ವಿಜಯನಗರ ಜಿಲ್ಲಾ ಕ್ಷಯರೋಗ ವೇದಿಕೆ ಸಮಿತಿಯ ರಚನಾ ಸಭೆ;ಕ್ಷಯರೋಗ ನಿರ್ಮೂಲನೆಗೆ ಅಗತ್ಯ ಕ್ರಮವಹಿಸಿ: ಡಿಸಿ ಅನಿರುದ್ಧ್ ಶ್ರವಣ್

0
91

ಹೊಸಪೇಟೆ(ವಿಜಯನಗರ),ಜೂ.30(ಕರ್ನಾಟಕ ವಾರ್ತೆ): ವಿಜಯನಗರ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಅಗತ್ಯ ಕ್ರಮವಹಿಸಿ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಹೇಳಿದರು.
ಬುಧವಾರದಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಕ್ಷಯರೋಗ ವೇದಿಕೆ ಸಮಿತಿಯ ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಮತ್ತು ಹೆಚ್ಚು ಸೂಕ್ತ ಸಲಹೆಗಳನ್ನು ನೀಡಬೇಕು. ಕ್ಷಯರೋಗಿಗಳಲ್ಲಿ ಅಸಮಾನತೆ ಕಡಿಮೆಗೊಳಿಸಿ ಟಿ.ವಿ, ರೇಡಿಯೋ ಹಾಗೂ ಆಂದೋಲನಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ವಿಜಯನಗರ ಜಿಲ್ಲೆಯಲ್ಲಿ 900 ಕ್ಷಯರೋಗಿಗಳಿದ್ದು, ಅವರಿಗೆ ಪೌಷ್ಠಿಕ ಆಹಾರ ಸೌಲಭ್ಯವನ್ನು ಒದಗಿಸಲು ಸ್ಥಳೀಯ ಸ್ವಯಂ ಸರ್ಕಾರ, ಸಂಘ ಸಂಸ್ಥೆಗಳು, ಸ್ಥಳೀಯ ದಾನಿಗಳ ಮೂಲಕ ಪೌಷ್ಠಿಕ ಆಹಾರ ಕಿಟ್‍ಗಳನ್ನು ತಯಾರಿಸಿ ನೀಡುವ ಕಾರ್ಯವನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ವತಿಯಿಂದ ಕ್ಷಯರೋಗಿಗಳಿಗೆ ನಿತ್ಯ ಪೋಷಣೆ ಯೋಜನೆಯಡಿ ಆರು ತಿಂಗಳವರಗೆ ರೂ.500ರಂತೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.
ಹಡಗಲಿ ತಾಲೂಕಿನಲ್ಲಿ ಲ್ಯಾಬ್ ಟೆಕ್ನಿಷಿಯನ್ಸ್ ಹಾಗೂ ಸಿಬ್ಬಂದಿಯ ಕೊರೆತೆಯಿದ್ದು, ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಕ್ಷಯರೋಗ ತ್ವರಿತವಾಗಿ ತಪಾಸಣೆಗಳನ್ನು ಮಾಡಿ ಎಂದು ಅವರು ಹೇಳಿದರು.
ಎಲ್ಲಾ ತಾಲೂಕುಗಳಲ್ಲಿನ ಲ್ಯಾಬ್ ಟೆಕ್ನಿಷಿಯನ್‍ಗಳಿಗೆ ಕ್ಷಯರೋಗ ಪರೀಕ್ಷೆಗಳನ್ನು ತ್ವರಿತಗತಿಯಲ್ಲಿ ಮಾಡಲು ಟಾರ್ಗೆಟ್ ನೀಡಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಕ್ಷಯರೋಗದ ಕುರಿತು ಕಾರ್ಯಕ್ರಮ ನಿರೂಪಕರು ಹಾಗೂ ಟಿವಿ ರೋಗ ಮುಕ್ತ ಜನರಿಂದ ಟಿವಿ, ರೇಡಿಯೋ ಹಾಗೂ ವಾಹನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕ್ಷಯ ವೇದಿಕೆ (District TB Forum) ರಚಿಸಲಾಗಿದ್ದು, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅಧ್ಯಕ್ಷರಾಗಿದ್ದು, ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣ್ ರಾವ್ ಅವರು ಸಹಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಸಲೀಂ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಹಂಸವೇಣಿ, ಪಲಮನಾಲಜಿಸ್ಟ್/ಫಿಜಿಶಿಯನ್ ಡಾ.ಸೋಮಶೇಖರ್ ಕಬ್ಬೇರ, ವಿಜಯನಗರ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿನಯ್ ರಾಘವೇಂದ್ರ, ಕ್ಷಯರೋಗಿಗಳ ಪ್ರತಿನಿಧಿಗಳಾದ ರಾಮು, ಶ್ರೀನಿವಾಸ್, ರಾಘವರೆಡ್ಡಿ, ಮಲ್ಲೇಶ್ ಅಬ್ದುಲ್ ಲತೀಫ್, ಪಿ.ಎಲ್.ಹೆಚ್.ಐ.ವಿ ನೆಟ್‍ವರ್ಕ್‍ನ ಪ್ರತಿನಿಧಿ ರಾಮಮೂರ್ತಿ ಅವರು ಸದಸ್ಯರಾಗಿದ್ದು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಪಾಟ್ನೆ, ಪಂಚಾಯತ್ ರಾಜ್ ಸಂಸ್ಥೆಯ ಯೋಜನಾ ನಿರ್ದೇಶಕ ಸಮೀರ್ ಮುಲ್ಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ, ಜಿಲ್ಲಾ ಸರ್ಕಾರಿ ವಕೀಲರಾದ ಬಸವರಾಜ್ ಹಾಗೂ ನಾಗಭೂಷಣ್, ಕಾರ್ಪೋರೇಟ್ ಸೆಕ್ಟರ್ ಪ್ರತಿನಿಧಿ ಡಾ.ವಿಜಯ ವೆಂಕಟೇಶ ಬಿ.ಎಂ.ಎಂ ಅವರುಗಳು ಸದಸ್ಯ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here