ಮಾಜಿ ಸಿಎಂ ಕುಮಾರಸ್ವಾಮಿ- ಸಿಎಂ ಯಡಿಯೂರಪ್ಪ ಭೇಟಿಯ ಕಾರಣವೇನು?

0
97

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ನಡುವಣ ಟಾಕ್ ಫೈಟ್ ತಾರಕಕ್ಕೇರಿದೆ. ಕೃಷ್ಣರಾಜ ಜಲಾಶಯದ ಬಿರುಕಿನಿಂದ ಆರಂಭವಾದ ವಾಗ್ವಾದ, ಅಕ್ರಮ‌ ಗಣಿಗಾರಿಕೆ, ಮೈ ಶುಗರ್ ಸಕ್ಕರೆ ಕಾರ್ಖಾನೆ ಹಾಗೂ ಮನ್ಮುಲ್ ಅವ್ಯವಹಾರದವರೆಗೆ ಚರ್ಚೆಯಾಗುತ್ತಿದೆ‌. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡಿದ್ದೇನೆ ಎಂದಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆ ಉಳಿವಿಗೆ ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ. ಮಾತ್ರವಲ್ಲ ಮಂಡ್ಯ ಹಾಲು ಒಕ್ಕೂಟ ಮನ್ಮುಲ್ ಕುರಿತೂ ನಾನು ತಿಳಿಸಿದ್ದೇನೆ ಅಂತಲೂ ಹೇಳಿದ್ದಾರೆ. ಹೆಚ್‌.ಡಿ.ಕುಮಾರಸ್ವಾಮಿ ಮಾತಾಡಿದ್ದೇನೆ ಎನ್ನುತ್ತಿರುವ ವಿಷಯಗಳಲ್ಲೇ ಸಾಕಷ್ಟು ಅನುಮಾನಗಳು ಎದ್ದಿವೆ. ಅದರಲ್ಲೂ ಮನ್ಮುಲ್ ಕುರಿತು ತುಸು ಹೆಚ್ಚೇ ಸಂಶಯ ಮೂಡಿದೆ.

ಮನ್ಮುಲ್ ತನಿಖೆ ನಿಧಾನ ಮಾಡಿ?: ಕೋಟ್ಯಂತರ ರೂಪಾಯಿ ವಂಚನೆ ಆರೋಪ ಇರುವ ಮನ್ಮುಲ್ ವಿರುದ್ಧ ಸಿಐಡಿ ತನಿಖೆ ನಡೆಸಲಾಗುತ್ತಿದೆ‌. ಮನ್ಮುಲ್ ಅಧ್ಯಕ್ಷರು ಹಾಗೂ ನಿರ್ದೇಶಕರು ಬಹುತೇಕ ಕುಮಾರಸ್ವಾಮಿ ಹಿಂದೆ ಮುಂದೆ ಇರುವವರು. ಹೆಚ್ಡಿಕೆ ಬೆಂಬಲಿಗರೇ ಇರುವ ಮನ್ಮುಲ್ ತನಿಖೆ ಚುರುಕುಗೊಳಿಸಿ ಎಂದು ಹೆಚ್ಡಿಕೆ ಹೇಳಲು ಸಾಧ್ಯವೇ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಇದರ ಬದಲಾಗಿ ತನಿಖೆ ನಿಧಾನ ಮಾಡಿ ಎಂದು ಹೇಳಿರಬಹುದು‌. ಅದರ ಮೂಲಕ ತಮ್ಮ ಆಪ್ತರ ರಕ್ಷಣೆ ಮಾಡಲು ಮುಂದಾಗಿದ್ದಾರೆ ಎನ್ನುವ ಗುಮಾನಿಯನ್ನೂ ಮಂಡ್ಯದ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.
ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಮಾತನಾಡಿದ ಮಾಜಿ ಸಚಿವ ಚಲುವನಾರಾಯಣಸ್ವಾಮಿ, ಮನ್ಮುಲ್ ತನಿಖೆ ನಿಧಾನ ಮಾಡಿಸಲು ಸಿಎಂ ಅವರನ್ನು ಹೆಚ್ಡಿಕೆ ಭೇಟಿ ಮಾಡಿರಬಹುದು ಎಂದಿದ್ದಾರೆ.

ಈ ವಿಚಾರಕ್ಕೆ ಮನವಿ ಮಾಡಲು ಸಿಎಂ ಭೇಟಿ ಮಾಡಿರಬಹುದು. ಯಾಕೆಂದರೆ ಮನ್ಮುಲ್ ಅಕ್ರಮ ಮಾಡಿದವರು ಕುಮಾರಸ್ವಾಮಿ ಆಪ್ತರು. ಅದರಲ್ಲೂ ಅವರ ಆಪ್ತ ಸಹಾಯಕ ರಘು ಕಡೆಯವರು. ಅವರನ್ನ ಕಾಪಾಡುವುದಕ್ಕೆ ಇವರು ಹೋಗಬಹುದು. ಸೂಪರ್ ಸೀಡ್ ಮಾಡುವುದು ಬೇಡ ಎಂದು ಹೇಳಿದ್ದಾರೆ. ಮೊದಲು 70-80 ಕೋಟಿ ಆರೋಪ ಬಂದಾಗ ಸೂಪರ್ ಶೀಡ್ ಮಾಡಿದ್ದಾರೆ. ಇದೀಗ 500-600 ಕೋಟಿ ಹಗರಣ ಆಗಿದೆ ಈಗ ಸೂಪರ್ ಸೀಡ್ ಬೇಡ ಎನ್ನುತ್ತಿದ್ದಾರೆ. ಯಾರ ರಕ್ಷಣೆಗೆ ಇವರು ನಿಂತಿದ್ದಾರೆ ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮನ್ಮುಲ್ ತನಿಖೆ ಆಗಲಿ: ಸುಮಲತಾಕೆಆರ್‌ಎಸ್ ಕಿತ್ತಾಟದ ಮಧ್ಯೆ ಮನ್ಮುಲ್ ವಿಚಾರವನ್ನೂ ಸಂಸದೆ ಸುಮಲತಾ ಸಾಕಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ. ನಿನ್ನೆ ಸಂಜೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮತ್ತದೇ ಮನ್ಮುಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಸುಮಲತಾ, ಮನ್ಮುಲ್ ಅಕ್ರಮದ ಬಗ್ಗೆಯೂ ಸಿಎಂ ಜತೆ ಚರ್ಚಿಸಿದ್ದೇನೆ. ಪ್ರಕರಣ ಸಿಐಡಿಗೆ ವಹಿಸಿದ್ದಾರೆ. ತನಿಖೆ ಮುಗಿದು ವರದಿ ಬರಲಿ, ನಂತರ ಮಾತಾಡೋಣ. ತನಿಖೆಗೂ ಮುನ್ನ ಅವರ ಹಾಗೆ ಮಾತಾಡುವುದು ಸರಿಯಲ್ಲ. ಆದರೆ ಎಲ್ಲವನ್ನೂ ಸಿಎಂ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ. ಕಳೆದ‌ ಲೋಕಸಭೆ ಚುನಾವಣೆಯಲ್ಲಿ ಭಾರೀ ಪೈಪೋಟಿ, ಜಿದ್ದಾಜಿದ್ದಿಯಿಂದ ಸಾಕಷ್ಟು ಸುದ್ದಿಯಾಗಿದ್ದ ಕುಮಾರಸ್ವಾಮಿ ಹಾಗೂ ಸುಮಲತಾ ಫೈಟ್ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಮುಂದೆ ಯಾವ ಸ್ವರೂಪ‌ ಪಡೆಯುತ್ತದೆ ಎಂಬ ಕುತೂಹಲವನ್ನೂ ಹುಟ್ಟಿಸಿದೆ.

LEAVE A REPLY

Please enter your comment!
Please enter your name here