ಆರೋಗ್ಯ ಸೇವೆಗಳ ಕಳಪೆ ಸ್ಥಿತಿಯ ಕುರಿತು ಸುಪ್ರೀಂ ನಲ್ಲಿ ಮಹತ್ವದ ವಿಚಾರಣೆ.

0
291

ದೇಶದಲ್ಲಿನ ಆರೋಗ್ಯ ಸೇವೆಗಳ ಕಳಪೆ ಸ್ಥಿತಿಯ ಬಗ್ಗೆ ಆಕ್ಷೇಪ ಎತ್ತಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೈಗೆತ್ತಿಕೊಂಡಿದೆ. ಈ ಅರ್ಜಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ಚಿಕಿತ್ಸೆಯ ವಿಷಯವನ್ನು ಪ್ರಶ್ನಿಸಲಾಗಿತ್ತು. ಜೊತೆಗೆ ನುರಿತ ವೈದ್ಯರಿಲ್ಲದ ಹಾಗೂ ರೋಗಿಗಳಿಗೆ ಅಗತ್ಯವಿರುವ ಸೌಕರ್ಯವಿಲ್ಲದ ಸಣ್ಣ ಆಸ್ಪತ್ರೆಗಳಲ್ಲಿ ರೋಗಿಗಳ ಭರ್ತಿಯನ್ನು ಕೂಡ ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ‘ಜನ ಸ್ವಾಸ್ಥ್ಯ ಅಭಿಯಾನ್’ ಹೆಸರಿನ NGO ಈ ಅರ್ಜಿಯನ್ನು ದಾಖಲಿಸಿತ್ತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಖ್, ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ, 2010 ರ ಅನುಷ್ಠಾನಕ್ಕೆ ಬಾರದೆ ಇರುವ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಕಾನೂನಿನಲ್ಲಿ ಚಿಕಿತ್ಸೆ ಮತ್ತು ಶುಲ್ಕದ ಪ್ರಮಾಣಿತ ಕಾರ್ಯವಿಧಾನದ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ನಿಯಮಗಳ ಕರಡು ಈಗಾಗಲೇ ಸಿದ್ಧವಾಗಿದೆ. ಆದರೆ ಅದನ್ನು ಇದುವರೆಗೆ ನೋಟಿಫೈ ಮಾಡಲಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಂದ ಹಾಗೆ, 11 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಈ ಕಾಯ್ದೆಯನ್ನು ಒಪ್ಪಿಕೊಂಡಿವೆ. ಇತರರು ತಮಗಾಗಿ ಪ್ರತ್ಯೇಕ ಕಾನೂನುಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲ ವಿಷಯಗಳಲ್ಲಿರುವ ಕುಂದುಕೊರತೆಗಳ ಭಾರ ದೇಶದ ಸಾಮಾನ್ಯ ಜನರು ಭರಿಸಬೇಕಾಗಿ ಬಂದಿದೆ ಎಂದು ಅವರು ತಮ್ಮ ವಾದ ಮಂಡಿಸಿದ್ದಾರೆ.

ಅರ್ಜಿದಾರರ ಆತಂಕಗಳನ್ನು ಒಪ್ಪಿಕೊಂಡ ನ್ಯಾಯಪೀಠ:
ಅರ್ಜಿದಾರರ ಕಳವಳವನ್ನು ಒಪ್ಪಿಕೊಂಡ ವಿಚಾರಣಾ ಪೀಠದ ಅಧ್ಯಕ್ಷ ಮತ್ತು ಮುಖ್ಯ ನ್ಯಾಯಮೂರ್ತಿ NV ರಮಣ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿವೆ. ಇದಕ್ಕಾಗಿ ನಾವು ಪ್ರಾಯೋಗಿಕ ವಿಧಾನ ಅನುಸರಿಸಬೇಕಾಗಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳ ನೊಂದಣಿಗಾಗಿ ನಿಯಮಾವಳಿಗಳನ್ನು ಮಾಡಲಾಗಿದೆ. ಆದರೆ, ಒಂದು ವೇಳೆ ಸಣ್ಣ ಕ್ಲಿನಿಕ್ ಅಥವಾ ಲ್ಯಾಬ್ ಗಳಲ್ಲಿ ತಜ್ಞ ವೈದ್ಯರನ್ನು ನೇಮಿಸಲು ಹೇಳಲಾಗಿದ್ದರೆ, ಅದರ ಹೊರೆಯನ್ನು ಬಡ ರೋಗಿಗಳೇ ಭಾರಿಸಬೇಕೆ? ಎಂಬುದನ್ನು ಗಮನಿಸಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದ್ದಾರೆ.

ನಾವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸುತ್ತಿದ್ದೇವೆ – ಪಾರೀಖ್
ಇದಕ್ಕೆ ಉತ್ತರಿಸಿರುವ ಪಾರೀಖ್ 2010ರ ಕಾನೂನಿನ ಸೆಕ್ಷನ್ 11 ಮತ್ತು 12ರ ಅಡಿ ಸ್ಟ್ಯಾಂಡರ್ಡ್ ಟ್ರೀಟ್ಮೆಂಟ್ ಪ್ರೋಟೋಕಾಲ್ ಗಳ ಬಗ್ಗೆ ಹೇಳಲಾಗಿದೆ. ಈ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು ತಮ್ಮ ಅರ್ಜಿದಾರರ ಉದ್ದೇಶವಾಗಿದೆ. ಹೀಗಾಗಿ ನ್ಯಾಯ ಪೀಠ ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಕೋರಿದ್ದಾರೆ. ಪಾರೀಖ್ ಅವರ ಈ ವಾದವನ್ನು ಆಲಿಸಿರುವ ನ್ಯಾಯಪೀಠ, ‘ನಾವು ತಕ್ಷಣಕ್ಕೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸುತ್ತಿದ್ದು, ಕೇಂದ್ರದ ಉತ್ತರಕ್ಕಾಗಿ ಕಾದುನೋಡೋಣ’ ಎಂದು ಹೇಳಿದೆ.

LEAVE A REPLY

Please enter your comment!
Please enter your name here