ಈ ವಿಷಯ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ಆದರೂ ಕೇಂದ್ರ ಸರ್ಕಾರವು ಈ ಬಗೆಗಿನ ತನಿಖೆ ಬಗ್ಗೆ ಕಾಳಜಿ ವಹಿಸಿಲ್ಲ. ಬದಲಿಗೆ ದೇಶದಲ್ಲಿ ಈ ರೀತಿಯ ಅನಧಿಕೃತ ಕಣ್ಗಾವಲು ಪ್ರಕ್ರಿಯೆಗಳು ನಡೆಯದಂತೆ ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ ಎಂಬುದಾಗಿ ಸರ್ಕಾರ ಹೇಳಿತು’ ಎಂದು ಜಾನ್‌ ಬ್ರಿಟಾಸ್‌ ಅವರು ಭಾನುವಾರ ತಿಳಿಸಿದರು. ‘ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಯಿತು. ಆದರೆ, ಈ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿಯೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ’ ಎಂದು ಅವರು ಹೇಳಿದರು

ಜೆಪಿಸಿ ತನಿಖೆಗೆ ವಿಪಕ್ಷಗಳ ಆಗ್ರಹ: ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ಗೂಢಚರ್ಯೆ ನಡೆಸಲಾಗಿದೆಯೇ, ಇಲ್ಲವೇ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಆಗ್ರಹವನ್ನು ಮುಂದಿಟ್ಟಿದ್ದಾರೆ. ‘ಮೋದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಲ್ಲಾ ವಿರೋಧ ಪಕ್ಷಗಳು ಒತ್ತಾಯಿಸುತ್ತಲೇ ಇವೆ. ಮೋದಿ ಅವರು ಸಂಸತ್ ಅಧಿವೇಶನದ ಮೊದಲ ದಿನವೇ ಈ ಬಗ್ಗೆ ಹೇಳಿಕೆ ನೀಡಬಹುದಿತ್ತು. ದೇಶದಲ್ಲಿ ಕೆಲವು ಸಂಸ್ಥೆಗಳು ಮಾತ್ರವೇ ಹೀಗೆ ಗೂಢಚರ್ಯೆ ನಡೆಸಲು ಶಕ್ತವಾಗಿವೆ. ಆ ಎಲ್ಲಾ ಸಂಸ್ಥೆಗಳು ಪ್ರಧಾನಿಯ ಅಧೀನದಲ್ಲಿಯೇ ಬರುತ್ತವೆ. ಹೀಗಾಗಿ ಪ್ರಧಾನಿ ಮಾತ್ರವೇ ಈ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ತಮ್ಮ ಸಚಿವಾಲಯ ಮತ್ತು ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲಾ ಸಚಿವರಿಗೆ ಗೊತ್ತಿರುತ್ತದೆ. ಆದರೆ ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದು ಪ್ರಧಾನಿ ಒಬ್ಬರಿಗೆ ಮಾತ್ರವೇ ಗೊತ್ತಿರುತ್ತದೆ. ಹೀಗಾಗಿಯೇ ಪ್ರಧಾನಿ ಮೋದಿ ಅವರು ಮುಂದೆ ಬಂದು, ಪೆಗಾಸಸ್ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂಸತ್ತಿನಲ್ಲಿ ಸ್ಪಷ್ಟಪಡಿಸಲಿ’ ಎಂದು ಅವರು ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here