ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಮಾ.ನಾ.ಚೌಡಪ್ಪನವರ ಜನ್ಮ ದಿನ

0
775

ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದವರು ಮಾ.ನಾ.ಚೌಡಪ್ಪನವರು.
ಮಾಯಸಂದ್ರ ನಾರಸೀದೇವಯ್ಯ ಚೌಡಪ್ಪ ಅವರು 1909ರ ಜುಲೈ 29ರಂದು ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಜನಿಸಿದರು. ತಂದೆ ನಾರಸೀದೇವರಯ್ಯ ಅವರು ಮತ್ತು ತಾಯಿ ಲಕ್ಷ್ಮೀದೇವಮ್ಮ ಅವರು.
ಚೌಡಪ್ಪನವರು ಮೈಸೂರಿನಲ್ಲಿ ಇಂಟರ್‍ಮೀಡಿಯೇಟ್ಗೆ ಓದುತ್ತಿದ್ದಾಗ ಅವರಿಗೆ ಗುರುಗಳಾಗಿದ್ದ ನಾ.ಕಸ್ತೂರಿ ಅವರ ಪ್ರಭಾವದಿಂದ ಸಾಹಿತ್ಯ, ಬಾನುಲಿ ಪ್ರಸಾರ ಮತ್ತು ಇತಿಹಾಸಗಳಲ್ಲಿ ಅಪಾರ ಆಸಕ್ತಿ ಮೂಡಿಸಿಕೊಂಡರು.


ಚೌಡಪ್ಪನವರು ಮೈಸೂರು ಮತ್ತು ಮದರಾಸು ಆಕಾಶವಾಣಿಗಳಲ್ಲಿ ಉದ್ಘೋಷಕ ಮತ್ತು ವಾರ್ತಾವಿಭಾಗದಲ್ಲಿ ಮೊದಲು ಉದ್ಯೋಗ ಆರಂಭಿಸಿದರು. ನಂತರ ಪತ್ರಿಕೋದ್ಯಮಿ ಬಿ.ಎನ್.ಗುಪ್ತ ಅವರ ಜೊತೆಗೂಡಿ ‘ಪ್ರಜಾಮತ’ ವಾರಪತ್ರಿಕೆ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿದ್ದ ಮೈಸೂರು ಸಂಸ್ಥಾನದವರು ಪ್ರಜಾಮತ ಪ್ರಕಟಣೆಯನ್ನು ನಿಷೇಧಿಸಿದಾಗ, ರಾತ್ರೋರಾತ್ರಿ ಮುಂಬಯಿ ಕರ್ನಾಟಕದ ಭಾಗವಾಗಿದ್ದ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಪ್ರಜಾಮತವನ್ನು ಹೊರಡಿಸಿದ ಸಾಹಸಿ ಚೌಡಪ್ಪನವರು. ಸಂಯುಕ್ತ ಕರ್ನಾಟಕ, ಕನ್ನಡದ ಮೊದಲ ಸಿನೆಮಾ ಪತ್ರಿಕೆ ವಾಕ್ಚಿತ್ರ, ಕಥಾಂಜಲಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಚೌಡಪ್ಪನವರು ಮುಂದೆ ಬೆಂಗಳೂರು ಆಕಾಶವಾಣಿಯಲ್ಲಿ ಸಹನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.


ಆಕಾಶವಾಣಿಯಿಂದ ನಿವೃತ್ತರಾದ ಮೇಲೆ ಚೌಡಪ್ಪನವರು ಕೆಲಕಾಲ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸಂದೇಶ ಎಂಬ ಪತ್ರಿಕೆಯ ಪ್ರಕಟಣೆಯ ಜವಾಬ್ದಾರಿ ನಿರ್ವಹಿಸಿದರು. 1972ರಲ್ಲಿ ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಗಳಾದಾಗ, ಚೌಡಪ್ಪನವರನ್ನು ಪತ್ರಿಕಾ ಕಾರ್ಯದರ್ಶಿಗಳನ್ನಾಗಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಇದೇ ಸಮಯಕ್ಕೆ ನಿರಂಜನ ಅವರು ತಾವು ಪ್ರಧಾನ ಸಂಪಾದಕರಾಗಿದ್ದ ಕಿರಿಯರ ವಿಶ್ವಕೋಶ ‘ಜ್ಞಾನಗಂಗೋತ್ರಿ’ಗೆ ಸಾಹಿತ್ಯ ಸಂಪಾದಕರಾಗಿ ಬರುವಂತೆ ಆಹ್ವಾನಿಸಿದರು. ಚೌಡಪ್ಪನವರು ಆಯ್ದುಕೊಂಡದ್ದು ಜ್ಞಾನಗಂಗೋತ್ರಿ ಕೆಲಸವನ್ನು! ಆಕಾಶವಾಣಿ ನಿಲಯಗಳಲ್ಲಿ ಕೆಲಸ ಮಾಡುವಾಗ ಚೌಡಪ್ಪನವರು ರಚಿಸಿ ಪ್ರಸ್ತುತ ಪಡಿಸುತ್ತಿದ್ದ ಶಬ್ದಚಿತ್ರಗಳು, ರೇಡಿಯೋ ರೂಪಕಗಳು ಬಾನುಲಿ ಕೇಳುಗರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದವು. ಇತಿಹಾಸದ ಬಗ್ಗೆ ಅಪಾರ ಒಲವು ಹೊಂದಿದ್ದ ಚೌಡಪ್ಪನವರು ಬರೆದ ಐತಿಹಾಸಿಕ ಕಾದಂಬರಿ “ಶ್ರೀ ಕೃಷ್ಣಭೂಪಾಲ”. ಮೈಸೂರು ರಾಜವಂಶದ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲಾವಧಿಯ ಹಂದರದ ಈ ಕಾದಂಬರಿಗೆ ಮೈಸೂರು ಸರ್ಕಾರದ ಪ್ರಶಸ್ತಿ ಸಂದಿತು.
ಚೌಡಪ್ಪನವರು ರಚಿಸಿದ ಮತ್ತೊಂದು ಕಾದಂಬರಿ ‘ಕುಂತಿ’. ಮಹಾಭಾರತದ ಕುಂತಿ ಪಾತ್ರದ ಮನಸ್ಸಿನ ಒಳನೋಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಕೃತಿಯಿದು. “ಕುಂತಿ” ಹೈಸ್ಕೂಲು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಸೂಚಿತವಾಗಿತ್ತು.
ಚಂದ್ರಗುಪ್ತ ಮತ್ತು ಕುಮಾರ ಸಂಭವ ಚೌಡಪ್ಪನವರ ಪ್ರಸಿದ್ಧ ಪ್ರಕಟಿತ ನಾಟಕಗಳು. ಚೌಡಪ್ಪವರು ರಾಷ್ಟ್ರೋತ್ಥಾನದ ಭಾರತ ಭಾರತಿ ಮಕ್ಕಳ ಪುಸ್ತಕ ಮಾಲಿಕೆಗಾಗಿ ವಿದುರ, ಸರ್. ಕೆ ಶೇಷಾದ್ರಿ ಅಯ್ಯರ್ ಮತ್ತು ಪಿ. ಕೋದಂಡ ರಾವ್ ಕೃತಿಗಳನ್ನು ಬರೆದರು. ಚೌಡಪ್ಪನವರು ಇತಿಹಾಸ, ಸಾಹಿತ್ಯ, ರಂಗಭೂಮಿ, ಚಲನಚಿತ್ರೋದ್ಯಮ ಮುಂತಾದ ಕ್ಷೇತ್ರಗಳ ಕುರಿತಾದಂತೆ ವಿವಿಧ ವಿಷಯ ವಿಶ್ವಕೋಶಗಳಿಗೆ ಪಾಂಡಿತ್ಯಪೂರ್ಣ ಲೇಖನಗಳನ್ನು ಬರೆದರು.


ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಚೌಡಪ್ಪನವರನ್ನು ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವ, ಭಾರತೀಯ ವಾಕ್ಚಿತ್ರ ಮಹೋತ್ಸವಗಳ ಸಂದರ್ಭಗಳಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ಸರ್ಕಾರವು ಅವರಿಗೆ ಗೌರವ ಮಾಸಾಶನವನ್ನು ನೀಡಿ ಗೌರವಿಸಿತ್ತು. ಮಾ. ನಾ. ಚೌಡಪ್ಪನವರು 1985ರ ಫೆಬ್ರವರಿ 20ರಂದು ಈ ಲೋಕವನ್ನಗಲಿದರು.

ಕೃಪೆ:- ಕನ್ನಡ ಸಂಪದ

LEAVE A REPLY

Please enter your comment!
Please enter your name here