ರೋಜರ್ ಬಿನ್ನಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

0
115

ಭಾರತ ಪ್ರಪ್ರಥಮವಾಗಿ ವಿಶ್ವಕಪ್ ಕ್ರಿಕೆಟ್ ಗೆದ್ದದ್ದನ್ನು ನೆನಪಿಟ್ಟುಕೊಂಡಿರುವವರಿಗೆ ಖಂಡಿತವಾಗಿ ರೋಜರ್ ಬಿನ್ನಿ ನೆನಪಿನಲ್ಲಿರುತ್ತಾರೆ. ಇಂದು ಬಿನ್ನಿ ಅವರ ಹುಟ್ಟಿದ ಹಬ್ಬ.ಅವರು ಹುಟ್ಟಿದ್ದು 1955ರ ಜುಲೈ 19ರಂದು

ವಿಶ್ವಕಪ್ 1983ರಲ್ಲಿ ಭಾರತಕ್ಕೆ ಅಚ್ಚರಿಯ ಗೆಲುವು ತಂದ ಅಚ್ಚರಿಯ ಹುಡುಗರಲ್ಲಿ ರೋಜರ್ ಬಿನ್ನಿ ಪ್ರಮುಖರು. ಆ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು 18 ವಿಕೆಟ್ ಪಡೆದವರು ರೋಜರ್ ಬಿನ್ನಿ. ಮಧ್ಯಮ ವೇಗದ ಬೌಲರ್ ಆಗಿ ವೃತ್ತಿ ಜೀವನದಲ್ಲಿ ಸಾಮಾನ್ಯವೆನ್ನಬಹುದಾದ ಯಶಸ್ಸು ಕಂಡ ರೋಜರ್ ಬಿನ್ನಿ ಅವರ ಬೌಲಿಂಗಿಗೆ ಇಂಗ್ಲೆಂಡಿನ ಪಿಚ್ಚುಗಳು ಹೇಳಿ ಮಾಡಿಸಿದಂತಿವೆಯೇನೋ ಎನ್ನುವಂತಹ ಅಪ್ರತಿಮ ಪ್ರದರ್ಶನ ನೀಡಿದರು. 1985ರಲ್ಲಿ ಭಾರತ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವಸರಣಿ ಪಂದ್ಯಗಳ ಗೆಲುವು ಸಾಧಿಸುವಲ್ಲಿ ಕೂಡಾ ಇದೇ ಮಾದರಿಯ ತೋರಿದ ಶ್ರೇಷ್ಠ ಸಾಧನೆ ತೋರಿದ ಬಿನ್ನಿ ಅಲ್ಲೂ ಹದಿನೇಳು ವಿಕೆಟ್ ಗಳಿಸಿ ಭಾರತದ ಗೆಲುವಿನ ಪ್ರಮುಖ ಪಾಲುದಾರರಾಗಿದ್ದರು.

ರೋಜರ್ ಬಿನ್ನಿ 1979ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ಥಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಇಮ್ರಾನ್ ಖಾನ್, ಸರ್ಫರಾಜ್ ನವಾಜ್ ಅಂತಹ ಶ್ರೇಷ್ಠ ಬೌಲಿಂಗ್ ವಿರುದ್ಧ ಆಡಿ ಪ್ರಥಮ ಟೆಸ್ಟ್ನಲ್ಲಿಯೇ ನಲವತ್ತಾರು ರನ್ನುಗಳನ್ನು ಗಳಿಸಿ ಮೆಚ್ಚುಗೆ ಗಳಿಸಿದ್ದರು. ಅದರಲ್ಲೂ ಆ ಸರಣಿಯ ಟೆಸ್ಟ್ ಪಂದ್ಯವೊಂದರಲ್ಲಿ ಇಮ್ರಾನ್ ಖಾನ್ ಅವರ ಬೌನ್ಸರ್ ಒಂದನ್ನು ಅವರು ಸಿಕ್ಸರ್ ಆಗಿ ಪರಿವರ್ತಿಸಿದ್ದು ಅಂದಿನ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು.

ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಗಣನೀಯ ಪ್ರತಿಭೆ ಹೊಂದಿದ್ದ ಬಿನ್ನಿ ಅಂದಿನ ಕಾಲದ ಒಬ್ಬ ಆಲ್ ರೌಂಡರ್. ಆ ಕಾಲದ ಶ್ರೇಷ್ಠ ಕ್ಷೇತ್ರರಕ್ಷಕರಲ್ಲಿ ಹೆಸರಾಗಿದ್ದವರು ಕೂಡಾ.

ಕರ್ನಾಟಕ ತಂಡದಲ್ಲಿ ಅವರ ಸಾಮರ್ಥ್ಯ ಬಹಳಷ್ಟು ಉಪಯುಕ್ತವಾಗಿತ್ತು. ಶಾಲೆಯ ದಿನಗಳಲ್ಲಿದ್ದಾಗಲೇ ಜಾವೆಲಿನ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರು. ಫುಟ್ ಬಾಲ್, ಹಾಕಿಯಲ್ಲಿ ಕೂಡಾ ಓದುವ ದಿನಗಳಲ್ಲಿ ಮಿಂಚಿದ ಪ್ರತಿಭೆಯಾಗಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಪದಾಧಿಕಾರಿಗಳಾಗಿ, ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆದಾರರಾಗಿ ಮತ್ತು ಕರ್ನಾಟಕ ಕ್ರಿಕೆಟ್ ತಂಡದ ತರಬೇತುದಾರರಾಗಿ ಅವರು ಹಲವು ರೀತಿಯಲ್ಲಿ ಸೇವೆ ಸಂದಿದೆ ಮತ್ತು ಸಲ್ಲುತ್ತಿದೆ. ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ಸಹಾ ಆಲ್ ರೌಂಡ್ ಆಟಗಾರರಾಗಿ ಹೆಸರು ಮಾಡಿದ್ದಾರೆ.

ರೋಜರ್ ಬಿನ್ನಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

LEAVE A REPLY

Please enter your comment!
Please enter your name here