ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ, ಜಗಳೂರು ಪಟ್ಟಣದಲ್ಲಿ ರೂ 10 ಕೋಟಿ ಕಾಮಗಾರಿಗಳಿಗೆ ಚಾಲನೆ

0
129

ದಾವಣಗೆರೆ,ಜು.13:ಕೋವಿಡ್‍ನಿಂದ ಮೃತರಾದ ಬಡ ಕುಟುಂಬಗಳಿಗೆ ಸರಕಾರದಿಂದ ರೂ.01 ಲಕ್ಷ ಪರಿಹಾರ ಶೀಘ್ರ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ಜಗಳೂರು ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಫುಡ್‍ಕಿಟ್ ವಿತರಿಸಿ ಮಾತನಾಡಿ, ಕೋವಿಡ್‍ನಿಂದ ಮೃತಪಟ್ಟ ಬಡ ಕುಟುಂಬಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆದು ಆ ಕುಟುಂಬಗಳಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಪರಿಹಾರ ನೀಡಿ ಸಾಂತ್ವನ ಹೇಳಲಾಗುವುದು ಎಂದ ಅವರು, ಜಗಳೂರಿನಲ್ಲಿ ಕೋವಿಡ್‍ನಿಂದ ಮೃತರಾದ 20 ಕುಟುಂಬಗಳಿದ್ದು ಅವರೆಲ್ಲರಿಗೂ ಶಾಸಕ ರಾಮಚಂದ್ರಪ್ಪ ನವರ ಜೊತೆಗೂಡಿ ಪರಿಹಾರ ವಿತರಿಸಲಾಗುವುದು. ಹಾಗೂ ಪಟ್ಟಣದಲ್ಲಿ ರೂ 10 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ತಾಲ್ಲೂಕು ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು, ಸ್ಥಳೀಯ ಶಾಸಕರ ಶ್ರಮದ ಫಲವಾಗಿ ರೂ. 1,200 ಕೋಟಿಯ ಕಾಮಗಾರಿಗಳು ತಾಲ್ಲೂಕಿನಲ್ಲಿ ಆಗುತ್ತಿದ್ದು, ಪ್ರಗತಿಯತ್ತ ಸಾಗುತ್ತಿದೆ. ಹಾಗೂ ಭದ್ರಾ ಮೇಲ್ದಂಡೆಯಿಂದ ತಾಲ್ಲೂಕಿಗೆ ನೀರು ಹರಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾಮಗಾರಿಗಳಿಗೆ ಮುಖ್ಯವಾಗಿ ಶ್ರಮ ವಹಿಸಸಬೇಕಾಗಿರುವವರು ಕಾರ್ಮಿಕರೇ. ಕಾರ್ಮಿಕರು ಯಾವುದೇ ಸಂದರ್ಭದಲ್ಲಿಯೂ ಹಸಿವಿನಿಂದ ಬಳಲಬಾರದು ಆದ ಕಾರಣ ಇಂದು ಸಾಂಕೇತಿಕವಾಗಿ ಕಾರ್ಮಿಕರಿಗೆ 300 ಫುಡ್‍ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ನೋಂದಣಿಯಿಲ್ಲದ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಹಾಗೂ ತಾಲ್ಲೂಕಿಗೆ ಒಟ್ಟು ಸರ್ಕಾರದಿಂದ 3000 ಕಿಟ್‍ಗಳನ್ನು ಈಗಾಗಲೇ ನೀಡಿದೆ. ಇದರ ಉಪಯೋಗವನ್ನು ಎಲ್ಲ ಫಲಾನುಭವಿಗಳು ಪಡೆಯಬೇಕು ಎಂಬುದೆ ನಮ್ಮ ಆಶಯವಾಗಿದೆ. ್ತ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ತಾಲ್ಲೂಕನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಕೋವಿಡ್‍ನಿಂದ ಮೃತಪಟ್ಟ ಕೆಲ ಕುಟುಂಬಗಳಿಗೆ ಸಚಿವರು ಇದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ರಾಜ್ಯದಲ್ಲಿ 1.18 ಲಕ್ಷ ಕಟ್ಟಡ ಕಾರ್ಮಿಕರಿದ್ದು, ಸರ್ಕಾರ ಅವರ ಖಾತೆಗೆ ನೇರವಾಗಿ ರೂ. 3000 ಹಣವನ್ನು ಜಮಾ ಮಾಡುತ್ತಿದೆ. ಈಗಾಗಲೇ 67,538 ಜನರ ಖಾತೆಗೆ ಹಣ ಜಮಾ ಮಾಡಿದ್ದು, ಇನ್ನುಳಿದ ಕಾರ್ಮಿಕರಿಗೆ 10 ರಿಂದ 15 ದಿನದ ಒಳಗಾಗಿ ಹಣ ಜಮಾ ಮಾಡಲಾಗುತ್ತದೆ. ಅಂಸಘಟಿತ ಕಾರ್ಮಿಕರ ವರ್ಗಗಳಲ್ಲಿ 33,646 ಜನ ಕಾರ್ಮಿಕರಿದ್ದು, ಅವರಿಗೆ ತಲಾ ರೂ.2000 ದಂತೆ ಹಣ ಜಮಾ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿರುವ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಜುಲೈ 31 ರೊಳಗಾಗಿ ನೋಂದಾಯಿಸಿಕೊಳ್ಳಬಹುದು.
ದಾವಣಗೆರೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ತಾಲ್ಲೂಕಿನಲ್ಲಿ ಅನೇಕ ಕಾಮಗಾರಿಗಳಿಗೆ ರೂ 1,200 ಕೋಟಿ ಬಿಡುಗಡೆ ಮಾಡಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದು, ಆಯಾ ತಾಲ್ಲೂಕಿನ ಶಾಸಕರೊಳಗೂಡಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಧ್ಯವಾದಷ್ಟು ಉದ್ಯೋಗ ಸೃಷ್ಟಿಸುವಂತಹ ಕೆಲಸಗಳು ನಿರ್ಮಾಣವಾಗಬೇಕು ಎಂದರು.
ಶಾಸಕರಾದ ಎಸ್.ವಿ ರಾಮಚಂದ್ರಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಅನೇಕ ಕಾಮಗಾರಿಗಳನ್ನು ಮಾಡುತ್ತಿದ್ದು, ಸರಕಾರ ನೀಡಿರುವ ರೂ 1,200 ಕೋಟಿ ಅನುದಾನ ವೆಚ್ಚದಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಬಿ ಸರ್ಕಲ್‍ನಿಂದ ದೊಣ್ಣೆಹಳ್ಳಿ ದ್ವಿಮುಖ ರಸ್ತೆವರೆಗೆ ವಿದ್ಯುದೀಕರಣ ಕಾಮಗಾರಿ, ಬಿ.ಆರ್ ಅಂಬೇಡ್ಕರ್ ಸರ್ಕಲ್‍ನಿಂದ ರಾಘವೇಂದ್ರ ಆಸ್ಪತ್ರೆವರೆಗೂ ರಸ್ತೆಗೆ ಎರಡು ಬದಿ ಪವರ್ ಬ್ಲಾಕ್ ಮತ್ತು ಗ್ರೀಲ್ ನಿರ್ಮಾಣ, ರಾಘವೇಂದ್ರ ಆಸ್ಪತ್ರೆಯಿಂದ ದೊಣ್ಣೆಹಳ್ಳಿ ರಸ್ತೆವರೆಗೆ ಎರಡು ಬದಿ ಪೆವರ್ ಬ್ಲಾಕ್ ಮತ್ತು ಗ್ರಿಲ್ ನಿರ್ಮಾಣ, ಬಿ.ಆರ್ ಅಂಬೇಡ್ಕರ್ ಸರ್ಕಲ್‍ನಿಂದ ತಾಲ್ಲೂಕು ಆಫೀಸ್‍ವರೆಗೆ ಮತ್ತು ತಾಲ್ಲೂಕು ಆಫೀಸಿನಿಂದ ಬಿದರಕೆರೆ ರಸ್ತೆಯ ವೈಭವ ಹೋಟೆಲ್‍ವರೆಗೆ ದ್ವಿಮುಖ ರಸ್ತೆ ನಿರ್ಮಾಣ ಹಾಗೂ ವಿದ್ಯುದೀಕರಣ ಕಾಮಗಾರಿ, ವಾರ್ಡ್ ನಂ.1ರಿಂದ 18 ರಲ್ಲಿ ತಲಾ ಒಂದು ಹೊಸ ಬಸ್ ನಿಲ್ದಾಣದ ಹತ್ತಿರ, ಪ್ರವಾಸಿ ಮಂದಿರ ಹತ್ತಿರ , ಚಳ್ಳಕೆರೆ ರಸ್ತೆಯ ಪಾರ್ಕ್ ಹತ್ತಿರ ಹಾಗೂ ವಾಲ್ಮೀಕಿ ಸಮುದಾಯ ಭವನದ ಹತ್ತಿರ ಮಿನಿ ಹೈಮಾಸ್ಟ್ ಲೈಟ್ ಅಳವಡಿಸುವ ಕಾಮಗಾರಿ, ವಾರ್ಡ್ ನಂ 02 ರ ನಾಯಕರ ಕಾಲೋನಿಯಲ್ಲಿರುವ ಕೋಟೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ.ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಡಿಹೆಚ್‍ಒ ಡಾ. ನಾಗರಾಜ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here