ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನ, ಜೀವದಾನದಷ್ಟೇ ಶ್ರೇಷ್ಠ- ಮಹಾಂತೇಶ್ ಬೀಳಗಿ.

0
162

ದಾವಣಗೆರೆ, ಅ. 01:ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದು, ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಷ್ಟೇ ಶ್ರೇಷ್ಠವೆನಿಸಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ರೆಡ್ ರಿಬ್ಬನ್ ಕ್ಲಬ್ ಕಾಲೇಜುಗಳು, ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ವಿವಿಧ ರಕ್ತನಿಧಿ ಕೇಂದ್ರ ಇವರುಗಳÀ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನಕ್ಕೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮಹತ್ವ ಬಂದಿದೆ. ರಕ್ತದಾನ ಮಾಡಿದಷ್ಟೂ ಆರೋಗ್ಯಕ್ಕೆ ಉತ್ತಮ. ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್ ನಿಂದ ಆಗಸ್ಟ್ ತಿಂಗಳಿನಲ್ಲಿ 7340 ಜನರು ರಕ್ತದಾನ ಮಾಡಿದ್ದು, ಈ ಮೂಲಕ ಒಟ್ಟು 7919 ಯುನಿಟ್ ರಕ್ತ ಸಂಗ್ರಹಿಸಿ, ಅಗತ್ಯವಿರುವವರಿಗೆ ಪೂರೈಸಲಾಗಿದೆ. ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಿಂದ 30 ರವರೆಗೆ ಏರ್ಪಡಿಸಿದ ಮೆಗಾ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಒಟ್ಟು 07 ಕೇಂದ್ರಗಳಲ್ಲಿ ರಕ್ತದಾನಿಗಳಿಂದ ಒಟ್ಟು 1051 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ರಕ್ತದಾನಿಗಳಿಂದ ಸಂಗ್ರಹಿಸಲಾದ ರಕ್ತವನ್ನು ಶೇಖರಿಸಲು ಹಾಗೂ ಪ್ಲಾಸ್ಮಾ, ಕೆಂಪುರಕ್ತಕಣ, ಪ್ಲೇಟ್‍ಲೆಟ್ ಗಳನ್ನು ಪ್ರತ್ಯೇಕಿಸಿ, ಅಗತ್ಯವಿರುವವರಿಗೆ ಒದಗಿಸುವ ಸುವ್ಯವಸ್ಥೆ ಜಿಲ್ಲೆಯಲ್ಲಿ ಲಭ್ಯವಿದೆ. ಈ ಮೂಲಕ ಸಾಕಷ್ಟು ಜನರಿಗೆ ಜೀವದ ಅಪಾಯದಲ್ಲಿದ್ದವರಿಗೆ ರಕ್ತ ಪೂರೈಸಿ, ಜೀವ ರಕ್ಷಿಸಲಾಗಿದೆ. ಹೀಗಾಗಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದು, ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಷ್ಟೇ ಶ್ರೇಷ್ಠವೆನಿಸಲಿದೆ. ಸಾರ್ವಜನಿಕರು ಅಗತ್ಯವಿರುವವರಿಗೆ, ಸ್ನೇಹಿತರಿಗೆ ರಕ್ತದಾನ ಮಾಡಲು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಅವರು ಮಾತನಾಡಿ, ಭಾರತ ದೇಶ ದಾನ ನೀಡುವುದರಲ್ಲಿ ಒಂದು ಕೈ ಮೇಲು. ಈ ಹಿಂದೆ ನಾವು ಭೂದಾನ ಚಳುವಳಿ ಸಂದರ್ಭದಲ್ಲಿ ಅನೇಕರು ಭೂರಹಿತ ಬಡವರಿಗೆ ಭೂಮಿ ನೀಡಿರುವುದನ್ನು ಕೇಳಿದ್ದೇವೆ, ಅಲ್ಲದೆ ಆರ್ಥಿಕವಾಗಿ ಸದೃಢರಾಗಿದ್ದವರು, ಅನ್ನದಾನಕ್ಕೆಂದೇ ಕಟ್ಟಡಗಳನ್ನು ಕಟ್ಟಿ ದಾನಿಗಳೆನಿಸಿದ್ದಾರೆ. ರಕ್ತದಾನದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನ ಕೂಡ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಲು ಸುಸಜ್ಜಿತ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರ ಏರ್ಪಡಿಸುವಂತಾಗಲು ಕಾರ್ಯಕ್ರಮ ರೂಪಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುಷ್ಠಾನಗೊಳಿಸಲಾಗುವುದು, ಈ ಮೂಲಕ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಯುವ ಜನಾಂಗ ರಕ್ತದಾನದಲ್ಲಿ ಹೆಚ್ಚು ಹೆಚ್ಚು ಭಾಗಿಯಾಗಬೇಕು ಎಂದರು.
ಡಿಹೆಚ್‍ಒ ಡಾ. ನಾಗರಾಜ್ ಮಾತನಾಡಿ, ದೇಶದಲ್ಲಿ ರಕ್ತದಾನದ ರಕ್ತದಾನದ ಮಹತ್ವವನ್ನು ಪ್ರತಿಪಾದಿಸಿದ ಚಂಡೀಗಢದ ರಕ್ತನಿಧಿ ಸೊಸೈಟಿಯ ಸಂಸ್ಥಾಪಕ ಡಾ. ಜೈ ಗೋಪಾಲ್ ಜೊಲ್ಲಿ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 01 ರಂದು ರಕ್ತದಾನ ದಿನವನ್ನಾಗಿ 1975 ರಿಂದಲೂ ಆಚರಿಸಲಾಗುತ್ತಿದೆ. ಮಾನವ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದರೂ, ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಈ ವರ್ಷ “ರಕ್ತನೀಡಿ ಜಗತ್ತನ್ನು ಗೆಲ್ಲಿಸಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಇಂತಹ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಇರುವ ತಪ್ಪು ತಿಳುವಳಿಕೆ, ಮೂಢನಂಬಿಕೆಯನ್ನು ಹೋಗಲಾಡಿಸುವುದು ಅಗತ್ಯವಾಗಿದ್ದು, 18 ರಿಂದ 60 ವರ್ಷದೊಳಗಿನ, 45 ಕೆ.ಜಿ. ಗಿಂತ ಹೆಚ್ಚು ತೂಕ ಇರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಕೋವಿಡ್ ನಿರೋಧಕ ಲಸಿಕೆ ಪಡೆದವರು, ಲಸಿಕೆ ಪಡೆದ 04 ವಾರಗಳ ಬಳಿಕ ರಕ್ತದಾನ ಮಾಡಬಹುದು ಎಂದರು.
ರಕ್ತದಾನಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿದಂತಹ ಉಮಾ, ಸಂತೋಷ್ ಪಿ.ಎನ್. ಹಾಗೂ ಪತ್ರಕರ್ತ ತಾರಾನಾಥ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಅಲ್ಲದೆ ರಾಷ್ಟ್ರಪತಿಗಳಿಂದ ಕಳೆದ ಸೆ. 15 ರಂದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಮಾಡುವ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ಗಾಯತ್ರಿದೇವಿ ದಂಪತಿಗಳಿಗೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಹೊನ್ನಾಳಿಯಲ್ಲಿ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿರುವ ಮಹಾಲಿಂಗಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ. ಎನ್.ಜಯಪ್ರಕಾಶ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ ಜೆ.ಬಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಕೆ.ಹೆಚ್.ಗಂಗಾಧರ, ಚಿಗಟೇರಿ ಜಿಲ್ಲಾಸ್ಪತ್ರೆಯ ರಕ್ತ ಭಂಡಾರ ವೈದ್ಯಾಧಿಕಾರಿ ಡಾ.ಡಿ.ಹೆಚ್.ಗೀತಾ ಸೇರಿದಂತೆ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ನಟರಾಜ್, ಡಾ. ಮುರಳಿ, ಡಾ. ರೇಣುಕಾರಾಧ್ಯ, ಡಾ. ಮೀನಾಕ್ಷಿ, ಡಾ. ರಾಘವನ್ ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here