ಡಿಸೆಂಬರ್ ಅಂತ್ಯಕ್ಕೆ ಪೌರಕಾರ್ಮಿಕರ ವಸತಿ ಗೃಹ ಪೂರ್ಣ, ಪತ್ರಿಕಾಗೋಷ್ಠಿಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ

0
75

ದಾವಣಗೆರೆ ಜೂ.24 -ದಾವಣಗೆರೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೌರಕಾರ್ಮಿಕರ ವಸತಿ ಗೃಹಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಈ ವರ್ಷದ ಡಿಸೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಜನವರಿಯಲ್ಲಿ ಕಾರ್ಮಿಕರಿಗೆ ವಸತಿ ಗೃಹಗಳು ಸಿಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿಯನ್ನು ಅರಿತು ಅವರ ಸಮಸ್ಯೆಗಳನ್ನು ನಿವಾರಿಸಲು ಆಯೋಗ ರಾಜ್ಯದ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದೆ. ಪ್ರವಾಸದ ಸಂದರ್ಭದಲ್ಲಿ ಪೌರಕಾರ್ಮಿಕರ ಸಮಸ್ಯೆಗಳು ಕಂಡುಬಂದರೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಅವುಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಆದರು ರಾಜ್ಯದಲ್ಲಿ ಪೌರಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮ್ಯಾನ್ಯುವೆಲ್ ಸ್ಕ್ಯಾವೆಂಜಿಂಗ್ ಮಾಡುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಫಾಯಿ ಕರ್ಮಚಾರಿಗಳಿಗೆ, ಶೌಚಗುಂಡಿ ಶುಚಿ ಮಾಡುವವರ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಮತ್ತು ರಾಷ್ಟ್ರೀಯ ಸಫಾಯಿ ಕರ್ಮಚಾರಿ ನಿಗಮಗಳಲ್ಲಿ ಹಲವು ಯೋಜನೆಗಳಿವೆ. ಆದರೆ ಅವು ಫಲಾನುಭವಿಗಳಿಗೆ ತಲುಪುತ್ತಿಲ್ಲ. ನಗರದಲ್ಲಿ ಮ್ಯಾನ್‍ಹೋಲ್‍ಗಳಿಗೆ ಪೌರಕಾರ್ಮಿಕರನ್ನು ಇಳಿಸುವುದು ಕಂಡುಬಂದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು.
ಪೌರ ಕಾರ್ಮಿಕರು ತಮ್ಮ ಕೆಲಸಗಳನ್ನು ನಿರ್ವಹಿಸಲು ಅವರಿಗೆ ಶೂ, ಗ್ಲೌಸ್, ಮಾಸ್ಕ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಅವರಿಗೆ ಸಾಂಕ್ರಾಮಿಕ ರೋಗಗಳು ಬೇಗ ಹರಡುವ ಸಾಧ್ಯತೆಯಿದೆ ಹಾಗೂ ಆ ಪರಿಕರಗಳನ್ನು ಉಪಯೋಗಿಸುವ ಬಗ್ಗೆಯೂ ಅರಿವು ನೀಡಲು ಜಾಗೃತಿ ಮೂಡಿಸಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳನ್ನು ಮಾಸ್ಟರಿಂಗ್ ಕೆಂದ್ರಗಳನ್ನಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಪೌರಕಾರ್ಮಿಕರ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರಬಾರದು. ಕಾಳಜಿಯಿಂದ ನೋಡಿಕೊಳ್ಳಬೇಕು. ಹಾಗೂ ಕಾಯ್ದೆಯನ್ನು ಗಂಭೀರವಾಗಿ ಮನಗಂಡು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕು. ಪ್ರಕರಣ ಬೆಳಿಕಿಗೆ ಬಂದ ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ದಂಡ ಹಾಕಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ ಎಂದ ಅವರು,
ಸಫಾಯಿ ಕರ್ಮಚಾರಿಗಳ ಪುನರ್ವಸತಿ ಬಗ್ಗೆ ಅಧಿಕಾರಿಗಳಲ್ಲಿ ಅರಿವಿನ ಕೊರತೆಯಿದೆ. ಕಾಯ್ದೆಯನ್ನು ಕ್ರಮಬದ್ಧವಾಗಿ ಕಾರ್ಯಗತಗೊಳಿಸಲು ಯಾವುದೇ ಪೌರಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗದೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಆಯೋಗದಿಂದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ಪಂಚಾಯಿತಿ ಮಟ್ಟದಲ್ಲಿ ಮೂಲಸೌಕರ್ಯಗಳು ಸಿಗಬೇಕು. ಈ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು 3 ತಿಂಗಳಿಗೊಮ್ಮೆ ಸಭೆ ಕರೆದು ನಿರ್ದೇಶನ ನೀಡಲಾಗಿದೆ ಎಂದರು.
ಪೌರಕಾರ್ಮಿಕರು ಕೆಲಸ ಮಾಡುವ ಕಡೆ ಕಡ್ಡಾಯವಾಗಿ ಭತ್ಯೆ ನೀಡಬೇಕು. ಲೀಡ್ ಬ್ಯಾಂಕ್‍ನಲ್ಲಿ ಪೌರ ಕಾರ್ಮಿಕರು ಯಾವುದೇ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ತಿರಸ್ಕರಿಸದೆ, ಯಾವುದೇ ದಾಖಲಾತಿಗಳನ್ನು ಕೇಳದೆ ಸಾಲ ನೀಡಬೇಕು. ವೈದ್ಯಕೀಯ ಮರುಪಾವತಿಗೆ ಅವಕಾಶವಿದ್ದು, ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ಚೀಟಿ (ಹೆಲ್ತ್ ಕಾರ್ಡ್) ನೀಡಬೇಕು. ಹಾಗೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 700 ಜನಸಂಖ್ಯೆಗೆ ಒಬ್ಬರಂತೆ 943 ಪೌರಕಾರ್ಮಿಕ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಒಟ್ಟು 395 ಖಾಯಂ ಪೌರಕಾರ್ಮಿಕರು ಮತ್ತು 325 ನೇರ ಪಾವತಿ ಪೌರಕಾರ್ಮಿಕರು ಒಟ್ಟು 720 ಪೌರಕಾರ್ಮಿಕರು ಕಾರ್ಯವಿರ್ವಹಿಸುತ್ತಿದ್ದಾರೆ. ಹಾಗೂ 79 ನೇರ ನೇಮಕಾತಿ ಹುದ್ದೆಗಳು ಮತ್ತು 144 ನೇರ ಪಾವತಿ ಹುದ್ದೆಗಳು ಸೇರಿದಂತೆ ಒಟ್ಟು 223 ಹುದ್ದೆಗಳು ಖಾಲಿ ಇವೆ ಎಂದರು.
ಪೌರಕಾರ್ಮಿಕರಿಗೆ ಉಪಹಾರ ವಿಚಾರದಲ್ಲಿ ತೊಂದರೆಯಾಗಿದ್ದು, ಸರ್ಕಾರದಿಂದ ನೀಡುತ್ತಿರುವ 20 ರೂಪಾಯಿಗಳು ಅವರಿಗೆ ಸಾಲುತ್ತಿಲ್ಲ. ಆದರಿಂದ ಅವರಿಗೆ ಉಪಹಾರ ಭತ್ಯೆ 50 ರೂ. ನೀಡಲು ಶಿಫಾರಸ್ಸು ಮಾಡಲಾಗಿದೆ. ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ಅನುದಾನದಲ್ಲಿ ಈ ಕಾರ್ಮಿಕರ ಉಪಹಾರ ಭತ್ಯೆ ನೀಡಲು ಅವಕಾಶ ಮಾಡಿಕೊಳ್ಳಬಹುದು ಎಂದರು.
ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷಾ ವರದಿಯಲ್ಲಿ ನಿಖರತೆಯಿಲ್ಲದಿರುವುದರಿಂದ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ವಿಶೇಷ ಮರು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು. ಹಾಗೂ ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಸರ್ಕಾರದ ಅನುದಾನದಲ್ಲಿ ಪುನರ್‍ವಸತಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಬೇಕು ಎಂದರು.
ಸಫಾಯಿ ಕಾರ್ಮಚಾರಿಗಳ ಹಿತರಕ್ಷಣೆಗೆ ಸರ್ಕಾರ ಜಾರಿಗೊಳಿಸಿರುವ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ ಬಗ್ಗೆ ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಪೌರಕಾರ್ಮಿಕರಿಗೆ ಸೂಕ್ತ ಸ್ಥಾನಮಾನ ನೀಡುವ ಜೊತೆಗೆ ಮಾನವೀಯತೆಯಿಂದ ನೋಡಬೇಕು. ಸರ್ಕಾರ ಅವರಿಗೆ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಹಾಗೂ ರಾಜ್ಯದ ಎಲ್ಲಾ ಪೌರಕಾರ್ಮಿಕರ ಸೇವೆ ಖಾಯಂಗೊಳಿಸುವಂತೆ ಸರ್ಕಾರಕ್ಕೆ ಆಯೋಗ ಶಿಫಾರಸ್ಸು ಮಾಡಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರೂಪ, ಮಹಾಪೌರರಾದ ಎಸ್.ಟಿ.ವೀರೇಶ್, ಎಸಿ ಮಮತ ಹೊಸಗೌಡರ್, ಡಿಹೆಚ್‍ಓ ಡಾ.ನಾಗರಾಜ್, ನಗರಾಭಿವೃದ್ಧಿ ಯೋಜನಾಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ, ಪಾಲಿಕೆ ಆಯಕ್ತ ವಿಶ್ವನಾಥ ಮುದಜ್ಜಿ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here