ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಪ್ರಥಮ ಬಾರತೀಯ ಆಟಗಾರ..!!

0
117

ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ಆಟಗಾರರು. ಸ್ವತಂತ್ರ ಭಾರತದ ಕ್ರಿಕೆಟ್ ತಂಡದ ಪ್ರಥಮ ನಾಯಕರಾದ ಅವರು 1952 ವರ್ಷದಲ್ಲಿ ಪಾಕಿಸ್ಥಾನದ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತೀಯ ತಂಡದ ನಾಯಕರಾಗಿ ಭಾರತಕ್ಕೆ ಪ್ರಪ್ರಥಮ ಸರಣಿ ಜಯ ತಂದುಕೊಟ್ಟರು.

ಲಾಲಾ ಅಮರನಾಥ್ 1911ರ ಸೆಪ್ಟೆಂಬರ್ 11ರಂದು ಪಂಜಾಬಿನ ಕಪುರ್ಥಲದಲ್ಲಿ ಜನಿಸಿದರು. ಮುಂದೆ ಅವರು ಬೆಳೆದದ್ದು ಲಾಹೋರಿನಲ್ಲಿ. 1933ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.ಉತ್ತಮ ಬೌಲರ್ ಕೂಡಾ ಆಗಿದ್ದ ಲಾಲಾ ಡಾನ್ ಬ್ರಾಡ್ಮನ್ ಅವರನ್ನು ಹಿಟ್ ವಿಕೆಟ್ ಔಟ್ ಮಾಡಿದ ವಿಶ್ವದ ಏಕೈಕ ಬೌಲರ್ ಎನಿಸಿದ್ದಾರೆ.

ವಿಶ್ವಮಹಾಯುದ್ದಕ್ಕೆ ಮುಂಚೆ ಲಾಲಾ ಅಮರನಾಥ್ ಅವರು ಆಡಿದ್ದು ಕೇವಲ 3 ಟೆಸ್ಟ್. ಮಹಾಯುದ್ಧದ ಕಾರಣ ಅಧಿಕೃತ ಟೆಸ್ಟ್ ಪಂದ್ಯಗಳೇ ನಡೆಯದ ಕಾರಣ ಲಾಲಾ ಅಮರನಾಥ್ ಅವರ ಮಹತ್ವದ ಕ್ರಿಕೆಟ್ ವರ್ಷಗಳು ವ್ಯರ್ಥಗೊಂಡವು. ಈ ಸಮಯದಲ್ಲಿ ಅವರು ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ಭಾರತದ ಉತ್ತಮ ಶ್ರೇಷ್ಠ. ಆಟಗರರನ್ನೊಳಗೊಂಡಿದ್ದ ಪ್ರಥಮ ದರ್ಜೆ ಪಂದ್ಯಗಳಲ್ಲಿ 30 ಶತಕಗಳನ್ನೊಳಗೊಂಡ 10,000 ರನ್ನುಗಳನ್ನು ಗಳಿಸಿದರು. ಎರಡನೇ ವಿಶ್ವಮಹಾಯುದ್ಧದ ನಂತರ ಅವರು 21 ಟೆಸ್ಟ್ ಪಂದ್ಯಗಳನ್ನು ಆಡಿದರು.

ಅಪ್ರತಿಮ ಆಟಗಾರ ಬ್ರಾಡ್ಮನ್ ಕೂಡ ಲಾಲಾ ಅವರನ್ನು ಕೊಂಡಾಡುತ್ತಿದ್ದರು. ಅದರಲ್ಲೂ ಕವರ್ ಡ್ರೈವ್ ಬಾರಿಸುವುದರಲ್ಲಿ ಲಾಲಾ ಬಿಟ್ಟರೆ ಇನ್ನೊಬ್ಬರಿಲ್ಲ ಎನ್ನುವುದು ಬ್ರಾಡ್ಮನ್ ತೀರ್ಮಾನವಾಗಿತ್ತು.

ಲಾಲಾ ಅಮರನಾಥರ ಪ್ರಥಮ ದರ್ಜೆ ಕ್ರಿಕೆಟ್‌ನ ಕೆಲವು ಅಮೋಘ ಆಟಗಳೆಂದರೆ- ವಿಕ್ಟೋರಿಯಾ ಎದುರು 228, ಟಾಸ್ಮೇನಿಯಾ ಎದುರು 171, ಕ್ವೀನ್ಸ್‌ಲ್ಯಾಂಡ್ ವಿರುದ್ಧ ಅಜೇಯ 172, ಸ್ವತಃ ಬ್ರಾಡ್ಮನ್ ಅವರೇ ತಂಡದಲ್ಲಿದ್ದ ದಕ್ಷಿಣ ಆಸ್ಟ್ರೇಲಿಯಾ ಎದುರು 144 ರನ್ನುಗಳು.

ಲಾಲಾ ಅಮರನಾಥ್ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ಹಿರಿಯ ಆಯ್ಕೆದಾರರಾಗಿ, ವೀಕ್ಷಕ ವಿವರಣಕಾರರಾಗಿ ಮತ್ತು ತಜ್ಞ ವಿಶ್ಲೇಷಣಾರರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ತಮ್ಮ ಕಾಲದಲ್ಲಿ ಚಂದೂ ಬೋರ್ಡೆ, ಜಸ್ಸು ಪಟೇಲ್, ಎಂ. ಎಲ್.ಜಯಸಿಂಹ ಮುಂತಾದ ಪ್ರತಿಭೆಗಳನ್ನು ಬೆಳೆಸಿದರು. ಲಾಲಾ ಅಮರನಾಥ್ ಪುತ್ರರಾದ ಸುರೆಂದರ್ ಅಮರನಾಥ್ ಮತ್ತು ಮೊಹಿಂದರ್ ಅಮರನಾಥ್ ರಾಷ್ಟ್ರವನ್ನು ಪ್ರತಿನಿಧಿಸಿದ ಪ್ರಸಿದ್ಧ ಆಟಗಾರರಾಗಿದ್ದರು. ಅವರ ಮೊಮ್ಮಗ ದಿಗ್ವಿಜಯ್ ಪ್ರಥಮ ದರ್ಜೆ ಕ್ರಿಕೆಟ್ ಅಟಗಾರ.

ಲಾಲಾ ಅಮರನಾಥ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

ಲಾಲಾ ಅಮರನಾಥ್ 2000 ವರ್ಷದ ಆಗಸ್ಟ್ 5ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

LEAVE A REPLY

Please enter your comment!
Please enter your name here