ವಿಮೆಯ ಹಣಕ್ಕಾಗಿ ಸ್ನೇಹಿತನನ್ನೇ ಕೊಂದ ಪಾಪಿ, 20 ಲಕ್ಷದ ಇನ್ಸೂರೆನ್ಸ್ ಮಾಡಿಸಿದ್ದ ಮಿತ್ರ ದ್ರೋಹಿ!

0
93

ಸ್ನೇಹಿತ ಕಷ್ಟದಲ್ಲಿದ್ದಾನೆಂದು ಹೊಲ ಮಾರಿ ಹಣ ಕೊಟ್ಟಿದ್ದ ಗೆಳೆಯನನ್ನೇ ಕೊಲೆ ಮಾಡಿ ಆತನ ಇನ್ಸುರೆನ್ಸ್‌ ಹಣ ಕಬಳಿಸುವ ಆಲೋಚನೆ ಇಟ್ಟುಕೊಂಡಿದ್ದ ಮೂವರು ಕಿರಾತಕರನ್ನು ವಿವಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮುಖೇನ ಹಳ್ಳಿಯ ಕಂಠೆಪ್ಪ ತನ್ನ ಗೆಳೆಯನ ಮೇಲಿಟ್ಟಿದ್ದ ಪ್ರೀತಿ ಮತ್ತು ಪಟ್ಟಣದ ಗೆಳೆಯ ಹಳ್ಳಿಯ ಹೈದನ ಕತ್ತು ಕೊಯ್ದ ರೀತಿಯ ಕಥಾನಕವನ್ನು ಪೊಲೀಸರು ಗೆಳೆಯರ ಮುಖವಾಡ ಬಯಲು ಮಾಡಿದ್ದಾರೆ.

ಬಂಧಿತರನ್ನು ಯಲ್ಲಪ್ಪ ಹಣಮಂತ ಡೊಕ್ಕ, ರಮೇಶ ಬುಡಗಜಂಗಮ ಎಂದು ಗುರುತಿಸಲಾಗಿದೆ. ಆದರೆ, ಸ್ಕೆಚ್‌ ಹಾಕಿ ಕೊಲೆ ಮಾಡಿದ್ದ ಪ್ರಮುಖ ಆರೋಪಿ ಯಶವಂತ ಮತ್ತು ಈಶ್ವರ ಬುಡಗ ಜಂಗಮ ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ.

ಏ.7ಕ್ಕೆ ಕಂಠಪ್ಪನ ಕೊಲೆ!
ಕಂಠೆಪ್ಪ ಅಮಲಪ್ಪ ಸಗರ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದವ. ಈತ ಗ್ರಾಮೀಣ ಬದುಕಿನಿಂದ ಹೈರಾಣಾಗಿ ಗುವಿವಿ ಪಕ್ಕದಲ್ಲಿರುವ ಕುಸುನೂರು ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಪೇಂಟಿಂಗ್‌ ಮತ್ತು ಮನೆಗಳಿಗೆ ಹಾಲು ಹಾಕಿ ಹೊಟ್ಟೆ ಹೊರೆಯುತ್ತಿದ್ದ. ಹೆಂಡತಿ ಮಕ್ಕಳನ್ನು ಗಂವ್ಹಾರದಲ್ಲೇ ಬಿಟ್ಟಿದ್ದ. ವಾರಕ್ಕೊಮ್ಮೆ ಹೋಗಿ ಬರುತ್ತಿದ್ದ.

ಕಂಠೆಪ್ಪನಿಗೆ ಪ್ರಾಣ ಗೆಳೆಯನಾಗಿದ್ದ ಯಶವಂತ ಪಕ್ಕದ ಮನೆಯಲ್ಲಿಯೇ ವಾಸವಿದ್ದ. ಯಶವಂತ ವಿಪರೀತ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ಕಂಠೆಪ್ಪನ 3 ಎಕರೆ ಹೊಲ ಮಾರಾಟ ಮಾಡಿಸಿ 10 ಲಕ್ಷ ರೂ. ಪಡೆದಿದ್ದ. ಆ ಮುಖೇನ ಕಂಠೆಪ್ಪ ಗೆಳೆಯನಿಗೆ ಸಹಾಯ ಮಾಡಿದ್ದ. ಆದರೆ, ಕೆಲವು ದಿನಗಳ ಬಳಿಕ ಸಾಲ ವಾಪಸ್‌ ಕೇಳಿದಾಗ ಯಶವಂತ 7 ಲಕ್ಷ ವಾಪಸ್‌ ಮಾಡಿದ್ದಾನೆ. ಇನ್ನುಳಿದ 3 ಲಕ್ಷ ರೂ. ಕೇಳಿದಾಗಲೇ ಯಶವಂತ, ಈಶ್ವರ ಬುಡಗ ಜಂಗಮ ಹಾಗೂ ಇತರರು ಸೇರಿ ಕೊಲೆ ಸ್ಕೆಚ್‌ ರೂಪಿಸಿದ್ದಾರೆ.

ಅಚ್ಚರಿ ಎಂದರೆ ಕೊಲೆಗೂ ಮುನ್ನ ಕಂಠೆಪ್ಪನ ಹೆಸರಲ್ಲಿ 20 ಲಕ್ಷ ರೂ. ಇನ್ಸುರೆನ್ಸ್‌ ಮಾಡಿಸಿದ್ದಾರೆ. ಅದಕ್ಕೆ ಒಂದೆರಡು ತಿಂಗಳು ಕಂತು ಕಟ್ಟಿದ್ದಾರೆ. ಗೆಳೆತನದ ಮಧ್ಯೆ ಇದೆಲ್ಲವೂ ನಡೆಯುತ್ತಿರುವ ವೇಳೆ ಉಳಿದ 3 ಲಕ್ಷ ರೂ.ನೀಡುವಂತೆ ಕಂಠೆಪ್ಪ ಯಶವಂತನಿಗೆ ಒತ್ತಾಯಿಸಿದಾಗ ಏ.7ರಂದು ದೈನಂದಿನ ಕೆಲಸದ ವೇಳೆ ಕಂಠೆಪ್ಪನನ್ನು ಶಹಾಬಾದ್‌ ರಸ್ತೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ರಸ್ತೆಯ ಪಕ್ಕದಲ್ಲಿ ದೇಹ ಬಿಸಾಡಿ, ಬೈಕು ಅಲ್ಲಿಯೇ ಬೀಳಿಸಿ ದೇಹದ ಮೇಲೆ ಸಣ್ಣ ಪುಟ್ಟ ಗಾಯಗಳನ್ನು ಸೃಷ್ಟಿಸಿ ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿದ್ದರು.

ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಕುಟುಂಬ ಸದಸ್ಯರು ದೂರು ನೀಡಿದ್ದರು. ಇದನ್ನು ಬೆನ್ನು ಹತ್ತಿದ್ದ ಗುವಿವಿ ಪಿಐ ಶಿವಾನಂದ ಗಾಣಿಗೇರ್‌ ತಂಡಕ್ಕೆ ಸಿಕ್ಕ ಸುಳಿವು ಬೆನ್ನು ಹತ್ತಿದಾಗಿ ಸಿಕ್ಕಿ ಬಿದ್ದ ಯಲ್ಲಪ್ಪ ಮತ್ತು ರಮೇಶ ಬಾಯಿ ಬಿಟ್ಟಾಗ ಇಡೀ ವಂಚನೆ ಬಯಲಾಗಿದೆ.
ಡಿಸಿಪಿ ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ ನೇತೃತ್ವದಲ್ಲಿ ಎಸಿಪಿ ಜೆ.ಎಚ್‌.ಇನಾಂದಾರ ಮಾರ್ಗದರ್ಶನದಲ್ಲಿ ಪಿಐ ಶಿವಾನಂದ ಗಾಣಿಗೇರ್‌ ಮತ್ತು ಸಿಬ್ಬಂದಿ ತನಿಖೆ ಮಾಡಿ ಪ್ರಕರಣ ಬಯಲಿಗೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here