36 ಕೋಟಿ ವೆಚ್ಚದಲ್ಲಿ ಸಿ.ಆರ್.ಸಿ ಸೆಂಟರ್ ಸ್ಥಾಪನೆ: ಜಿ.ಎಮ್.ಸಿದ್ದೇಶ್ವರ.

0
125

ದಾವಣಗೆರೆ ಆ.31:ಕರ್ನಾಟಕ ಮತ್ತು ಗೋವಾ ರಾಜ್ಯದ ವಿಕಲಚೇತನ ಮಕ್ಕಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸುಮಾರು 36 ಕೋಟಿ ವೆಚ್ಚದಲ್ಲಿ 12 ಎಕರೆ ಪ್ರದೇಶದಲ್ಲಿ ಸಿ.ಆರ್.ಸಿ ಸೆಂಟರ್ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದ್ದು, ಆದಷ್ಟು ಬೇಗ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ವಿಕಲಚೇತನ ಮಕ್ಕಳಿಗೆ ವಸತಿ, ತರಬೇತಿ ಹಾಗೂ ಉದ್ಯೋಗ ಒದಗಿಸಲಾಗುವುದು ಎಂದು ಸಂಸದ ಡಾ.ಜಿ.ಎಮ್.ಸಿದ್ದೇಶ್ವರ ಹೇಳಿದರು.
ವಿಕಲಚೇತನರ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಅಡಿಪ್ ಯೋಜನೆಯಲ್ಲಿ ಅಂಗವಿಕಲರಿಗೆ ಟಿ.ಎಲ್.ಎಮ್ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ವಿಕಲಚೇತನ ಮಕ್ಕಳ ಪೋಷಕರಿಗೆ ವೀಲ್‍ಚೇರ್ ಮತ್ತು ಕಲಿಕಾ ಕಿಟ್ ಬಳಕೆಯ ಬಗ್ಗೆ 15 ದಿನಗಳ ತರಬೇತಿ ನೀಡಲಾಗಿದ್ದು, ಇಂದು ವಿಕಲಚೇತನ ಮಕ್ಕಳಿಗೆ ಕಿಟ್ ಮತ್ತು ತರಬೇತಿ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡು ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಸೇರಿ ಜಿಲ್ಲೆಯಲ್ಲಿ ಸಿ.ಆರ್.ಸಿ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಕೊಗ್ಗನೂರು ಬಳಿ ಸುಮಾರು 36 ಕೋಟಿ ವೆಚ್ಚದಲ್ಲಿ 12 ಎಕರೆ ಪ್ರದೇಶದಲ್ಲಿ ಸಿ.ಆರ್.ಸಿ ಸೆಂಟರ್ ನಿರ್ಮಿಸಲು ನೀಲಿನಕ್ಷೆ ತಯಾರಿಸಲಾಗಿದೆ. ಈ ಕೇಂದ್ರದಲ್ಲಿ ಏಕಕಾಲದಲ್ಲಿ 500 ರಿಂದ 600 ಜನರಿಗೆ ತರಬೇತಿ ನೀಡಬಹುದಾಗಿದೆ. ಆದಷ್ಟು ಜಾಗ್ರತೆಯಾಗಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುವುದು. ಇಲ್ಲಿ ವಿಕಲಚೇತನ ಮಕ್ಕಳಿಗೆ ವಸತಿ, ತರಬೇತಿ ಹಾಗೂ ಉದ್ಯೋಗ ಒದಗಿಸುವುದು ಸಿ.ಆರ್.ಸಿ ಸೆಂಟರ್ ನಿರ್ಮಾಣದ ಉದ್ದೇಶವಾಗಿದೆ. ಕರ್ನಾಟಕ ಮತ್ತು ಗೋವಾ ರಾಜ್ಯದ ಜನತೆ ಸಿ.ಆರ್.ಸಿ ಸೆಂಟರ್ ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ 11 ವಿಕಲಚೇತನ ಮಕ್ಕಳ ಪೋಷಕರಿಗೆ ತರಬೇತಿಯ ಪ್ರಮಾಣಪತ್ರ ನೀಡಿ ಕಿಟ್ ಹಾಗೂ 4 ವೀಲ್‍ಚೇರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೂಡ ಅಧ್ಯಕ್ಷ ದೇವರಮನಿ ಶಿವಕುಮಾರ, ದೂಡ ಸಮಿತಿ ಸದಸ್ಯರಾದ ಗೌರಮ್ಮ ಪಾಟೀಲ್, ಮಾರುತಿ ರಾವ್, ಡಾ.ಶರೀಫ್, ಡಾ.ಥಾಮಸ್ ಸಲ್ವನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here