ಬಳ್ಳಾರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ, ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ: ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ

0
95

ಬಳ್ಳಾರಿ,ಅ.01: ಪೋಷಕರನ್ನು ಯಾವುದೇ ವೃದ್ಧಾಶ್ರಮಗಳಿಗೆ ಕಳುಹಿಸಬೇಡಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಎಲ್ಲ ಮಕ್ಕಳ ಕರ್ತವ್ಯ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅವರು ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪೊಲೀಸ್ ಜಿಮ್‍ಖಾನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರ ಆಶಿರ್ವಾದದಿಂದ ಇಂದು ನಾವುಗಳು ಬದುಕುತ್ತಿದ್ದೇವೆ. ಇಂದು ಲಕ್ಷಕ್ಕೊಬ್ಬರು ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇದು ಬದಲಾಗಬೇಕು. ಎಲ್ಲ ಮಕ್ಕಳು ತಮ್ಮ ತಂದೆ-ತಾಯಿಯನ್ನು ಯಾವುದೇ ವೃದ್ಧಾಶ್ರಮಗಳಿಗೆ ಕಳುಹಿಸದೆ ಅವರ ಆರೈಕೆ ಮಾಡಿ. ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶೇಷ ಕಾಳಜಿ ವಹಿಸಿ ಮಾಸಾಶನ ಹೆಚ್ಚಿಸಲಾಗಿದೆ. ಆರ್ಥಿಕ ಚಟುವಟಿಕೆಗಳ ಮೂಲಕ ಅವರ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತಿದೆ. ಸರ್ಕಾರದ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಪಾಲಣ್ಣ ಅವರು ಮಾತನಾಡಿ ಬುಡಾ ವತಿಯಿಂದ ನಗರದಲ್ಲಿ ಹಿರಿಯ ನಾಗರಿಕರ ಭವನ ನಿರ್ಮಾಣ ಮಾಡುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಭವನ ನಿರ್ಮಾಣದ ಕಾರ್ಯ ಕೈಗೊಳ್ಳಲಾಗುವುದು. ಹಿರಿಯರನ್ನು ಗೌರವಿಸಿದವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಹಿರಿಯರನ್ನು ಸದಾ ಕಾಲ ಗೌರವದಿಂದ ಕಾಣಿ. ಪ್ರತಿಯೊಬ್ಬರು ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಹಿರಿಯರ ಆಶೀರ್ವಾದಿಂದ ಇಂದು ನಾವು ಉತ್ತಮವಾಗಿದ್ದೇವೆ ಎಂದರು.
ಬಳ್ಳಾರಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಸವರಾಜ ಅವರು ಮಾತನಾಡಿ ಮಾತುಗಳು ಸಾಧನೆಗಳಾಗಬಾರದು, ಸಾಧನೆ ಮಾತಾಗಬೇಕು. ಈ ನಿಟ್ಟಿನಲ್ಲಿ ಇಂದಿನ ಯುವಜನತೆ ಕಾರ್ಯಪ್ರವೃತ್ತರಾಗಲಿ. ಹಿರಿಯ ನಾಗರಿಕರ ಬದುಕಿಗೆ ಸರ್ಕಾರ ಮುಂದಾಗಲಿ ಎಂದರು.
ಇದೇ ಸಮಯದಲ್ಲಿ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಮತ್ತು ಶತಾಯುಷಿ ಹಿರಿಯರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರರಾದ ಆರ್.ನಾಗರಾಜ್ ಅವರು ಮಾತನಾಡಿದರು. ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ, ಎಪಿಎಂಸಿ ಅಧ್ಯಕ್ಷರಾದ ಉಮೇಶ ಕುಮಾರ್ ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here